Asianet Suvarna News Asianet Suvarna News

ಮಟಪಾಡಿಯಲ್ಲಿ ನಡುತಿಟ್ಟಿನ ಯಕ್ಷಗಾನ ವೈಭವ; ನೋಡಲು ಜನಸಾಗರ

ಸಧ್ಯ ಎಲ್ಲೂ ಕಾಣಸಿಗದ ಪಕ್ಕಾ ಸಾಂಪ್ರದಾಯಿಕ ಶೈಲಿಯ ಶುದ್ಧ ಯಕ್ಷಗಾನವನ್ನು ವೀಕ್ಷಿಸಲು ಮಟಪಾಡಿಯಲ್ಲಿ 2000ಕ್ಕೂ ಅಧಿಕ ಜನರು ಬಂದಿದ್ದರು. 

Traditional Yakshagana showcased in matapadi attracts large gathering skr
Author
First Published Nov 16, 2022, 3:55 PM IST

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್,ಉಡುಪಿ

ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನದಲ್ಲಿ ಹಲವು ವಿಧಾನಗಳಿವೆ. ಸದ್ಯ ಚಾಲ್ತಿಯಲ್ಲಿ ಇಲ್ಲದ ಆದರೆ ಸಾಂಪ್ರದಾಯಿಕ ಮಹತ್ವವನ್ನು ಪಡೆದಿರುವ, ನಡು ಬಡಗು ತಿಟ್ಟಿನ ಅಪರೂಪದ ಯಕ್ಷಗಾನ ಪ್ರದರ್ಶನ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಜರುಗಿತು.

ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮವು ಶುದ್ಧ ಯಕ್ಷಗಾನಕ್ಕೆ ಹೆಸರುವಾಸಿಯಾಗಿದೆ. ಆಧುನಿಕ ಆಡಂಬರಗಳಿಗೆ ಒಗ್ಗಿಕೊಳ್ಳದ, ಹಳೆ ಮಾದರಿಯನ್ನು ಇಲ್ಲಿನ ಕಲಾವಿದರು ಪಾಲಿಸಿಕೊಂಡು ಬಂದಿದ್ದಾರೆ. ಬ್ರಹ್ಮಾವರದಲ್ಲಿ ಹಾರಾಡಿ ತಿಟ್ಟು ಹಾಗೂ ಮಟಪಾಡಿ ತಿಟ್ಟು ಅತ್ಯಂತ ಜನಪ್ರಿಯತೆಯನ್ನು ಪಡೆದಿತ್ತು. ಕಾಲಾಂತರದಲ್ಲಿ ಈ ಸಾಂಪ್ರದಾಯಿಕ ಕುಣಿತ ಕಣ್ಮರೆಯಾಗಿದೆ. 

ನಡೆದಾಡುವ ಯಕ್ಷಗಾನ ವಿಶ್ವಕೋಶ ಎಂದೇ ಪ್ರಸಿದ್ಧರಾಗಿದ್ದ ಕಾಂತಪ್ಪ ಮಾಸ್ತರರು 57 ವರ್ಷಗಳ ಹಿಂದೆ ಮಟಪಾಡಿಯಲ್ಲಿ ಸ್ಥಾಪಿಸಿದ ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾಮಂಡಳಿ ಇವತ್ತಿಗೂ ಸಾಂಪ್ರದಾಯಿಕ ಯಕ್ಷಗಾನವನ್ನು ಉಳಿಸಿಕೊಂಡು ಬಂದಿದೆ. ಅವರ ಪುತ್ರ ತೋನ್ಸೆ ಜಯಂತ ಕುಮಾರ್ ಇಂದಿಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಳೆಯ ಸಂಪ್ರದಾಯ ನೆನಪಿಸುವ ಕಾರಣಕ್ಕೆ ಈ ಯಕ್ಷಗಾನ ಮಂಡಳಿಯವರು ಅಪರೂಪದ 3 ಯಕ್ಷಗಾನ ಪ್ರಸಂಗ ಏರ್ಪಡಿಸಿದ್ದರು. ರಾತ್ರಿ 8.30ಕ್ಕೆ ಆರಂಭವಾದ ಈ ಪ್ರದರ್ಶನ ಬೆಳಗಿನ ಜಾವ 6:30ರವರೆಗೂ ಜರುಗಿತು.ಅಪರೂಪದ ಪ್ರಸಂಗಗಳಾದ ಮಾಯಾಪುರಿ ಮಹಾತ್ಮೆ, ವೀರಮಣಿ ಕಾಳಗ, ಕರ್ಣಾರ್ಜುನ‌ ಕಾಳಗ, ಮೀನಾಕ್ಷಿ ಕಲ್ಯಾಣ ಪ್ರಸಂಗವನ್ನು ಕಂಡು 2,000ಕ್ಕೂ ಅಧಿಕ ಪ್ರೇಕ್ಷಕರು ನೋಡಿ ಖುಷಿ ಪಟ್ಟರು.

ಉಕ್ರೇನ್ ಹುಡುಗನ ಕಾಯಿಲೆ ವಾಸಿ: ಕೊರಗಜ್ಜನಿಗೆ ಶರಣಾದ ದಂಪತಿ

ಯಕ್ಷಗಾನದಲ್ಲಿ ಮೂರು ವಿಭಾಗಗಳಿವೆ. ಉಡುಪಿಯ ದಕ್ಷಿಣ ಭಾಗದ ಯಕ್ಷಗಾನ ಪ್ರದರ್ಶನವನ್ನು ತೆಂಕುತಿಟ್ಟು ಎಂದು ಕರೆಯುತ್ತಾರೆ. ಉಡುಪಿಯ ಉತ್ತರ ಭಾಗದ ಯಕ್ಷಗಾನ ಪ್ರದರ್ಶನಗಳನ್ನು ಬಡಗುತಿಟ್ಟು ಎಂದು ಕರೆಯುತ್ತಾರೆ. ಉಡುಪಿಯ ಗಡಿ ದಾಟಿದ ನಂತರ ಉತ್ತರ ಕನ್ನಡ ಜಿಲ್ಲೆಯ ಜನಪ್ರಿಯ ಯಕ್ಷಗಾನ ಮಾಧ್ಯಮವನ್ನು ಬಡಾ ಬಡಗು ಎಂದು ಕರೆಯಲಾಗುತ್ತೆ. ಉಡುಪಿಯ ಕೇಂದ್ರ ಸ್ಥಾನವಾದ ಬ್ರಹ್ಮಾವರದಲ್ಲಿ ಹಾರಾಡಿತಿಟ್ಟು ಹಾಗೂ ಮಟಪಾಡಿ ತಿಟ್ಟು ದಶಕಗಳ ಹಿಂದೆ ಜನಪ್ರಿಯತೆಯನ್ನು ಪಡೆದಿತ್ತು.

ಮಟಪಾಡಿಯಲ್ಲಿ ನಡೆದ ಯಕ್ಷಗಾನದಲ್ಲಿ ಹಳೆ ಮಾದರಿಯ ವೇಷಗಳನ್ನು ಧರಿಸಲಾಗಿತ್ತು. ಆಧುನಿಕ ಕಿರೀಟಗಳನ್ನು ಬಳಸದೆ ಅಟ್ಟೆ ಕಟ್ಟಿದ ಕೇದಗೆ ಮುಂಡಾಸು(ಬಟ್ಟೆಯಿಂದಲೇ ನಿರ್ಮಿಸಿದ ಕಿರೀಟವಾದ್ದರಿಂದ ಅತಿಯಾದ ಭಾರವಿರುತ್ತೆ), ಸಾಂಪ್ರದಾಯಿಕ ಭುಜಕೀರ್ತಿ, ಹಳೇ ಶೈಲಿಯ ಎದೆ ಕಟ್ಟು, ಕಟ್ಟು ಮೀಸೆ ಬಳಸಿದ ವೇಷಗಳು ಪ್ರದರ್ಶನ ನೀಡಿದವು. ಬಡಗುತಿಟ್ಟಿನ ಜನಪ್ರಿಯ ಮೇಳಗಳಾದ ಮಂದಾರ್ತಿ, ಮಾರಣಕಟ್ಟೆ , ಅಮೃತೇಶ್ವರಿ ಮೇಳದ ಸುಮಾರು 40ಕ್ಕೂ ಅಧಿಕ ಕಲಾವಿದರು ಈ ಪ್ರದರ್ಶನ ನಡೆಸಿಕೊಟ್ಟರು.

Shani Transit 2023: ಶನಿಕೃಪೆಯಿಂದ 2023ರ ಆರಂಭ ಈ 3 ರಾಶಿಗೆ ಶುಭಲಾಭ

ಕರ್ಣಾರ್ಜುನ ಕಾಳಗದಲ್ಲಿ ಕೋಡಿ ವಿಶ್ವನಾಥ ಗಾಣಿಗ ಹಾಗೂ ಅಜ್ರಿ ಗೋಪಾಲ ಗಾಣಿಗರ ಕರ್ಣ ಶಲ್ಯ ವೇಷಗಳ ಮುಖಾಮುಖಿ ಪ್ರದರ್ಶನದ ಪ್ರಧಾನ ಆಕರ್ಷಣೆಯಾಗಿತ್ತು. ಪ್ರಶಸ್ತಿ ಪುರಸ್ಕೃತ ಕಲಾವಿದ ಐರೋಡಿ ಗೋವಿಂದಪ್ಪ, ಮಾಧವ ನಾಗೂರು ಕೊಳ್ಳಲಿ ಕೃಷ್ಣಶೆಟ್ಟಿ ನರಾಡಿ ಭೋಜರಾಜ ಶೆಟ್ಟಿ ಉಪ್ಪುಂದ ನಾಗೇಂದ್ರ ರಾವ್ ಮುಂತಾದ ಸಾಂಪ್ರದಾಯಿಕ ವೇಷಧಾರಿಗಳು ಪ್ರಧಾನ ಆಕರ್ಷಣೆಯಾಗಿದ್ದರು.

ಮಟಪಾಡಿಯ ಚಂದ್ರಶೇಖರ ಕಲ್ಕೂರ್ ಅವರ ಪ್ರಾಯೋಜಕತ್ವದಲ್ಲಿ ಸದಾನಂದ ಪಾಟೀಲ್ ಅವರ ಸಂಯೋಜನೆಯಲ್ಲಿ ಅಳಿವಿನ ಅಂಚಿನಲ್ಲಿರುವ ಮಟಪಾಡಿ ಹಾಗೂ ಹಾರಾಡಿ ಶೈಲಿಯ ಯಕ್ಷಗಾನ ಪ್ರದರ್ಶನ ಸಾವಿರಾರು ಪ್ರೇಕ್ಷಕರಿಗೆ ಮುದ ನೀಡಿದೆ.

Follow Us:
Download App:
  • android
  • ios