Asianet Suvarna News Asianet Suvarna News

ಉದ್ಯಮಿಯಾಗುವ ಆಶಯವಿದ್ದರೆ ರಿಸ್ಕ್‌ ತೆಗೆದುಕೊಳ್ಳುವ ದಿಟ್ಟತನ ಅಗತ್ಯ

ಯಾವುದೇ ಒಂದು ಉದ್ಯಮ ಸ್ಥಾಪಿಸಿದಾಗ ಅಥವಾ ಹೊಸ ಪ್ರಯತ್ನ ಮಾಡಿದಾಗ ಅದರಲ್ಲಿ ಆಗಾಗ ‘ರಿಸ್ಕ್‌' ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಆ ಅಪಾಯದ ಸ್ಪರ್ಶದಿಂದ ಮತ್ತಷ್ಟುಗಟ್ಟಿಯಾಗಬೇಕೇ ಹೊರತು, ಅದಕ್ಕೆ ಹೆದರಿ ಕರಗಿ ಹೋಗಬಾರದು. ಉದ್ಯಮದಲ್ಲಿ ರಿಸ್ಕ್‌ ತೆಗೆದುಕೊಳ್ಳುವ ಬಗ್ಗೆ ಕೆಲವು ಸಲಹೆಗಳು

KannadaPrabha Vistas Deshavlokana 12 November 2016

ಅಂಕಣ: ದೇಶಾವಲೋಕನ 
ಲೇಖಕರು: ಗುರುರಾಜ ದೇಶಪಾಂಡೆ

ಬೇಡ! ಖಂಡಿತಾ ಬೇಡ.
ಎರಡು ಸಂದರ್ಭಗಳಲ್ಲಿ ನಾನು ನನ್ನ ಬಳಿ ಸಲಹೆ ಕೇಳಲು ಬರುವ ಉದ್ಯಮಶೀಲರಿಗೆ ನೀಡುವ ಒಂದು ಪದದ ಸ್ಪಷ್ಟಉತ್ತರವಿದು. ಹಲವು ಬಾರಿ ಉದ್ಯಮಶೀಲರು ನನ್ನ ಬಳಿ ಬಂದು, ನಾನೊಂದು ಹೊಸ ಕಂಪೆನಿಯನ್ನು ಆರಂಭಿಸ­ಬೇಕೆಂದಿದ್ದೇನೆ. ಏನು ಮಾಡುವುದು? ಎಂಬ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಅವರಿಗೆ ಸಿಗುವ ಉತ್ತರ ಮೇಲಿನ ಒಂದು ಪದ. ಯಾವುದೇ ಉದ್ಯಮ­ಶೀಲರಾಗಿರಲಿ ಅವರ ಯೋಜನೆಯ ಬಗ್ಗೆ ಸ್ಪಷ್ಟನಿಲುವು ಹೊಂದಿದ್ದರೆ, ಧ್ಯೇಯೋದ್ದೇಶದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದರೆ ಮೇಲಿನ ಪ್ರಶ್ನೆ ನನ್ನ ಬಳಿ ಕೇಳುತ್ತಿರಲಿಲ್ಲ. ಅಥವಾ ಯಾರ ಬಳಿಯೂ ಕೇಳು­ತ್ತಿರಲಿಲ್ಲ. ಕೇಳುವುದೂ ಇಲ್ಲ. ಒಬ್ಬ ಉದ್ಯಮ­ಶೀಲನಿಗೆ ಆತನ ಯೋಜನೆಯ ಬಗ್ಗೆಯೇ ನಂಬಿಕೆ­ಯಿಲ್ಲ ಎಂದಾದರೆ ಆ ಸಾಹಸಕ್ಕೆ ಕೈಹಾಕಕೂಡದು. ನಂಬಿಕೆ ಇದೆ ಎಂದಾದರೆ ಅದಕ್ಕಾಗಿ ಅನಗತ್ಯವಾಗಿ ಬೇರೊಬ್ಬರ ಸರ್ಟೀಫಿಕೇಟ್‌ ಪಡೆಯಲು ಮುಂದಾಗಬಾರದು.

ಅದೇ ರೀತಿಯಲ್ಲಿ ಈಗಿನ ಸ್ಟಾರ್ಟ್‌ಅಪ್‌ ಯುಗ­ದಲ್ಲಿ ಕೇಳಿಬರುತ್ತಿರುವ ಮತ್ತೊಂದು ಪ್ರಮುಖ ಪದವೆಂದರೆ ‘ನಿರ್ಗಮನ ಯೋಜನೆ' (ಎಕ್ಸಿಟ್‌ ಪ್ಲಾನ್‌). ಈಗಷ್ಟೇ ಸ್ಟಾರ್ಟ್‌ಅಪ್‌ ಆರಂಭಿಸಿ ಯಶಸ್ವಿ­ಯಾಗಿದ್ದೇನೆ. ಈಗ ನಾನು ನನ್ನ ನಿರ್ಗಮನ ಯೋಜನೆ ಸಿದ್ಧ ಪಡಿಸಿಕೊಳ್ಳಲೇ? ಎಂದು ಯಾರಾ­ದರೂ ಕೇಳಿದರೆ, ಅದಕ್ಕೂ ನನ್ನ ಉತ್ತರ ಮೇಲಿನ ಒಂದು ಪದವೇ. ಹಲವು ಬಾರಿ ನನಗೆ ಇದು ಕೂಸು ಹುಟ್ಟುವ ಮೊದಲೇ ಹೊಲಿಸಿದ ಕುಲಾವಿ ಕಥೆಯೆನಿಸುತ್ತದೆ.

 ಈ ಸನ್ನಿವೇಶವನ್ನು ನಾನು ನೋಡುವ ರೀತಿಯೇ ಬೇರೆ. ನೀವೊಂದು ಸ್ಟಾರ್ಟ್‌ಅಪ್‌ ಆರಂಭಿಸಿದ್ದೀರಿ. ನಿಮ್ಮ ಆ ಕಂಪೆನಿ ಸಮಾಜಕ್ಕೆ ಮೌಲ್ಯಯುತ ಕಾಣಿಕೆ ನೀಡುತ್ತಿದೆ. ನಿಮ್ಮೆಣಿಕೆ­ಯಂತೆಯೇ ನಿಮ್ಮ ಕಂಪೆನಿ ಯಶಸ್ಸಿನ ಹಾದಿಯಲ್ಲಿ ಮುಂದುವರೆಯುತ್ತಿದೆ. ಹೊಸ ಹೊಸ ಗ್ರಾಹಕರು ನಿಮ್ಮ ಕಂಪೆನಿ ತಯಾರಿಸಿರುವ ಉತ್ಪನ್ನಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಒಟ್ಟಾರೆ ನಿಮ್ಮ ಕಂಪೆನಿ­ಯನ್ನೇ ನಂಬಿರುವ ಷೇರುದಾರರು, ಗ್ರಾಹಕರು, ಉದ್ಯೋಗಿಗಳು... ಎಲ್ಲರೂ ಬಹಳ ಸಂತೃಪ್ತರಾಗಿ­ದ್ದಾರೆ. ಇಂತಹ ಸನ್ನಿವೇಶದಲ್ಲಿ ಕಂಪೆನಿಯನ್ನು ಮತ್ತಷ್ಟುಬಲಪಡಿಸುವುದು ನಿಮ್ಮ ಮೊದಲ ಆದ್ಯತೆ ಆಗಬೇಕು. ಅದನ್ನು ಬಿಟ್ಟು ನಿರ್ಗಮನ ಯೋಜನೆಯ ಕಡೆ ಮನಸ್ಸನ್ನು ಹರಿಯಲು ಅವ­ಕಾಶ ಮಾಡಿಕೊಡಬೇಡಿ. ಏಕೆಂದರೆ ನೀವಿನ್ನೂ ದೀರ್ಘ ಪಯಣದ ಆರಂಭದ ಹಂತದಲ್ಲಿದ್ದೀರಿ, ಹೊರತೂ ಅಂತ್ಯಕ್ಕೆ ಹತ್ತಿರ ಸರಿದಿಲ್ಲ. 

ಸಹಜವಾಗಿಯೇ ಕಂಪೆನಿಯ ಬೆಳವಣಿಗೆಯ ಯಾವುದೋ ಒಂದು ಹಂತದಲ್ಲಿ ಸಂಸ್ಥಾಪಕರ ಮನಸ್ಸಿನಲ್ಲಿ ‘ರಿಸ್ಕ್‌' ಎಂಬ ಗಂಟೆ ಮೊಳಗುತ್ತದೆ. ಹೀಗೆ ಅಪಾಯ ಬಂದಾಗ ಆತಂಕದಿಂದ ಕೈಚೆಲ್ಲಿ ಕುಳಿತುಕೊಳ್ಳುವುದಲ್ಲ. ಅದು ಅಪಾಯ ನಿರ್ವ­ಹಣೆಯ ಕಾಲ ಹೊರತು, ಎಲ್ಲ ಬಿಟ್ಟು ಓಡಿ ಹೋಗುವ ಸಮಯವಲ್ಲ. ಈ ಅಪಾಯದ ಕರೆ­ಗಂಟೆ ಮೊಳಗಲು ಮಾರುಕಟ್ಟೆಯಲ್ಲಿನ ಬದಲಾದ ಪರಿಸ್ಥಿತಿ ಕಾರಣವಿರಬಹುದು. ಇಲ್ಲವೆಂದಲ್ಲಿ ವಿರೋಧಿ ಕಂಪೆನಿಗಳ ತೀವ್ರ ಪೈಪೋಟಿ ಇದಕ್ಕೆ ಕಾರಣವಾಗಬಹುದು. ಒಂದು ಕಾಲದಲ್ಲಿ ಎಲ್ಲವೂ ನಿರೀಕ್ಷಿತ ದಿಕ್ಕಿನಲ್ಲಿಯೇ ಸಾಗುತ್ತಿದ್ದಾಗ ನಾನು ಸ್ಥಾಪಿಸಿದ ಕಂಪೆನಿಯೇ ಬದುಕು ಎಂದುಕೊಂಡ ವ್ಯಕ್ತಿಯೇ ನಿರ್ಗಮನದ ಬಗ್ಗೆ ತೀವ್ರವಾಗಿ ಯೋಚನೆ ಮಾಡುವ ಪರಿಸ್ಥಿತಿ ಎದುರಾಗಬಹುದು. ಈ ಅಪಾಯಕಾರಿ ಸನ್ನಿವೇಶ ಯಾವುದೇ ಹಂತದಲ್ಲಿ ಕಾಣಿಸಿಕೊಳ್ಳಬಹುದು. ಅದು ಉದ್ಯಮಶೀಲ ವ್ಯಕ್ತಿಯ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಯಾರು ಎಷ್ಟರ ಮಟ್ಟಿಗೆ ‘ರಿಸ್ಕ್‌' ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದರ ಮೇಲೆ ಎಲ್ಲವೂ ನಿಂತಿರುತ್ತದೆ. ಇಂತಹ ಸಂದರ್ಭದಲ್ಲಿ ಮುಂದೆ ಇರುವ ಸಮಸ್ಯೆಯನ್ನು ನಿಭಾಯಿಸು­ವುದೇ ಗುರಿಯಾಗಿರಬೇಕು. ಸಮಸ್ಯೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಹೀಗೆ ಅಪಾಯವನ್ನು ಧೈರ್ಯದಿಂದ ಎದುರಿಸುವುದೇ ನಿಜವಾದ ನಾಯಕತ್ವ ಗುಣವಾಗಿರುತ್ತದೆ. 

ಬಹುದೊಡ್ಡ ಕಂಪೆನಿಗಳನ್ನು ಸ್ಥಾಪಿಸಿ, ಅವನ್ನು ಕಟ್ಟಿಬೆಳೆಸಿದ ಹಲವಾರು ಉದ್ಯಮಶೀಲರನ್ನು ನಾನು ಬಹು ಹತ್ತಿರದಿಂದ ಬಲ್ಲೆ. ಕಂಪೆನಿಯ ಭವಿಷ್ಯದ ಬಗ್ಗೆ ಅವರಿಗೆ ಎಷ್ಟುದೃಢವಾದ ನಂಬಿಕೆ ಇರುತ್ತದೆ ಎಂದರೆ, ಎಂತಹ ಸಮಸ್ಯೆ ಎದುರಾ­ದರೂ ಅವರು ಅದಕ್ಕೆ ತಲೆಬಾಗುವುದಿಲ್ಲ. ಸಮ­ಸ್ಯೆಗೆ ಎದೆಯೊಡ್ಡಿ, ಅದನ್ನು ನಿಯಂತ್ರಣಕ್ಕೆ ತೆಗೆದು­ಕೊಂಡು ಕ್ರಮೇಣ ಅದನ್ನು ಬಗೆಹರಿಸಿ ಕಂಪೆನಿ­ಯನ್ನು ಸರಿಯಾದ ಹಾದಿಯಲ್ಲಿ ಮುನ್ನಡೆ­ಸಿ­ಬಿಡುತ್ತಾರೆ ಇವರು. ಅವರನ್ನು ನೋಡಿದಾಗೆಲ್ಲ, ಅವರ ಕಂಪೆನಿಗಳ ಅಭಿವೃದ್ಧಿಯನ್ನು ಗಮನಿಸಿದಾ­ಗಲೆಲ್ಲ ಈ ಅಪಾಯಕಾರಿ ಸನ್ನಿವೇಶ ಆ ಕ್ಷಣದ ಭಯ ಎಂದೆನ್ನಿಸುತ್ತದೆ. ಇವರೆಲ್ಲ ಪ್ರತಿಯೊಂದು ಬಾರಿಯೂ ಬೆಳವಣಿಗೆಯ ಗುರಿಯನ್ನು ಪುನರ್‌ಸ್ಥಾಪನೆ ಮಾಡುತ್ತಲೇ ಮುಂದಕ್ಕೆ ಹೆಜ್ಜೆ ಹಾಕುತ್ತಿ­ರುತ್ತಾರೆ. ಸ್ಟಾರ್ಟ್‌ಅಪ್‌ ಆಗಿದ್ದಾಗ ಅವರ ಗುರಿ 100 ಮಿಲಿಯನ್‌ ಡಾಲರ್‌ ಆಗಿರುತ್ತದೆ. ಆ ಗುರಿ ತಲುಪಲು ಸಾಧ್ಯ ಎಂದು ಅರಿವಾದ ಕೂಡಲೇ ಅವರು 250 ಮಿಲಿಯನ್‌ ಡಾಲರ್‌ ಬಂಡವಾಳ ಹುಡುಕಿಕೊಂಡು ಬಂದು, ಕಂಪೆನಿಯನ್ನು ಬೃಹತ್‌ ಆಗಿ ಬೆಳೆಸಿಬಿಡುತ್ತಾರೆ. ಇನ್ನೇನು ಇವರ ಕಂಪೆನಿ 250 ಮಿಲಿಯನ್‌ ಡಾಲರ್‌ ಬೆಲೆಯುಳ್ಳದ್ದಾ­ಯಿತಲ್ಲಾ ಎಂದುಕೊಳ್ಳುತ್ತಿರುವಾಗಲೇ, ಅದು ಒಂದು ಬಿಲಿಯನ್‌ ಡಾಲರ್‌ ಕಂಪೆನಿಯಾಗಿ ಬೆಳೆದು ನಿಂತಿರುತ್ತದೆ. ಇಲ್ಲಿ ಕೆಲಸ ಮಾಡುವುದು ಕಂಪೆನಿಯ ಸಂಸ್ಥಾಪಕರ ನಂಬಿಕೆ, ಛಲ ಮತ್ತು ಶ್ರದ್ಧೆ ಮಾತ್ರ. ಅವರ ಕನಸು- ಮನಸಿನಲ್ಲೂ ‘ನಿರ್ಗಮನ ಯೋಜನೆ' ಎಂಬ ಪದವೂ ಸುಳಿಯುವುದಿಲ್ಲ.

ಇನ್ನೊಂದೆಡೆ ಕೆಲವು ಉದ್ಯಮಶೀಲರು ಅವರು ಸ್ಥಾಪಿಸಿದ ಕಂಪೆನಿ ಇನ್ನು ಸಣ್ಣ ಪ್ರಮಾಣದಲ್ಲಿ ಇರುವಾಗಲೇ ನಿರ್ಗಮನದ ಬಗ್ಗೆ ದೀರ್ಘಾ­ಲೋಚನೆ ಶುರು ಮಾಡಿಬಿಡುತ್ತಾರೆ. ನಿಮ್ಮ ಮುಂದಿರುವ ಬೃಹತ್‌ ಅವಕಾಶದ ಕಡೆ ಗಮನ ಹರಿಸುವ ಬದಲು, ಮುಂದಿರುವ ಸಣ್ಣಪುಟ್ಟಅಪಾಯದ ಕುರಿತು ಯೋಚನೆ ಮಾಡಲಾರಂಭಿ­ಸಿದರೆ ಅದು ಒಳ್ಳೆಯ ಸೂಚನೆಯಲ್ಲ. ನೀವು ಸ್ಥಾಪಿಸಿದ ಕಂಪೆನಿ ಸರಿಯಾದ ಹಾದಿಯಲ್ಲಿ, ನಿರೀಕ್ಷಿಸಿದಂತೆಯೇ ಹೆಜ್ಜೆ ಹಾಕುತ್ತಿದ್ದರೆ ನೀವು ಸರಿಯಾದ ಹೆಜ್ಜೆಗಳನ್ನೇ ಇಟ್ಟಿದ್ದೀರಿ ಎಂದು ತಿಳಿದುಕೊಳ್ಳುವುದೂ ಸರಿಯಲ್ಲ. ಯಾವುದೇ ಒಂದು ಉದ್ಯಮ ಸ್ಥಾಪಿಸಿದಾಗ ಅಥವಾ ಹೊಸ ಪ್ರಯತ್ನ ಮಾಡಿದಾಗ ಅದರಲ್ಲಿ ಆಗಾಗ ‘ರಿಸ್ಕ್‌' ಕಾಣಿಸಿಕೊಳ್ಳುತ್ತಲೇ ಇರುತ್ತದೆ. ನೀವು ಆ ಅಪಾ­ಯದ ಸ್ಪರ್ಶದಿಂದ ಮತ್ತಷ್ಟುಗಟ್ಟಿಯಾಗಬೇಕೇ ಹೊರತು, ಅದಕ್ಕೆ ಹೆದರಿ ಕರಗಿ ಹೋಗಬಾರದು. ಅಪಾಯವನ್ನು ಪ್ರತೀ ಹಂತದಲ್ಲಿ ಸ್ವಾಗತಿಸಲು ಸಿದ್ಧವಾಗಿರಬೇಕು.

ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿ ಕೈಮೀರಿ ಹೋದಾಗ ನಿರ್ಗಮನವಲ್ಲದೇ ಬೇರೇನೂ ಹಾದಿಯೂ ನಿಮ್ಮ ಮುಂದೆ ಇರುವುದಿಲ್ಲ. ನೀವೇ ಸ್ಥಾಪಿಸಿದ ಕಂಪೆನಿಯನ್ನು ಶತಾಯಗತಾಯ ಉಳಿಸಿಕೊಂಡು, ಅಭಿವೃದ್ಧಿ ಪಡಿಸುವ ಮನಸ್ಸು ನಿಮಗಿದ್ದರೂ ಹೊರಗಿನ, ನಿಮ್ಮ ನಿಯಂತ್ರಣದಲ್ಲಿ ಇಲ್ಲದ ಒತ್ತಡಗಳ ಪರಿಣಾಮವಾಗಿ ನೀವು ಕೈಚೆಲ್ಲಿ ಹೊರಹೋಗಬೇಕು ಎಂದಾದಲ್ಲಿ ನಿರ್ಗಮನ ಯೋಜನೆ ಸಿದ್ಧಪಡಿಸಿಕೊಳ್ಳಿ. ನನ್ನದೇ ಉದಾಹರಣೆ ತೆಗೆದುಕೊಂಡರೆ ನನ್ನ ಉದ್ಯಮಶೀಲ ನಡೆಯ­ಲ್ಲಿಯೇ ನಾನು ಆ ಪರಿಸ್ಥಿತಿಯನ್ನು ಎದುರಿಸಿ ಹೊರ­ನಡೆದದ್ದನ್ನು ಹಿಂದಿನ ಅಧ್ಯಾಯಗಳಲ್ಲಿ ವಿವರಿಸಿದ್ದೇನೆ. ಹಾಗೇನಾದರೂ ನೀವು ಕೂಡ ನಿರ್ಗಮಿಸಿದರೆ, ಕುಸಿದು ಕುಳಿತುಕೊಳ್ಳಬೇಡಿ. ಬದಲಾಗಿ ನಿಮ್ಮ ಮೊದಲ ಪ್ರಯತ್ನದಲ್ಲಿ ಕಲಿತ ಅನುಭವದ ಪಾಠವನ್ನೇ ಆಧಾರವಾಗಿಟ್ಟುಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗಿ. 

ಕೈಬಿಟ್ಟು ಹೋದ ಅವಕಾಶ ಮತ್ತು ಹೊಸ ಪ್ರಯತ್ನದ ನಡುವೆ ಒಂದಿಷ್ಟುಸಮಯ ವ್ಯಯ ಮಾಡಿ. ಆದರೆ, ಕಳೆದುಕೊಂಡ ನೋವಿನಲ್ಲಿಯೇ ದೀರ್ಘ ಸಮಯವನ್ನು ವ್ಯರ್ಥ ಮಾಡಬೇಡಿ. ಹಾಗೆ ವ್ಯರ್ಥ ಮಾಡುತ್ತಾ ನಿಮ್ಮ ಮುಂದಿರುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಉದ್ಯಮಶೀಲ ಪ್ರಪಂಚದಲ್ಲಿನ ಅನಿವಾರ್ಯ ನಿರ್ಗಮನಗಳು ಯಾವಾಗಲೂ ಹೆಚ್ಚಿನ ಮತ್ತು ಉಪಯುಕ್ತವಾದ ಪಾಠವನ್ನೇ ನಿಮಗೆ ಕಲಿಸಿಕೊಟ್ಟಿರುತ್ತವೆ. ಆ ಪಾಠ­ವನ್ನು ಅರ್ಥ ಮಾಡಿಕೊಂಡು, ಮುಂದಿನ ಪ್ರಯ­ತ್ನ­­­ದಲ್ಲಿ ಅಳವಡಿಸಿಕೊಳ್ಳುವ ದೊಡ್ಡ ಮನಸ್ಸು ನಿಮ್ಮದಾಗಿರಬೇಕಷ್ಟೆ. 

ನಿರ್ಗಮನದ ಬಗ್ಗೆ ಮಾತನಾಡುವ ಸಂದರ್ಭ­ದಲ್ಲಿ ಇನ್ನೊಂದು ಸನ್ನಿವೇಶದ ನೆನಪಾಗುತ್ತದೆ. ಅನಿವಾರ್ಯ ಕಾರಣಗಳಿಂದ ನೀವು ನಿಮ್ಮದೇ ಕಂಪೆನಿಯಿಂದ ನಿರ್ಗಮಿಸಿದ್ದೀರಿ ಎಂದುಕೊಳ್ಳಿ. ಹೀಗೆ ನಿರ್ಗಮನದ ನಿರ್ಧಾರ ಕೈಗೊಂಡ ತಕ್ಷಣ ನೀವು ಚಿಂತಿಸಬೇಕು ಎಂದೇನಿಲ್ಲ. ಅಕಸ್ಮಾತ್‌ ನೀವು ಆ ಕಂಪೆನಿಯಲ್ಲಿ ಇದ್ದಷ್ಟುದಿನ ಶ್ರದ್ಧೆ, ಪ್ರಾಮಾ­ಣಿಕವಾಗಿ ಅದರ ಶ್ರೇಯಕ್ಕಾಗಿ ಪ್ರಯತ್ನ ಮಾಡಿ­ದ್ದರೆ, ನಿಮ್ಮ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಅದೇ ಕಂಪೆನಿ ನಿಮ್ಮನ್ನು ಕಾಡಿಬೇಡಿ ಮತ್ತೆ ನಿಮಗೇ ನಾಯಕ ಪಟ್ಟಕಟ್ಟಿಕೊಡುವ ಸಾಧ್ಯತೆಗಳನ್ನು ಕೂಡ ಅಲ್ಲಗಳೆ­ಯಲು ಆಗುವುದಿಲ್ಲ! ಹೀಗಾಗಿ ರಿಸ್ಕ್‌ ತೆಗೆದು­ಕೊಳ್ಳುವ ಧೈರ್ಯ ಯಾವತ್ತೂ ಇರಲಿ.

 

Follow Us:
Download App:
  • android
  • ios