ಈ ಬಾರಿ ನಾಲ್ಕಲ್ಲ, ಎಂಟು ಶ್ರಾವಣ ಸೋಮವಾರ, 9 ಶ್ರಾವಣ ಶುಕ್ರವಾರ!
ಶ್ರಾವಣ ಮಾಸವು ಈ ವರ್ಷ ಎರಡು ತಿಂಗಳ ಕಾಲ ಇರಲಿದೆ. ಶ್ರಾವಣ ಮಾಸವು ಮಹಾಲಕ್ಷ್ಮೀ, ವಿಷ್ಣು ಹಾಗೂ ಶಿವ ಪೂಜೆಗೆ ಹೆಸರುವಾಸಿಯಾಗಿದೆ. ಈ ವರ್ಷ ಲಕ್ಷ್ಮೀ ಭಕ್ತರಿಗೆ 9 ಶ್ರಾವಣ ಶುಕ್ರವಾರಗಳು ಲಭಿಸಿದರೆ, ಶಿವಭಕ್ತರಿಗೆ 8 ಶ್ರಾವಣ ಸೋಮವಾರಗಳಿವೆ. ಇದರ ವಿಶೇಷತೆ ಬಗ್ಗೆ ತಿಳಿಯೋಣ.
ಶ್ರಾವಣ ಮಾಸ ಹಿಂದೂ ಕ್ಯಾಲೆಂಡರ್‌ನಲ್ಲಿ ಐದನೇ ತಿಂಗಳು. ಆಷಾಢ ಮಾಸದ ನಂತರ ಈ ಮಾಸ ಬರುತ್ತದೆ. ಸದ್ಯ ಆಷಾಢ ನಡೆಯುತ್ತಿದೆ.
ಶ್ರಾವಣ ಮಾಸದಲ್ಲಿ, ಹುಣ್ಣಿಮೆಯ ದಿನದಂದು ಶ್ರವಣ ನಕ್ಷತ್ರವು ಆಳುತ್ತದೆ. ಹಾಗಾಗಿ, ಈ ಮಾಸಕ್ಕೆ ಶ್ರಾವಣ ಎಂಬ ಹೆಸರು ಬಂದಿದೆ. ಶ್ರವಣ ನಕ್ಷತ್ರವು ಭಗವಾನ್ ಶ್ರೀ ಮಹಾವಿಷ್ಣುವಿನ ಜನ್ಮ ನಕ್ಷತ್ರವಾಗಿದೆ. ಹಾಗಾಗಿ, ಈ ಮಾಸದ ವಿಶೇಷತೆ ಮತ್ತಷ್ಟು ಪಟ್ಟು ಹೆಚ್ಚಲಿದೆ. ಭಕ್ತರು ಈ ಮಾಸದಲ್ಲಿ ಲಕ್ಷ್ಮಿ, ಶ್ರೀ ಮಹಾ ವಿಷ್ಣು ಮತ್ತು ಶಿವನನ್ನು ಪೂಜಿಸುತ್ತಾರೆ.
ಶ್ರಾವಣ ಎಂದರೆ ಹಬ್ಬಗಳ ಸುಗ್ಗಿ, ಮನೆಮನೆಯಲ್ಲೂ ಸಂಭ್ರಮ. ಶ್ರಾವಣದಲ್ಲಿ ವರ ಲಕ್ಷ್ಮೀ ವ್ರತ , ಮಂಗಳ ಗೌರಿ ವ್ರತ, ನಾಗರ ಪಂಚಮಿ, ರಕ್ಷಾ ಬಂಧನ, ರಾಘವೇಂದ್ರ ಸ್ವಾಮಿಗಳ ಆರಾಧನೆ, ಕೃಷ್ಣ ಜನ್ಮಾಷ್ಠಮಿ ಮುಂತಾದ ಅನೇಕ ಪ್ರಮುಖ ಹಬ್ಬಗಳನ್ನು ಆಚರಿಸಲಾಗುತ್ತದೆ. ಇದಲ್ಲದೆ, ಶ್ರಾವಣ ಮಾಸದ ಸೋಮವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ ಎಲ್ಲವನ್ನೂ ವಿಶೇಷವಾಗಿ ವ್ರತದಂತೆ ಆಚರಿಸಲಾಗುತ್ತದೆ. ಏಕೆಂದರೆ, ಪುರಾತನ ಗ್ರಂಥಗಳ ಪ್ರಕಾರ, ಈ ತಿಂಗಳಲ್ಲಿ ಮಾಡುವ ಪೂಜೆಗಳು ಮತ್ತು ವ್ರತಗಳು ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡುತ್ತವೆ.
ಈ ಬಾರಿಯ ವಿಶೇಷತೆ ಎಂದರೆ ಈ ಬಾರಿ ಎಲ್ಲ ಬಾರಿಯಂತೆ 4 ಅಲ್ಲದೆ, 8 ಶ್ರಾವಣ ಸೋಮವಾರಗಳು, ಶ್ರಾವಣ ಶುಕ್ರವಾರಗಳು ಬರಲಿವೆ. ಇಂಥದೊಂದು ವಿಶೇಷತೆ 19 ವರ್ಷಗಳ ಬಳಿಕ ಸಂಭವಿಸುತ್ತಿದೆ. ಇದಕ್ಕೆ ಕಾರಣ ಈ ವರ್ಷ ಅಧಿಕ ಮಾಸ ಬಂದಿರುವುದು.
ಇಂದ್ರನ ಶಾಪದಿಂದ ಮುಟ್ಟು ಹೆಣ್ಣಿಗಂಟಿತೇ? ಪೀರಿಯಡ್ಸ್ ಶುರುವಾದದ್ದು ಹೀಗೆ..
2023ರಲ್ಲಿ ಶ್ರಾವಣ ಮಾಸ ಯಾವಾಗ?
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳನ್ನು ಅನುಸರಿಸುವ ಕ್ಯಾಲೆಂಡರ್‌ನಂತೆ ಈ ವರ್ಷ ಶ್ರಾವಣ ಮಾಸವು ಜುಲೈ 18 ರ ಮಂಗಳವಾರ ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 16ರ ಬುಧವಾರದಂದು ಕೊನೆಗೊಳ್ಳುತ್ತದೆ. ಆದರೆ, ಇದು ಅಧಿಕ ಶ್ರಾವಣ ಮಾಸ.
ನಿಜ ಶ್ರವಣ ಮಾಸಂ
ನಿಜ ಶ್ರವಣವು 2023ರಲ್ಲಿ ಆಗಸ್ಟ್ 17ರ ಗುರುವಾರದಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 15ರ ಶುಕ್ರವಾರದಂದು ಕೊನೆಗೊಳ್ಳುತ್ತದೆ. ಅಲ್ಲಿಗೆ ಒಟ್ಟು 59 ದಿನಗಳ ಕಾಲ ಶ್ರಾವಣ ಮಾಸ ಇರಲಿದೆ.
ಅಧಿಕ ಮಾಸ ಬರುವುದೇಕೆ?
ವೈದಿಕ ಕ್ಯಾಲೆಂಡರ್ ಪ್ರಕಾರ, ಚಂದ್ರನ ಚಲನೆಯ ಆಧಾರದ ಮೇಲೆ ವರ್ಷಕ್ಕೆ 354 ದಿನಗಳು, ಆದರೆ ಸೌರ ಮಾಸದಲ್ಲಿ 365 ದಿನಗಳು. ಇವೆರಡರ ನಡುವೆ ಒಟ್ಟು 11 ದಿನಗಳ ವ್ಯತ್ಯಾಸವಿರುತ್ತದೆ ಮತ್ತು ಪ್ರತಿ 3 ವರ್ಷಗಳ ನಂತರ ಈ ಅಂತರವು 33 ದಿನಗಳು ಆಗುತ್ತದೆ. ಇದನ್ನು ಅಧಿಕ ಮಾಸ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ 3 ವರ್ಷಕ್ಕೊಮ್ಮೆ ಅಧಿಕ ಮಾಸ ಸಂಭವಿಸುತ್ತದೆ.
ಶ್ರಾವಣ ಸೋಮವಾರ
ಶಿವನ ಭಕ್ತರಿಗೆ ಶ್ರಾವಣ ಮಾಸ ಬಹಳ ವಿಶೇಷವಾದದ್ದು. ಏಕೆಂದರೆ ಶಿವ ಪೂಜೆಗೆ ವಿಶೇಷವಾಗಿ 8 ಸೋಮವಾರಗಳು ಸಿಗುತ್ತವೆ. ಅವೆಂದರೆ,
ಜುಲೈ 24
ಜುಲೈ 31
ಆಗಸ್ಟ್ 7
ಆಗಸ್ಟ್ 14
ಆಗಸ್ಟ್ 21
ಆಗಸ್ಟ್ 28
ಸೆಪ್ಟೆಂಬರ್ 4
ಸೆಪ್ಟೆಂಬರ್ 11
Mangal Gochar 2023: ಸಿಂಹದಲ್ಲಿ ಉಗ್ರನಾಗುವ ಕುಜ; ಈ ರಾಶಿಗಳಿಗೆ ಕಾದಿದೆ ಅಪಾಯ
ಶ್ರಾವಣ ಶುಕ್ರವಾರ
ಶ್ರಾವಣ ಮಾಸದಲ್ಲಿ ಮಹಾಲಕ್ಷ್ಮಿಯ ಆರಾಧನೆಗೆ ಶುಕ್ರವಾರಗಳು ಪ್ರಮುಖವಾಗಿವೆ. ಮಹಿಳೆಯರು ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ಈ ಬಾರಿ ಶ್ರಾವಣ ಶುಕ್ರವಾರದ ದಿನಾಂಕಗಳು ಇಂತಿವೆ..
ಜುಲೈ 21
ಜುಲೈ 28
ಆಗಸ್ಟ್ 4
ಆಗಸ್ಟ್ 11
ಆಗಸ್ಟ್ 18
ಆಗಸ್ಟ್ 25
ಸೆಪ್ಟೆಂಬರ್ 1
ಸೆಪ್ಟೆಂಬರ್ 8
ಸೆಪ್ಟೆಂಬರ್ 15