ಕೈಲಾಸವಾಸಿ ಶಿವನಿಗೆ ಬಿಲ್ವ ಪತ್ರೆ ಎಂದರೆ ಅಚ್ಚುಮೆಚ್ಚು. ಬೇಡಿಕೆ ಈಡೇರಿಸಿಕೊಳ್ಳಲು ಭಕ್ತರು ಈ ಪತ್ರೆಯನ್ನು ಶಿವನ ಪಾದಕ್ಕೆ ಸಮರ್ಪಿಸಿದರೆ ಸಾಕು. ಏನೀದರ ವಿಶೇಷತೆ?

ಶಿವನಿಗೆ ಪ್ರಿಯವಾದ ವಸ್ತು ಬಿಲ್ವ ಪತ್ರೆ. ಪಾಪ ಪರಿಹಾರ ಮಾಡಲು, ಬೇಡಿಕೊಂಡಿದ್ದನ್ನು ಈಡೇರಿಸಲು, ಸಂಕಟ ಪರಿಹರಿಸುವ ಶಿವನ ಪಾದ ಕಮಲಗಳಿಗೆ ಭಾಗುವವರು ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಬೇಕು. ಶಿವನಿಗೆ ಬಿಲ್ವಪತ್ರೆ ಯಾಕೆ ಪ್ರಿಯ ಅನ್ನೋದರ ಹಿಂದಿದೆ ಒಂದು ಪೌರಾಣಿಕ ಹಿನ್ನೆಲೆ. 

ಈ ಬಿಲ್ವ ಪತ್ರೆಗೆ ಒಂದು ದಂಟಿನಲ್ಲಿ ಮೂರು ಎಲೆಗಳಿರುವುದು ಸಾಮಾನ್ಯ. ಬಿಲ್ವಪತ್ರೆಯ ಮೂರು ದಳಗಳಲ್ಲಿ ಎಡಗಡೆಯಿರುವುದು ಬ್ರಹ್ಮ, ಬಲಗಡೆಯಿರುವುದು ವಿಷ್ಣು ಮತ್ತು ಮಧ್ಯದಲ್ಲಿರುವುದು ಸದಾಶಿವನೆಂದು ಪುರಾಣ ಹೇಳುತ್ತದೆ. ಬಿಲ್ವಪತ್ರೆಯ ಮುಂಭಾಗದಲ್ಲಿ ಅಮೃತ, ಹಿಂಭಾಗದಲ್ಲಿ ಯಕ್ಷರು ಇರುತ್ತಾರೆ. ಈ ಬಿಲ್ವಪತ್ರೆ ಮರ ಕಾಶಿ ಕ್ಷೇತ್ರಕ್ಕೆ ಸರಿಸಮಾನ ಎಂಬ ನಂಬಿಕೆ ಶಿವ ಭಕ್ತರಿಗಿದೆ. 

ಸ್ಕಂದ ಪುರಾಣದ ಪ್ರಕಾರ ಬಿಲ್ಪ ಪತ್ರೆ ಮರ ಪಾರ್ವತಿಯ ಬೆವರ ಹನಿಗಳಿಂದ ಹುಟ್ಟಿಕೊಂಡಿತಂತೆ. ಒಮ್ಮೆ ಪಾರ್ವತಿಯ ಬೆವರ ಹನಿಗಳು ಮಂದಾರ ಪರ್ವತದ ಮೇಲೆ ಬಿದ್ದಾಗ, ಹುಟ್ಟಿದ ಮರವಿದು. ಪಾರ್ವತಿ ದೇವಿಯು ಗಿರಿಜೆಯಾಗಿ ಈ ಮರದ ಬೇರುಗಳಲ್ಲಿ ನೆಲೆಸಿರುತ್ತಾಳಂತೆ.

ಮಹೇಶ್ವರಿಯಾಗಿ ಕಾಂಡದಲ್ಲಿ, ದಾಕ್ಷಾಯಣಿಯಾಗಿ ಕೊಂಬೆಯಲ್ಲಿ, ಪಾರ್ವತಿಯಾಗಿ ಎಲೆಗಳಲ್ಲಿ, ಕಾತ್ಯಾಯನಿಯಾಗಿ ಹಣ್ಣಿನಲ್ಲಿ ಮತ್ತು ಗೌರಿಯಾಗಿ ಹೂವುಗಳಲ್ಲಿ ನೆಲೆಸಿರುತ್ತಾಳಂತೆ. ಈ ಎಲ್ಲಾ ಶಕ್ತಿ ಸ್ವರೂಪಿಣಿಯರ ಜೊತೆಗೆ ಲಕ್ಷ್ಮೀ ದೇವಿಯೂ ಈ ಮರದಲ್ಲಿ ನೆಲೆಸಿರುತ್ತಾಳಂತೆ. 

ಪಾರ್ವತಿ ದೇವಿಯ ಆವಾಸ ಸ್ಥಾನವಾಗಿರುವುದರಿಂದ ಇದು ಶಿವನಿಗೆ ಪ್ರೀತಿ ಪಾತ್ರವಾಗಿರುವ ಮರ. ಅದರಲ್ಲೂ ಸ್ವತಃ ಪಾರ್ವತಿಯೇ ಈ ಮರದ ಎಲೆಗಳಾಗಿರುವುದರಿಂದ ಆ ಎಲೆಗಳೆಂದರೆ ಶಿವನಿಗೆ ಇನ್ನೂ ಅಚ್ಚು ಮೆಚ್ಚು. ಯಾರು ಈ ಬಿಲ್ಪಪತ್ರೆ ಅಥವಾ ಮರವನ್ನು ಸ್ಪರ್ಶಿಸುತ್ತಾರೋ, ಅವರ ಎಲ್ಲಾ ಪಾಪ ಕರ್ಮಗಳೂ ನಿವಾರಣೆಯಾಗುತ್ತವೆ, ಎಂಬ ನಂಬಿಕೆಯೂ ಇದೆ. 

ಬಿಲ್ವದಲ್ಲಿ ಔಷಧಿ

ಬಿಲ್ವ ಪತ್ರೆ ವೈಜ್ಞಾನಿಕವಾಗಿಯೂ ಹತ್ತು ಹಲವು ಪ್ರಯೋಜನಗಳನ್ನು ಪಡೆದಿವೆ. ವಾತ ದೋಷವನ್ನು ನಿವಾರಿಸುವ ಗುಣ ಇದರ ಬೇರಿನಲ್ಲಿದೆ. ಬಿಲ್ವದ ಹಸಿಕಾಯಿ ಕಫ ಮತ್ತು ವಾತನಿವಾರಕವಾಗಿದೆ. ಹಸಿವು, ಜೀರ್ಣಶಕ್ತಿಯನ್ನೂ ಹೆಚ್ಚಿಸುತ್ತದೆ. ಹೊಟ್ಟೆ ನೋವು ಮತ್ತು ಬೇಧಿಗೂ ಮದ್ದು. ಪಕ್ವವಾದ ಬಿಲ್ವದ ಹಣ್ಣು ವಾತಪಿತ್ತಕ್ಕೆ ಔಷಧಿ. ಕಫವನ್ನು ಕಡಿಮೆ ಮಾಡುತ್ತದೆ. ಇದನ್ನು ಜೀರ್ಣ ಮಾಡಿಕೊಳ್ಳುವುದು ಕಷ್ಟ. ಬಿಲ್ವದ ಎಲೆ ವಾತ ಮತ್ತು ಕಫ ತೊರೆದು ಹಾಕುತ್ತದೆ. ಅಜೀರ್ಣ ಮತ್ತು ಹೊಟ್ಟೆನೋವಿಗೂ ಒಳ್ಳೆ ಮದ್ದು.