ಹೇಗಿದೆ ಇಂದು ತೆರೆಕಂಡ ರ್ಯಾಂಬೋ ೨ ಸ್ಯಾಂಡಲ್’ವುಡ್ ಚಿತ್ರ?
ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನೋದು ಹಳೇ ಮಾತು. ಈಗೇನಿದ್ದರೂ ಪ್ರತಿಯೊಂದರಲ್ಲೂ ವೆರೈಟಿ ಹುಡುಕು ಅನ್ನೋದು ಈ ಹೊತ್ತಿನ ಲೖಫ್ ಸ್ಟೖಲ್. ಅಂಥದ್ದೇ ಮನಸ್ಥಿತಿಯ ಹುಡುಗನೊಬ್ಬನ ಕತೆಯ ಚಿತ್ರವೇ ರ್ಯಾಂಬೊ 2. ಪ್ರೇಕ್ಷಕರನ್ನು ರಂಜಿಸುವ ಈ ಚಿತ್ರದೊಳಗೆ ಕತೆಯದ್ದೇ ದೊಡ್ಡ ಕೊರತೆ. ಕಾಮಿಡಿಯ ಅಬ್ಬರದಲ್ಲಿ ಕತೆ ಕಾಣೆಯಾಗಿದೆ. ಕೊನೆಗದು ಎಮೋಷನಲ್ ತಿರುವಿನಲ್ಲಿ ಒಂದಷ್ಟು ಕಾಣಿಸಿಕೊಂಡು ಕಾಡಿಸುತ್ತದೆ. ಹಾಗಂತ ಅಲ್ಲೇನು ಹೊಸತನವಿಲ್ಲ. ತಾನು ನೋವುಂಡು, ಪರರನ್ನು ರಂಜಿಸುವ ಜೋಕರ್ ಬದುಕಿನ ದುರಂತ ಕತೆ ಸಾಕಷ್ಟು ಸಿನಿಮಾಗಳಲ್ಲಿ ಬಂದು ಹೋಗಿದೆ. ಅಂಥದ್ದೇ ಒಂದು ಎಳೆಯ ಕತೆ ಇಲ್ಲಿ ಕಾಣಿಸಿಕೊಂಡಿದ್ದರೂ, ಭರಪೂರ ನಗು ಇಲ್ಲಿದೆ ಎನ್ನುವುದು ಈ ಚಿತ್ರದ ವಿಶೇಷ.
ಇದೊಂದು ಸಿಂಪಲ್ ಕತೆಯ ಚಿತ್ರ. ಅದು ಒಂದು ದಿನದ ಡೇಟಿಂಗ್ ಜರ್ನಿಯ ಕತೆ. ನಾಯಕ ಕೃಷ್ಣ( ಶರಣ್) ಹಾಗೂ ನಾಯಕಿ ಮಯೂರಿ(ಆಶಿಕಾ) ಇಬ್ಬರು ಮಾಡರ್ನ್ ಪ್ರೇಮಿಗಳು. ಇಬ್ಬರು ವಿಚಿತ್ರ ಮನಸ್ಥಿತಿಯ ವ್ಯಕ್ತಿಗಳು. ಬದುಕಲ್ಲಿ ಎಲ್ಲವೂ ವೆರೈಟಿ ಆಗಿರಬೇಕೆನ್ನುವ ಕೃಷ್ಣನಿಗೆ ಸಿಕ್ಕಿದ್ದು, ಅಷ್ಟೇ ವೆರೈಟಿ ಹುಡುಗ ಬೇಕೆನ್ನುವ ನಾಯಕಿ ಮಯೂರಿ. ಇಬ್ಬರ ಆಕಸ್ಮಿಕ ಪರಿಚಯ ಒಂದು ದಿನ ಡೇಟಿಂಗ್ ಜರ್ನಿಯ ಮೂಲಕ ಕುತೂಹಲ ಹುಟ್ಟಿಸುತ್ತೆ. ಅದು ಕಾರಿನ ಜರ್ನಿ. ಗೋವಾದ ರಸ್ತೆಗಳ ಉದ್ದಕ್ಕೂ ಸಾಗುವ ಆ ಜರ್ನಿ ರೋಚಕತೆಯೊಂದಿಗೆ ಕಾಮಿಡಿ ಸರ್ಕಲ್‌ಗೆ ಬಂದು ನಿಲ್ಲುವುದು ಚಿಕ್ಕಣ್ಣ ಮತ್ತು ಸಾಧುಕೋಕಿಲ ಎಂಟ್ರಿಯ ಮೂಲಕ. ಅದರಲ್ಲೂ ಚಿಕ್ಕಣ್ಣ ಹಾಗೂ ಶರಣ್ ಕಾಂಬಿನೇಷನ್ ಸಖತ್ ಕಿಕ್ ನೀಡುತ್ತದೆ. ಚಿಕ್ಕಣ್ಣನ ಹರುಕು ಮುರುಕು ಕಂಗ್ಲಿಷ್, ಸಾಧು ಕೋಕಿಲರ ಕುರುಡು ಕ್ಯಾರೆಕ್ಟರ್ ಮಜಾ ತರಿಸುತ್ತವೆ. ಮೊದಲ ಅರ್ಧ ಆ ಕಾಮಿಡಿ ಸರ್ಕಲ್‌ನಲ್ಲೇ ಮುಗಿದುಹೋಗುತ್ತೆ ಚಿತ್ರ. ಉಳಿದದ್ದು ದ್ವಿತೀಯಾ ಅರ್ಧ. ಅದು ಪಕ್ಕಾ ಎಮೋಷನಲ್.ಅದರ ಕೇಂದ್ರ ಬಿಂದು ರವಿಶಂಕರ್.
ಹಾಗಂತ ಇದು ಬರಿ ಕಾಮಿಡಿ ಸಿನಿಮಾ ಅಲ್ಲ. ಅಲ್ಲೊಂದು ಸಂದೇಶವೂ ಇದೆ. ಹಾಕುವ ಬಟ್ಟೆಯಲ್ಲಿ, ಓಡಿಸುವ ವಾಹನದಲ್ಲಿ, ನೋಡುವ ಊರಲ್ಲಿ ವೆರೈಟಿ ಹುಡುಕಿ, ಆದ್ರೆ ಜೀವನಪೂರ್ತಿ ಜತೆಗಿರುವ ಸಂಬಂಧಗಳಲ್ಲಿ ವೆರೈಟಿ ಹುಡುಕಬೇಡಿ ಅನ್ನೋದು ಈ ಕತೆಯ ಒಟ್ಟು ತಿರುಳು. ಹಾಗೆ ಹೇಳ ಹೊರಟ ಕತೆಗೆ ಹಲವು ತಿರುವುಗಳಿವೆ. ಆ ತಿರುವುಗಳಲ್ಲಿ ಬಂದು ಹೋಗುವವರು ಶರಣ್, ಚಿಕ್ಕಣ್ಣ, ಆಶಿಕಾ, ರವಿಶಂಕರ್, ಕುರಿ ಪ್ರತಾಪ್, ಸಾಧು ಕೋಕಿಲ, ತಬಲನಾಣಿ. ಅಭಿನಯದಲ್ಲಿ ಅವರೆಲ್ಲರೂ ಇಷ್ಟವಾಗುತ್ತಾರೆ. ತಮ್ಮದೇ ಕಾಮಿಡಿ ಬ್ರಾಂಡ್‌ನಲ್ಲಿ ಆ್ಯಕ್ಷನ್, ಡಾನ್ಸ್ ಮೂಲಕವೂ ಶರಣ್ ರಂಜಿಸುತ್ತಾರೆ.
ನಾಯಕಿ ಆಶಿಕಾ ಹಾಟ್ ಲುಕ್ ಪಡ್ಡೆಗಳ ಎದೆ ನಡುಗಿಸುತ್ತದೆ. ಅಭಿನಯದಲ್ಲೂ ಪಕ್ವತೆ ಬಂದಿದೆ. ರವಿಶಂಕರ್ ಎಂದಿನ ಖದರ್ ತೋರಿಸಿದ್ದಾರೆ. ನಿರ್ದೇಶಕ ಅನಿಲ್ ಕುಮಾರ್ ಶ್ರಮ ತೆರೆ ಮೇಲೆ ಕಾಣಿಸುತ್ತದೆ. ಪ್ರತಿ ದೃಶ್ಯವನ್ನು ಚೆನ್ನಾಗಿ ತೋರಿಸಿದ್ದಾರೆ. ಸಿಂಪಲ್ ಕಥೆ ಇದ್ದರೂ ಅದನ್ನು ಸೊಗಸಾದ ನಿರೂಪಣೆ ಮೂಲಕ ಎಲ್ಲೂ ಬೇಸರ ಮೂಡಿಸದಂತೆ ತೋರಿಸುವಲ್ಲಿ ಗೆದ್ದಿದ್ದಾರೆ. ಸಿನಿಮಾ ನೋಡುತ್ತಾ ಹೋದಂತೆ ಖುಷಿ ಆಗುವುದು ಅದರ ಗುಣಮಟ್ಟದ ಕಾರಣಕ್ಕೆ. ಯಾವ ಸ್ಟಾರ್ ನಟನ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ಸಿನಿಮಾದ ಪ್ರತಿ ವಿಭಾಗವೂ ಮನಸ್ಸಿಗೆ ಹಿಡಿಸುತ್ತದೆ. ಹಾಗೆ ನೋಡಿದ್ರೆ ಈ ಚಿತ್ರದ ನಿಜವಾದ ಹೀರೋಗಳು ಅಂದ್ರೆ ಛಾಯಾಗ್ರಾಹಕ ಸುಧಾಕರ್ ಎಸ್. ರಾಜ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹಾಗೂ ಸಾಹಸ ನಿರ್ದೇಶಕ ರವಿವರ್ಮ. ಅಷ್ಟು ಜನರ ಕುಸುರಿ ಕೆಲಸದೊಂದಿಗೆ ಇದೊಂದು ಪಕ್ಕಾ ಪೈಸಾ ವಸೂಲ್ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ.