‘ಮಾಲ್ಗುಡಿ ಡೇಸ್‌’ ಎಂಬುದು ಹೆಸರಷ್ಟೇ ಅಲ್ಲ, ನೆನಪು. ಆರ್‌ಕೆ ನಾರಾಯಣ್‌ ಕತೆಗಳನ್ನು ಶಂಕರ್‌ನಾಗ್‌ ‘ಮಾಲ್ಗುಡಿ ಡೇಸ್‌’ ಎಂಬ ಹೆಸರಿನಲ್ಲಿ ಕಟ್ಟಿಕೊಟ್ಟಿದ್ದು ಈಗಲೂ ಅನೇಕರ ಕಣ್ಣಮುಂದೆ ನಡೆಯುತ್ತಿದೆ. ಇಡೀ ಭಾರತದ ಜನರ ನೆನಪಲ್ಲಿ ಉಳಿದ ‘ಮಾಲ್ಗುಡಿ ಡೇಸ್‌’ ಎಂಬ ಹೆಸರಿನಲ್ಲಿ ಹೊಸ ಸಿನಿಮಾ ಶುರುವಾಗಿದೆ. ಅದರ ನಾಯಕ ವಿಜಯ್‌ ರಾಘವೇಂದ್ರ. ‘ಅಪ್ಪೆ ಟೀಚರ್‌’ ತುಳು ಚಿತ್ರ ನಿರ್ದೇಶಕ ಕಿಶೋರ್‌ ಮೂಡಬಿದ್ರೆ ಈ ಚಿತ್ರದ ನಿರ್ದೇಶಕ. ಈ ಮೂಲಕ ದಕ್ಷಿಣ ಕನ್ನಡದ ಮತ್ತೊಂದು ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಂತಾಗಿದೆ.

ಮಾಲ್ಗುಡಿ ಎಂಬ ಊರಿನಲ್ಲಿ ವರ್ತಮಾನದಲ್ಲಿ ನಡೆಯುವ ಕತೆಯೇ ಈ ಸಿನಿಮಾ. ವಿಜಯ್‌ ರಾಘವೇಂದ್ರ ವಿಭಿನ್ನ ರೀತಿಯಲ್ಲಿ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವುದು ನಿರ್ದೇಶಕರ ವಿವರಣೆ. ‘ಮಾಲ್ಗುಡಿ ಡೇಸ್‌’ ಚಿತ್ರದ ಪೋಸ್ಟರ್‌ ಲಾಂಚ್‌ ಆಗಿದೆ. ಪುನೀತ್‌ ರಾಜ್‌ಕುಮಾರ್‌ ಪೋಸ್ಟರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಅಪ್ಪೆ ಟೀಚರ್‌’ ಯಶಸ್ವೀ ತುಳು ಚಿತ್ರ ನಿರ್ಮಿಸಿದ್ದ ಕೆ. ರತ್ನಾಕರ ಕಾಮತ್‌ ಈ ಚಿತ್ರದ ನಿರ್ಮಾಪಕ. ಈ ಮಾಲ್ಗುಡಿ ಡೇಸ್‌ ಚಿತ್ರದಿಂದಾಗಿ ಮತ್ತೊಬ್ಬ ನಿರ್ಮಾಪಕ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದಂತಾಗಿದೆ. ‘ಅಪ್ಪೆ ಟೀಚರ್‌’ ಚಿತ್ರಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರೇ ಈ ಚಿತ್ರದಲ್ಲೂ ಕೆಲಸ ಮಾಡಲಿದ್ದಾರೆ. ಫೆಬ್ರವರಿ ಮಾಸಾಂತ್ಯಕ್ಕೆ ಶೂಟಿಂಗ್‌ ಶುರು. ‘ವಿಜಯ ರಾಘವೇಂದ್ರ ಕತೆ ಕೇಳಿ ಖುಷಿಯಾಗಿದ್ದಾರೆ. ಅವರ ಕೆರಿಯರ್‌ನಲ್ಲಿ ಇದು ಬೇರೆ ಥರದ ಸಿನಿಮಾ. ಉಳಿದ ಕಲಾವಿದವರನ್ನು ಇನ್ನಷ್ಟೇ ಆಯ್ಕೆ ಮಾಡಬೇಕಿದೆ’ ಎನ್ನುತ್ತಾರೆ ಕಿಶೋರ್‌.