ಕೊರೋನಾ ಲಾಕ್‌ಡೌನ್‌ ವೇಳೆ ತಂದೆಯನ್ನು ಕೂರಿಸಿಕೊಂಡು ಗುರುಗ್ರಾಮದಿಂದ ದರ್ಬಾಂಗ್‌ ವರೆಗೆ 1200 ಕಿ.ಮೀ ಸೈಕಲ್‌ ಸವಾರಿ ಮಾಡಿ ದೇಶಾದ್ಯಂತ ಮನೆಮಾತಾಗಿದ್ದ ಬಿಹಾರದ ಬಾಲಕಿ ಜ್ಯೋತಿ ಕುಮಾರಿ ಪಾಸ್ವನ್‌ ಅವರನ್ನು ಅತ್ಯಾಚಾರ ಮಾಡಿ, ಭೀಕರವಾಗಿ ಹತ್ಯೆಗೈಯಲಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಜ್ಯೋತಿ ಕುಮಾರಿ ಸೈಕಲ್‌ ಹಿಡಿದಿರುವ ಫೋಟೋ ಮತ್ತು ಸತ್ತು ಬಿದ್ದ ಬಾಲಕಿಯೊಬ್ಬಳ ಫೋಟೋವನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ. ಇದೀಗ ಟ್ವೀಟರ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ ವೈರಲ್‌ ಆಗುತ್ತಿದೆ.

 

ಆದರೆ ನಿಜಕ್ಕೂ ಜ್ಯೋತಿ ಪಾಸ್ವಾಸ್‌ ಅವರನ್ನು ಅತ್ಯಾಚಾರಗೈದು ಹತ್ಯೆ ಮಾಡಲಾಗಿದೆಯೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ, ಜ್ಯೋತಿ ಪಾಸ್ವಾನ್‌ ಆರೋಗ್ಯವಾಗಿದ್ದಾರೆ ಎಂಬುದು ಖಚಿತವಾಗಿದೆ.

ಇದರ ಸತ್ಯಾಸತ್ಯತೆಯನ್ನು ಸ್ವತಃ ಜ್ಯೋತಿ ಪಾಸ್ವಾನ್‌ ಅವರೇ ಮಾತನಾಡಿ ವೈರಲ್‌ ಸುದ್ದಿ ಸುಳ್ಳು ಎಂದು ಖಚಿತಪಡಿಸಿದ್ದಾರೆ. ಇನ್ನು ಮೃತದೇಹದ ಫೋಟೋ ಬಗ್ಗೆ ಪರಿಶೀಲಿಸಿದಾಗ ಅದು ಜ್ಯೋತಿ ಕುಮಾರಿ ಹೆಸರಿನ ಇನ್ನೊಬ್ಬ ಅಪ್ರಾಪ್ತ ಬಾಲಕಿಯ ಮೃತದೇಹ ಎಂಬುದು ಪತ್ತೆಯಾಗಿದೆ. ಬಿಹಾರದ ಹಣ್ಣಿನ ತೋಟವೊಂದರಲ್ಲಿ ಮಾವಿನ ಹಣ್ಣು ಕೀಳಲು ಹೋಗಿ ವಿದ್ಯುತ್‌ ತಗುಲು ಬಾಲಕಿ ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಅದರ ಹೊರತಾಗಿ ಅತ್ಯಾಚಾರ ಅಥವಾ ಕೊಲೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.

- ವೈರಲ್ ಚೆಕ್