ನಮ್ಮ ಒಂದು ವರ್ಷ ಮಗುಚಿ ಬಿತ್ತು; ಬ್ರಹ್ಮನ ಒಂದು ದಿನ ನಿಮಗೆಷ್ಟು ವರ್ಷ ಅಂತ ಗೊತ್ತಾ?
ನಮ್ಮನ್ನೆಲ್ಲ ಸೃಷ್ಟಿಸುವ ಬ್ರಹ್ಮನ ಒಂದು ದಿನ, ವಾರ, ವರ್ಷ, ಜೀವಿತಾವಧಿ ಎಷ್ಟು ಅಂತ ನಿಮಗೆ ಗೊತ್ತಿದೆಯಾ? ಬ್ರಹ್ಮನ ಒಂದು ದಿನ ರೂಪುಗೊಳ್ಳಲು ನಮ್ಮ ಎಷ್ಟು ವರ್ಷ ಬೇಕು?
ಇನ್ನೇನು ಎರಡು ದಿನ ದಾಟಿದರೆ ಹೊಸದೊಂದು ವರ್ಷಕ್ಕೆ ನಾವು ಕಾಲಿಡುತ್ತಿದ್ದೇವೆ. 2024 ಮಗುಚಿ ಬಿದ್ದು 2025 ಅಂಬೆಗಾಲು ಹಾಕಲಿದೆ. ನಮಗೇನೋ ಒಂದು ದಿನ, ವಾರ, ತಿಂಗಳು, ವರ್ಷ ಎಂದರೆ ಎಷ್ಟು ಎಂಬ ಅಂದಾಜು ಇದೆ. ಆದರೆ ನಮ್ಮನ್ನೆಲ್ಲ ಸೃಷ್ಟಿಸುವ ಬ್ರಹ್ಮನ ಒಂದು ದಿನ, ವಾರ, ವರ್ಷ, ಜೀವಿತಾವಧಿ ಎಷ್ಟು ಅಂತ ನಿಮಗೆ ಗೊತ್ತಿದೆಯಾ?
ಇದನ್ನು ತಿಳಿಯೋಕೆ ಮೊದಲು ನೀವು ಸ್ವಲ್ಪ ಪುರಾಣದ ಕಡೆಗೆ ಗಮನ ಹರಿಸಬೇಕು. ಪುರಾಣದಲ್ಲಿ ಬ್ರಹ್ಮ, ವಿಷ್ಣು ಮತ್ತು ಶಿವ ತ್ರಿಮೂರ್ತಿಗಳು. ಈ ಮೂವರು ಕಾಲಕಾಲೇಶ್ವರಿಯಾದ, ಮಹಾಕಾಳಿಯಾದ, ಕಾಲದ ಸ್ವರೂಪಳೇ ಆದ ದೇವಿಯ ಅಂಶಗಳು. ಬ್ರಹ್ಮನು ಸೃಷ್ಟಿ, ಶಿವನು ಲಯ ಮತ್ತು ವಿಷ್ಣುವು ಸ್ಥಿತಿಯ ಜವಾಬ್ಧಾರಿ ನೋಡಿಕೊಳ್ಳುತ್ತಿದ್ದಾರೆ. ಬ್ರಹ್ಮನನ್ನು ವೇದಾಂತ, ಜ್ಞಾನೇಶ್ವರ, ಪಿತಾಮಹ, ದಾತೃ, ವಿಧಿ, ವಿಶ್ವಕರ್ಮ, ಲೋಕೇಶ, ಚತುರ್ಮುಖ ಮತ್ತು ಸ್ವಯಂಭೂ ಎಂಬ ಹೆಸರುಗಳಿಂದ ಕರೆಯುತ್ತಾರೆ. ಕೆಲವು ಪುರಾಣಗಳ ಪ್ರಕಾರ ಬ್ರಹ್ಮನು ಶಿವನ ಆಜ್ಞೆಯ ಪ್ರಕಾರ ವಿಷ್ಣುವಿನ ನಾಭಿಯಿಂದ ಹುಟ್ಟುವ ಕಮಲದಿಂದ ಜನ್ಮ ತಾಳಿದ.
ಬ್ರಹ್ಮನು ಇಡೀ ಬ್ರಹ್ಮಾಂಡ ಸೃಷ್ಟಿಯಲ್ಲಿ ಮೊದಲಿಗೆ 11 ಪ್ರಜಾಪತಿಗಳನ್ನು ಸೃಷ್ಟಿಸಿದ. ಮರೀಚಿ, ಅತ್ರಿ, ಅಂಗೀರಸ, ಪುಲಸ್ತ್ಯ, ಪುಲಹ, ಕ್ರತು, ಪ್ರಚೇತಸ, ವಸಿಷ್ಠ, ದಕ್ಷ, ಭೃಗು ಮತ್ತು ನಾರದ. ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಕಾರಣ ಇವರನ್ನು ಮಾನಸ ಪುತ್ರರೆಂದು ಕರೆಯುತ್ತಾರೆ. ಬ್ರಹ್ಮ ಸೃಷ್ಟಿಸಿದ ಬ್ರಹ್ಮಾಂಡದಲ್ಲಿ ಅನೇಕ ಲೋಕಗಳಿವೆ. ಬ್ರಹ್ಮ ಸೃಷ್ಟಿಸಿದ ಬ್ರಹ್ಮಾಂಡದ ಕಾಲಮಾನ ಬ್ರಹ್ಮನಿಗೆ ಕೇವಲ ಒಂದು ದಿನ, ಅದನ್ನು ಬ್ರಹ್ಮ ಕಲ್ಪ ಎಂದು ಹೇಳುತ್ತಾರೆ. ಹಾಗಾದರೆ ಒಂದು ಕಲ್ಪ ಎಂದರೆ ಎಷ್ಟು ವರ್ಷಗಳು?
ಪುರಾಣಗಳ ಪ್ರಕಾರ ಕಲಿಯುಗದ ಅವಧಿ 432000 ವರುಷಗಳು. ದ್ವಾಪರ ಯುಗದ ಅವಧಿ ಕಲಿಯುಗದ ಎರಡರಷ್ಟು, ಅಂದರೆ 864000 ವರುಷಗಳು, ತ್ರೇತಾಯುಗದ ಅವಧಿ ಕಲಿಯುಗದ ಮೂರರಷ್ಟು ಅಂದರೆ 1296000 ವರುಷಗಳು, ಕೃತ ( ಸತ್ಯ) ಯುಗದ ಅವಧಿ ಕಲಿಯುಗದ ನಾಲ್ಕರಷ್ಟು ಅಂದರೆ 1728000 ವರುಷಗಳು. ನಾಲ್ಕು ಯುಗದ ಒಟ್ಟು ಅವಧಿ 4320000 ವರುಷಗಳು.
4320000 ವರುಷಗಳು ಅಂದರೆ ಒಂದು ಮಹಾಯುಗ ಆಗುತ್ತದೆ. 1000 ಮಹಾಯುಗಗಳು ಅಂದರೆ 4320000000 ವರುಷಗಳು. 432 ಕೋಟಿ ವರುಷಗಳು ಅಂದರೆ ಬ್ರಹ್ಮನ ಒಂದು ದಿವಸ ಅಥವಾ ಕಲ್ಪ ಎನ್ನುತ್ತಾರೆ. ಒಂದು ಕಲ್ಪದಲ್ಲಿ ಒಂದು ಸೃಷ್ಟಿ ಆಗುತ್ತದೆ. ಬ್ರಹ್ಮನ ಜೀವಿತಾವಧಿ 100 ವರುಷಗಳು. ಈ ಅವಧಿಯ ಅಂತ್ಯದಲ್ಲಿ ಎಲ್ಲ ಬ್ರಹ್ಮಾಂಡ ನಾಶವಾಗುತ್ತದೆ. ಈ ರೀತಿ ನಾಶವಾಗುವುದಕ್ಕೆ ಪ್ರಳಯ ಎಂದು ಕರೆಯುತ್ತಾರೆ.
2025ರಲ್ಲಿ ನಿಮ್ಮ ಪ್ರೀತಿ ಪ್ರೇಮ ಪ್ರಣಯ ಹೀಗಿರುತ್ತೆ! ನಿಮ್ಮ ರಾಶಿಯ ಲವ್ ಜಾತಕ ಇಲ್ಲಿ ನೋಡಿ
ಬ್ರಹ್ಮನ ಒಂದು ದಿನದಲ್ಲಿ ಹದಿನಾಲ್ಕು ಮನ್ವಂತರಗಳಿವೆ. ಮನ್ವಂತರ ಎನ್ನುವುದು ಒಬ್ಬ ಮನು ನಿಯಂತ್ರಿಸುವ ಅವಧಿ. ಹದಿನಾಲ್ಕು ಮನುಗಳ ಆಳ್ವಿಕೆಯು ಬ್ರಹ್ಮನ ಜೀವನದಲ್ಲಿ ಒಂದು ದಿನದ (ಹನ್ನೆರಡು ಗಂಟೆ) ಉದ್ದಕ್ಕೆ ಸಮನಾಗಿರುತ್ತದೆ ಮತ್ತು ಬ್ರಹ್ಮ ರಾತ್ರಿಯು ಅದೇ ಅವಧಿಯನ್ನು ಹೊಂದಿರುತ್ತದೆ.
ಅಂದರೆ ಬ್ರಹ್ಮನ ಒಂದು ದಿನದಲ್ಲಿ ನಮ್ಮ 1000 ಯುಗಗಳು ಸಂದುಹೋಗುತ್ತವೆ. ಅಂದರೆ ನಮ್ಮ ಕಾಲಮಾನದಲ್ಲಿ ಎಷ್ಟು ದಿನಗಳು, ಎಷ್ಟು ಗಂಟೆ, ಎಷ್ಟು ಸೆಕೆಂಡ್ ಎಂದು ಲೆಕ್ಕ ಹಾಕುವುದೇ ಕಷ್ಟ. ಅದು ನಮ್ಮ ಸಾಮಾನ್ಯ ಕ್ಯಾಲ್ಕುಲೇಟರ್‌ನಲ್ಲಂತೂ ಸಾಧ್ಯವಿಲ್ಲ. ಅಂದರೆ ಬ್ರಹ್ಮನ ಕಾಲಮಾನದ ಮುಂದೆ ನಮ್ಮ ಜೀವಿತಾವಧಿ ಅಥವಾ ಒಂದು ವರ್ಷ ಎಂಬುದು ತಿಮಿಂಗಿಲದ ಮುಂದೆ ಒಂದು ಕಣ ದೂಳಿಗೂ ಸಮನಲ್ಲ. ಊಹಿಸುವುದಕ್ಕೂ ಕಷ್ಟ. ಇಂಥ ಮಹಾಕಾಲದ ಮುಂದೆ ನಮ್ಮ ಒಂದು ವರ್ಷದ ಅವಧಿ ಏನೇನೂ ಅಲ್ಲ ಎಂಬುದು ನಮಗೆ ಗೊತ್ತಿದ್ದರೆ ಸಾಕು.
ಕನಸಲ್ಲಿ ಇವು ಕಂಡ್ರೆ ನಿಮಗೆ ಲಕ್ಷ್ಮೀ ಕಟಾಕ್ಷ! ಶ್ರೀಮಂತಿಕೆ ತನ್ನಿಂದ ತಾನೇ ಬರಲಿದೆ