Fact Check: ಬಿಸಿಲಿನಿಂದ ಸಿಂಹದ ಮರಿ ಕಾಪಾಡಿದ ಆನೆ ಫೋಟೋ ವೈರಲ್, ಅಷ್ಟಕ್ಕೂ ಸತ್ಯವೇನು?
ಆನೆಯೊಂದು ಸಿಂಹದ ಜೊತೆಗೆ ನಡೆದುಕೊಂಡು ಹೋಗುತ್ತಿರುವ, ಸಿಂಹದ ಮರಿಯನ್ನು ತನ್ನ ಸೊಂಡಿಲಿನ ಕೆಳಗೆ ಹಿಡಿದಿರುವ ಚಿತ್ರ 2018ರಲ್ಲಿ ವೈರಲ್ ಆಗಿತ್ತು
Fact Check: ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚಿತ್ರಗಳು ವೈರಲ್ ಆಗುತ್ತವೆ. ನೆಟ್ಟಿಗರು ತಮಗೆ ಇಷ್ಟವಾದ, ಮನಸ್ಸಿಗೆ ಮುದ ನೀಡುವ ವಿಡಿಯೋ, ಚಿತ್ರಗಳನ್ನು ಶೇರ್ ಮಾಡುವುದು ಸರ್ವೇ ಸಾಮಾನ್ಯ. ನೆಟ್ಟಿಗರ ಇಷ್ಟವಾಗುವ, ಸಾಮಾಜಿಕ ಸಂದೇಶಗಳುಳ್ಳ ಕೆಲವೊಂದು ಚಿತ್ರಗಳಂತೂ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೆ. ಇಂಥಹ ಚಿತ್ರಗಳು ಕೋಟ್ಯಂತರ ಲೈಕ್ಸ್ ಹಾಗೂ ಶೇರ್ ಪಡೆಯುತ್ತವೆ. ಹೀಗೆ ಆನೆಯೊಂದು ಸಿಂಹದ ಜೊತೆಗೆ ನಡೆದುಕೊಂಡು ಹೋಗುತ್ತಿರುವ, ಸಿಂಹದ ಮರಿಯನ್ನು ತನ್ನ ಸೊಂಡಿಲಿನ ಕೆಳಗೆ ಹಿಡಿದಿರುವ ಚಿತ್ರ 2018ರಲ್ಲಿ ವೈರಲ್ ಆಗಿತ್ತು.
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಚಿತ್ರವನ್ನು "ಈ ಶತಮಾನದ ಅತ್ಯುತ್ತಮ ಫೋಟೋ ಎಂದು ಪರಿಗಣಿಸಲಾಗಿದೆ" ಎಂದು ವಾಟ್ಸಾಪ್ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಈ ಚಿತ್ರವನ್ನು ಡಿಜಿಟಲ್ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದ್ದು ಪ್ರಾಣಿಗಳ ವೀಡಿಯೊಗಳು ಮತ್ತು ಛಾಯಾಚಿತ್ರಗಳನ್ನು ಹಂಚಿಕೊಳ್ಳುವ ವೇದಿಕೆಯಾದ ಕ್ರುಗರ್ ಸೈಟಿಂಗ್ಸ್, ದಕ್ಷಿಣ ಆಫ್ರಿಕಾದ ಕ್ರುಗರ್ ನ್ಯಾಷನಲ್ ಪಾರ್ಕ್ (www.latestsightings.com/) ಮೊದಲು ಶೇರ್ ಮಾಡಿತ್ತು. ಅಲ್ಲದೇ ಈ ಚಿತ್ರವನ್ನು ಏಪ್ರಿಲ್ ಫೂಲ್ ಜೋಕಾಗಿ ರಚಿಸಲಾಗಿತ್ತು.
ಚಿತ್ರವನ್ನು ಡಿಜಿಟಲ್ ಆಗಿ ಬದಲಾಯಿಸಲಾಗಿದೆ ಎಂದು ಕೆಲವರು ತಿಳಿದಿದ್ದರೂ, ಇತರರು ಅದನ್ನು ಅಧಿಕೃತ ಎಂದು ನಂಬಿದ್ದರು. ಇನ್ನೇನು 2 ದಿನದಲ್ಲಿ ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ತಿಂಗಳು ಆರಂಭವಾಗಲಿದೆ. ಏಪ್ರಿಲ್ 1 ರಂದು ಒಬ್ಬರಿಗೊಬ್ಬರು ಫೂಲ್ ಮಾಡಲು ನೆಟ್ಟಿಗರು ಮತ್ತೆ ಸಿದ್ದರಾದಂತೆ ತೋರುತ್ತಿದೆ. ಹೀಗಾಗಿಯೇ ಎರಡು ವರ್ಷ ಫೂಲ್ ಮಾಡಿದ ಈ ಫೋಟೋ ಈಗ ಮತ್ತೆ ಸಾಮಾಜಿಕ ಜಾಲತಾಣ ಹಾಗೂ ಮೇಸೆಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿದೆ.
Claim: ಆನೆಯೊಂದು ಸಿಂಹದ ಜೊತೆಗೆ ನಡೆದುಕೊಂಡು ಹೋಗುತ್ತಿರುವ ಚಿತ್ರವನ್ನು ಹಲವರು ಹಂಚಿಕೊಂಡಿದ್ದಾರೆ. ಜತೆಗೆ "ಇದು ಈ ಶತಮಾನದ ಅತ್ಯುತ್ತಮ ಫೋಟೋ ಎಂದು ಪರಿಗಣಿಸಲಾಗಿದೆ. ಒಂದು ಸಿಂಹಿಣಿ ಮತ್ತು ಅದರ ಮರಿ ಸವನ್ನಾವನ್ನು (ಮರಭೂಮಿ) ದಾಟುತ್ತಿದ್ದವು, ಆದರೆ ಶಾಖವು ವಿಪರೀತವಾಗಿತ್ತು ಮತ್ತು ಮರಿ ನಡೆಯಲು ಬಹಳ ಕಷ್ಟವಾಯಿತು. ಆನೆಯು ಮರಿ ಸಾಯುತ್ತದೆ ಎಂದು ಅರಿತು ತನ್ನ ಸೊಂಡಿಲಿನಲ್ಲಿ ಮರಿಯ ತಾಯಿಯ ಜತೆ ನಡೆಯುತ್ತ ನೀರಿನ ಕೊಳಕ್ಕೆ ಕೊಂಡೊಯ್ಯಿತು. ಮತ್ತು ನಾವು ಅವುಗಳನ್ನು ಕಾಡು ಪ್ರಾಣಿಗಳು ಎಂದು ಕರೆಯುತ್ತೇವೆ.ವಿನಾಕಾರಣ ಹೋರಾಡಿ ಸಾಯುತ್ತಿರುವ ಮನುಕುಲಕ್ಕೆ ಇದೊಂದು ದೊಡ್ಡ ಪಾಠ" ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ.
Fact Check (Claim Review): ಈ ಪೋಟೋವನ್ನು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದಾಗ ಕ್ರುಗರ್ ಸೈಟಿಂಗ್ಸ್‌ನ ಟ್ವೀಟ್‌ಗಳು ಲಭ್ಯವಾಗುತ್ತವೆ. 2018ರ ಏಪ್ರಿಲ್ 1 ರಂದು ಪೋಸ್ಟ್ ಕ್ರುಗರ್ ಸೈಟಿಂಗ್ಸ್ ಈ ಚಿತ್ರವನ್ನು ಪೋಸ್ಟ್ ಮಾಡಿತ್ತು. ಮಾರನೇ ದಿನವೇ ಇದು ಏಪ್ರಿಲ್ ಫೂಲ್ ಫೂಲ್ ಜೋಕಾಗಿ ರಚಿಸಲಾಗಿತ್ತು ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿತ್ತು. ಈ ಬಗ್ಗೆ ಕ್ರುಗರ್ ಸೈಟಿಂಗ್ಸ್‌ನ ಲೇಖನವನ್ನು ಇಲ್ಲಿ ಓದಬಹುದು.
ಇನ್ನು ಈ ಟ್ವೀಟಿನ ಬೆನ್ನತ್ತಿ ಹೋದಾಗ ಮತ್ತು ಈ ಟ್ವೀಟಿಗೆ ಬಂದಿರುವ ಕಮೆಂಟ್ಸ್ ಗಳನ್ನು ಗಮನಿಸಿದಾಗ ಇದು ಮಾರ್ಫಡ್ ಎಂದು ಸ್ಪಷ್ಟವಾಗಿದೆ. ಭಾರತ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿರುವ ಟ್ವೀಟ್‌ನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಈ ಫೋಟೋ ಬಗ್ಗೆ ಮತ್ತಷ್ಟು ಸರ್ಚ್ ಮಾಡಿದಾಗ ಕ್ರುಗರ್ ಸೈಟಿಂಗ್ಸ್‌ನ ಸಿಇಒ, ನಾದವ್ ಒಸ್ಸೆಂಡ್ರೈವರ್, ಆ ಸಮಯದಲ್ಲಿ ಮಾಡಿದ ಟ್ವೀಟ್ ಪತ್ತೆಯಾಗುತ್ತದೆ. ಚಿತ್ರವು ಎಡಿಟ್ ಮಾಡಲಾಗಿದೆ ಎಂದು ಸಿಇಓ ಏಪ್ರಿಲ್ 2 2018ರಂದು ದೃಢಪಡಿಸಿದ್ದರು.
ಒಟ್ಟಿನಲ್ಲಿ ಈ ಫೋಟೋ ಏಪ್ರಿಲ್ ಫೂಲ್‌ಗಾಗಿ ಮಾಡಿರುವ ಪೋಟೋ ಎಂಬುವುದು ವೇದ್ಯವಾಗುತ್ತದೆ. ಇದೀಗ ಮತ್ತೆ ಏಪ್ರಿಲ್ 1ನೇ ತಾರೀಖು ಸಮೀಪಿಸುತ್ತಿದ್ದು, ಮತ್ತಿದೇ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.