Asianet Suvarna News Asianet Suvarna News

ಇಂದು ಸಂಕ್ರಾಂತಿ ಸಂಭ್ರಮ; ಎಲ್ಲೆಲ್ಲೆ ಹೇಗೆ ಆಚರಣೆ?

ಮಕರ ಸಂಕ್ರಾಂತಿ ಕೊಯ್ಲು ಅಥವಾ ಸುಗ್ಗಿಯನ್ನು ಕರ್ನಾಟಕದಲ್ಲಿ ಸಂಕ್ರಾಂತಿ ಎಂದು ಆಚರಿಸುತ್ತಾರೆ. ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು ಎಳ್ಳು ಬೆಲ್ಲ. ಎಳ್ಳು ಬೆಲ್ಲವನ್ನು ನೆರೆಹೊರೆಯವರಿಗೆ ಹಂಚುವುದು ಇಲ್ಲಿನ ಸಂಪ್ರದಾಯ.

Makara Sankrati this is the way celebrated in across India
Author
Bengaluru, First Published Jan 15, 2020, 10:57 AM IST

ಸಂಕ್ರಾಂತಿ ಎಂದರೆ ಸಮೃದ್ಧಿಯ ಸಂಕೇತ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಕರೆಯುತ್ತಾರೆ. ಮೊದಲು ದಕ್ಷಿಣ ಅಕ್ಷಾಂಶದತ್ತ ಚಲಿಸುತ್ತಿದ್ದ ಸೂರ್ಯ, ಸಂಕ್ರಮಣ ದಿನದಿಂದ ಉತ್ತರ ಅಕ್ಷಾಂಶದತ್ತ ಚಲಿಸುತ್ತಾನೆ.

ಅಯನ ಎಂದರೆ ಚಲಿಸುವುದು, ಆದ್ದರಿಂದ ಉತ್ತರಾಯಣ, ದಕ್ಷಿಣಾಯನ ಎಂದು ಹೆಸರು ಸೃಷ್ಟಿಯಾಗಿದ್ದು. ಮಕರ ಸಂಕ್ರಾಂತಿ ದಿನ ದಕ್ಷಿಣಾಯನ ಮುಗಿದು ಉತ್ತರಾಯಣ ಆರಂಭವಾಗುತ್ತದೆ. ಹೀಗೆ ಸೂರ್ಯ ಪಥ ಬದಲಾಗುವುದರಿಂದ ನಮ್ಮ ದೇಶದಲ್ಲಿ ಈ ಸಮಯಕ್ಕೆ ಚಳಿ ಕಡಿಮೆಯಾಗಿ ಹಗಲು ಹೆಚ್ಚು ಸಂಭವಿಸುತ್ತದೆ. ಈ ಹಬ್ಬವನ್ನು ದೇಶಾದ್ಯಂತ ವಿವಿಧ ಹೆಸರಿನಲ್ಲಿ ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಈ ಕುರಿತ ಕಿರು ಮಾಹಿತಿ ಇಲ್ಲಿದೆ.

ಸಂಕ್ರಾಂತಿ ಸಂಭ್ರಮ: ಈ ಊರಲ್ಲಿ ದನಗಳ ಮೆರವಣಿಗೆಗೆ ಖರ್ಚು ಮಾಡೋದು ಲಕ್ಷ ಲಕ್ಷ..!

ಪಂಜಾಬ್ ಲಾಹೋರಿ

ಪಂಜಾಬ್‌ನಲ್ಲಿ ಲಾಹೋರಿ ಎಂದು ಆಚರಿಸುವ ಈ ಹಬ್ಬದ ಸಂದರ್ಭದಲ್ಲಿ ರಾಬಿ ಬೆಳೆಗೆ ಪೂಜೆ ಸಲ್ಲಿಸುತ್ತಾರೆ. ಪಂಜಾಬ್‌ನಲ್ಲಿ ಮಕರ ಸಂಕ್ರಾಂತಿಯನ್ನು ಮಾಘಿ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಮುಂಜಾನೆಯೇ ಎದ್ದು ಸ್ನಾನ ಮಾಡಿ, ತಮ್ಮ ಪಾಪಕರ್ಮಗಳು ನಿವಾರಣೆಯಾಗಲೆಂದು ಯಳ್ಳೆಣ್ಣೆಯ ದೀಪ ಹಚ್ಚುತ್ತಾರೆ. ನಂತರ ಉತ್ಸವದಲ್ಲಿ ಪಾಲ್ಗೊಂಡು ಪಂಜಾಬಿಗರು ತಮ್ಮ ನೆಲದ ವಿಶೇಷ ಕುಣಿತವಾದ ‘ಬಾಂಗ್ರಾ’ ನೃತ್ಯ ಮಾಡುತ್ತಾರೆ.

ತಮಿಳುನಾಡು ಪೊಂಗಲ್

ತಮಿಳುನಾಡಿನಲ್ಲಿ ಥಾಯ್ ಪೊಂಗಲ್ ಎಂಬ ಹೆಸರಿನಲ್ಲಿ ನಾಲ್ಕು ದಿನ ಆಚರಿಸುತ್ತಾರೆ. ಮೊದಲನೇ ದಿನ ಭೋಗಿ ಪಂಡಿಗೈ, ಎರಡನೇ ದಿನ ಥಾಯ್ ಪೊಂಗಲ್, ಮೂರನೇ ದಿನವನ್ನು ಮಾಟ್ಟು ಪೊಂಗಲ್ ಮತ್ತು ಕೊನೆ ದಿನವನ್ನು ಕಾನುಂ ಪೊಂಗಲ್ ಎಂಬ ಹೆಸರಿನಿಂದ ಆಚರಿ ಸುತ್ತಾರೆ. ಕೊನೆ ದಿನ ಸೂರ‌್ಯೋದಯಕ್ಕೂ ಮೊದಲೇ ಎದ್ದು ಪೊಂಗಲ್ ತಯಾರಿಸಿ ದೇವರಿಗೆ ಅರ್ಪಿಸುತ್ತಾರೆ. ಜಲ್ಲಿಕಟ್ಟು ಕ್ರೀಡೆ ಮತ್ತೊಂದು ವಿಶೇಷತೆ.

ಉತ್ತರ ಪ್ರದೇಶ

ಕಿಚೇರಿ ಉತ್ತರ ಪ್ರದೇಶದಲ್ಲಿ ಸಂಕ್ರಾಂತಿಯನ್ನು ಕಿಚೇರಿ ಎಂದು ಕರೆಯುತ್ತಾರೆ. ಅಲಹಾಬಾದ್ ಮತ್ತು ವಾರಾಣಸಿಯಲ್ಲಿ ಹಾಗೂ ಉತ್ತರಾಖಂಡದ ಹರಿದ್ವಾರದಲ್ಲಿ ಲಕ್ಷಾಂತರ ಜನರು ತೀರ್ಥಸ್ನಾನ ಮಾಡುತ್ತಾರೆ. ನಂತರ ದೇವರಿಗೆ ಪೂಜೆ ಸಲ್ಲಿಸಿ ಸಿಹಿ ತಿನಿಸುಗಳನ್ನು ಸೇವಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಹೊಸ ಧಿರಿಸನ್ನು ಧರಿಸುತ್ತಾರೆ. ಗುಜರಾತ್ ಮಹಾರಾಷ್ಟ್ರದಂತೆ ಇಲ್ಲಿಯೂ ಗಾಳಿಪಟ ಹಾರಿಸುವ ಸಂಪ್ರದಾಯ ಇದೆ.

ಸಂಕ್ರಾಂತಿ ಹಬ್ಬ: ಇಳಕಲ್ ಸೀರೆಯುಟ್ಟು ಹೆಂಗಳೆಯರಿಂದ ಸಖತ್‌ ಸ್ಟೆಪ್‌!

ಹಿಮಾಚಲ ಪ್ರದೇಶ

ಮಾಘ ಸಾಜಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮಕರ ಸಂಕ್ರಾಂತಿಯನ್ನು ಮಾಘ ಸಾಜಿ ಎಂದು ಕರೆಯುತ್ತಾರೆ. ಸಾಜಿ ಎಂಬುದು ಹಿಮಾಚಲ ಪ್ರದೇಶ ಅಥವಾ ನೇಪಾಳದಲ್ಲಿ ಸಂಕ್ರಾಂತಿಗೆ ಬಳಸುವ ಪದ. ಈ ದಿನ ಇಲ್ಲಿನ ಜನರು ಮುಂಜಾನೆಯೇ ಎದ್ದು ತೀರ್ಥ ಸ್ನಾನ ಮಾಡುತ್ತಾರೆ. ಹಗಲು ನೆರೆಹೊರೆಯವ ರೊಂದಿಗೆ ಕಿಚಡಿ ಸವಿಯುತ್ತಾರೆ. ಈ ಉತ್ಸವವನ್ನು ಹಾಡು ಮತ್ತು ಕುಣಿತದ ಮೂಲಕ ಕೊನೆಗೊಳ್ಳುತ್ತದೆ.

ಪಶ್ಚಿಮ ಬಂಗಾಳ

ಪೌಷ್ ಸಂಕ್ರಾಂತಿ ಪಶ್ಚಿಮ ಬಂಗಾಳದಲ್ಲಿ ಸಂಕ್ರಾಂತಿಯನ್ನು ಪೌಷ್ ಸಂಕ್ರಾಂತಿ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ದಿನದಂದು ಹೊಸದಾಗಿ ಬೆಳೆದ ಭತ್ತ ಮತ್ತು ತಾಳೆ ಎಣ್ಣೆಯಿಂದ ವಿಶೇಷ ಭಕ್ಷ್ಯಗಳನ್ನು ಮಾಡಿ ಸಹಭೋಜನ ಮಾಡುತ್ತಾರೆ. ಸಂಕ್ರಾಂತಿ ಪ್ರಯುಕ್ತ ಗಂಗಾ ಸಾಗರದಲ್ಲಿ ವಿಶೇಷ ಮೇಳ ಆಯೋಜನೆ ಯಾಗುತ್ತದೆ. ಭಕ್ತರು ಈ ದಿನದಂದು ವಿಶೇಷ ವಾಗಿ ಲಕ್ಷ್ಮೀಯನ್ನು ಪೂಜಿಸುವ ಸಂಪ್ರದಾಯ ಪಶ್ಚಿಮ ಬಂಗಾಳದಲ್ಲಿದೆ.

ಕೇರಳ ಮಕರವಿಳಕ್ಕು

ಕೇರಳದಲ್ಲಿ ಈ ಹಬ್ಬದಂದು ಶಬರಿಮಲೆಯ ಅಯ್ಯಪ್ಪ ಸ್ವಾಮಿ ಜ್ಯೋತಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಅಯ್ಯಪ್ಪ ವ್ರತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕೆ ಆಗಮಿಸುತ್ತಾ

ಅಸ್ಸಾಂ ಮಾಘ ಬಿಹು

ಮಾಘ ಬಿಹುವನ್ನು ಭೋಗಳಿ ಬಿಹು ಎಂದೂ ಕರೆಯುತ್ತಾರೆ. ಸಾಮೂಹಿಕ ಭೋಜನ ಮತ್ತು ದೀಪೋತ್ಸವದ ಮೂಲಕ ಅಸ್ಸಾಂನಲ್ಲಿ ಇದನ್ನು ಆಚರಿಸಲಾಗುತ್ತದೆ. ಜೊತೆಗೆ ಬಿದಿರು ಹಾಗೂ ಹುಲ್ಲಿನ ತಾತ್ಕಾಲಿಕ ಗುಡಿಸಲು ನಿರ್ಮಿಸಿ ಅದರಲ್ಲಿ ಎಲ್ಲರೂ ಸಹಭೋಜನ ಮಾಡು ತ್ತಾರೆ. ಮಾರನೇ ದಿನ ಗುಡಿಸಲನ್ನು ಸುಡುತ್ತಾರೆ. ಅದರ ಜೊತೆಗೆ ಮಡಕೆ ಒಡೆಯುವುದು, ಎತ್ತುಗಳನ್ನು ಕಿಚ್ಚು ಹಾಯಿಸುವುದು ಮನೋ ರಂಜನಾ ಕಾರ‌್ಯಕ್ರಮವನ್ನೂ ಏರ್ಪಡಿಸಲಾಗುತ್ತದೆ.

ಗಾಳಿಪಟ ಹಾರಿಸಿ ಇಂದು ಬಾನಿಗೆಲ್ಲಾ ಹಬ್ಬ ಮಾಡಿದ ಸೇಂಟ್ ಜೋಸೆಫ್ ಶಾಲೆ ಮಕ್ಕಳು

ಗುಜರಾತ್ ಉತ್ತರಾಯಣ

ಮಕರ ಸಂಕ್ರಾಂತಿಯನ್ನು ಗುಜರಾತಿನಲ್ಲಿ ಉತ್ತರಾಯಣ ಎಂದು ಕರೆಯುತ್ತಾರೆ. ಈ ದಿನ ಗುಜರಾತಿನಲ್ಲಿ ಗಾಳಿಪಟ ಹಾರಿಸುವುದು ವಿಶೇಷ. ವಿಶೇಷವಾದ ಹಗುರವಾದ ಪೇಪರ್‌ನಿಂದ ವಜ್ರಾಕೃತಿಯ ಗಾಳಿಪಟ ಮಾಡಿ ಆಕಾಶದಲ್ಲಿ ಹಾರಿಸುತ್ತಾರೆ. ಅಹ್ಮದಾಬಾದ್, ಸೂರತ್, ವಡೋದರಾ, ರಾಜ್‌ಕೋಟ್ ಮತ್ತು ಜಮ್ನಾನಗರಗಳಲ್ಲಿ ಸಾವಿರಾರು ಗಾಳಿಪಟಗಳು ಆಕಾಶವನ್ನು ಆವರಿಸಿರುತ್ತವೆ. 

ಮಕರ ಸಂಕ್ರಾಂತಿ ಕೊಯ್ಲು ಅಥವಾ ಸುಗ್ಗಿಯನ್ನು ಕರ್ನಾಟಕದಲ್ಲಿ ಸಂಕ್ರಾಂತಿ ಎಂದು ಆಚರಿಸುತ್ತಾರೆ. ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು ಎಳ್ಳು ಬೆಲ್ಲ. ಎಳ್ಳು ಬೆಲ್ಲವನ್ನು ನೆರೆಹೊರೆಯವರಿಗೆ ಹಂಚುವುದು ಇಲ್ಲಿನ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ, ಕಬ್ಬಿನ ತುಂಡುಗಳನ್ನೂ ಹಂಚುವುದುಂಟು.

ಕರ್ನಾಟಕದ ಕೆಲವು ಭಾಗಗಳಲ್ಲಿ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಮದುವೆಯಾದ ಮೊದಲ ವರ್ಷದಿಂದ 5 ವರ್ಷಗಳ ವರೆಗೆ ಬಾಳೆಹಣ್ಣನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯವಿದೆ. ಕೆಲ ಭಾಗಗಳಲ್ಲಿ ಗಾಳಿಪಟ ಹಾರಿಸುತ್ತಾರೆ. ದನಕರುಗಳನ್ನು ಸಿಂಗರಿಸುವುದು ಮೆರವಣಿಗೆ ಮಾಡುವುದು ಇನ್ನೊಂದು ಪದ್ಧತಿಯಾಗಿದೆ. ಹಾಗೆಯೇ ಅವುಗಳನ್ನು ಕಿಚ್ಚು ಹಾಯಿಸುವುದು ಹಳ್ಳಿಗಳಲ್ಲಿ ಸಾಮಾನ್ಯ. ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣದಲ್ಲೂ ಮಕರ ಸಂಕ್ರಾಂತಿಯನ್ನು ಹೀಗೇ ಆಚರಿಸುತ್ತಾರೆ. 

Follow Us:
Download App:
  • android
  • ios