Asianet Suvarna News Asianet Suvarna News

26ರಲ್ಲಿ ಉಳಿಯುವುದು 6 ಬ್ಯಾಂಕ್ ಮಾತ್ರ

ಬ್ಯಾಂಕಿಂಗ್‌ ವಲಯವನ್ನು ರೋಗಗ್ರಸ್ತ ಸ್ಥಿತಿಯಿಂದ ಹೊರ ತರುವ ಮತ್ತು ಅನುತ್ಪಾದಕ ಆಸ್ತಿ, ವಸೂಲಿಯಾಗದ ಸಾಲದ ಹೊರೆಯಿಂದ ಕುಸಿಯುವುದನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಲಾಗುತ್ತಿದೆ. ಇದೀಗ ಎಸ್‌ಬಿಐನೊಂದಿಗೆ ದೇಶದ ಪ್ರಮುಖ 6 ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಆರಂಭವಾಗಿದೆ. ಇದು ಹೇಗೆ ನಡೆಯುತ್ತದೆ? ಇದರಿಂದ ಏನು ಪ್ರಯೋಜನ? ಬ್ಯಾಂಕ್‌ ನೌಕರರು ಇದನ್ನೇಕೆ ವಿರೋಧಿಸುತ್ತಿದ್ದಾರೆ ಮುಂತಾಗಿ ಬ್ಯಾಂಕ್‌ ವಿಲೀನ ಪ್ರಕ್ರಿಯೆಯ ಕುರಿತ ಮಾಹಿತಿ ಇಲ್ಲಿದೆ.

article on merger of big banks in india

ಕಳೆದ ಶತಮಾನದ 70-80ರ ದಶಕದ ಬ್ಯಾಂಕ್‌ ರಾಷ್ಟ್ರೀಕರಣದ ಬಳಿಕ ದೇಶದ ಸಾರ್ವಜನಿಕ ವಲಯದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅತ್ಯಂತ ಮಹತ್ವದ ವಿದ್ಯಮಾನವೊಂದು ಸದ್ಯ ಘಟಿಸುತ್ತಿದೆ. ಅದು- ಬ್ಯಾಂಕುಗಳ ವಿಲೀನ. ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐನಲ್ಲಿ ನಮ್ಮ ರಾಜ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಸೇರಿದಂತೆ ಒಟ್ಟು ಆರು ಬ್ಯಾಂಕುಗಳು ವಿಲೀನಗೊಳ್ಳುತ್ತಿವೆ. ಏ.1ಕ್ಕೆ ವಿಲೀನ ಅಧಿಕೃತಗೊಳ್ಳಲಿದ್ದು, ಅಂದಿನಿಂದಲೇ ವೀಲೀನವಾಗುವ ಸಹವರ್ತಿ ಬ್ಯಾಂಕುಗಳು ತಮ್ಮ ಸ್ವತಂತ್ರ ಅಸ್ತಿತ್ವ ಕಳೆದುಕೊಳ್ಳಲಿವೆ. 

ಹಣಕಾಸು ಮಾರುಕಟ್ಟೆಯಲ್ಲಿ ದುರ್ಬಲ ಬ್ಯಾಂಕುಗಳನ್ನು, ಬಲಿಷ್ಠ ಬ್ಯಾಂಕುಗಳೊಂದಿಗೆ ವಿಲೀನ ಮಾಡುವ ಮೂಲಕ ಬ್ಯಾಂಕಿಂಗ್‌ ವಲಯವನ್ನು ಸದೃಢಗೊಳಿಸುವುದು, ಅಡಮಾನ ಸಾಲ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಸರಿಪಡಿಸುವುದು, ಅನುತ್ಪಾದಕ ಆಸ್ತಿ ಮತ್ತು ವಸೂಲಿಯಾಗದ ಸಾಲದ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರಲ್ಲಿ ಈ ಬ್ಯಾಂಕ್‌ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಕೆಲವು ಬ್ಯಾಂಕ್‌ ಉದ್ಯೋಗಿಗಳ ಸಂಘಟನೆಗಳ ವಿರೋಧದ ಹೊರತಾಗಿಯೂ ಎಸ್‌ಬಿಐನೊಂದಿಗೆ ದೇಶದ ಪ್ರಮುಖ ಐದು ವಿವಿಧ ಸ್ಟೇಟ್‌ ಬ್ಯಾಂಕುಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್‌ ವಿಲೀನ ಮಾಡಲಾಗುತ್ತಿದೆ.

ಸಾರ್ವಜನಿಕ ಬ್ಯಾಂಕಿಂಗ್‌ ವಲಯದಲ್ಲಿ ಒಂದು ಪ್ರದೇಶದಲ್ಲಿ ಹಲವು ಬ್ಯಾಂಕುಗಳಿದ್ದು, ತಮ್ಮೊಳಗೇ ಪೈಪೋಟಿಗಿಳಿದು, ಯಾವೊಂದು ಬ್ಯಾಂಕೂ ಸದೃಢವಾಗಿ ಬೆಳೆಯದ ಸ್ಥಿತಿ ಸದ್ಯಕ್ಕಿದೆ. ಹಾಗಾಗಿ ಈಗಾಗಲೇ ಹಲವು ಸಾರ್ವಜನಿಕ ವಲಯದ ಬ್ಯಾಂಕುಗಳು ತೀವ್ರ ಮುಗ್ಗಟ್ಟಿಗೆ ಸಿಲುಕಿ ರೋಗಗ್ರಸ್ತವಾಗಿವೆ. ಇದು ದೀರ್ಘಾವಧಿಯಲ್ಲಿ ಇನ್ನಷ್ಟುಅಪಾಯ ತಂದೊಡ್ಡಲಿದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕ ಬ್ಯಾಂಕಿಂಗ್‌ ವಲಯದಲ್ಲಿ ಕಡಿಮೆ ಪ್ರತಿಸ್ಪರ್ಧಿಗಳು ಇರುವಂತೆ ನೋಡಿಕೊಳ್ಳುವುದು ಹಾಗೂ ಕಡಿಮೆ ಪೈಪೋಟಿ, ಹೆಚ್ಚು ವಹಿವಾಟಿನ ಮೂಲಕ ಆ ವಲಯದ ಬ್ಯಾಂಕುಗಳನ್ನು ಹೆಚ್ಚು ಬಲಿಷ್ಠಗೊಳಿಸುವುದು ಅನಿವಾರ್ಯ ಎಂಬುದು ಕೇಂದ್ರ ಸರ್ಕಾರದ ಅಂಬೋಣ.

ದೇಶದಲ್ಲಿ ಈಗಿರುವ 26 ಸಾರ್ವಜನಿಕ ವಲಯದ ದುರ್ಬಲ ಬ್ಯಾಂಕುಗಳನ್ನು 6 ಪ್ರಮುಖ ಬ್ಯಾಂಕುಗಳಲ್ಲಿ ವಿಲೀನಗೊಳಿಸುವ ಯೋಚನೆ ಕೇಂದ್ರ ಸರ್ಕಾರದ್ದು. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ, ಬ್ಯಾಂಕ್‌ ಆಫ್‌ ಇಂಡಿಯಾಗಳನ್ನು ಪ್ರಮುಖ ಬ್ಯಾಂಕುಗಳನ್ನಾಗಿ ಉಳಿಸಿಕೊಂಡು, ಅವುಗಳಡಿ ಇತರ ಸಿಂಡಿಕೇಟ್‌ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌, ದೇನಾ ಬ್ಯಾಂಕ್‌, ವಿಜಯಾ ಬ್ಯಾಂಕ್‌, ಆಂಧ್ರ ಬ್ಯಾಂಕ್‌ ಸೇರಿದಂತೆ ಸುಮಾರು 26 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನ ಮಾಡಲಾಗುತ್ತದೆ. ಇದೀಗ ಮೊದಲ ಹಂತದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಆರು ಬ್ಯಾಂಕ್‌ ವಿಲೀನ ಪ್ರಕ್ರಿಯೆ ಆರಂಭವಾಗಿದೆ.

ವಿಲೀನದ ನಂತರ?
ಜಗತ್ತಿನ ಟಾಪ್‌ 50 ಬೃಹತ್‌ ಬ್ಯಾಂಕುಗಳಲ್ಲಿ ಎಸ್‌ಬಿಐ ಸ್ಥಾನ ಪಡೆಯಲಿದೆ
ದೇಶದ ಸಾಲ ಮತ್ತು ಠೇವಣಿಯಲ್ಲಿ ಎಸ್‌ಬಿಐನ ಪಾಲು ಶೇ.25ಕ್ಕಿಂತ ಹೆಚ್ಚಲಿದೆ
ಎಸ್‌ಬಿಐನ ಒಟ್ಟು ಆಸ್ತಿ ಮೌಲ್ಯ 23 ಲಕ್ಷ ಕೋಟಿಯಿಂದ 37 ಲಕ್ಷ ಕೋಟಿಗೆ ಏರಲಿದೆ
ಎಸ್‌ಬಿಐನ ಶಾಖೆಗಳ ಸಂಖ್ಯೆ 22500ಕ್ಕೂ, ಎಟಿಎಂಗಳ ಸಂಖ್ಯೆ 58000ಕ್ಕೂ ಏರಲಿದೆ
ಎಸ್‌ಬಿಐನ ಗ್ರಾಹಕರ ಸಂಖ್ಯೆ 50 ಕೋಟಿ ದಾಟಲಿದೆ

ಯಾವ ಬ್ಯಾಂಕುಗಳು ಯಾವುದರಲ್ಲಿ ವಿಲೀನ ಆಗಲಿವೆ? ಆಗ ಮಾತೃ ಬ್ಯಾಂಕಿನ ಆಸ್ತಿ ಮೌಲ್ಯ ಎಷ್ಟಾಗಲಿವೆ?
ಸದ್ಯ ಆರು ಬ್ಯಾಂಕುಗಳು ಎಸ್‌ಬಿಐನಲ್ಲಿ ವಿಲೀನವಾಗುತ್ತಿವೆ. ಕೇಂದ್ರ ಸರ್ಕಾರದ ಗುರಿಯಂತೆ ದೇಶದಲ್ಲಿ ಆರು ಬೃಹತ್‌ ರಾಷ್ಟ್ರೀಕೃತ ಬ್ಯಾಂಕುಗಳು ಮಾತ್ರ ಇರಬೇಕು ಎಂದಾದರೆ ಇನ್ನೂ 20 ಬ್ಯಾಂಕುಗಳು 5 ಬ್ಯಾಂಕುಗಳಲ್ಲಿ ವಿಲೀನವಾಗಬೇಕಾಗುತ್ತದೆ. ಯಾವ್ಯಾವ ಬ್ಯಾಂಕುಗಳನ್ನು ಯಾವುದರಲ್ಲಿ ವಿಲೀನಗೊಳಿಸಬಹುದು, ಆಗ ವಿಲೀನಗೊಳಿಸಿಕೊಂಡ ಮಾತೃಬ್ಯಾಂಕಿನ ಆಸ್ತಿ ಮೌಲ್ಯ ಎಷ್ಟಾಗುತ್ತದೆ ಎಂಬುದರ ಅಂದಾಜು ಚಿತ್ರಣ ಇಲ್ಲಿದೆ. ಸದ್ಯ ಯಾವ್ಯಾವ ಬ್ಯಾಂಕಿನ ಆಸ್ತಿ ಮೌಲ್ಯ, ವಾರ್ಷಿಕ ಲಾಭ ಹಾಗೂ ಸುಸ್ತಿ ಸಾಲದ ಬಾಕಿ ಎಷ್ಟಿದೆ ಎಂಬುದೂ ಈ ಕೋಷ್ಟಕದಲ್ಲಿದೆ. 

ಬ್ಯಾಂಕ್‌ ನೌಕರರ ಕೆಲಸ ಉಳಿಯುತ್ತಾ?
220ಕ್ಕೂ ಹೆಚ್ಚು ಕಚೇರಿಗಳು ಮುಚ್ಚುವು​​ದರಿಂದ ಸಹಜವಾಗೇ ನೌಕರರ ಕೆಲಸದ ಮೇಲೂ ತೂಗುಗತ್ತಿ ನೇತಾಡುತ್ತಿದೆ. ಆದರೆ, ಸಹವರ್ತಿ ಬ್ಯಾಂಕುಗಳ ಪೂರ್ಣಾವಧಿಯ ಸಿಬ್ಬಂದಿಗೆ ಯಾವುದೇ ಅಭದ್ರತೆ ಬೇಡ ಎಂದು ಎಸ್‌ಬಿಐ ಹೇಳಿದೆ. ಅದರ ಜೊತೆಗೇ, ಸ್ವಯಂ ನಿವೃತ್ತಿ ಯೋಜನೆಯನ್ನು ವಿಸ್ತರಿಸ​ಲಾಗಿದೆ. ಅದರರ್ಥ- ಬೇರೆ ಸ್ಥಳಕ್ಕೆ ಹೋಗಲು ಬಯಸ ದವರು ಅಥವಾ ಹೊಸ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸದವರು ನಿವೃತ್ತಿ ಪಡೆಯ ಬಹುದು ಎಂಬುದೇ ಆಗಿದೆ! ಕೇವಲ ಕಚೇರಿ ಗಳನ್ನು ಮುಚ್ಚುವು​ ದರಿಂದಲೇ ಸುಮಾರು 1500 ಉದ್ಯೋಗಿಗಳನ್ನು ಪರ್ಯಾ​ಯ ಸ್ಥಳಕ್ಕೆ ನಿಯೋಜಿಸ​ಬೇಕಾಗುತ್ತದೆ.

ವಿಲೀನ ಹೇಗೆ ನಡೆಯುತ್ತದೆ? ಪೂರ್ಣಗೊಳ್ಳೋದ್ಯಾವಾಗ?
ಮಾರ್ಚ್ 25ರಿಂದಲೇ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಆರಂಭ ವಾಗಲಿದೆ. ಎಸ್‌ಬಿಐನಲ್ಲಿ ವಿಲೀನವಾಗುತ್ತಿರುವ ಎಲ್ಲಾ ಸಹವರ್ತಿ ಬ್ಯಾಂಕುಗಳಲ್ಲಿ ಸಾಲ ನೀಡಿಕೆ ಸೇರಿದಂತೆ ನಿತ್ಯದ ವಹಿವಾಟು ಹೊರತುಪಡಿಸಿದ ಎಲ್ಲಾ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಏಪ್ರಿಲ್‌ 1ರವರೆಗೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಮಾರ್ಚ್ 31ಕ್ಕೆ ಮುಗಿಯುವ ಆರ್ಥಿಕ ವರ್ಷದ ಎಲ್ಲಾ ಆಯವ್ಯಯದ ಮುಂಗಡಪತ್ರವನ್ನು ಪರಿಶೀಲಿಸಿ, ಅಂತಿಮಗೊಳಿಸಲಾಗುತ್ತದೆ. ಬ್ಯಾಂಕುಗಳ ಸಂಪೂರ್ಣ ಆಸ್ತಿಪಾಸ್ತಿ, ಹಣಕಾಸು ಸ್ಥಿತಿಗತಿ, ಉದ್ಯೋಗಿಗಳ ಮಾಹಿತಿಯನ್ನು ಕ್ರೋಡೀಕರಿಸಿ, ಏ.1ರಿಂದ ಉದ್ಯೋಗಿಗಳೂ ಸೇರಿದಂತೆ ಎಲ್ಲವನ್ನೂ ಎಸ್‌ಬಿಐಗೆ ಸೇರಿದ್ದು ಎಂದು ಪರಿಗಣಿಸಲಾಗುತ್ತದೆ. ಷೇರುಗಳು, ಹೂಡಿಕೆ ಸೇರಿದಂತೆ ಸಹವರ್ತಿ ಬ್ಯಾಂಕುಗಳ ಎಲ್ಲಾ ವ್ಯವಹಾರವೂ ಎಸ್‌ಬಿಐ ಹೆಸರಿನಲ್ಲೇ ನಡೆಯುತ್ತದೆ. ಅಂದರೆ; ವಿಲೀನವಾಗುವ ಬ್ಯಾಂಕುಗಳು ತಮ್ಮ ಸ್ವತಂತ್ರ ಅಸ್ತಿತ್ವ ಕಳೆದುಕೊಳ್ಳಲಿವೆ. ಏಪ್ರಿಲ್‌ 24ರ ಹೊತ್ತಿಗೆ ಈ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಗ್ರಾಹಕರಿಗೆ ಅನುಕೂ​ಲ ಇಲ್ಲ; ಆದರೆ ಸ್ವಲ್ಪ ಕಾಲ ತೊಂದರೆ
ಷೇರುಗಳು, ವಿಮಾ ಯೋಜನೆಗಳು ಸೇರಿದಂತೆ ವಿವಿಧ ಗ್ರಾಹಕ ಉತ್ಪನ್ನಗಳು, ಸಾಲ, ಠೇವಣಿ ಮುಂತಾದ ಬ್ಯಾಂಕಿ ಂಗ್‌ ಮತ್ತು ಬ್ಯಾಂಕೇತರ ವ್ಯವಹಾರಗಳಲ್ಲಿ ಗ್ರಾಹಕರಿಗೆ ಅನನುಕೂ​ಲವಾಗುಂತಹ ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ, ಈ ವಿಲೀನ ಪ್ರಕ್ರಿಯೆಯಿಂದಾಗಿ ಕೆಲವು ವಾರಗಳ ಕಾಲ ಗ್ರಾಹಕರ ಸಾಲ ಮಂಜೂರಾತಿ ಯಂತಹ ಆಡಳಿತಾತ್ಮಕ ಪ್ರಕ್ರಿಯೆಗಳು ವಿಳಂಬವಾಗಲಿವೆ. ಅಲ್ಲದೆ, ಒಂದೇ ಬೀದಿ, ರಸ್ತೆ, ಕಟ್ಟಡ ಸಂಕೀರ್ಣಗಳಲ್ಲಿ ಎಸ್‌ಬಿಐ ಕಚೇರಿಗಳೂ ಇದ್ದು, ಇತರ ಸಹವರ್ತಿ ಬ್ಯಾಂಕುಗಳ ಕಚೇರಿಗಳೂ ಇದ್ದರೆ, ಅಂತಹ ಕಡೆ ಕೆಲವು ಶಾಖೆಗಳನ್ನು, ಕಚೇರಿಗಳನ್ನು ಮುಚ್ಚುವುದರಿಂದ ಗ್ರಾಹಕರಿಗೆ ಕೆಲಮಟ್ಟಿಗೆ ಅನನುಕೂಲವಾಗಲಿದೆ. ಆದರೆ, ಅದಕ್ಕಾಗಿ ಗ್ರಾಹಕರು ಅಲೆದಾಡಬೇಕಾದ ಪ್ರಮೇಯವಿ​ರುವುದಿಲ್ಲ. ತಾನೇತಾನಾಗಿ ಅವರ ಖಾತೆಗಳು ಸಮೀಪದ ಮತ್ತೊಂದು ಶಾಖೆಯಲ್ಲಿ ವಿಲೀನವಾಗುತ್ತವೆ.

article on merger of big banks in india

epaper.kannadaprabha.in

Follow Us:
Download App:
  • android
  • ios