ಪರಶುರಾಮನ ಸೃಷ್ಟಿಯ ತುಳುನಾಡಿನಲ್ಲಿ ಪತ್ತನಾಜೆ ಆರಂಭ

ಪರಶುರಾಮನ ಸೃಷ್ಟಿಯಾಗಿರುವ ಕೇರಳದ ಕಾಸರಗೋಡು ಜಿಲ್ಲೆಯಿಂದ ಹಿಡಿದು, ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಬಾರ್ಕೂರುವರೆಗಿನ ತುಳುನಾಡಿನಲ್ಲಿ ಹಿಂದಿನಿಂದ ತುಳುನಾಡಿನ ಕೆಲವು ಸಂಪ್ರದಾಯಗಳು ಇಂದಿಗೂ ನಡೆಯುತ್ತ ಬಂದಿದೆ. ಅದರಲ್ಲಿ ಒಂದು ಪತ್ತನಾಜೆ.

Pattanaje begins in Tulunadu tulu culture festive rav

ಪ್ರಕಾಶ್‌ ಸುವರ್ಣ

ಮೂಲ್ಕಿ (ಮೇ.25) : ಪರಶುರಾಮನ ಸೃಷ್ಟಿಯಾಗಿರುವ ಕೇರಳದ ಕಾಸರಗೋಡು ಜಿಲ್ಲೆಯಿಂದ ಹಿಡಿದು, ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಬಾರ್ಕೂರುವರೆಗಿನ ತುಳುನಾಡಿನಲ್ಲಿ ಹಿಂದಿನಿಂದ ತುಳುನಾಡಿನ ಕೆಲವು ಸಂಪ್ರದಾಯಗಳು ಇಂದಿಗೂ ನಡೆಯುತ್ತ ಬಂದಿದೆ. ಅದರಲ್ಲಿ ಒಂದು ಪತ್ತನಾಜೆ.

ಈ ವರ್ಷ ಮೇ 25 ರಂದು ಪತ್ತನಾಜೆ(Pattanaje) ಬರಲಿದ್ದು ಆ ಬಳಿಕ ತುಳುನಾಡಿ(Tulunadu)ನಲ್ಲಿ ಅಂಕ, ಆಯನ, ನೇಮ ಮುಂತಾದ ಧಾರ್ಮಿಕ ಉತ್ಸವಗಳು ನಿಷಿದ್ಧ. ಮತ್ತೆ ದೀಪಾವಳಿ ಆರಂಭಗೊಂಡ ಬಳಿಕ ಪುನ: ಚಾಲನೆಯಾಗಲಿದೆ. ವೃಷಭ ಮಾಸ ಅಂದರೆ ತುಳುವಿನ ಪಂಚಾಂಗ(Tulu panchanga)ದಲ್ಲಿ ಬೇಶ ತಿಂಗಳು. ಬೇಶ ತಿಂಗಳಿನಲ್ಲಿ ಬರುವ 10 ನೇ ದಿನಕ್ಕೆ ಪತ್ತನಾಜೆ ಅಂತ ಕರೆಯುತ್ತಾರೆ.

ತುಳು ಸಂಸ್ಕೃತಿ ಪ್ರತಿಬಿಂಬದ ತೆನೆ ಹಬ್ಬ ‘ಕುರಲ್‌ ಪರ್ಬ’

ಪತ್ತನಾಜೆಗೆ ಉತ್ತಮ ಅರ್ಥವಿದ್ದು ಪತ್ತನೆ ಅಂದರೆ ಹತ್ತನೇ ಎಂದು ಹಾಗೂ ಅಜೆ ಅಂದರೆ ಹೆಜ್ಜೆ ಎಂದು ಅರ್ಥ. ಹಿಂದಿನ ದಿನಗಳಲ್ಲಿ ಪತ್ತನಾಜೆಯಿಂದ ಗದ್ದೆ ಉಳುವ ಮೂಲಕ ಕೃಷಿ ಕೆಲಸ ಆರಂಭಗೊಂಡು 18 ನೇ ದಿನದಂದು ನೇಜಿ ನೆಡುವ ಸಂಪ್ರದಾಯವಿತ್ತು. ಹಿಂದಿನ ದಿನಗಳಲ್ಲಿ ಆರು ತಿಂಗಳು ಮಳೆಗಾಲ, ಆರು ತಿಂಗಳು ಸೆಕೆಗಾಲವಿದ್ದು ಮೇ ತಿಂಗಳಿನಿಂದ ನವಂಬರ್‌ ತಿಂಗಳವರೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದರಿಂದ ನೇಮೋತ್ಸವ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳಿಗೆ ಪುರುಸೋತ್ತು ಇಲ್ಲದ ಕಾರಣ ಸ್ಥಗಿತಗೊಳಿಸಲಾಗುತ್ತಿತ್ತು.

ಎಲ್ಲವು ನಿಲ್ಲುತ್ತದೆ: ಪತ್ತನಾಜೆಯ ಬಳಿಕ ನೇಮೋತ್ಸವದ ಗಗ್ಗರದ ಸದ್ದು, ಯಕ್ಷಗಾನ ಬಯಲಾಟದ ಚೆಂಡೆಯ ಸದ್ದು, ದೈವಸ್ಥಾನಗಳಲ್ಲಿ ನಡೆಯುವ ನೇಮೋತ್ಸವದ ಸಂದರ್ಭದ ತಾಸೆಯ ಸದ್ದು , ಕದೋನಿಯ ಸದ್ದು, ದೇವಳಗಳ ಜಾತ್ರಾ ಮಹೋತ್ಸವಗಳ ಸಂದರ್ಭದ ಸಿಡಿಮದ್ದು, ಕದೋನಿಯ ಸದ್ದು ಎಲ್ಲವು ನಿಲ್ಲುತ್ತದೆ. ಪತ್ತನಾಜೆಯಂದು ದೇವಸ್ಥಾನಗಳಲ್ಲಿ ವಸಂತ ಪೂಜೆ ನಡೆದು ಬಳಿಕ ದೇವರು ಗರ್ಭಗುಡಿಯೊಳಗೆ ಸೇರುತ್ತಾರೆ. ದೈವಗಳು ಕೂಡ ಗುಡಿಯೊಳಗೆ ಸೇರಿಕೊಳ್ಳುತ್ತದೆ. ದೀಪಾವಳಿಯ ಬಳಿಕ ದೇವರು ಗರ್ಭಗುಡಿಯಿಂದ ಹೊರಗೆ ಬಂದು ಉತ್ಸವ ಆರಂಭಗೊಳ್ಳುತ್ತದೆ. ಬೇಶ, ಕಾರ್ತೆಲ್‌ ಮತ್ತು ಆಟಿ ಈ ಮೂರು ತಿಂಗಳ ಕಾಲ ತುಳುನಾಡಿನ ಯಾವುದೇ ದೇವಸ್ಥಾನ, ದೈವಸ್ಥಾನಗಳಲ್ಲಿ ಯಾವುದೇ ವಿಶೇಷ ಉತ್ಸವ ನಡೆಯುವುದಿಲ್ಲ. ಆಟಿ ತಿಂಗಳು ಮುಗಿದು ಸೋಣ ತಿಂಗಳು ಅಂದರೆ ಸಿಂಹ ಮಾಸದಲ್ಲಿ ಸಿಂಹ ಸಂಕ್ರಮಣದ ಬಳಿಕ ಹಿಂದೂ ಸಂಪ್ರದಾಯದ ಪ್ರಕಾರ ಶುಭ ಕಾಲವಾಗಿದ್ದು ಅಂದಿನಿಂದ ಎಲ್ಲಾ ಉತ್ಸವಗಳು ಆರಂಭಗೊಳ್ಳುತ್ತದೆ. ಕೆಲವು ಸಂದರ್ಭದಲ್ಲಿ ಆಟಿ ತಿಂಗಳಿನಲ್ಲಿ ಅಷ್ತಮಿ ಬಂದರೇ ಅದನ್ನು ಆಚರಿಸುವುದಿಲ್ಲ. ಸೋಣ ತಿಂಗಳಿನಲ್ಲಿ ಬರುವ ಅಷ್ಟಮಿಯನ್ನು ಆಚರಿಸುವ ಪದ್ಧತಿಯಿದೆ. ಇದು ಹಿಂದಿನ ಕಾಲದಿಂದ ನಡೆದು ಕೊಂಡು ಬಂದ ಸಂಪ್ರದಾಯವಾಗಿದ್ದು ಈಗಿನ ಪೀಳಿಗೆ ಕೂಡ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದೆ.

ಸೇವೆಗಳಿಗೆ ಪತ್ತನಾಜೆ ಗಡು: ತುಳುನಾಡಿನಲ್ಲಿ ದೈವಗಳಿಗೆ ಪ್ರಧಾನ ಸ್ಥಾನವಿದ್ದು ಮಾತಿನಲ್ಲಿ ಹೇಳುವಾಗ ದೈವ, ದೇವರು ಎಂದು ಹೇಳುವ ಮೂಲಕ ದೈವಗಳಿಗೆ ಪ್ರಥಮ ಸ್ಥಾನ ನೀಡುತ್ತಾ ಬಂದಿದೆ. ತುಳುನಾಡಿನಲ್ಲಿ ದೈವಸ್ಥಾನಗಳಲ್ಲಿ ಕೋಲ, ನೇಮ, ಅಗೇಲು, ತಂಬಿಲ ಮುಂತಾದ ಸೇವೆಗಳಿಗೆ ಪತ್ತನಾಜೆ ಗಡುವಾಗಿದ್ದು ಪತ್ತನಾಜೆ ಬಳಿಕ ತುಳುನಾಡಿನಲ್ಲಿ ಜಾರಂದಾಯ, ಧೂಮಾವತಿ ಸೇರಿದಂತೆ ರಾಜನ್‌ ದೈವಗಳಿಗೆ ಪತ್ತನಾಜೆ ಪ್ರಧಾನ ಗಡು, ಹಿಂದಿನ ದಿನಗಳಲ್ಲಿ ಪತ್ತನಾಜೆ ಬಳಿಕ ದೈವWಳು ಘಟ್ಟಹತ್ತುತ್ತವೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಕುಟುಂಬ ದೈವಗಳಿಗೆ, ಗ್ರಾಮ ದೈವಗಳಿಗೆ ಕೂಡ ಎಲ್ಲ ಪರ್ವಗಳು ಪತ್ತನಾಜೆಯ ಒಳಗೆ ಮುಗಿಯಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವದಿಂದಾಗಿ ಹಾಗೂ ಮುಂಬಾಯಿ ಮುಂತಾದ ದೂರದ ಪ್ರದೇಶಗಳಿಂದ ಬರುವ ಮನೆಯ ಕುಟುಂಬಿಕರಿಗೆ ಸಮಯದ ಅಭಾವದ ಕಾರಣ ಕೆಲವು ಕಡೆ ಕೆಲವು ಕುಟುಂಬಗಳಲ್ಲಿ ತಂಬಿಲ ನಡೆಯತ್ತಿದೆ. ಪ್ರತಿವರ್ಷ ಮೇ ತಿಂಗಳ 24 ರಂದು ಪತ್ತನಾಜೆ ಬರುತ್ತದೆ. ಕೆಲವು ಬಾರಿ 25 ರಂದು ಬರುತ್ತದೆ. ಹಿಂದಿನ ದಿನಗಳಲ್ಲಿ ಪತ್ತನಾಜೆಯಿಂದ ಮಳೆಗಾಲ ಆರಂಭಗೊಳ್ಳುತ್ತಿದ್ದು ಪತ್ತನಾಜೆಯಂದು ಎರಡು ಹನಿಯಾದರೂ ಮಳೆ ಬೀಳಲೆಬೇಕು. ಈಗ ಪ್ರಕೃತಿಯ ಏರು ಪೇರುಗಳಿಂದ ವ್ಯತ್ಯಾಸಗಳು ಉಂಟಾಗಿದ್ದರೂ ಸಂಪ್ರದಾಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಇಂದಿನ ದಿನಗಲ್ಲಿ ಎಲ್ಲರೂ ಆರ್ಥಿಕವಾಗಿ ಬಲಿಷ್ಠವಾಗಿದ್ದು ಅಂದಿನಂತೆ ಹೆಚ್ಚಿನ ಸಮಸ್ಯೆಯಿಲ್ಲದಂತಾಗಿದೆ. ಬೇಶ ತಿಂಗಳ ಬಳಿಕ ಆಟಿ ತಿಂಗಳು ಕೂಡ ಅಂದಿನ ದಿನಗಳಲ್ಲಿ ಜೀವನ ನಿರ್ವಹಣೆಗೆ ಕಷ್ಟದಾಯಕವಾದ ತಿಂಗಳಾಗಿತ್ತು. ಪತ್ತನಾಜೆಯ ಬಳಿಕ ಯಕ್ಷಗಾನ ಮೇಳಗಳು ತಮ್ಮ ಪ್ರದರ್ಶನ ನಿಲ್ಲಿಸುವುದರಿಂದ ಅದರ ಕಲಾವಿದರಿಗೆ ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ. ಕಟೀಲಿನಲ್ಲಿ ಕಟೀಲು ಮೇಳದ ಕಲಾವಿದರ ಆರ್ಥಿಕ ಸಮಸ್ಯೆಯನ್ನು ಮನಗಂಡು ಕಟೀಲು ಮೇಳದಲ್ಲಿ ಬಸ್ಸಿನ ವ್ಯವಸ್ಥೆ, ರಂಗಸ್ಥಳದ ವ್ಯವಸ್ಥೆಯನ್ನು ನೋಡಿ ಕೊಳ್ಳುತ್ತಿರುವ ಯಕ್ಷ ಧರ್ಮ ಬೋಧಿನಿ ಟ್ರಸ್ಟ್‌ ಯಕ್ಷಗಾನದ ತಿರುಗಾಟದ ಸಂದರ್ಭದಲ್ಲಿ ರಂಗಸ್ಥಳ ಮತ್ತಿತರ ವಿಧದಲ್ಲಿ ಬರುವ ಅನುದಾನದಲ್ಲಿನ ಉಳಿಕೆ ಮೊತ್ತವನ್ನು ಕಟೀಲಿನ ಎಲ್ಲಾ ಆರು ಮೇಳ ಸುಮಾರು 300 ಕಲಾವಿದರಿಗೆ ಆರು ತಿಂಗಳ ಕಾಲ ಮಾಸಿಕ ವೇತನವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತ ಬಂದಿದೆ. ಕಲಾವಿದರಿಗೆ ಪತ್ತನಾಜೆಯ ಮಾರನೇ ದಿನ ವೈದ್ಯಕೀಯ ತಪಾಸಣೆ, ಕಲಾವಿದರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವಂತಹ ಕಾರ್ಯವನ್ನು ಮಾಡುತ್ತಿದೆ. ಇದನ್ನು ಇತರ ಮೇಳಗಳು ಅನುಸರಿಸಿದಲ್ಲಿ ಎಲ್ಲ ಯಕ್ಷಗಾನ ಕಲಾವಿದರ ಬಾಳು ಹಸನಾಗಲಿದೆ.

ಕುಡ್ಲ ಗೋಡೆ ತುಂಬಾ ಬೆಡಗಿನ ಸಂಸ್ಕೃತಿ ಚಿತ್ತಾರ!

ಪತ್ತನಾಜೆ ಬಳಿಕ ಎಲ್ಲ ದೇವಸ್ಥಾನಗಳಲ್ಲಿ ಬಲಿ ಉತ್ಸವ ಮುಕ್ತಾಯಗೊಳ್ಳುವ ಸಂಪ್ರದಾಯವಿದ್ದು ಆದರೆ ಬಪ್ಪಬ್ಯಾರಿಯಿಂದ ಸ್ಥಾಪಿಸಲ್ಪಟ್ಟಹಾಗೂ ಅಂದಿನ ಕಾಲದಲ್ಲಿ ಮೂಲ್ಕಿ ಸೀಮೆಯ ಸಾಮಂತರ ಆಡಳಿತದಲ್ಲಿದ್ದ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪತ್ತನಾಜೆಯ ಬಳಿಕ ಸಿಂಹ ಸಂಕ್ರಮಣದವರೆಗೆ ಪ್ರತಿ ದಿನ ಮಹಾಪೂಜೆಯಾದ ಬಳಿಕ ಬಲಿ ಉತ್ಸವದ ದೇವರ ಮೂರ್ತಿಯ ಪ್ರದಕ್ಷಿಣೆಯ ಬದಲಿಗೆ ಬಲಿ ಸಂದರ್ಭದಲ್ಲಿ ನೀರಿನ ಸಂಪ್ರೋಕ್ಷಣೆ ಮಾಡುವ ಪದ್ದತಿ ಚಾಲ್ತಿಯಲ್ಲಿದೆ. ಇದು ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ.

Latest Videos
Follow Us:
Download App:
  • android
  • ios