ಬುದ್ಧನ ಜೊತೆ ಹೋದ ಆಮ್ರಪಾಲಿ ಎಂಬ ವೇಶ್ಯೆಯ ಕತೆ
ಆಮ್ರಪಾಲಿಯ ಬದುಕಿನ ಕತೆಗೆ ನಾವು ಕ್ರಿಸ್ತ ಪೂರ್ವ ಐದನೇ ಶತಮಾನಕ್ಕೆ ಹೋಗಬೇಕು. ಮಾವಿನ ಚಿಗುರಿನಂತೆ ಮನೋಹರವಾಗಿ ಇದ್ದ ಹುಡುಗಿಗೆ ಅದೇ ಅರ್ಥದಲ್ಲಿ ಆಮ್ರಪಾಲಿ ಎಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೇ ಅತ್ಯಂತ ಚೆಲುವೆ. ವೈಶಾಲಿ ನಗರದಲ್ಲಿಯೇ ಅತ್ಯಂತ ಸುಂದರಿ ಎಂಬ ಹೆಸರು ಪಡೆದಿದ್ದಳು. ಆಕೆಯನ್ನು ಪಡೆಯಲು, ಸುಖಿಸಲು ಅಂದಿನ ಶ್ರೀಮಂತರು ಸಾಲುಗಟ್ಟಿದ್ದರು. ಹಾಡು, ನೃತ್ಯ, ಕುಣಿತ ಅಂದರೆ ಆಕೆಗೆ ಜೀವ.
ಆಮ್ರಪಾಲಿಯ ಬದುಕಿನ ಕತೆಗೆ ನಾವು ಕ್ರಿಸ್ತ ಪೂರ್ವ ಐದನೇ ಶತಮಾನಕ್ಕೆ ಹೋಗಬೇಕು. ಮಾವಿನ ಚಿಗುರಿನಂತೆ ಮನೋಹರವಾಗಿ ಇದ್ದ ಹುಡುಗಿಗೆ ಅದೇ ಅರ್ಥದಲ್ಲಿ ಆಮ್ರಪಾಲಿ ಎಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೇ ಅತ್ಯಂತ ಚೆಲುವೆ. ವೈಶಾಲಿ ನಗರದಲ್ಲಿಯೇ ಅತ್ಯಂತ ಸುಂದರಿ ಎಂಬ ಹೆಸರು ಪಡೆದಿದ್ದಳು. ಆಕೆಯನ್ನು ಪಡೆಯಲು, ಸುಖಿಸಲು ಅಂದಿನ ಶ್ರೀಮಂತರು ಸಾಲುಗಟ್ಟಿದ್ದರು. ಹಾಡು, ನೃತ್ಯ, ಕುಣಿತ ಅಂದರೆ ಆಕೆಗೆ ಜೀವ.
ವೈಶಾಲಿಯ ನಗರರ್ತಕಿ ಸ್ಪರ್ಧೆಯಲ್ಲಿ ಆಮ್ರಪಾಲಿ ಭಾಗವಹಿಸಿದಳು. ಗೆದ್ದು ಬಂದಳು. ಅಂದೇ ಅಲ್ಲಿನ ರಾಜ ಮನುದೇವನ ಕಣ್ಣು ಆಕೆಯ ಮೇಲೆ ಬಿತ್ತು. ಅಂದು ನಗರನರ್ತಕಿ ಆಗುವುದೆಂದರೆ ವೇಶ್ಯೆಯಾಗುವುದೆಂದೇ ಅರ್ಥ. ಆದರೆ ಆಮ್ರಪಾಲಿಗೆ ಅಂಥ ಬದುಕು ಬದುಕಲು ಇಷ್ಟವಿರಲಿಲ್ಲ. ಆಕೆ ಬಾಲ್ಯಸ್ನೇಹಿತ ಪುಷ್ಪಕುಮಾರನನ್ನು ಪ್ರೀತಿಸುತ್ತಿದ್ದಳು. ಅವರಿಬ್ಬರು ಮದುವೆಯಾಗಲು ನಿರ್ಧರಿಸಿದರು. ಇಬ್ಬರೂ ದೇವಾಲಯವೊಂದರಲ್ಲಿ ಮದುವೆಯಾದರು. ಆಮ್ರಪಾಲಿ ಸುಖಸಂಸಾರದ ಕನಸು ಕಂಡಳು. ಆದರೆ, ಆಕೆಯನ್ನು ಪಡೆಯುವ ಹಠಕ್ಕೆ ಬಿದ್ದಿದ್ದ ರಾಜ ಮನುದೇವ, ಮದುವೆಯ ದಿನವೇ ಪುಷ್ಪಕುಮಾರನನ್ನು ಕೊಲ್ಲಿಸಿದ. ಅನಂತರ ಸಂತಾಪ ಸೂಚನೆಯ ನಾಟಕವಾಡಿ, ಆಮ್ರಪಾಲಿಯಂಥ ಸುಂದರಿ ಏಕಾಂಗಿಯಾಗಿದ್ದರೆ ಕೇಡಾಗುವುದೆಂದೂ ಪರಪುರುಷರು ಕೂಡ ಆಕೆಯನ್ನು ಪಡೆಯಲು ಪರಸ್ಪರ ಹೊಡೆದಾಡಿ ನಗರದ ನೆಮ್ಮದಿ ಕೆಡುವುದೆಂದೂ ಕಾರಣ ನೀಡಿ ಆಕೆಯನ್ನು ವೈಶಾಲಿಯ `ನಗರ ವಧು’ ಎಂದು ಘೋಷಿಸಿದ. ನಗರವಧು ಅಂದರೆ ಬೇರೇನೂ ಅಲ್ಲ, ವೇಶ್ಯೆ. ಆಕೆ ಶ್ರೀಮಂತರ ಜೊತೆ ಮಲಗಬೇಕು, ರಾಜನ ಆಸ್ಥಾನದಲ್ಲಿ ನರ್ತಿಸಬೇಕು ಅಷ್ಟೇ.
ಬುದ್ಧ ಪೂರ್ಣಿಮೆಯ ಈ ಶುಭ ದಿನ, ಈ ಹಾದಿ ಹಿಡಿದರೆ ಜೀವನದಲ್ಲಿ ನೆಮ್ಮದಿ!
ಆಮ್ರಪಾಲಿ ತನ್ನ ಬದುಕನ್ನು ಮೌನವಾಗಿ ಸ್ವೀಕರಿಸಿದಳು. ಆದರೆ ತನ್ನ ಬಳಿ ಕಷ್ಟವೆಂದು ಹೇಳಿಕೊಂಡು ಬಂದವರಿಗೆ ಧಾರಾಳವಾಗಿ ಸಹಾಯ ನೀಡುತ್ತಿದ್ದಳು ಆಕೆ. ಆಮ್ರಪಾಲಿಯ ಚೆಲುವಿನ ಬಣ್ಣನೆ ನೆರೆಯ ಮಗಧ ಸಾಮ್ರಾಜ್ಯದ ರಾಜ ಬಿಂದುಸಾರನ ಕಿವಿಗೆ ಬಿತ್ತು. ವೈಶಾಲಿ ಮತ್ತು ಮಗಧ ರಾಜ್ಯಗಳು ಶತ್ರು ರಾಷ್ಟ್ರಗಳು. ಆಮ್ರಪಾಲಿಯ ಬಳಿ ಪ್ರೇಮ ಯಾಚನೆ ಮಾಡಲು ಹೋಗುವುದಾದರೂ ಹೇಗೆ? ಯೋಚಿಸಿದ ಬಿಂದುಸಾರ ತನ್ನ ರೂಪ ಮರೆಮಾಚಿ ವೀಣಾವಾದಕನಾಗಿ ಬಂದ. ಸುಂದರನಾಗಿದ್ದ ಆತನಿಗೆ ಆಮ್ರಪಾಲಿಯ ಸ್ನೇಹ ಸಂಪಾದಿಸಲು ಹೆಚ್ಚು ಕಾಲ ಬೇಕಾಗಲಿಲ್ಲ. ಅವರಿಬ್ಬರೂ ಪ್ರೇಮಿಗಳಂತೆ ಇರತೊಡಗಿದರು.
ಬಿಂದುಸಾರನಿಂದ ಆಮ್ರಪಾಲಿಗೆ ಗಂಡು ಮಗು ಜನಿಸಿತು. ಬಿಂದುಸಾರನಿಗೆ ಆಮ್ರಪಾಲಿಯನ್ನು ಬಿಟ್ಟು ಇರಲು ಸಾಧ್ಯವಾಗದೆ, ವೈಶಾಲಿಯನ್ನು ಗೆದ್ದು ಆಕೆಯನ್ನು ಶಾಶ್ವತವಾಗಿ ಪಡೆಯಲು ಯೋಚಿಸಿ ದಂಡೆತ್ತಿ ಬಂದ. ಆದರೆ ವೈಶಾಲಿಯನ್ನು ಅತೀವವಾಗಿ ಪ್ರೀತಿಸುತ್ತಿದ್ದ ಆಮ್ರಪಾಲಿ, ಬಿಂದುಸಾರನ ಯೋಚನೆಗೆ ಯಾಚನೆಗೆ ಸೊಪ್ಪು ಹಾಕಲಿಲ್ಲ. ಆಕೆಯ ಮಾತಿಗೆ ಮಣಿದು ಬಿಂದುಸಾರ ಮಗಧಕ್ಕೆ ಮರಳಿದ. ಮುಂದೆ ಬಿಂದುಸಾರನ ಪಟ್ಟದರಸಿಯ ಮಗ ಅಜಾತಶತ್ರು ತಂದೆಗಾದ ಅವಮಾನ ತೀರಿಸಿಕೊಳ್ಳಲು ವೈಶಾಲಿಗೆ ಮುತ್ತಿಗೆ ಹಾಕಿದ. ಅವನೂ ಆಮ್ರಪಾಲಿಯ ಸೌಂದರ್ಯಕ್ಕೆ ಸೋತಿದ್ದ. ಆಕೆಯನ್ನು ಸೆರೆ ಹಿಡಿದು, ಇಡಿಯ ನಗರವನ್ನು ಸುಟ್ಟು ಹಾಕಿಸಿದ. ಅನಂತರ ಆಕೆಯ ಬಳಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡ. ತನ್ನ ನೆಲಕ್ಕೆ, ತನ್ನ ಜನರಿಗೆ ಅಜಾತಶತ್ರು ತಂದಿತ್ತ ಗತಿಯಿಂದ ನೊಂದಿದ್ದ ಆಕೆ ಅದನ್ನು ತಿರಸ್ಕರಿಸಿದಳು. ಆದರೆ ಅಜಾತಶತ್ರು ಅದಕ್ಕೆ ಮಣಿಯಲಿಲ್ಲ. ಈತ ತನ್ನ ಪ್ರೇಮಿ ಬಿಂದುಸಾರನ ಮಗ ಎಂದು ತಿಳಿದು ಆಮ್ರಪಾಲಿಗೆ ಮತ್ತಷ್ಟು ದುಃಖವಾಯಿತು.
ಈ ದುಃಖ, ಬದುಕಿನ ಬಗ್ಗೆ ಶೂನ್ಯ ಆವರಿಸಿದ ಗಳಿಗೆಯಲ್ಲೇ ಆಕೆಗೆ ನಗರಕ್ಕೆ ಬಂದ ಬುದ್ಧನ ಗಣ ಕಾಣಿಸಿತು. ನೋಟ ಮಾತ್ರದಿಂದಲೇ ಶಾಂತಿ ನೆಮ್ಮದಿಯನ್ನು ಕರುಣಿಸಿದ ಬುದ್ಧನನ್ನು ನೋಡಿ ಮಾರುಹೋದ ಆಕೆ, ಆತನನ್ನು ಸತ್ಕರಿಸಲು ಮನೆಗೆ ಕರೆದಳು. ನಗರದ ಜನ, ವೇಶ್ಯೆಯ ಮನೆಯಲ್ಲಿ ಬುದ್ಧ ಊಟ ಮಾಡುವುದು ಅಪಚಾರ ಎಂದು ಮಾತಾಡಿಕೊಂಡರು. ಆದರೆ ಬುದ್ಧ ಅದನ್ನೆಲ್ಲ ಲೆಕ್ಕಿಸದೆ, ಆಮ್ರಪಾಲಿಯ ಆತಿಥ್ಯ ಸ್ವೀಕರಿಸಿದ. ಆಕೆಯನ್ನು ಹರಸಿದ. ನಾಲ್ಕು ತಿಂಗಳು ಆಕೆಯ ಅರಮನೆಯ ಉದ್ಯಾನದಲ್ಲಿದ್ದ. ಬುದ್ಧನ ಸಾಂಗತ್ಯದಿಂದ ಆಮ್ರಪಾಲಿ ನೆಮ್ಮದಿ ಪಡೆದಳು.
ಈ ದೇವಾಲಯಗಳ ಶ್ರೀಮಂತಿಕೆ ಕೇಳಿದ್ರೆ ಬೆರಗಾಗೋದು ಪಕ್ಕಾ!
ತಾನೂ ಸನ್ಯಾಸಿನಿಯಾಗಿ ನಿನ್ನ ಜೊತೆ ಬರುವೆ ಎಂದು ಬುದ್ಧನನ್ನು ಕೋರಿದಳು. ಅದುವರೆಗೆ ಬುದ್ಧನ ಗಡಣದಲ್ಲಿ ಸ್ತ್ರೀಯರು ಇರಲಿಲ್ಲ. ಭೀಕ್ಷುಗಳ ಸಂಘಟನೆಯ ನಿಯಮಗಳನ್ನು ಸಡಿಲಿಸಿದ ಬುದ್ಧ, ಆಕೆಯನ್ನು ಪರಿವ್ರಾಜಕಿಯಾಗಿ ಸ್ವೀಕರಿಸಿದ. ಸುಖೋಪಭೋಗ ಪ್ರೇಮ ಯಾತನೆ ದ್ವೇಷ ಕೋಪ ಯುದ್ಧಗಳ ಮೂಲಕ ಹಾದು ಬಂದ ಆಮ್ರಪಾಲಿಯ ಬದುಕು ಕಡೆಗೂ ಬುದ್ಧನ ಚರಣಗಳಲ್ಲಿ ಅತ್ಯಂತ ನೆಮ್ಮದಿಯನ್ನು ಪಡೆಯಿತು.