ಶಿರಸಿಯಲ್ಲಿ ಅಬ್ಬರದ ಬೇಡರ ವೇಷದ ಸಂಭ್ರಮ: ರೌದ್ರರಮಣೀಯ ಬೇಡರ ವೇಷ ನೋಡಲು ಸಹಸ್ರಾರು ಜನ

ರಾಜ್ಯದಲ್ಲಿ ಪ್ರಸಿದ್ಧವಾಗಿರುವ ಕಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆಯುವ ಬೇಡರ ವೇಷವೂ ಒಂದು. ಶಿರಸಿ ಶ್ರೀ ಮಾರಿಕಾಂಬೆಯ ವೈಭವದ ಜಾತ್ರೆಯ ಮರುವರ್ಷ ಹೋಳಿ ಹುಣ್ಣಿಮೆಯ ಸಂದರ್ಭ ಪ್ರಾರಂಭವಾಗೋ ಈ ರೌದ್ರರಮಣೀಯ ಬೇಡರ ವೇಷದ ಕುಣಿತವನ್ನು ನೋಡಲೆಂದೇ ರಾಜ್ಯ ಹಾಗೂ ಹೊರ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಾರೆ. 

A Flamboyant Bedara Vesha Celebration in Sirsi gvd

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಮಾ.04): ರಾಜ್ಯದಲ್ಲಿ ಪ್ರಸಿದ್ಧವಾಗಿರುವ ಕಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆಯುವ ಬೇಡರ ವೇಷವೂ ಒಂದು. ಶಿರಸಿ ಶ್ರೀ ಮಾರಿಕಾಂಬೆಯ ವೈಭವದ ಜಾತ್ರೆಯ ಮರುವರ್ಷ ಹೋಳಿ ಹುಣ್ಣಿಮೆಯ ಸಂದರ್ಭ ಪ್ರಾರಂಭವಾಗೋ ಈ ರೌದ್ರರಮಣೀಯ ಬೇಡರ ವೇಷದ ಕುಣಿತವನ್ನು ನೋಡಲೆಂದೇ ರಾಜ್ಯ ಹಾಗೂ ಹೊರ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಾರೆ. ನಾಲ್ಕು ದಿನಗಳ ಕಾಲ ಜಾತ್ರೆಯಷ್ಟೇ ಸಂಭ್ರಮದಿಂದ ನಡೆಯುವ ಈ ಜಾನಪದ ಕುಣಿತವನ್ನು ಜನರು ರಾತ್ರಿಯಿಂದ ಬೆಳಗ್ಗಿನವರೆಗೂ ಆಸ್ವಾಧಿಸಿ ವೇಷಧಾರಿಗಳ ಜತೆ ಸ್ಟೆಪ್ ಹಾಕಿ, ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಕಷ್ಟು ಸಂತೋಷ ಪಡುತ್ತಾರೆ. ಅಷ್ಟಕ್ಕೂ ಈ ಬೇಡರ ವೇಷದ ವಿಶೇಷತೆ ಏನು..?..ಇದು ನಡೆಯೋದಾದ್ರೂ ಯಾಕೆ ಅಂತೀರಾ..?  ಈ ಸ್ಟೋರಿ ನೋಡಿ. 

ಮುಖದಲ್ಲಿ ವಿವಿಧ ಬಣ್ಣಗಳ ಚಿತ್ತಾರ, ಅದಕ್ಕೆ ರೌದ್ರತೆ ನೀಡೋ ಕೆಂಪು ಬಣ್ಣ, ದಪ್ಪ ಮೀಸೆ, ಕೊಂಬು ಹೊಂದಿರೋ ಕಿರೀಟ, ಕಿರೀಟಕ್ಕೆ ಶೋಭೆ ನೀಡೋ ನವಿಲು ಗರಿ, ಮೇಲಿಂದ ಕೆಳಕ್ಕೆ ಸಂಪೂರ್ಣ ಕೆಂಪು ಬಣ್ಣದ ಧಿರಿಸು, ಅದರಲ್ಲಿ ರಾರಾಜಿಸುವ ವಿವಿಧ ಬಣ್ಣಗಳು, ಕೈಯಲ್ಲಿ ಖಡ್ಗ, ಬೆನ್ನ ಹಿಂದೆ ನವಿಲು ಗರಿಗಳ ಪ್ರಭಾವಳಿ. ಪ್ರತೀ ಎರಡು ವರ್ಷಕ್ಕೊಮ್ಮೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಾಣಿಸಿಕೊಳ್ಳುವ ಬೇಡರ ವೇಷದ ಪರಿಯಿದು. ತಮಟೆಯ ಭರ್ಜರಿ ಸದ್ದಿಗೆ ದೊಡ್ಡ ದೊಡ್ಡ ಹೆಜ್ಜೆ ಹಾಕಿಕೊಂಡು ಖಡ್ಗ ಬೀಸೋ ಈ ವೇಷಧಾರಿಯ ಹಿಂದೆ ಇಬ್ಬರು ಹಗ್ಗದಿಂದ ಹಿಡಿದುಕೊಂಡು ಒಂದೇ ರೀತಿಯ ಹೆಜ್ಜೆ ಹಾಕ್ಕೊಂಡು ರಸ್ತೆಯಿಡೀ ಸಾಗುತ್ತಾರೆ. 

ರಾಮಾಯಣದಿಂದ ಪುರುಷಾರ್ಥ ಪ್ರಾಪ್ತಿ: ರಾಘವೇಶ್ವರ ಸ್ವಾಮೀಜಿ

ಈ ವೇಷಧಾರಿಗಳ ರೌದ್ರತೆ, ಅವರು ಹಾಕೋ ಕೇಕೇ, ತಮಟೆಯ ಸದ್ದು ಜನರನ್ನು ಕೂಡಾ ಹುಚ್ಚೆಬ್ಬಿಸುತ್ತದಲ್ಲದೇ, ವೇಷಧಾರಿಗಳ ಜತೆಗೆ ತಾವೂ ಕೂಡಾ ಮನಸೋ ಇಚ್ಛೆ ಕುಣಿಯುವಂತೆ ಮಾಡುತ್ತದೆ. ಶಿರಸಿಯ ಈ ಬೇಡರ ವೇಷ ಗಮ್ಮತ್ತು ನಿನ್ನೆಯಿಂದ ಪ್ರಾರಂಭಗೊಂಡಿದ್ದು, ಇನ್ನೆರಡು ದಿನಗಳ ಕಾಲ ಮುಂದುವರಿಯಲಿದೆ. ಒಂದು ವರ್ಷ ಶಿರಸಿಯ ಮಾರಿಕಾಂಬೆಯ ಜಾತ್ರಾ ವೈಭವವಾದರೆ ಮರು ವರ್ಷವೇ ಜಾನಪದ ಕಲೆ ಶಿರಸಿಯ ಬೇಡರ ವೇಷದ ರೌದ್ರರಮಣೀಯ ಕುಣಿತ.  ಆಧ್ಯಾತ್ಮಿಕ, ಸಾಂಸ್ಕೃತಿಕ, ಜಾನಪದದ ವೈಶಿಷ್ಟ್ಯದ ಬೇಡರ ವೇಷದ ತಾಲೀಮು ಕಳೆದ ಒಂದು ತಿಂಗಳಿನಿಂದ ರಾತ್ರಿ ವೇಳೆ ಶಿರಸಿಯ ವಿವಿಧ ಸರ್ಕಲ್‍ಗಳಲ್ಲಿ, ಗಲ್ಲಿಗಳಲ್ಲಿ ನಡೆದಿದ್ದು, ಹಲಿಗೆ, ತಮಟೆಯನ್ನು ಹಿಡಿದು ಢಣ ಢಣ ಶಬ್ದದೊಂದಿಗೆ ಬೇಡರ ನೃತ್ಯದ ಪ್ರ್ಯಾಕ್ಟೀಸ್ ನಡೆದಿದೆ.  

ಅದಕ್ಕೆ ತಕ್ಕಂತೆ ಕೆಲವು ಬೇಡರ ವೇಷಧಾರಿಗಳು ಕೈಯಲ್ಲಿ ಖಡ್ಗ ಹಿಡಿದರೆ, ಮತ್ತೆ ಕೆಲವರು ಖಡ್ಗದ ಬದಲು ಕೋಲನ್ನು ಹಿಡಿದು ಹೆಜ್ಜೆ ಹಾಕುತ್ತಾ ಕುಣಿದಿದ್ದು, ಈ ತಾಲೀಮು  ಪ್ರತೀದಿನ ಒಂದೆರಡು ತಾಸು ನಡೆದಿದೆ. ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ `ವೇಷಧಾರಿ'ಯ ದೇಹ, ಮನಸ್ಸು ಬೇಡರ ಕುಣಿತಕ್ಕೆ ಒಗ್ಗಿಕೊಳ್ಳಲು ಕೆಲವಷ್ಟು ಸಾಂಪ್ರದಾಯಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಹೋಳಿ ಹುಣ್ಣಿಮೆಗಿಂತ ಪೂರ್ವ ಶಿರಸಿಯಲ್ಲಿ ನಾಲ್ಕು ದಿನ `ಬೇಡರ ವೇಷಧಾರಿ'ಗಳು ವಿವಿಧ ಪ್ರದೇಶಗಳಿಂದ ಹೊರಬಿದ್ದು ಕುಣಿಯಲಾರಂಭಿಸುತ್ತಾರೆ. ಕೆಂಪುವರ್ಣ, ನವಿಲುಗರಿ, ಖಡ್ಗ ಹಿಡಿದುಕೊಂಡು ಬೇಡರ ಕುಣಿತದ ಆವೇಷ, ರೌದ್ರತೆ ನೋಡಲು ಶಿರಸಿಯಲ್ಲಿ ಲಕ್ಷಗಟ್ಟಲೆ ಜನರು ರಾತ್ರಿ ವೇಳೆ ಸೇರುತ್ತಾರೆ. 

ಶಿರಸಿಯ ವಿವಿಧ ಭಾಗಗಳ ಓಣಿ, ಗಲ್ಲಿಗಳಿಂದ ಹೊರ ಬರುವ ಬೇಡರ ವೇಷದ ಕುಣಿತವನ್ನು ನೋಡುತ್ತಿದ್ದಂತೇ ಜನರು ರೋಮಾಂಚಿತಗೊಳ್ಳುತ್ತಾರೆ. ಶಿರಸಿಯ ಬೇಡರ ವೇಷದ ಇತಿಹಾಸ ಉಗಮದ ಬಗ್ಗೆ ಸ್ಪಷ್ಟ ಕಥೆ, ಮಾಹಿತಿಗಳು ಲಭ್ಯವಿಲ್ಲದಿದ್ದರೂ, ಕಾಲಮಾನದಲ್ಲಿ ಜನರ ಬಾಯಿಂದ ಬಾಯಿಗೆ ಸಾಗಿಬಂದ ಕಥೆಗಳೇ ಇಂದಿಗೂ ಇದರ ಇತಿಹಾಸವಾಗಿದೆ. ಜನರಾಡುವ ಕಥೆಗಳ ಪ್ರಕಾರ, ಹಿಂದೆ ಬೇಡರ ಸಮುದಾಯಕ್ಕೆ ಸೇರಿದ್ದ ಓರ್ವ ಬಲಿಷ್ಟ ಕಳ್ಳನಿದ್ದ. ಪ್ರಾರಂಭದಲ್ಲಿ ಈತ ಉತ್ತಮನೇ ಆಗಿದ್ದು, ರಾಜರ ರಕ್ಷಣೆಗಾಗಿ ನೇಮಕಗೊಂಡಿದ್ದ. ಆದರೆ, ಬಳಿಕ‌ ಸ್ಥಿತಿಗೆ ಅನುಗುಣವಾಗಿ ಆತ ಕಳ್ಳನಾದ. ದೈಹಿಕವಾಗಿ ಬಲಿಷ್ಠನಾಗಿದ್ದ ಈತ ಕತ್ತಿವರಸೆಯಲ್ಲೂ ಪರಿಣಿತಿ ಹೊಂದಿದ್ದು, ಧೀರತೆ, ವೀರತೆ ಆತನ ನಡೆಯಾಗಿತ್ತು. 

ಆತ ಊರು- ಊರುಗಳಲ್ಲೆಲ್ಲಾ ಧನಿಕರ ಮನೆಯನ್ನು ಕಳ್ಳತನ ಮಾಡಿ ಆ ಹಣ, ಆಭರಣಗಳನ್ನು ಬಡವರಿಗೆ ಹಂಚುತ್ತಿದ್ದ. ಹೀಗಾಗಿ ಆತ ಜನಸಾಮಾನ್ಯರಿಗೆ ಬೇಕಾದ ವ್ಯಕ್ತಿಯಾಗಿ ಬೆಳೆದಿದ್ದ. ಈತನನ್ನು ಹಿಡಿಯಲು ಆಗಿನ ಕಾಲದ ರಾಜ ತನ್ನ ಭಟರನ್ನು ಎಲ್ಲೆಡೆ ಕಳುಹಿಸಿ ಪ್ರಯತ್ನಿಸಿದ್ದ. ಆದರೆ, ಆತ ಮಾತ್ರ ಸಿಗುತ್ತಿರಲಿಲ್ಲ. ಜನ ಸಾಮಾನ್ಯರ ಕೃಪೆ, ಅನುಕಂಪ ಹೊಂದಿದ್ದ ಕಳ್ಳನಾಗಿದ್ದರಿಂದ ಜನರು ಈತನ ಬಗ್ಗೆ ಯಾವುದೇ ಸುಳಿವನ್ನು ನೀಡುತ್ತಿರಲಿಲ್ಲ. ಅದರ ಬದಲು ಅವನನ್ನು ರಾಜಭಟರ ಕಣ್ಣಿಗೆ ಬೀಳದಂತೆ ರಕ್ಷಿಸುತ್ತಿದ್ದರು. ಒಂದು ದಿನ ವೇಶ್ಯೆಯ ಮನೆಗೆ ಹೋಗಿದ್ದ ಈ ಕಳ್ಳನನ್ನು ಆ ವೇಶ್ಯೆಯು ಮೋಸದಿಂದ ಹಿಡಿದು ರಾಜಭಟರಿಗೆ ಒಪ್ಪಿಸುತ್ತಾಳೆ. ಆ ಬಲಿಷ್ಠ ಕಳ್ಳನನ್ನು ಹಗ್ಗದಿಂದ ಕಟ್ಟಿ ರಾಜಭಟರು ಎಳೆದೊಯ್ಯುತ್ತಾರೆ. 

ಈ `ಕಥೆಯ ಸಾರಾಂಶವೇ ಬೇಡರವೇಷ.  ವೇಶ್ಯೆ...."ನನ್ನನ್ನು ಮೋಸದಿಂದ ಹಿಡಿದುಕೊಟ್ಟೆಯಾ".. ಎಂದು ಅವಳನ್ನು ಖಡ್ಗದಿಂದ ಕಡಿದು ಹಾಕಲು ಮುಂದಾಗುವ ದೃಶ್ಯವೇ ಬೇಡನ ರೌದ್ರಾವತಾರ. ಕಳ್ಳನನ್ನು ನಾವು ಹಿಡಿದಿದ್ದೇವೆ ಎಂದು ಜನರಿಗೆ ಡಂಗೂರ ಸಾರುವವರೇ ಇಂದು ವೇಷಧಾರಿಯ ಮುಂದೆ ತಮಟೆ ಬಾರಿಸುವವರು. ಆಗ ಕಳ್ಳನನ್ನು ರಾತ್ರಿ ಸಂದರ್ಭದಲ್ಲಿ ಹಿಡಿದಿದ್ದರಿಂದ ಬೆಳಕಿಗಾಗಿ ಹಿಲಾಲು ಅಥವಾ ಜೀಟಿಗೆ ಹಿಡಿದು ಮುಂದೆ ಸಾಗುತ್ತಿದ್ದರು. ಇಂದು ಕೂಡಾ ಜೀಟಿಗೆ ಹಿಡಿದು ಸಾಗುವ ಪರಿಪಾಠ ಬೇಡರ ವೇಷದಲ್ಲಿ ಇದೆಯಾದ್ರೂ, ಮುನ್ಚೆಚ್ಚರಿಕೆಯ ಸಲುವಾಗಿ ಈ ಕ್ರಮವನ್ನು ನಿಷೇಧಿಸಲಾಗಿದೆ. ಇನ್ನು ಈ ಹಿಂದೆ ಚರ್ಮದ ಹಲಗೆ ಬಾರಿಸುವ ಪರಿಪಾಠವಿತ್ತು. ಆದರೆ, ಪ್ರಸ್ತುತ ಚರ್ಮದ ಅಭಾವದಿಂದ ಫೈಬರ್ ಹಲಗೆಯನ್ನೇ ಬೇಡರ ವೇಷಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. 

ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ

ಲಕ್ಷಾಂತರ ಜನರ ನಡುವೆ ಕುಣಿಯುವ ಈ ರೌದ್ರ ವೇಷಗಳನ್ನು ನೋಡುವುದೇ ಒಂದು ಅದ್ಭುತ. ಶಿರಸಿಯಲ್ಲಿ ಬೇಡರ ವೇಷದೊಂದಿಗೆ ವಿವಿಧ ಟ್ಯಾಬ್ಲೋಗಳು ಕೂಡಾ ಜನರ ಮನರಂಜಿಸುತ್ತಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಬರುವ ಜನರಂತೂ ಇವುಗಳನ್ನೆಲ್ಲಾ ಕಣ್ತುಂಬಿಕೊಂಡು ಸಂತೋಷಪಡುತ್ತಿದ್ದಾರೆ. ಒಟ್ಟಿನಲ್ಲಿ ಮಾ.3ರಿಂದ  ಪ್ರಾರಂಭಗೊಂಡ ಬೇಡರ ವೇಷ ಮಾ.7ರಂದು ಹೋಳಿ ದಿನ ಕೊನೆಗೊಳ್ಳಲಿದೆ. ಶಿರಸಿಯಲ್ಲಿ ನಡೆಯುವ ಬೇಡರ ವೇಷವನ್ನು ಕಾಣಲೆಂದೇ ರಾಜ್ಯದ ಮೂಲೆ‌ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸಿ ಈ ವಿಷೇಶವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ತಾವು ಕೂಡಾ ಸಕ್ಕತ್ ಸ್ಟೆಪ್ ಹಾಕಿ ಎಂಜಾಯ್ ಮಾಡೋದ್ರಲ್ಲಿ ಎರಡು ಮಾತಿಲ್ಲ.

Latest Videos
Follow Us:
Download App:
  • android
  • ios