ಮಾನವ ಧರ್ಮ ಮೊದಲು ಎಂದ ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳು
11-09-2022ರಂದು ಜರುಗಲಿರುವ ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾ ಶಿವಯೋಗಿಗಳ 155ನೇ ಜಯಂತಿ ಪ್ರಯುಕ್ತ ವಿಶೇಷ ಲೇಖನ..
ಸದ್ಯೋಜಾತ ಮುಖೋಧ್ಬೂತಂ ಸದ್ಯೋ ವೈಭವ ದಾಯಕಮ್ ।
ಸಿದ್ಧಿದಂ ಸಿದ್ಧವೃಂದಸ್ಯ ವಂದೇ ಶ್ರೀ ರೇಣುಕಂ ಗುರುಂ ।।
ಶಿವ ತಪ ಶಿವ ಕರ್ಮ ಶಿವಜಪ ಶಿವ ಧ್ಯಾನ ಶಿವಜ್ಞಾನ ಎಂಬ ಪಂಚಸೂತ್ರಗಳೊಂದಿಗೆ ಶಿವ ಸಾಯುಜ್ಯವನ್ನು ಪಡೆಯುವುದೇ ಶಿವಯೋಗ ಸಿದ್ಧಾಂತದ ಮೂಲ ತತ್ವ. ಇಂತಹ ಸಿದ್ಧಾಂತಕ್ಕೆ ಪರಿಪೂರ್ಣತೆಯನ್ನು ತಮ್ಮ ಜೀವಿತದ ಮೂಲಕ ನೀಡಿದವರು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು.
ಆಧ್ಯಾತ್ಮಿಕತೆಯ ಆವರಣವನ್ನು ಕೇವಲ ಶಾಸ್ತ್ರಾಭ್ಯಾಸದಿಂದ ಅಳೆಯುವುದಕ್ಕೆ ಸಾಧ್ಯವಿಲ್ಲ, ಬದಲಾಗಿ ಶಾಸ್ತ್ರಗಳ ಮೂಲಕ ಸಶಕ್ತ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಸರ್ವವನ್ನೂ ಸಾಕಾರಗೊಳಿಸುವುದು ಎಂದರೆ ಸಂತರು ಯೋಗಿಗಳು; ಅಂತಹದೇ ಒಬ್ಬ ಶ್ರೇಷ್ಠ ಶಿವಭಕ್ತನಾಗಿದ್ದುಕೊಂಡು ಸ್ವಚ್ಛ ಸೇವಾಮನೋಭಾವದ ಸಮಾಜವನ್ನು ನಿರ್ಮಿಸಿದವರು ಶ್ರೀ ಕುಮಾರ ಶಿವಯೋಗಿಗಳು. ಸರಳ ಸಂಪನ್ನರಾಗಿ ಮತ್ತು ವಿನಯ ಸಂಪನ್ನರಾಗಿ ದಾರ್ಶನಿಕ ಭಾವದೊಂದಿಗೆ ಜೀವಿತ್ವದ ಮತ್ತು ದೈವತ್ವದ ಸಾರ್ಥಕತೆಯನ್ನು ಕಾರ್ಯಗಳ ಮೂಲಕ ತಿಳಿಯಪಡಿಸಿದರು ಕುಮಾರ ಶಿವಯೋಗಿಗಳು.
'ಹಾಲಯ್ಯ'ನೆಂಬ ಹೆಸರಿನಿಂದ ಜನಿಸಿದವರು ಕಾಲಾನುಕ್ರಮದಲ್ಲಿ ಹಾಲೊಳಗಿನ ತುಪ್ಪದ ವ್ಯಕ್ತಿತ್ವದಂತೆ ಆರೋಗ್ಯಪೂರ್ಣ ಸಮಾಜದ ನಿರ್ಮಾಣದಲ್ಲಿ ತಮ್ಮನ್ನು ಸಮರ್ಪಿಸಿಕೊಂಡವರು. ಸಂಗೀತವಿಲ್ಲದೆ ಶಿವನಿಲ್ಲ ಎಂಬಂತೆ ಸಂಗೀತ ಜ್ಞಾನದಲ್ಲಿ ಅಪಾರ ಪರಿಣಿತಿಯನ್ನು ತಮ್ಮ ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಸಾಧಿಸಿ, ಧರ್ಮಗ್ರಂಥಗಳು ನೀಡುವ ಧಾರ್ಮಿಕ ಜ್ಞಾನವನ್ನು ತಮ್ಮ ಪರಿಸರದೊಳಗಿರುವ ಜ್ಞಾನದಾಹವನ್ನು ನೀಗಿಸುವುದಕ್ಕಾಗಿ ಆಲೋಚಿಸಿದವರು. ಸಿದ್ಧಾರೂಢ ಮಠ, ಎಳಂದೂರು ಬಸವಲಿಂಗ ಶಿವಯೋಗಿಗಳು ಮುಂತಾದ ಅನೇಕ ಮಹನೀಯರ ಪೋಷಣೆಯಲ್ಲಿ ಪರಿಮಳ ಪಸರಿಸುವ ಸುಮವಾಗಿ ಅರಳಿ ನಿಂತು, ಮುಂದೆ ಸತತ 12 ವರ್ಷಗಳ ಕಾಲ ಇಷ್ಟಲಿಂಗ ಮಹಾಪೂಜೆ ಅನೇಕ ಕ್ರಮಗಳನ್ನು ಸಾಧಿಸುವಲ್ಲಿ ಮತ್ತು ಅದನ್ನು ತಮ್ಮ ಮುಂದಿನ ಪೀಳಿಗೆಯವರಿಗೆ ಶಿವಸಾಯುಜ್ಯವನ್ನು ಹೊಂದುವುದರಲ್ಲಿ ಸಹಾಯಕವಾಗುವಂತೆ ಸಾಕ್ಷೀಕರಿಸಿದರು. ಇಂದಿನ ನಮ್ಮ ಪೋಷಕರು ಸಹ ಇಂತಹ ವ್ಯಕ್ತಿತ್ವಗಳನ್ನು ಪೋಷಿಸಬೇಕು ಹೊರತು ಕೇವಲ ಸರ್ಕಾರಿ ನೌಕರಿಯನ್ನು ಸಾಧಿಸುವ ಅಥವಾ ಅತ್ಯಂತ ಹೆಚ್ಚು ಜೀವನಶೈಲಿಯನ್ನು ನಡೆಸುವಂತಹ ಮಾನವ ರೂಪದಲ್ಲಿರುವ ಯಂತ್ರಗಳನ್ನು ಅಲ್ಲ.
ಹಾನಗಲ್ಲಿನ ವಿರಕ್ತ ಮಠಕ್ಕೆ ಉತ್ತರಾಧಿಕಾರಿ
ತಮ್ಮ ಜ್ಞಾನ, ಪ್ರೀತಿ ಮತ್ತು ಸೇವಾ ಮನೋಭಾವದೊಂದಿಗೆ ಉತ್ತರ ಕರ್ನಾಟಕಕ್ಕೆ ಮರಳಿದ ಶಿವಯೋಗಿಗಳು ಹಾನಗಲ್ಲಿನ ವಿರಕ್ತ ಮಠಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಆ ಸಮಯದಲ್ಲಿ ನಡೆಯುತ್ತಿದ್ದಂತಹ ಬ್ರಾಹ್ಮಣ ಮತ್ತು ವೀರಶೈವರ ತಾರತಮ್ಯಗಳನ್ನು ಪರಿಹರಿಸಬೇಕೆಂಬ ದೃಢ ಸಂಕಲ್ಪದೊಂದಿಗೆ ಸಂಸ್ಕೃತ ಪಾಠಶಾಲೆಯನ್ನು ಹಾನಗಲ್ಲ ಶ್ರೀ ಮಠದಲ್ಲಿ ಪ್ರಾರಂಭಿಸಿ ಉಚಿತ ಊಟ, ವಸತಿ, ಶಿಕ್ಷಣಗಳನ್ನು ನೀಡುವುದರ ಮೂಲಕ ಸಂಸ್ಕೃತ ಪೂರ್ವಕವಾದ ಸಂಸ್ಕಾರವನ್ನು ವಿದ್ಯಾರ್ಥಿಗಳಿಗೆ ನೀಡಿದರು. ಈ ಪಂಗಡದೊಳಗಿನ ಮುಸುಕಿನ ಗುದ್ದಾಟಗಳು ಅಂದಿಗೆ ಮಾತ್ರ ಸೀಮಿತವಾದುದಲ್ಲ, ಇದು ನಾವು-ನೀವೆಲ್ಲರೂ ಜೀವಿಸುತ್ತಿರುವ ಸೋಕಾಲ್ಡ್ ಸಿವಿಲೈಜ್ಡ್ ಸೊಸೈಟಿಯಲ್ಲಿಯೂ ಕಾಣುತ್ತಿರುವುದು ಶೋಚನೀಯ. Equality of education ಹಾಗೂ purpose of education is nationality ಎಂಬ ಭಯದೊಂದಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳು ಅತ್ಯಂತ ವಿರಳ. ಸಂಸ್ಕೃತವನ್ನು ಎಲ್ಲ ಭಾಷೆಗಳ ತಾಯಿಯೆಂದು ಪ್ರಪಂಚದ ಬೇರೆ ಬೇರೆ ದೇಶಗಳು ಸಹ ಒಪ್ಪಿಕೊಂಡಿರುವಾಗ ಭಾರತೀಯರಾದ ನಾವುಗಳು ನಮ್ಮ ಮಕ್ಕಳಿಗೆ ಸಂಸ್ಕೃತವನ್ನು ಮತ್ತು ಅದರ ಸಾರ ಸತ್ವವನ್ನು ತಿಳಿಸುವುದಕ್ಕೆ ಸೋತಿದ್ದೇವೆ ಎಂದರೆ ಯೋಚಿಸಬೇಕಾದ ಮತ್ತು ತಕ್ಷಣವೇ ನಮ್ಮ ಮನಸ್ಥಿತಿಯನ್ನು ತಿದ್ದಿಕೊಳ್ಳಬೇಕಾದ ಅವಶ್ಯಕತೆ ಕಾಣಿಸುತ್ತದೆ.
ಇಂದು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ
ಶಿಕ್ಷಣ ಕೇವಲ ಗ್ರಾಜುಯೇಷನ್ ಸರ್ಟಿಫಿಕೇಟ್ ಹೊರತಾಗಿಯೂ ಪರಿಪೂರ್ಣ ವ್ಯಕ್ತಿತ್ವಗಳನ್ನು ಪೋಷಿಸಿದಾಗ ಮಾತ್ರವೇ ಧರ್ಮ ಮತ್ತು ದೇಶದ ಸಂರಕ್ಷಣೆಯಾಗುವುದಕ್ಕೆ ಸಾಧ್ಯ.
ಇಂತಹ ಪರಿಪೂರ್ಣ ವ್ಯಕ್ತಿತ್ವಗಳನ್ನು ಪೋಷಿಸುವಲ್ಲಿ ತಮ್ಮ ಸರ್ವ ಕಾರ್ಯಗಳನ್ನು ಕೇಂದ್ರಿಕರಿಸಿದ್ದು ಶ್ರೀ ಶಿವಕುಮಾರ ಶಿವಯೋಗಿಗಳು, 1904ರಲ್ಲಿ ಸ್ಥಾಪಿತಗೊಂಡಂತಹ ವೀರಶೈವ ಮಹಾಸಭಾ ಎನ್ನುವ ಸೇವಾರ್ಥ ಪೂರ್ವಕವಾದ ಕೊಡುಗೆಯು 'ಶಿವ ಧರ್ಮ'ವೆಂಬುದು ಕೇವಲ ಶಾಸ್ತ್ರಗಳಿಗೆ ಸೀಮಿತವಾದುದಲ್ಲ ಬದಲಾಗಿ ಒಬ್ಬ ವ್ಯಕ್ತಿಯ ಸಾಧನೆಗಳು ಸಮೃದ್ಧ ಧರ್ಮ ಮತ್ತು ದೇಶದ ಒಳಿತಿಗಾಗಿ ಎಂಬುದನ್ನು ಸಾಧಿಸಿ ತೋರಿಸುವುದಕ್ಕಾಗಿ. 'ಶಿವಸಾಯುಜ್ಯ'ವನ್ನು ಹೊಂದುವುದು ಎಂದರೆ ನಮ್ಮ ಸಕಲ ಸಾಧನೆಯ ಯಶಸ್ಸಿನ ಮೂಲ ನ್ಯಾಯಬದ್ಧವಾದ ಸಮಾಜ ನಿರ್ಮಾಣಕ್ಕಾಗಿ ಮಾತ್ರವೇ ಎಂಬುದನ್ನು ತಿಳಿಸುವುದಕ್ಕಾಗಿ. ವೀರಶೈವ ಮಹಾಸಭಾ(All India Veerashaiva Mahasabha) ಸ್ಥಾಪಿತಗೊಂಡ ನಂತರ ಶಿವಯೋಗಿಗಳು ಅನೇಕ ರೀತಿಯಲ್ಲಿ ವಿಧವಿಧವಾದ ಕ್ಷೇತ್ರಗಳಲ್ಲಿ ಎಲ್ಲ ಸೇವೆಗಳನ್ನು ಸಂಘಟಿಸಿ ಸಮಾಲೋಚಿಸಿ ದೇಶದಾದ್ಯಂತ ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿದರು.
ಯೋಗ, ಆಯುರ್ವೇದದ ಪ್ರತಿಪಾದಕ
ಎರಡು ವರ್ಷದ ಹಿಂದೆ ನಮ್ಮ ಎಲ್ಲ ನಾಯಕರು ತಕ್ಕಮಟ್ಟಿಗಿನ ಕ್ರೈಸಿಸ್ ಮ್ಯಾನೇಜ್ಮೆಂಟ್ ಎಂಬ ಕಾರ್ಯಗಳನ್ನು ನಿರ್ವಹಿಸಿದ್ದನ್ನು ನಾವು ಕಂಡಿದ್ದೇವೆ ಆದರೆ ಕೆಲವು ಲೋಪದೋಷಗಳು ಕಂಡಾಗ ಮತ್ತು ಅದರಿಂದ ಜನರ ಪ್ರಾಣಕ್ಕೆ ಅಪಾಯವಾದಾಗ ಆಡಳಿತಾತ್ಮಕ is not up to the mark ಎಂಬಂತೆ ಭಾಸವಾಗುತ್ತದೆ; ಆದರೆ ಶಿವಯೋಗಿಗಳು ಆಡಳಿತಾತ್ಮಕ ವ್ಯವಸ್ಥೆಯನ್ನು ಸಹ ತಮ್ಮ ಕಾಲಘಟ್ಟದಲ್ಲಿ ಅತ್ಯಂತ ಸಮರ್ಥ ರೀತಿಯಲ್ಲಿ ನಿಭಾಯಿಸಿದ್ದರು, ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗಾಗಿ ನಮ್ಮ ಆಯುರ್ವೇದ ಪದ್ಧತಿ ಮತ್ತು ಯೋಗ ಪದ್ಧತಿಯ ಎಲ್ಲ ಜೀವನಕ್ರಮಗಳನ್ನು ಜನರ ದಿನನಿತ್ಯದ ಕೆಲಸಗಳಲ್ಲಿ ರೂಢಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು.
ಶಿವಯೋಗಿಗಳು ಅಥವಾ ಸಂತರು ಅಥವಾ ಸನ್ಯಾಸಿಗಳು ಅಥವ ಜಂಗಮರು ಮತ್ತು ಇನ್ನು ಅನೇಕ ಬೇರೆ ಬೇರೆ ರೀತಿಯಾಗಿ ಸಂಬೋಧನೆ ಗೊಳ್ಳುವ ಯಾವುದೇ ಆಧ್ಯಾತ್ಮಿಕ ಅತಿ ಗಳೆಂದರೆ ನಮ್ಮ ಮನಸ್ಸಿನಲ್ಲಿ ಅವರು ಕೇವಲ ಪೂಜಾವಿಧಿ - ಕ್ರಮಗಳನ್ನು ಮಾತ್ರ ಬಲ್ಲವರಾಗಿರುತ್ತಾರೆ ಎಂಬ ಪೂರ್ವಾಗ್ರಹಗಳಿವೆ ಆದರೆ ತಮ್ಮ ಸೇವೆಗಳಿಂದ ದೇಶವನ್ನು ಮುನ್ನಡೆಸುವ ಮತ್ತು ಕಳಂಕ ರಹಿತ ಸಮಾಜವನ್ನು ಸ್ಥಾಪಿಸುವ ವ್ಯಕ್ತಿಗಳಾಗಬೇಕು ಎಂಬುದೇ ಆಧ್ಯಾತ್ಮಿಕತೆಯ ನಿಜವಾದ ವ್ಯಾಖ್ಯಾನ ಮತ್ತು ಅದಕ್ಕೆ ಉದಾಹರಣೆಯಾಗಿ ತಮ್ಮ ಜೀವಿತವನ್ನು ಧರ್ಮ ಮತ್ತು ದೇಶದ ಸೇವೆಗಾಗಿ ಸಮರ್ಪಿಸಿದರು ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು. ತಮ್ಮ ಸಮಕಾಲೀನ ಸ್ವಾಮಿಗಳಿಗೆ ಮತ್ತು ಮುಂದಿನ ಪೀಳಿಗೆಯ ಸ್ವಾಮಿಗಳಿಗೆ ತರಬೇತಿಯನ್ನು ನೀಡುವುದಕ್ಕಾಗಿ 1909ರಲ್ಲಿ ಶಿವಯೋಗ ಮಂದಿರವನ್ನು ಸ್ಥಾಪಿಸುವುದರ ಮೂಲಕ ಶೈವಧರ್ಮದ ಮಹತ್ವವನ್ನ ಹಾಗೂ ವೀರಶೈವ ಸಿದ್ಧಾಂತ ವನ್ನು ತಿಳಿಯಪಡಿಸಲು ಅತ್ಯಂತ ಆಧುನಿಕ ರೀತಿಯಲ್ಲಿ ಯೋಚಿಸಿ ಕಾರ್ಯೋನ್ಮುಖರಾದರು. ಶಿವಯೋಗ ಮಂದಿರದ ವಿದ್ಯಾರ್ಥಿಗಳು ಅತ್ಯಂತ ಪ್ರಬಲ ವ್ಯಕ್ತಿತ್ವದವರಾಗಿ ವೀರಶೈವ ಧರ್ಮಕ್ಕೆ ಅನೇಕ ಸೇವೆಗಳನ್ನು ನೀಡಿದವರಾಗಿದ್ದಾರೆ. ಶಿವಯೋಗ ಮಂದಿರದ ಮತ್ತೊಂದು ಅವಿಸ್ಮರಣೀಯ ಕಾರ್ಯವೆಂದರೆ ಗಾನಯೋಗಿ ಪಂಚಾಕ್ಷರಿಗವಾಯಿ ಹಾಗೂ ಪುಟ್ಟರಾಜಗವಾಯಿಗಳ ವೀರೇಶ್ವರ ಪುಣ್ಯಾಶ್ರಮದ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಗಾಯನದ ವಿದ್ಯೆಯನ್ನು ಪಸರಿಸುವಲ್ಲಿ ಯಶಸ್ವಿಯಾದದ್ದು.
ಪಿತೃ ಪಕ್ಷ 2022ರಲ್ಲಿ ಈ 5 ಆಹಾರಗಳಿಂದ ದೂರವಿರಿ..
ಶ್ರೀ ಕುಮಾರ ಶಿವಯೋಗಿಗಳ ಎಲ್ಲ ಕಾರ್ಯಗಳು ಕೇವಲ ವ್ಯಕ್ತಿಗಳಿಗೆ ಅಥವಾ ಮಾನವ ಕೇಂದ್ರೀಕೃತವಾದದ್ದು ಆಗಿರಲಿಲ್ಲ ಬದಲಾಗಿ ಗೋಶಾಲೆ, ವಿಭೂತಿ ತಯಾರಿಕೆ ಮತ್ತು ಮುಂತಾದ ಅನೇಕ ಸ್ವದೇಶಿ ವ್ಯಾಪಾರ ವಹಿವಾಟುಗಳಿಗು ಅವರ ಬೆಂಬಲವಿತ್ತು. ಸರ್ಕಾರವು ಗೋಸಂರಕ್ಷಣೆಯ ಕಾಯ್ದೆಯನ್ನು ಅನುಷ್ಟಾನಗೊಳಿಸಬೇಕು ಎನ್ನುವ ವಿನಂತಿಯೊಂದಿಗೆ ನಾವು ನಮ್ಮ ಮನೆಗಳಲ್ಲಿಯೂ ಸಹ ಗೋಸಂರಕ್ಷಣೆ ಮತ್ತು ನೈಸರ್ಗಿಕ ಸಂರಕ್ಷಣೆಯ ಸಣ್ಣ ಪ್ರಯತ್ನಗಳನ್ನು ನಡೆಸಬೇಕು ಎಂಬುದು ಅಷ್ಟೇ ಸತ್ಯವಾದದ್ದು.
ಪುಸ್ತಕ ಪ್ರಕಟಣೆ
ಪುಸ್ತಕ ಪ್ರಕಟಣೆಯು ಶಿವಯೋಗಿಗಳ ಮಹತ್ವದ ಕಾರ್ಯಗಳಲ್ಲೊಂದು. ವೇದಾಗಮ ಉಪನಿಷತ್ತುಗಳಿಂದ ಹಿಡಿದು ವಚನಸಾಹಿತ್ಯದ ವರೆಗೆ ಅನೇಕ ತೆರನಾದ ಪುರಾಣ ಕ್ರಮವಾದ ಪುಸ್ತಕಗಳನ್ನು ಪ್ರಕಟಿಸುವುದಕ್ಕಾಗಿ ಶಿವಯೋಗಿಗಳು ಸಂಪೂರ್ಣ ಬೆಂಬಲವನ್ನು ನೀಡಿದರು.
ಪೂಜಾ ಮಂದಿರಗಳ ಕಾನೂನು ಹೋರಾಟಗಳು ಇಂದಿಗೆ ಹೊಸದಾಗಿ ಇರಬಹುದೇನೋ ಆದರೆ ಶಿವಯೋಗಿಗಳ ಕಾಲದಲ್ಲಿಯೂ ವಿತಂಡ ವಾದದ ವಿರೋಧಿಗಳೊಂದಿಗೆ ನ್ಯಾಯಬದ್ಧವಾಗಿ ಹೋರಾಡಿ ನ್ಯಾಯಸಮ್ಮತವಾದ ವೈದ್ಯನಾಥ ಪೂಜೆಗೆ ಅನುಮತಿಯನ್ನು ಪಡೆದು ಮಹಾರಾಷ್ಟ್ರದ ಮಂದಿರದಲ್ಲಿ ವೀರಶೈವರು ಪೂಜೆ ಸಲ್ಲಿಸುವಂತೆ ಹೋರಾಡಿದರು.
ಕೋಡಿ ಶ್ರೀ ಮತ್ತೊಂದು ಭಯಾನಕ ಭವಿಷ್ಯ: ಪ್ರಕೃತಿಯ ವಿಕೋಪದ ಬಗ್ಗೆ ಎಚ್ಚರಿಕೆ
ಪ್ರತಿ ಹೆಜ್ಜೆಯೂ ಕೂಡ ಸ್ವಧರ್ಮ ಮತ್ತು ಸ್ವದೇಶ ಎಂಬ ಸೂತ್ರಗಳನ್ನು ಒಳಗೊಂಡ ಜೀವನಕ್ರಮದ ಸಾಧನೆಯಾಗಬೇಕೆಂದು ಜೀವಿಸಿದವರು ಶ್ರೀ ಕುಮಾರ ಶಿವಯೋಗಿಗಳು. ಹೀಗೆ ಭಾರತೀಯರ ಭಕ್ತಿಯ ಪರಿಕಲ್ಪನೆಗಳು ಎಂದಿಗೂ ನಿಜ ದೈನಂದಿನ ಜೀವನದಿಂದ ದೂರವಾದವುಗಳಲ್ಲ, ಹಾಗೆಯೇ ವಸುದೈವ ಧರ್ಮವಾದ ಮಾನವ ಧರ್ಮ ಮತ್ತು ದೇಶವೇ ಮೊದಲು ಎಂಬ ಧರ್ಮವನ್ನು ಉದ್ದೇಶಗಳನ್ನಾಗಿ ಹೊಂದಿರುವವು.