ತುಳು ಚಿತ್ರರಂಗಕ್ಕೆ ರಂಗಿನ ಬಣ್ಣ ಹಚ್ಚುತ್ತಿರುವ ದಿಲ್ ರಂಗ್ ನಾಯಕ ವಿಜಿತ್ ಕೋಟ್ಯಾನ್
* ತುಳು ಚಿತ್ರರಂಗಕ್ಕೆ ರಂಗಿನ ಬಣ್ಣ ಹಚ್ಚುತ್ತಿರುವ ದಿಲ್ ರಂಗ್ ನಾಯಕ
* ಚಿಕ್ಕ ವಯಸ್ಸಿನಿಂದಲೇ ಬಣ್ಣದ ಲೋಕಕ್ಕೆ ಮೆರುಗು ತುಂಬುತ್ತಿರುವ ವಿಜಿತ್ ಕೋಟ್ಯಾನ್
* ನೃತ್ಯ ನಾಟಕದಲ್ಲಿ ಅಭಿನಯಿಸುತ್ತಲೇ ಹೆಸರು ಮಾಡಿದವರು
* ಸುಕನ್ಯ ಎನ್ ಆರ್ , ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ ಆಳ್ವಾಸ್ ಕಾಲೇಜು ಮೂಡಬಿದಿರೆ
ಬೆಂಗಳೂರು(ಏ. 03) ಕಲೆಗೆ (Art) ಕಲಾವಿದ ಹಚ್ಚುವ ಚಿತ್ತಾರ, ಹತ್ತಾರು ಜನರ ಮನ ಮುಟ್ಟಿದಾಗ ಒಬ್ಬ ಪರಿಪೂರ್ಣ ಕಲಾವಿದನಾಗಿ(Artist) ಮೂಡಿಬರಲು ಸಾಧ್ಯ. ಅಂತಹ ಅನೇಕ ಕಲಾವಿದರು ಪಾತ್ರಗಳಿಗೆ ಜೀವ ತುಂಬುತ್ತಾ ನಮ್ಮ ಸುತ್ತ ಮುತ್ತ ಎಲೆಮರೆ ಕಾಯಿಯಂತೆ ಬೆಳೆಯುತ್ತಿದ್ದಾರೆ, ಇಂತಹ ಯುವ ಕಲಾವಿದರಲ್ಲೊಬ್ಬರು ಬಂಟ್ವಾಳದ ವಿಜಿತ್ ಕೋಟ್ಯಾನ್.
ಇವರು ಮೂಲತಃ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ ತಾಲೂಕಿನವರಾಗಿದ್ದು,ಚಂದಪ್ಪ ಪೂಜಾರಿ ಮತ್ತು ಇಂದ್ರ ಪೂಜಾರಿ ದಂಪತಿಯ ಪುತ್ರ. ಇವರು ಪದವಿ ಶಿಕ್ಷಣವನ್ನು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಕಲಿತು, ಎಂಸಿಎ ಶಿಕ್ಷಣವನ್ನು ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಪೂರೈಸಿದರು.
ಚಿಕ್ಕ ವಯಸ್ಸಿನಿಂದಲೇ ಬಣ್ಣದ ಲೋಕಕ್ಕೆ ಮೆರುಗು ತುಂಬುವ ಅಸೆಯನ್ನೊತ್ತ ಇವರಲ್ಲಿ ವೇದಿಕೆಯ ಮೆಟ್ಟಿಲೇರುವ ಭಯದ ಕರಿ ನೆರಳು ಬೆನ್ನು ಬಿಡದೆ ಕಾಡುತಿತ್ತು.
ಆದರೆ ಕಲೆಗೆ ಇರುವ ಶಕ್ತಿ ಭಯವನ್ನು ಮೆಟ್ಟಿ ನಿಲ್ಲುವಂತಹದು ಎಂಬ ಸತ್ಯಾಂಶವನ್ನು ಮನದಟ್ಟು ಮಾಡಿಕೊಂಡು ಒಬ್ಬ ಕಲಾವಿದ ಹೇಗೆ ಪಾತ್ರಕ್ಕೆ ಜೀವ ತುಂಬುತ್ತಾನೆಂದು ಪರಿಶೀಲಿಸಿ ತನ್ನಲು ಅಭಿನಯಿಸುವುದನ್ನು ಅಳವಡಿಸಿಕೊಳ್ಳುತ್ತಾರೆ.
ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ತನ್ನದೇ ಶೈಲಿಯಲ್ಲಿ ವಿಡಿಯೋ ಮಾಡುತ್ತಾ,ನೃತ್ಯ ಮಾಡುವುದರ ಜೊತೆಗೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದಾರೆ.
ಶಿಕ್ಷಣದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿಕೊಂಡು ಸವಾಲುಗಳನ್ನು ಮೆಟ್ಟಿನಿಂತು, ನಟನಾ ಕ್ಷೇತ್ರದಲ್ಲಿ ಸಾಧಿಸಬೇಕೆಂಬ ಹಂಬಲದೊಂದಿಗೆ ಪ್ರಾಧ್ಯಾಪಕರ ಮಾರ್ಗದರ್ಶನವನ್ನು ಪಡೆಯುತ್ತಿದ್ದಾರೆ.
ಪ್ರಯತ್ನದ ಹಾದಿಯಲ್ಲಿ ಪಯಣ : ನಟನೆಯಲ್ಲಿ ಆಸಕ್ತಿ ಇದ್ದರೂ ಭಾವಕ್ಕೆ ತಕ್ಕಂತೆ ಬದಲಾವಣೆ ಮಾಡಲು ನನ್ನಿಂದ ಸಾಧ್ಯನಾ? ಎಂಬ ಅಳುಕು ಮನಸ್ಥಿತಿಯಿಂದ ಹಿಂಜರಿಯುತ್ತಿದ್ದ ಇವರಲ್ಲಿ ಆಶಾ ಕಿರಣ ಚೆಲ್ಲಿದ್ದು ಯುವವಾಹಿನಿ ಎಂಬ ಸಂಘಟನೆ. ಯುವಕರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಈ ಸಂಘಟನೆಯ ಸದಸ್ಯನಾಗಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸ ತೊಡಗುತ್ತಾರೆ.
IndiGo Airlines Flight : ಇಂಡಿಗೋ ವಿಮಾನದಲ್ಲಿ ತುಳು ಅನೌನ್ಸ್‌ಮೆಂಟ್!
ತುಳು ನಿರ್ದೇಶಕ ಗೀತೇಶ್ ಪೂಜಾರಿ ಮಡೂರು ವಿಜಿತ್ ಅವರಲ್ಲಿ ಒಬ್ಬ ಕಲಾವಿದನನ್ನು ಕಂಡು ನಟನೆ ಮಾಡಲು ಹುರಿದುಂಬಿಸುತ್ತಾರೆ. ಉಡುಪಿ ತುಳು ಮತ್ತು ಮಂಗಳೂರಿನ ತುಳು ಭಾಷೆಯನ್ನಿಟ್ಟುಕೊಂಡು ಒಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತುಳುನಾಡ ಕಲಾಪ್ರಿಯರ ಪ್ರಶಂಸೆ ಮಾತುಗಳ ಸುರಿಮಳೆ ಇವರ ಮುಂದಿನ ಪ್ರಯತ್ನಕ್ಕೆ ವರವಾಗುವಂತೆ ಮಾಡಿದೆ.
ಪ್ರಯತ್ನಕ್ಕೆ ತಕ್ಕ ಪ್ರತಿಫಲ : ವೈರಲ್ ಆದಂತಹ ವಿಡಿಯೋವನ್ನು ತುಳು ಕಿರುಚಿತ್ರ ನಿರ್ದೇಶಕರಾದ ಅಭಿಷೇಕ್ ರಾವ್ ನೋಡಿ ವಿಜಿತ್ ಅವರ ನಟನೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮ್ಯೂಸಿಕಲ್ ಮೂವಿಗೆ ನಾಯಕ ನಟನಾಗಿ ಅಭಿನಯಿಸುವಂತೆ ಅವಕಾಶವನ್ನು ಕಲ್ಪಿಸಿಕೊಡುತ್ತಾರೆ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಟಿಸಿದ ಮ್ಯೂಸಿಕಲ್ ಸಿನಿಮಾಕ್ಕೆ ಕಲಾಪ್ರಿಯಾರ ಪ್ರತಿಕ್ರಿಯೆ ಇವರ ಸಂತೋಷವನ್ನು ಮುಗಿಲು ಮುಟ್ಟುವಂತೆ ಮಾಡಿದ್ದು, ಜೊತೆಗೆ ತುಳುನಾಡ ಸ್ಟೈಲಿ ಸ್ಟಾರ್ ಎಂಬ ಬಿರುದನ್ನು ತಂದು ಕೊಟ್ಟ ಸಿನಿಮಾ ದಿಲ್ ರಂಗ್_2 ಸಿನಿಪ್ರಿಯರ ಬಾಯಿಯಲ್ಲಿ ಸದಾ ಮೆಲುಕು ಹಾಕುವಂತೆ ಮಾಡಿದ ದಿಲ್ ರಂಗ್ ಹಾಡು ಕಲಾಭಿಮಾನಿಗಳ ಕಿವಿಯನ್ನು ಇಂಪಾಗಿಸಿ ಮನದ ಕದ ತಟ್ಟುವಂತೆ ಮಾಡಿದೆ.
ನಂತರ ವೀಡಿಂಗ್ ವಿಡಿಯೋಗ್ರಾಫರ್ ಶ್ರೀ ಪ್ರಸಾದ್ ಬಂಟ್ವಾಳ ಅವರ ನಿರ್ದೇಶನದಲ್ಲಿ ಮೋಕೆದ ಮಾರ್ನೆಮಿ ಮತ್ತು ಹಲಮತಿ ಹಾಬಿಬಿ ಎಂಬ ಕವರ್ ಸಾಂಗ್ ಕೂಡ ಮಾಡಿದ್ದಾರೆ. ಮುಂದೆಯೂ ಶ್ರೀ ಪ್ರಸಾದ್ ಅವರ ನಿರ್ದೇಶನದಲ್ಲಿ ಮತ್ತೆರೆಡು ಕವರ್ ಸಾಂಗ್ ಮೂಡಿಬರಲು ಸಜ್ಜಾಗುತ್ತಿದೆ ಎನ್ನುತ್ತಾರೆ ವಿಜಿತ್.
ಕಲೆಗೆ ಜೀವ ತುಂಬುವುದು ಮಾತ್ರವಲ್ಲದೇ ಸಮಾಜದ ಜನರ ಹಿತ ದೃಷ್ಟಿಯಿಂದ ಅನೇಕ ಸಮಾಜ ಕಾರ್ಯ ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಬೆರುವೆರ್ ಕುಡ್ಲ ತಂಡವು ಮಂಗಳೂರಿನಲ್ಲಿ ನಡೆಯುವ ದಸರಾ ಹಾಗೂ ಹುಲಿವೇಷ ಮಾಡುವಂತಹ ತಂಡವಾಗಿದ್ದು, ಇದರ ಮುಖ್ಯ ಉದ್ದೇಶ ಹುಲಿವೇಷದ ಜೊತೆಗೆ ಸಮಾಜದಲ್ಲಿನ ಜಾತಿ ಮತ ಎಂಬ ಭೇದ ಭಾವವಿಲ್ಲದೆ ಯಾರು ಸಂಕಷ್ಟಕೀಡಾಗಿದ್ದಾರೆ ಅವರ ಕಷ್ಟದಲ್ಲಿ ಕೈ ಜೋಡಿಸಿ ತಮ್ಮಿಂದ ಆದಷ್ಟು ಸಹಾಯಾಸ್ತವನ್ನು ನೀಡುವುದು ಬೆರುವೆರ್ ಕುಡ್ಲ ಸಂಘಟನೆಯ ಉದ್ದೇಶವಾಗಿದೆ. ಇದರಲ್ಲಿ ಬೇರೆ ಬೇರೆ ಘಟಕಗಳಿದ್ದು ಅದರಲ್ಲಿ ಒಂದಾಗಿರುವ ಬೆರುವೆರ್ ಕುಡ್ಲ ಬಂಟ್ವಾಳ ಸ್ಥಾಪಕ ಸದಸ್ಯ ಹಾಗೂ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮನದ ಮಾತು: ನಟನೆ ಎಂದರೆ ಬಹಳ ಆಸಕ್ತಿ. ಅದರ ಜೊತೆಗೆ ವೇದಿಕೆಯ ಮುಂದೆ ಬರಲು ಭಯದ ಅಳುಕು. ಆದರೆ ನಾವು ಮಾಡುವ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಒಂದಲ್ಲ ಒಂದು ದಿನ ಹುಡುಕಿಕೊಂಡು ಬರುವುದು ಎಂಬ ದೃಢವಾದ ನಂಬಿಕೆ ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ಸ್ನೇಹಿತರು,ಕುಟುಂಬದವರು,ತಂದೆ ತಾಯಿ ಸಹಕಾರ, ಗುರುಗಳ ಮಾರ್ಗದರ್ಶನ ನನಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ ಇಲ್ಲಿಯವರೆಗೂ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಅವಕಾಶ ನಾನನ್ನು ಕೈ ಬೀಸಿ ಕರೆದಲ್ಲಿ ಅವಕಾಶವನ್ನು ಕಳೆದುಕೊಳ್ಳದೆ ಸದುಪಯೋಗ ಪಡಿಸಿಕೊಳ್ಳುವುದಾಗಿ ವಿಜಿತ್ ಹೇಳುತ್ತಾರೆ.