ಜುಲೈ 3ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ತನ್ನನ್ನು ಬಂಧಿಸಲು ಬಂದ 8 ಜನ ಪೊಲೀಸರ ಮೇಲೆ ಯದ್ವತದ್ವಾ ಗುಂಡು ಹಾರಿಸಿ ಹತ್ಯೆ ಮಾಡಿ, ಬಳಿಕ ಜು.10ರಂದು ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ಪಾತಕಿ ವಿಕಾಸ್‌ ದುಬೆ ಜೊತೆಗೆ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಗೆ ಸಂಬಂಧ ಇತ್ತು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಗ್ಯಾಂಗ್‌ಸ್ಟರ್‌ ದುಬೆ ಜೊತೆ ಸಂಬಿತ್‌ ಪಾತ್ರ ಈ ಹಿಂದೆ ನೃತ್ಯ ಮಾಡಿದ್ದರು ಎನ್ನಲಾದ ಫೋಟೋವೊಂದು ಭಾರಿ ವೈರಲ್‌ ಆಗುತ್ತಿದೆ.

 

ಕೆಲವು ವೆಬ್‌ಸೈಟ್‌ಗಳಲ್ಲೂ ಅದು ಪ್ರಕಟಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತೇಜೋವಧೆ ಮಾಡಲಾಗುತ್ತಿದೆ. ಆದರೆ, ‘ಅವರು ದುಬೆ ಜೊತೆ ಪಾತ್ರ ನೃತ್ಯ ಮಾಡಿದ್ದು ನಿಜವೇ’ ಎಂದು ರಿಯಾಲಿಟಿ ಚೆಕ್‌ ಮಾಡಿದಾಗ ಫೋಟೋ ಮಾರ್ಪಡಿಸಿರುವುದು ಗೊತ್ತಾಗಿದೆ.

ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಮೂಲ ಚಿತ್ರದಲ್ಲಿ ಸಂಬಿತ್‌ ಜಾಗದಲ್ಲಿ ವಿಕಾಸ್‌ ದುಬೆ ಬಂಟರು ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಜೂನ್‌ 29ರಂದು ನಡೆದ ಅಮರ್‌ ದುಬೆ ವಿವಾಹದಲ್ಲಿ ವಿಕಾಸ್‌ ದುಬೆ ತನ್ನ ಬಂಟರ ಜೊತೆ ನೃತ್ಯ ಮಾಡಿದ್ದ. ಸದ್ಯ ಅದೇ ಫೋಟೋವನ್ನು ಮಾರ್ಪಡಿಸಿ, ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ ಸಂಬಿತ್‌ ಪಾತ್ರಗೂ ಪಾತಕಿ ವಿಕಾಸ್‌ ದುಬೆಗೂ ನಂಟಿತ್ತು ಎಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್