ಮಶ್ರೂಮ್ ತಿನ್ನಿಸಿ ಮೂವರ ಕೊಲೆ! ವಿಷಕಾರಿ ಅಣಬೆ ಯಾವುದು ಗೊತ್ತಾ?
ನಾವು ತಿನ್ನೋ ಆಹಾರವೆಲ್ಲ ಅಮೃತವಲ್ಲ. ಕೆಲವು ವಿಷಕಾರಿ. ಅಣಬೆ ರುಚಿ ಅಂತಾ ಎಲ್ಲ ತಿಂದ್ರೆ ಸಾವು ಬರಬಹುದು. ಈ ಚಾಲಾಕಿ ಅಣಬೆ ನೀಡಿಯೇ ಮೂವರ ಹತ್ಯೆ ಮಾಡಿದ್ದಾಳೆ. ಆ ಅಣಬೆ ಯಾವುದು? ಅದು ಎಷ್ಟು ವಿಷಕಾರಿ ಎಂಬ ಮಾಹಿತಿ ಇಲ್ಲಿದೆ.
ಅವರ್ಯಾರಿಗೂ ಅಂದು ಅಲ್ಲೇನು ನಡೆಯಲಿದೆ ಅನ್ನೋದು ಗೊತ್ತಿರಲಿಲ್ಲ. ಎಲ್ಲರೂ ಪ್ರೀತಿಯ ಕರಯೋಲೆಗೆ ಓಗುಟ್ಟು ಊಟಕ್ಕೆ ಹೋಗಿದ್ರು. ಮಾಜಿ ಸೊಸೆ ನೀಡಿದ ಆಹಾರವನ್ನು ಖುಷಿಯಿಂದ್ಲೇ ಸೇವನೆ ಮಾಡಿದ್ರು. ಆದ್ರೆ ಅದೇ ಕೊನೆ. ನಂತ್ರ ಆಹಾರ ತಿನ್ನೋಕೆ ಅವರೇ ಇರಲಿಲ್ಲ. ಯಾವುದೋ ಕಾರಣಕ್ಕೆ ಊಟ ಮಿಸ್ ಮಾಡ್ಕೊಂಡವರು ಬದುಕುಳಿದ್ರು. ಮಾಜಿ ಪತಿಯ ತಂದೆ – ತಾಯಿ ಮೇಲೆ ಈಕೆಗೆ ಅದ್ಯಾವ ದ್ವೇಷ ಇತ್ತೋ ಗೊತ್ತಿಲ್ಲ. ಅಣಬೆಯನ್ನು ನೀಡಿ ಮೂವರ ಹತ್ಯೆ ಮಾಡಿದ್ದಾಳೆ. ಮೂವರ ಕೊಲೆ ಆರೋಪದ ಮೇಲೆ ಎರಡು ಮಕ್ಕಳ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದಿರೋದು ಆಸ್ಟ್ರೇಲಿಯಾದಲ್ಲಿ.
48 ವರ್ಷದ ಎರಿನ್ ಪೀಟರ್ಸನ್ ಳನ್ನು ಪೊಲೀಸ (Police) ರು ಬಂಧಿಸಿದ್ದಾರೆ. ಎರಿನ್, ಮಾಜಿ ಪತಿಯ ತಂದೆ ತಾಯಿಗಳಾದ ಡಾನ್ ಮತ್ತು ಗೇಲ್ ಪೀಟರ್ಸನ್ ಮತ್ತು 66 ವರ್ಷದ ಚಿಕ್ಕಮ್ಮ ಹೀದರ್ ವಿಲ್ಕಿನ್ಸನ್ ಸಾವಿಗೆ ಕಾರಣವಾಗಿದ್ದಾಳೆ. ಆಕೆ ಮಾಜಿ ಅತ್ತೆ – ಮಾವನ ವಯಸ್ಸು ಎಪ್ಪತ್ತರ ಆಸುಪಾಸಿತ್ತು ಎಂದು ಪೊಲೀಸರು ಹೇಳಿದ್ದಾರೆ.
Food For Winter: ಚಳೀಲಿ ಇದು ತಿನ್ನಿ, ಆರೋಗ್ಯದ ಚಿಂತಿ ಬಿಟ್ಹಾಕ್ಬಿಡಿ!
ಹೀದರ್ ವಿಲ್ಕನ್ಸನ್ ಪತಿ ಇಯಾನ್ ಬದುಕುಳಿದಿದ್ದಾರೆ. ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದ ಚಿಕಿತ್ಸೆ ಪಡೆದ ನಂತ್ರ ಚೇತರಿಸಿಕೊಂಡಿದ್ದಾರೆ. ಈ ಘಟನೆ ವಿಕ್ಟೋರಿಯಾದಲ್ಲಿ ನಡೆದಿದೆ. ಒಂದೇ ಆಹಾರವನ್ನು ಎರಿನ್ ಮನೆಯಲ್ಲಿ ಇವರೆಲ್ಲರೂ ಸೇವನೆ ಮಾಡಿದ ನಂತ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಎರಿನ್ ಮನೆಗೆ ಬಂದವರಿಗೆ ದನದ ಮಾಂಸದ ಜೊತೆ ಡೆತ್ ಕ್ಯಾಪ್ ಮಶ್ರೂಮ್ (Death Cap Mushroom) ನೀಡಿದ್ದಳು. ಎರಿನ್ ಮಾಜಿ ಪತಿ ಸೈಮನ್ ಪೀಟರ್ಸನ್ ಅವರನ್ನು ಕೂಡ ಊಟಕ್ಕೆ ಬರಬೇಕಿತ್ತು. ಆದ್ರೆ ಬೇರೆ ಕಾರಣದಿಂದಾಗಿ ಆತ ಊಟ ಮಿಸ್ ಮಾಡಿಕೊಂಡಿದ್ದ. ಹಾಗಾಗಿ ಬದುಕುಳಿದಿದ್ದಾನೆ ಎನ್ನುತ್ತಾರೆ ಪೊಲೀಸರು.
ಯುವಕರು ಹಾರ್ಟ್ ಅಟ್ಯಾಕ್ ಸತ್ರೆ ಕ್ರ್ಯಾಶ್ ಡಯಟ್ ಎಫೆಕ್ಟ್ ಅಂತಾರಲ್ಲ, ಏನದು?
ಆರಂಭದಲ್ಲಿ ಎರಿನ್ ಹತ್ಯೆ ಆರೋಪವನ್ನು ಅಲ್ಲಗಳೆದಿದ್ದಳು. ಆದ್ರೆ ಆಕೆ ಮತ್ತು ಆಕೆ ಮಕ್ಕಳಿಬ್ಬರಿಗೆ ಯಾವುದೇ ಸಮಸ್ಯೆಯಾಗದ ಕಾರಣ ಪೊಲೀಸರಿಗೆ ಅನುಮಾನ ಬಂದಿತ್ತು. ಎರಿನ್ ವಿರುದ್ಧ ಮೂವರ ಹತ್ಯೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಅವರೆಲ್ಲ ನನ್ನ ಆಪ್ತರಾಗಿದ್ದರು. ಅವರನ್ನು ನಾನು ಹತ್ಯೆ ಮಾಡಲು ಸಾಧ್ಯವಿಲ್ಲ. ಒಂದು ಮಶ್ರೂಮ್ ನಿಂದ ಸಾವಾಗಿದೆ ಎಂಬುದನ್ನು ನನಗೆ ನಂಬಲು ಸಾಧ್ಯವಾಗ್ತಿಲ್ಲ ಎಂದು ಎರಿನ್ ಪೊಲೀಸ್ ಮುಂದೆ ಹೇಳಿದ್ದಾಳೆ. ಕಳೆದ ಒಂದೆರಡು ವಾರಗಳಿಂದ ಪೊಲೀಸರು ಪ್ರಕರಣದ ವಿಚಾರಣೆಯನ್ನು ಚುರುಕುಗೊಳಿಸಿದ್ದರು. ಎಲ್ಲ ಸಾಕ್ಷ್ಯಗಳನ್ನು ಕಲೆಹಾಕುವ ಪ್ರಯತ್ನ ನಡೆಸಿದ್ದರು. ಸಾವನ್ನಪ್ಪಿದ ಮೂವರೂ ಕುಟುಂಬಸ್ಥರಿಗೆ ಅತ್ಯಂತ ಪ್ರಿಯರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಎರಿನ್ ಬಂಧಿಸಿ, ಪೂರ್ವ ವಿಕ್ಟೋರಿಯಾದ ವೊಂತಗ್ಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಆಕೆಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.
ಡೆತ್ ಕ್ಯಾಪ್ ಮಶ್ರೂಮ್ ಅಂದ್ರೇನು? : ಆಸ್ಟ್ರೇಲಿಯಾದಲ್ಲಿ ಮೂವರ ಪ್ರಾಣ ತೆಗೆದ ಈ ಡೆತ್ ಕ್ಯಾಪ್ ಮಶ್ರೂಮ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದು ಮಶ್ರೂಮ್ ಜಾತಿಗೆ ಸೇರಿದ್ದು, ತುಂಬಾ ವಿಷಕಾರಿಯಾಗಿದೆ. ಡೆತ್ ಕ್ಯಾಪ್ ಮಶ್ರೂಮ್‌ನಲ್ಲಿ ಮೂರು ವಿಧದ ವಿಷಕಾರಿ ಪದಾರ್ಥಗಳಿರುತ್ತವೆ. ಅಮಾಟಾಕ್ಸಿನ್, ಫಾಲೋಟಾಕ್ಸಿನ್ ಮತ್ತು ವೈರೋಟಾಕ್ಸಿನ್. ಇದರಲ್ಲಿ ಅಮಾಟಾಕ್ಸಿನ್ ಅತ್ಯಂತ ವಿಷಕಾರಿ.
ಇದನ್ನು ಸುಲಭವಾಗಿ ಪತ್ತೆ ಮಾಡಬಹುದು. ಇದು ಬಿಳಿ ಗಿಲ್ ತರಹದ ರಚನೆಗಳನ್ನು ಹೊಂದಿರುತ್ತದೆ. ಅಣಬೆ ಬಲಿತಂತೆ ಕಂದು ಬಣ್ಣಕ್ಕೆ ತಿರುಗುವುದಿಲ್ಲ. ಇದು ಹಸಿರು ಅಥವಾ ಹಳದಿ ಛಾಯೆಯೊಂದಿಗೆ ಬಿಳಿ ಕ್ಯಾಪ್ ಹೊಂದಿರುತ್ತದೆ. ಡೆತ್ ಕ್ಯಾಪ್ ಮಶ್ರೂಂ ಸೇವನೆ ಮಾಡಿದ ಹಲವು ಗಂಟೆಗಳ ನಂತ್ರ ಅದ್ರ ಲಕ್ಷಣ ಕಾಣಿಸಿಕೊಳ್ಳುತ್ತದೆ. ವಾಕರಿಕೆ, ಅತಿಸಾರ ಮತ್ತು ಜಠರಗರುಳಿನ ತೊಂದರೆ ಕಾಣಿಸಿಕೊಳ್ಳುತ್ತದೆ. ಅಮಾಟಾಕ್ಸಿನ್ ಮೊದಲು ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಇದನ್ನು ತಿಂದು 6 ಮಂದಿ ಸಾವನ್ನಪ್ಪಿದ್ದರು.