ಶೃಂಗೇರಿಯ ನವರಾತ್ರಿ ವೈಭವ: ಶಕ್ತಿ ಪೀಠದಲ್ಲಿ ದೇವಿ ಅರ್ಚನೆಯಿಂದ ಅಗಣಿತ ಲಾಭ
ಶೃಂಗೇರಿಯು ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಹದಿನೆಂಟು ಶಕ್ತಿಪೀಠಗಳಲ್ಲಿ ಒಂದು. ಇಲ್ಲಿರುವ ಶಾರದಾ ದೇವಿಗೆ ನವರಾತ್ರಿ ಪೂಜೆ ಅತ್ಯಂತ ವಿಶೇಷ. ಶಾರದೆಯ ವಿಶೇಷ ಕೃಪೆಗೆ ಪಾತ್ರರಾಗುವ ಅವಕಾಶವಿದು.
ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಹದಿನೆಂಟು ಶಕ್ತಿ ಪೀಠಗಳಲ್ಲಿ ಒಂದಾದ ಶೃಂಗೇರಿ (Sringeri temple) ಶಾರದಾಂಬೆಯ ಸನ್ನಿಧಿ ಸಹ್ಯಾದ್ರಿ ಪರ್ವತಗಳ ತಪ್ಪಲಿನಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿದೆ. ತುಂಗಾ ನದಿ ತೀರದಲ್ಲಿ ವಾಸವಿರುವ ತಾಯಿ ಎಲ್ಲರ ಕಷ್ಟ ಪರಿಹರಿಸುತ್ತಿದ್ದಾಳೆ. ಮಕ್ಕಳ ವಿದ್ಯಾಭ್ಯಾಸದ ಆರಂಭಕ್ಕೂ ಮುನ್ನ ಪೋಷಕರು ತಾಯಿಯ ಆಶೀರ್ವಾದ ಪಡೆದು ಹೋಗುತ್ತಾರೆ. ಮಗುವಿಗೆ ಸರಿಯಾಗಿ ಮಾತನಾಡಲು ಬರದಿದ್ದರೆ, ಅಥವಾ ಮಾತು ಬರುವುದು ತಡವಾದರೆ ತಾಯಿಯ ದರ್ಶನ ಮಾಡಿಸಿದರೆ ಸಾಕು, ಮಗು ಸುಲಲಿತವಾಗಿ ಮಾತನಾಡಲು ಶುರು ಮಾಡುತ್ತದೆ. ಇಲ್ಲಿ ನವರಾತ್ರಿಗೆ ವಿಶೇಷ ಪೂಜೆ ಹಾಗೂ ಅಲಂಕಾರಗಳು ನೆರವೇರುತ್ತವೆ.
ಮಠದ ಹಿನ್ನೆಲೆ
ಶಂಕರಾಚಾರ್ಯರು (Shankaracharya) 8ನೇ ಶತಮಾನದಲ್ಲಿ ಶಕ್ತಿಪೀಠಗಳಲ್ಲೆಲ್ಲ ಈ ಮಠವನ್ನೇ ಮೊದಲು ಸ್ಥಾಪಿಸಿದರು. ಆದಿ ಶಂಕರರು ಮೊದಲ ಮಠವನ್ನು ಸ್ಥಾಪಿಸಬೇಕೆಂದು ಜಾಗವನ್ನು ಹುಡುಕುತ್ತ ಸಂಚರಿಸುತ್ತಿದ್ದಾಗ ಇಲ್ಲಿಗೆ ಬಂದರು. ತುಂಗಾ ತೀರ (Tunga River) ದಲ್ಲಿ ವಿರಮಿಸುತ್ತಿದ್ದಾಗ, ಉರಿ ಬಿಸಿಲಿನಲ್ಲಿ ಗರ್ಭಿಣಿ ಕಪ್ಪೆಯೊಂದು ಬಳಲುತ್ತಿದ್ದಾಗ, ಅದಕ್ಕೆ ಸಹಾಯವಾಗಿ ಹಾವೊಂದು ಹೆಡೆ ಎತ್ತಿ ನೆರಳು ನೀಡಿತ್ತು. ಇದನ್ನು ಕಂಡ ಶಂಕರಾಚಾರ್ಯರು, ನೈಸರ್ಗಿಕ ಶತ್ರುಗಳ (Natural Enimies) ನಡುವೆ ಪ್ರೀತಿ (Love) ಬೆಳೆಸಿದ ಈ ಜಾಗದಲ್ಲಿ ಪಾವಿತ್ರ್ಯ (sanctity) ಹಾಗೂ ಮಾತೃತ್ವದ ಮಹಾಶಕ್ತಿಯೇ ಇರಬೇಕು ಎಂದು ತರ್ಕಿಸಿದರು. ಶಕ್ತಿ ಪೀಠ ಸ್ಥಾಪಿಸುವುದಕ್ಕೆ ಇದು ಪ್ರಾಶಸ್ತ್ಯವಾದ ಸ್ಥಳವೆಂದು ತಿಳಿದರು. ಕಾಶ್ಮೀರದಿಂದ (Kashmir) ಶಾರದೆಯ ಮೂರ್ತಿಯನ್ನ ತಂದು ಇಲ್ಲಿ ಪ್ರತಿಷ್ಠಾಪಿಸಲಾಯಿತು. ಇದಕ್ಕೂ ಮುನ್ನ, ತ್ರೇತಾಯುಗದಲ್ಲಿ ಋಷ್ಯಶೃಂಗ ಎಂಬ ಮುನಿಯೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದರು ಎಂಬ ಉಲ್ಲೇಖವಿದೆ. ಅವರು ಕಾಲಿಟ್ಟಲ್ಲಿ ಬರ ನಿವಾರಣೆಯಾಗಿ ಮಳೆ ಆಗಮಿಸುತ್ತಿತ್ತು. ಅವರ ಮಹಾತ್ಮೆಯಿಂದಲೇ ಇಂದಿಗೂ ಇಲ್ಲಿ ಸದಾ ಭರ್ಜರಿ ಮಳೆಯಾಗಿ ಹಚ್ಚಹಸಿರು ಕಂಗೊಳಿಸುತ್ತಿರುತ್ತದೆ.
ಇಲ್ಲಿ ಆದಿ ಶಂಕರರು ಗಂಧದ ಮೂರ್ತಿಯನ್ನು ಸ್ಥಾಪಿಸಿದ್ದರು. ಅದನ್ನು 14ನೇ ಶತಮಾನದಲ್ಲಿ ವಿದ್ಯಾರಣ್ಯರು ಚಿನ್ನದಿಂದ ಮಾಡಲ್ಪಟ್ಟ ಶಾರದಾ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಕಾಲಕಾಲಕ್ಕೆ ಈ ದೇವಸ್ಥಾನವನ್ನು ಪುನರ್ನವೀಕರಣಗೊಳಿಸಲಾಗಿದೆ.
ನವರಾತ್ರಿ ವೈಭವ
ಶೃಂಗೇರಿ ದೇವಸ್ಥಾನವು ವಿದ್ಯಾಧಿದೇವತೆಯ ನೆಲವೀಡು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇಲ್ಲಿ ಶಾರದೆಗೆ ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆ ನಡೆಯುತ್ತದೆ. ಇಲ್ಲಿ ಶಾರದಾ ದೇವಿ ನವರಾತ್ರಿ (Navratri) ಉತ್ಸವಗಳಲ್ಲಿ ಸರಸ್ವತಿ, ದುರ್ಗಾ, ಲಕ್ಷ್ಮೀ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಶೃಂಗೇರಿಯಲ್ಲಿ ವಿಜೃಂಭಣೆಯಿಂದ ನಡೆಯುವ ಹಬ್ಬಗಳಲ್ಲಿ ನವರಾತ್ರಿ ಹಬ್ಬವೂ ಒಂದು. ಈ ಸುಸಂದರ್ಭದಲ್ಲಿ ಮಹಾಭಿಷೇಕ, ಶತರುದ್ರಾಭಿಷೇಕ ನಡೆಯುತ್ತದೆ. ಶಾರದೆಗೆ ಪ್ರತಿದಿನವೂ ಒಂದೊಂದು ಅಲಂಕಾರ ನಡೆಯುತ್ತದೆ. ಹಂಸವಾಹನ ಅಲಂಕಾರ, ವೃಷಭವಾಹನ ಅಲಂಕಾರ, ಮಯೂರವಾಹನ ಅಲಂಕಾರ, ಗರುಡವಾಹನ ಅಲಂಕಾರ, ಇಂದ್ರಾಣಿ ಅಲಂಕಾರ, ವೀಣಾಶಾರದಾ ಅಲಂಕಾರ, ಮೋಹಿನಿ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಸಿಂಹವಾಹನ ಅಲಂಕಾರ, ಗಜಲಕ್ಷ್ಮೀ ಅಲಂಕಾರಗಳನ್ನು ಮಾಡಲಾಗುತ್ತದೆ. ಶೃಂಗೇರಿ ಮಠದಲ್ಲಿ ಮಂತ್ರ ಪಾರಾಯಣಗಳು ನಡೆಯುತ್ತವೆ. ಪ್ರತಿದಿನ ಬೆಳಿಗ್ಗೆ ರಥೋತ್ಸವ ಹಾಗೂ ಉತ್ಸವ ಮೂರ್ತಿಗೆ ಅಲಂಕಾರಗಳು ನಡೆಯುತ್ತವೆ. ಪ್ರತಿದಿನ 15-20 ಸಾವಿರ ಜನ ಅನ್ನ ಪ್ರಸಾದ ಸ್ವೀಕರಿಸುತ್ತಾರೆ. ಒಂಬತ್ತು ದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಶ್ರೀ ವಿದ್ಯಾರಣ್ಯರ ಕಾಲದಿಂದಲೇ ಇಲ್ಲಿ ದರ್ಬಾರು ವಿಶೇಷ ಕಾರ್ಯಕ್ರಮ ಕೂಡಾ ನಡೆಯುತ್ತದೆ.
ಮನಸ್ಸನ್ನು ತಿಳಿಯಾಗಿಸುವ ಶೈಲಪುತ್ರಿ: ನವರಾತ್ರಿಯ ಮೊದಲ ದಿನದ ದೇವಿ ಆರಾಧನೆ
ದೇವಾಲಯದ ಸೌಂದರ್ಯ
ಇದು ಪ್ರಾಚೀನ ದೇವಸ್ಥಾನ ಮಾತ್ರ ಅಲ್ಲ; ಇದು ದೇವತಾ ಶಾಸ್ತ್ರ, ಅರ್ಚಕರ ಶಾಲೆ, ಸಂಸ್ಕೃತ ಪಾಠಶಾಲೆ, ಅಪರೂಪದ ಸಂಸ್ಕೃತ ಗ್ರಂಥಗಳ ಗ್ರಂಥಾಲಯ ಎನಿಸಿಕೊಂಡಿದೆ. ಪೀಠದಲ್ಲಿ ಸುಪ್ರಸಿದ್ಧ ಆಧ್ಯಾತ್ಮಿಕ ನಾಯಕರುಗಳ ಚಿತ್ರ ಇದೆ. ಇದಕ್ಕೆ ವಿಜಯನಗರ ಸಾಮ್ರಾಜ್ಯ, ಕೆಳದಿ ನಾಯಕರು, ಒಡೆಯರುಗಳು, ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಕೊಡುಗೆ ನೀಡಿದ್ದಾರೆ. ಹಿಂದೂ (Hindhu), ಬುದ್ಧ (Buddha) ಮತ್ತು ಜೈನ ಸಂಸ್ಕೃತಿಯ (Jain Culture) 104 ಅದ್ಭುತ ಶಿಲ್ಪಗಳಿವೆ. ದೇವಸ್ಥಾನದ ಗೋಡೆಗಳ ಸುತ್ತಲೂ ಕುದುರೆಗಳು, ಆನೆ (Elephant), ಸಿಂಹ (Lion) ಮತ್ತು ಪುರಾಣಗಳಲ್ಲಿ ಕಂಡು ಬರುವ ಕೆಲವು ದೃಶ್ಯಗಳನ್ನು ಕೆತ್ತಲಾಗಿದೆ.
ಶೃಂಗೇರಿ (Sringeri) ಶಾರದಾ ದೇವಸ್ಥಾನ (Sharada Temple) ತುಂಗಾ ನದಿಯ ತಟದಲ್ಲಿದೆ. ಇಲ್ಲಿ ದೇವರ ಮೀನುಗಳೆಂದೇ ಕರೆಯಲ್ಪಡುವ ಸಾವಿರಾರು ಮೀನುಗಳಿವೆ. ನದಿಯ ನೀರು ಪವಿತ್ರವಾಗಿದೆ. ಶಾರದಾಂಬ ದೇವಸ್ಥಾನದ ದಕ್ಷಿಣಕ್ಕೆ ದುರ್ಗಾದೇವಿ ದೇವಸ್ಥಾನ (Durga Devi Temple), ಪೂರ್ವಕ್ಕೆ ಕಾಳಭೈರವ ದೇವಸ್ಥಾನ, ಪಶ್ಚಿಮಕ್ಕೆ ಆಂಜನೇಯ ದೇವಸ್ಥಾನ, ಉತ್ತರಕ್ಕೆ ಕಾಳಿ ದೇವಸ್ಥಾನ ಇದೆ. ಶೃಂಗೇರಿ ಮಠವನ್ನೇ ಶೃಂಗೇರಿ ಶಾರದಾ ಪೀಠ ಎಂದು ಕರೆಯುತ್ತಾರೆ. ಪ್ರತಿ ಶುಕ್ರವಾರ ಇಲ್ಲಿ ಶಾರದಾ ಮೂರ್ತಿಯನ್ನು ದೇವಸ್ಥಾನದ ಸುತ್ತ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ನವರಾತ್ರಿ ಯಾರ ಉಪಾಸನೆ ಮತ್ತು ಯಾಕಾಗಿ?
ಶೃಂಗೇರಿಯಲ್ಲಿರುವ ವಿದ್ಯಾಶಂಕರ ದೇವಸ್ಥಾನವನ್ನು ವಿದ್ಯಾಶಂಕರ ಅವರ ಸ್ಮರಾಣಾರ್ಥ ವಿದ್ಯಾರಣ್ಯ ಅವರು 14ನೇ ಶತಮಾನದಲ್ಲಿ ಸ್ಥಾಪಿಸಿದರು. ವಿಜಯನಗರ ಸಾಮ್ರಾಜ್ಯದ ಆಡಳಿತದ ಕಾಲದಲ್ಲಿ ಇದನ್ನು ನಿರ್ಮಿಸಲಾಗಿದೆ. ವಿದ್ಯಾಶಂಕರ ದೇವಸ್ಥಾನವು ಒಂದು ಕೋನದಿಂದ ರಥದಂತೆ ಭಾಸವಾಗುತ್ತದೆ. ಚಾಲುಕ್ಯ, ಹೊಯ್ಸಳ (Hoysala), ವಿಜಯನಗರ ಶೈಲಿಯನ್ನು ಒಳಗೊಂಡಿದೆ. ವಿಜಯನಗರ (Vijayanagara) ಅರಸರ ಕೊಡುಗೆಗಳನ್ನು ದಾಖಲೆಯಾಗಿಸಿರುವ ಶಿಲ್ಪಕಲೆಗಳು ಇಲ್ಲಿವೆ. ದೇವಸ್ಥಾನದ ಒಳಹೊಕ್ಕಂತೆ ದ್ರಾವಿಡ, ಹೊಯ್ಸಳ ಮತ್ತು ವಿಜಯನಗರ ಕಾಲದ ಶೈಲಿಯ ವಾಸ್ತುಶಿಲ್ಪದ ಅದ್ಭುತಲೋಕ ತೆರೆದುಕೊಳ್ಳುತ್ತದೆ.
"
ಹೋಗೋದು ಹೇಗೆ?
ಶೃಂಗೇರಿಗೆ ಬೆಂಗಳೂರು (Bengaluru), ಶಿವಮೊಗ್ಗ (Shivamogga), ಮಂಗಳೂರಿನಿಂದ (Mangalore) ಸರಕಾರಿ ಬಸ್ ಸೌಲಭ್ಯ ಇದೆ. ಆನ್‌ಲೈನ್ (Online) ಮೂಲಕ ಬುಕ್ ಮಾಡಿಸಿಕೊಳ್ಳಬಹುದು. ಕುಂದಾಪುರ ಹತ್ತಿರದ ರೈಲ್ವೇ ನಿಲ್ದಾಣ. ಅಲ್ಲಿಂದ 75 ಕಿಮೀ ದೂರ. ಸರ್ಕಾರಿ ಬಸ್ ಅಥವಾ ಖಾಸಗಿ ವಾಹನಗಳಲ್ಲಿ ಪ್ರಯಾಣಿಸಬಹುದು. ಶಿವಮೊಗ್ಗದ ರೈಲು ನಿಲ್ದಾಣದಿಂದ 115 ಕಿಮೀ ದೂರ. ಬೆಂಗಳೂರಿನಿಂದ 336 ಕಿಮೀ. ಶೃಂಗೇರಿಯಲ್ಲಿ ಉಳಿದುಕೊಳ್ಳಲು ದೇವಸ್ಥಾನದ ಆಡಳಿತಕ್ಕೊಳಪಟ್ಟ ಹಾಗೂ ಖಾಸಗಿ ಗೆಸ್ಟ್ ಹೌಸ್‌ಗಳಿವೆ. ಶೃಂಗೇರಿಗೆ ಹೋದರೆ ಅಲ್ಲಿಯೇ ಹತ್ತಿರದಲ್ಲಿರುವ ತೀರ್ಥಕ್ಷೇತ್ರಗಳಾದ ಕಳಸ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಗಳಿಗೂ ಹೋಗುವುದನ್ನು ಮರೆಯಬೇಡಿ.
ನವರಾತ್ರಿಯಲ್ಲಿ ಪವಿತ್ರವೆನಿಸಿದ ಒಂಬತ್ತು ಬಣ್ಣಗಳ ಮಹತ್ವ ನಿಮಗೆ ಗೊತ್ತೆ?