ಕಾಶಿಗೂ ಮುನ್ನ ಪ್ರಯಾಗಕ್ಕೆ... ಇದು ಸಾಧು ಸಂತರ ಬೃಹತ್ ಸಂಗಮ - ಸಮಾವೇಶ
ಹಿಂದುಗಳಿಗೆ ಕುಂಭ ಮೇಳೆ ವೆಂದರೆ ಮೈ ರೋಮಾಂಚನಗೊಳ್ಳುವ ಅನುಭವ. ಲಕ್ಷಾಂತರ ಭಕ್ತರು ಸೇರುವ ಈ ಮೇಳದಲ್ಲಿ ಸೃಷ್ಟಿಯಾಗೋ ಪಾಸಿಟಿವ್ ವೈಬ್ರೈಷನ್ ಅನುಭವಿಸಿದವರಿಗೇ ಗೊತ್ತು.
- ಸೌಮ್ಯಾ ಹೇಮಂತ್, ಏಷ್ಯಾನೆಟ್ ಸುವರ್ಣ ನ್ಯೂಸ್
ಕಾಶಿ ಹೆಸರು ಕೇಳಿದರೆ ಸಾಕು ಭಾರತೀಯರಿಯ ಮನದಲ್ಲಿ ಏನೋ ವಿಶೇಷ ಭಾವ ಮೂಡುವುದು ಸುಳ್ಳಲ್ಲ. ದಕ್ಷಿಣದ ವಿರುದ್ದ ದಿಕ್ಕಿನಲ್ಲಿದ್ರೂ ನಮಗೆ ಬಹಳ ಹತ್ತಿರದಲ್ಲಿದೆ ಎನ್ನುವ ವಿಶೇಷ ಭಾವ. ನನಗೆ ಕಾಶಿಗೆ ಹೋಗಬೇಕು ಅಂತ ಅನ್ನಿಸಿದ್ದು ಶಂಕರಾಚಾರ್ಯರ ಜೀವನ ಚರಿತ್ರೆ ಪುಸ್ತಕ ಓದಿದ ಮೇಲೆ. 2018ರ ಸುಮಾರಿಗೆ. ಅದ್ರೆ ಉತ್ತರ ಪ್ರದೇಶಕ್ಕೆ ಒಬ್ಬಂಟಿ ಪ್ರಯಾಣ ಅಷ್ಟು ಸುರಕ್ಷಿತವಾಗಿರಲಿಲ್ಲ. ಅದಕ್ಕಾಗಿ ನನ್ನ ಗೆಳೆಯ- ಯಜಮಾನ ಎರಡು ಆಗಿರುವ ನನ್ನ ಗಂಡನ ಜೊತೆಗೆ ಹೋಗಲಿಕ್ಕೆ ಒಂದು ವರ್ಷ ಅಂದ್ರೆ 2019ರ ಕುಂಭಮೇಳದವರೆಗೂ ಕಾಯಬೇಕಾಯ್ತು. ಬೆಂಗಳೂರಿನಿಂದ ವಾರಾಣಾಸಿ ವಿಮಾನ ನಿಲ್ದಾಣದಲ್ಲಿ ಇಳಿದರೂ ನಾವು ನೇರವಾಗಿ ಹೊರಟ್ಟಿದ್ದು ಪ್ರಯಾಗಗಳ ರಾಜನಾದ ಪ್ರಯಾಗ್‌ರಾಜ್‌ಗೆ. ನಾವು ಅಮಾವಾಸ್ಯೆಯ ಕೊನೆಯ ಕುಂಭ ಸ್ನಾನ ಮಾಡುವವರಿದ್ವಿ. ಕಾಶಿಯಿಂದ ಪ್ರಯಾಗ್ ರಾಜ್ 120 ಕಿಲೋಮೀಟರ್ ಅಂತರದಲ್ಲಿದೆ. 2019ರಲ್ಲಿ ವಾರಣಾಸಿಯಿಂದ ಪ್ರಯಾಗ್‌ರಾಜ್ ತಲುಪಲು ಮೂರೂವರೆಯಿಂದ 4 ಗಂಟೆಗಳು ಬೇಕಿತ್ತು. ಆದ್ರೆ ಈಗ ನ್ಯಾಷನಲ್ ಹೈವೇ ತುಂಬನೆ ಚನ್ನಾಗಿದ್ದು ಜರ್ನಿ ಸಮಯ 2 ಗಂಟೆಗಿಳಿದಿದೆ.
ವಿಶಾಲವಾದ ಬಯಲು ಪ್ರದೇಶ. ಅದರ ತುಂಬಾ ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮದ ಜುಳುಜುಳು. ನದಿಗೆ ಅಡ್ಡಲಾಗಿ ಬೃಹತ್ ಗಾತ್ರದ ಕೊಳವೆಗಳಿಂದ ನಿರ್ಮಿತವಾಗಿರವ ತಾತ್ಕಲಿಕ ಸೇತುವೆ. ಬಯಲು ಪ್ರದೇಶದ ತುಂಬಾ ತುಂಬಿರುವ ಟೆಂಟ್‌ಗಳು. ಕಣ್ಣಾಯಿಸಿದಲೆಲ್ಲಾ ಕೇಸರಿ ಹೊದ್ದ ಸಾಧು-ಸಂತರು, ಪ್ರಪಂಚದ ಅರಿವೆ ಇಲ್ಲದೆ ತಮ್ಮದೇ ಲೋಕದಲ್ಲಿ ವಿಹರಿಸುವ ಸಾಧನೆಗಳಲ್ಲಿ ಮುಳುಗಿರುವ ವಸ್ತ್ರಾಧಾರಿ, ನಗ್ನ ಸಂತರು. ಸಂಗಮದಲ್ಲಿ ಮುಳುಗಿ ಧನ್ಯತಾ ಭಾವದಿಂದ ಮೇಲೆಳುತ್ತಿರುವ ಭಕ್ತ ವೃಂದ. ಎತ್ತ ನೋಡಿದರತ್ತ ಜನಸಾಗರ. ಇದೆಲ್ಲ ಕಾಣ ಸಿಕ್ಕಿದ್ದು ಪ್ರಯಾಗ್‌ರಾಜ್‌ನ ಕುಂಭಾಮೇಳದಲ್ಲಿ.
ಪ್ರಯಾಗ್ ಅಂದ್ರೆ ಸಂಗಮ. ಮೂರು ನದಿಗಳ ಸಂಗಮವೇ ಪ್ರಯಾಗ್ ರಾಜ್. ಸಂಗಮಗಳಲ್ಲೇ ರಾಜ ಅನ್ನುವ ಅರ್ಥದಲ್ಲಿ ಹೇಳಲಾಗುತ್ತೆ. ಗಂಗಾ, ಯಮುನಾ ಮತ್ತು ಗುಪ್ತವಾಗಿ ಹರಿಯುವ ಸರಸ್ವತಿ ನದಿಗಳ ಸಂಗಮವಿದು. ಈ ಪ್ರಮುಖ ಮೂರು ನದಿಗಳ ತ್ರಿವೇಣಿ ಸಂಗಮಕ್ಕೆ ಹಾಗೂ ಸ್ನಾನಕ್ಕೆ ನಮ್ಮ ಸಂಸ್ಕೃತಿ- ಸಂಪ್ರದಾಯದಲ್ಲಿ ಬಹಳ ಮಹತ್ವವಿದೆ. ಇಲ್ಲಿ ಹಿಮಾಲಯದಿಂದ ಬರುವ ಗಂಗಾ ಮತ್ತು ಉತ್ತರ ಖಂಡದ ಯಮುನೋತ್ರಿ ಮತ್ತು ಬದ್ರಿನಾಥದಲ್ಲಿ ಕಾಣ ಸಿಗುವ ಶುಭ್ರ ಸರಸ್ವತಿ ನದಿ ಇಲ್ಲಿ ಗುಪ್ತವಾಗಿ ಹರಿಯುತ್ತವೆ. ವಿಶಾಲ ಭೂ ಪ್ರದೇಶದಲ್ಲಿ ಹರಡಿಕೊಂಡಿರುವ ಸಂಗಮ ಸ್ಥಾನ ಪ್ರತಿದಿನ ಬದಲಾಗುತ್ತೆ. ಸಂಗಮವಿರುವ ಸ್ಥಳಕ್ಕೆ ದೋಣಿ ಮೂಲಕ ಹೋಗಬೇಕು.
ಗುರುವಿನ ಪಾದದಲ್ಲೇ ತೀರ್ಥ ಕ್ಷೇತ್ರ ದರ್ಶನ, ಭಾರತ ಪ್ರದಕ್ಷಿಣೆ ಇದು!
ನಾಲ್ಕು ಕಡೆ ನಡೆಯುತ್ತೆ ಕುಂಭ ಮೇಳ:
ಕುಂಭಮೇಳದ ಅನುಭವ ಬಹಳ ವಿಶಿಷ್ಟ. ಇದು ವಿಶೇಷ ಅಧ್ಯಾತ್ಮಿಕ ಮತ್ತು ಧಾರ್ಮಿಕ ಬೃಹತ್ ಸಭೆ. ದೇಶದ ಕೆಲವೇ ಕೆಲವು ಜಾಗಗಳಲ್ಲಿ ಕುಂಭ ಮೇಳವನ್ನು ಹಮ್ಮಿಕೊಳ್ಳಲಾಗುತ್ತದೆ. ಪುರಾಣದ ಪ್ರಕಾರ ಸಮುದ್ರ ಮಂಥನದ ನಂತರ ಪ್ರಕಟವಾಗುವ ಅಮೃತವನ್ನು ಅಸುರರ ಕಣ್ತಪ್ಪಿಸಿ ಮೋಹಿನಿ ರೂಪದಲ್ಲಿ ವಿಷ್ಣು ಆಕಾಶ ಮಾರ್ಗವಾಗಿ ತೆಗೆದುಕೊಂಡು ಹೋಗುವಾಗ ಕುಂಭ ಅಂದ್ರೆ ಮಡಕೆಯಲ್ಲಿದ್ದ ಅಮೃತದ 4 ಬಿಂದುಗಳ ಬಿದ್ದ ಜಾಗಗಲ್ಲಿ ಕುಂಭ ಮೇಳವನ್ನು ಆಚರಿಸಲಾಗುತ್ತೆ. 12 ವರ್ಷಕ್ಕೊಮ್ಮೆ ಈ ನಡೆಯುವ ಕುಂಭಮೇಳಕ್ಕೆ ಪೂರ್ಣಕುಂಭ ಎಂದು 6 ವರ್ಷಕ್ಕೊಮ್ಮೆ ನಡೆಯುವ ಕುಂಭ ಮೇಳಕ್ಕೆ ‘ಅರ್ಧ ಕುಂಭ’ ಮೇಳ ಎಂದು ಕರೀತಾರೆ. ‘ಪೂರ್ಣ ಕುಂಭ’ ಮೇಳ ಹರಿದ್ವಾರ, ಉಜ್ಜೈನಿ, ಪ್ರಯಾಗ್ ರಾಜ್ ಮತ್ತು ನಾಸಿಕ್‌ನಲ್ಲಿ ನಡೆಯುತ್ತೆ. 6 ವರ್ಷಕ್ಕೊಮ್ಮೆ ನಡೆಯುವ ಅರ್ಧ ಕುಂಭ ಮೇಳ ಪ್ರಯಾಗ್ ರಾಜ್ ಮತ್ತು ಹರಿದ್ವಾರಗಳಲ್ಲಿ ನಡೆಯುತ್ತೆ. ಮಕರ ಸಂಕ್ರಾಂತಿ ದಿನದಂದು ಆರಂಭವಾಗಿ ಶಿವರಾತ್ರಿ ದಿನದಂದು ಕುಂಭಾಮೇಳಕ್ಕೆ ತೆರೆ ಬೀಳುತ್ತೆ.
ಸಾಧು ಸಂತರ ಬೃಹತ್ ಸಂಗಮ:
ದೇಶಾದ್ಯಂತ ಹರಡಿರುವ ಸಾಧು ಸಂತರು, ಯೋಗಿಗಳು, ಬಾಬಾಗಳು, ಕಾಪಾಲಿಕರು, ಶಾಕ್ತರು, ನಾಗಸಾಧುಗಳ ಬೃಹತ್ ಸಂಗಮವಿದು. ಕುಂಭ ಮೇಳದ ಮತ್ತೊಂದು ಆಕರ್ಷಣೆ ಅಂದ್ರೆ ಅಖಾಡಗಳು. ಅಖಾಡ ಎಂದರೆ ಸಾಧುಗಳ ಪಂಥ. ಶೈವ, ವೈಷ್ಣವ, ಉದಾಸೀನ ಪಂಥಗಳ ಸಾಧುಗಳ ಅಧಾರದ ಮೇಲೆ ಪಂಗಡಗಳನ್ನು ವರ್ಗಿಕರಿಸಲಾಗಿರುತ್ತೆ. 13 ಪ್ರಮುಖ ಅಖಾಡಗಳಿವೆ. ಅದರಲ್ಲಿ ಅದಿಗುರು ಶಂಕರಾಚಾರ್ಯರ ದಶನಾಮಿ ಸಂಪ್ರದಾಯ ವ್ಯಾಪ್ತಿಗೆ ಬರುವ ಶೈವ ಪಂಥದ ಜುನಾ ಆಖಾಡ ಬಹಳ ದೊಡ್ಡದು. ಈ ಅಖಾಡ ಅಸ್ತ್ರದಾರಿ ಮತ್ತು ಶಾಸ್ತ್ರದಾರಿಗಳನ್ನು ಹೊಂದಿದೆ. ಸುಶಿಕ್ಷತರು, ಸ್ನಾತಕೋತ್ತರ ಪದವೀಧರಿಂದ ಕೂಡಿದ ಪಂಚಾಯತಿ ನಿರಂಜನ ಎರಡನೆಯ ದೊಡ್ಡ ಅಖಾಡ. ಉದಾಸೀನ ಅಖಾಡ, ದಿಗಂಬರ ಅಣಿ ಅಖಾಡ, ಹೀಗೆ ಹೇಳ್ತಾ ಹೋದ್ರೆ ಅದರದ್ದೇ ಆದ ಒಂದು ಲೇಖನ ಬರೆಯಬಹುದು. ಒಂದೊಂದು ಅಖಾಡಗಳು ತನ್ನದೇ ಆದ ವಿಶೇಷತೆಗಳಿಂದ ಕೂಡಿದೆ. ಅಖಾಡದ ಸಂತರು ‘ಶಾಹಿ ಸ್ನಾನ’ದ ಮೂಲಕ ಕುಂಭ ಮೇಳಕ್ಕೆ ಚಾಲನೆ ನೀಡ್ತಾರೆ. ನಾವು ಹೋದ 2019ರ ಕುಂಭಮೇಳ ಜನವರಿ ಸಂಕ್ರಾಂತಿಯಿಂದ ಶುರುವಾಗಿ ಮಹಾಶಿವರಾತ್ರಿವರೆಗೆ 49 ದಿನಗಳ ನಡೆಯಿತು. ನಾವು ಕೊನೆಯ ದಿನದ ಕುಂಭ ಸ್ನಾನ ಮಾಡಿದ್ವಿ. ನಾವು ಮಾಡಿದ ದಿನ 10ಲಕ್ಷ ಜನರು ತ್ರಿವೇಣಿ ಮಡಿಲಲ್ಲಿ ಮಿಂದೆದ್ದಿದ್ದರು ಎಂಬ ವಿಷಯ ಕೇಳಿಯೇ ಮೈ ಜುಮ್ಮೆಂದಿತು. ಆ 49 ದಿನಗಳಲ್ಲಿ ದೇಶ ವಿದೇಶಗಳಿಂದ ಬಂದಿದ್ದ 12 ಕೋಟಿಗೂ ಅಧಿಕ ಜನರು ಸಂಗಮದಲ್ಲಿ ಮಿಂದೆದ್ದು ಪುನೀತ ಭಾವ ಅನುಭವಿಸಿದ್ರು. ಇಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮತ್ತು ತರ್ಪಣ ನೀಡಿದ್ರೆ ಮುಕ್ತಿ ದೊರೆಯುತ್ತೆ ಎಂಬ ನಂಬಿಕೆ ಇದೆ.
ಚಾರ್ ಧಾಮ್ ಯಾತ್ರೆಯಿಂದ ಪಾಪ ನಾಶ; ಹಿಂದೂಗಳಿಗೆ ಇದು ಏಕೆ ಮಹತ್ವ?
ಉತ್ತರ ಪ್ರದೇಶ ಸರ್ಕಾರ ಕುಂಭ ಮೇಳಕ್ಕಾಗಿ ಭರ್ಜರಿ ತಯಾರಿ ಮಾಡಿತ್ತು. ಸ್ನಾನ ಗೃಹ, ಶೌಚಾಲಯ, ಉಳಿದುಕೊಳ್ಳಲು ಟೆಂಟ್ ವ್ಯವಸ್ಥೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿತ್ತು. ಪೌರಕಾರ್ಮಿಕರು ಹಗಲು ರಾತ್ರಿ ಎನ್ನದೆ ಸಂಗಮದ ಸ್ವಚ್ಚತೆಯಲ್ಲಿ ನಿರತರಾಗಿದ್ರು. ಜನ ಸಾಗರವನ್ನು ಹೇಗೆ ನಿಭಾಯಿಸ್ತಾರೆ ಎಂಬ ಅನುಮಾನ ಇಟ್ಟುಕೊಂಡು ಬಂದಿದ್ದ ನನಗೆ ಅಚ್ಚರಿ, ತೃಪ್ತಿ, ಸಮಾಧಾನದ ಭಾವ ಮೂಡಿತ್ತು. ನಿಜವಾಗಲೂ ನಾನೂ ಆ ಮೇಳದಲ್ಲಿ ಒಂದಾಗಿದ್ದು ವಿಶೇಷ, ವಿಭಿನ್ನ ಅನುಭವ ನೀಡಿತ್ತು. ಆತ್ಮ ತೃಪ್ತಿಯ ಭಾವ ಹೃದಯ ತುಂಬಿತ್ತು. ಜೀವನ ಸಾರ್ಥಕ ಭಾವ ಅರಿವಿಲ್ಲದೆಯೇ ಮೂಡಿತ್ತು. ಸದಾ ಕಾಲ ಲೌಕಿಕ ಜೀವನದ ಜಂಜಾಟದಲ್ಲಿಯೇ ಮುಳುಗಿರುವ ಪ್ರತಿಯೊಬ್ಬರೂ ಒಮ್ಮೆ ನಮ್ಮೊಳಗೆ ನೋಡುವಂತಾಗಬೇಕು. ಆ ತ್ರಿವೇಣಿ ಸಂಗಮದ ಮುಂದೆ ನಾವು ಬಿಂದುವಷ್ಟೇ ಎನ್ನುವ ಭಾವ ಮೂಡುತ್ತೆ. ಮುಂದೆ ನಿಮಗೂ ಇಂತಹ ಅವಕಾಶ ಸಿಕ್ಕರೆ ತಪ್ಪದೆ ಜೀವನದಲ್ಲಿ ಒಮ್ಮೆಯಾದರೂ ಉತ್ತರ ಭಾರತದ ಕುಂಭ ಮೇಳಕ್ಕೆ ಭೇಟಿ ನೀಡಿ.
ಮುಂದಿನ ಪೂರ್ಣ ಕುಂಭ ಮೇಳ 2025 ರಲ್ಲಿ ಇದೆ ಪ್ರಯಾಗ್ ರಾಜ್ ನಲ್ಲಿ ನಡೆಯಲಿದೆ... ಸಾಧ್ಯ ವಾದ್ರೆ ತಪ್ಪದೆ ವಿಸಿಟ್ ಮಾಡಿ...
(ಪ್ರಯಾಗ್ ರಾಜ್‌ನಲ್ಲಿ ಮತ್ತೊಂದು ದಿನ---ಮುಂದಿನ ಭಾಗದಲ್ಲಿ)