ಚುನಾವಣೆಯಲ್ಲಿ ಬಿಜಿಯಾಗಿದ್ದ ಸುಮಲತಾ ಸಿನಿಮಾ ಜಗತ್ತಿನತ್ತ ತಲೆ ಹಾಕಿರಲಿಲ್ಲ. ಇದೀಗ ಸಿನಿಮಾ ಸಮಾರಂಭಕ್ಕೆ ಬಂದ ಅವರು ಚುನಾವಣೆ, ಫಲಿತಾಂಶ ಎಲ್ಲದರ ಕುರಿತು ಮೊದಲ ಬಾರಿಗೆ ಮಾತಾಡಿದ್ದಾರೆ. ಓವರ್‌ ಟು ಸುಮಲತಾ ಅಂಬರೀಷ್‌. 

ನನಗೆ ಯಾವುದೇ ರಾಜಕೀಯ ಒತ್ತಡಗಳು ಇಲ್ಲ, ಫಲಿತಾಂಶದ ಬಗ್ಗೆ ಚಿಂತೆ ಇಲ್ಲ. ಜನ ಕೊಡೋ ತೀರ್ಪಿಗೆ ಕಾಯುತ್ತಿದ್ದೇವೆ. ಮಂಡ್ಯದ ರಾಜಕೀಯ ಕಣದಲ್ಲಿ ಹುಟ್ಟಿಕೊಂಡ ಸಿನಿಮಾ ಟೈಟಲ್‌ಗಳಿಗೆ ಒಳ್ಳೆಯದಾಗಲಿ, ಬೇರೆ ಬೇರೆ ಪಕ್ಷಗಳಲ್ಲಿ ನಡೆಯುತ್ತಿರುವ ಜಗಳಗಳ ಬಗ್ಗೆ ನಾನು ಮಾತನಾಡಲ್ಲ....

1.ಇದು ನಟಿ ಕಂ ಮಂಡ್ಯ ಲೋಕಸಭಾ ಅಭ್ಯರ್ಥಿ ಸುಮಲತಾ ಅಂಬರೀಶ್‌ ಅವರ ನೇರಾನೇರ ಮಾತುಗಳು. ಚುನಾವಣೆಯ ನಂತರ ಮೊದಲ ಬಾರಿಗೆ ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಸುಮಲತಾ ಅಂಬರೀಶ್‌ ಹೇಳಿದ ಮಾತುಗಳು ಇಲ್ಲಿವೆ. ಅವರು ‘ಡಾಟರ್‌ ಆಫ್‌ ಪಾರ್ವತಮ್ಮ’ ಸಿನಿಮಾದ ಕಾರ್ಯಕ್ರದಲ್ಲಿ ಈ ಮಾತುಗಳನ್ನು ಹೇಳಿದರು.

2. ನನಗೆ ಮೇ ತಿಂಗಳು ತುಂಬಾ ವಿಶೇಷ. ಯಾಕೆಂದರೆ ಮೇ 23ಕ್ಕೆ ಚುನಾವಣೆಯ ಫಲಿತಾಂಶ ಬರುತ್ತಿದೆ. ನನ್ನ ಜೀವನದಲ್ಲಿ ಹೊಸ ಹೆಜ್ಜೆ ಫಲಿತಾಂಶ ಅದು. ಇನ್ನೂ ಮೇ 24ರಂದು ನನ್ನ ನಟನೆಯ ‘ಡಾಟರ್‌ ಆಫ್‌ ಪಾರ್ವತಮ್ಮ’ ತೆರೆಗೆ ಬರುತ್ತಿದೆ. ಇದರ ಜತೆಗೆ ಮೇ 31ರಂದು ನನ್ನ ಪುತ್ರ ಅಭಿಷೇಕ್‌ ಅಂಬರೀಶ್‌ ನಟನೆಯ ಮೊದಲ ಚಿತ್ರ ‘ಅಮರ್‌’ ತೆರೆಗೆ ಬರುತ್ತಿದೆ.

3. ನಾನು ತುಂಬಾ ಕೂಲ್‌ ಆಗಿದ್ದೇನೆ. ಫಲಿತಾಂಶ ಏನಾಗುತ್ತದೆಂಬ ಒತ್ತಡವಾಗಲಿ, ರಾಜಕೀಯ ವಾದಗಳ ಒತ್ತಡಗಳು ನನಗೆ ಇಲ್ಲ. ಚುನಾವಣೆ ಫಲಿತಾಂಶಗಳು ಬರುವಾಗ ಹೇಗಿರುತ್ತದೆ ಎಂದು ನಾನು ಅಂಬರೀಶ್‌ ಅವರನ್ನು ನೋಡಿ ತಿಳಿದ್ದೇನೆ. ಅವರು ತುಂಬಾ ಆರಾಮವಾಗಿದ್ದರು. ಅದೇ ಪಾಲಿಸಿ ನನ್ನದು.

4.ಈ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆಂಬ ನಂಬಿಕೆ ಮತ್ತು ಭರವಸೆ ಇದೆ. ಯಾಕೆಂದರೆ ಮತದಾನ ದಿನ ಬಂದ ಫೀಡ್‌ ಬ್ಯಾಕ್‌ ಹಾಗೂ ಜನರ ಮಾತುಗಳು ನನ್ನಲ್ಲಿ ಸಕಾರಾತ್ಮಕ ಆಲೋಚನೆಗಳನ್ನು ಮೂಡಿಸುವೆ. ಇನ್ನೂ ವರದಿಗಳು, ಸಮೀಕ್ಷೆಗಳು ದಿನಕ್ಕೊಂದು ಬರುತ್ತಿವೆ. ಅವುಗಳನ್ನು ನಾನು ಅಷ್ಟುಗಂಭೀರವಾಗಿ ತೆಗೆದುಕೊಂಡಿಲ್ಲ.

5. ಮಂಡ್ಯದ ಜನತೆ ಏನೇ ತೀರ್ಪು ಕೊಟ್ಟರೂ ಸ್ವೀಕರಿಸುತ್ತೇವೆ. ಚುನಾವಣೆ ಮುಗಿದ ಮೇಲೂ ಮಂಡ್ಯಗೆ ಹೋಗುತ್ತಿದ್ದೇವೆ. ನನ್ನ ಕಂಡು ಅಲ್ಲಿನ ಜನ ಒಳ್ಳೆಯದಾಗುತ್ತದೆ ಎಂದು ಆಶೀರ್ವಾದ ಮಾಡುತ್ತಿದ್ದಾರೆ.

6. ಬೇರೆ ಪಕ್ಷಗಳಲ್ಲಿ ಏನೇ ನಡೆಯುತ್ತಿದ್ದರು ಆ ಬಗ್ಗೆ ನಾನು ಮಾತನಾಡಲ್ಲ. ಚುನಾವಣೆ ಸಮಯದಲ್ಲಿ ಹೋಟೆಲ್‌ನಲ್ಲಿ ನನ್ನ ಸಾರಥ್ಯದಲ್ಲಿ ಸಭೆ ನಡೆದು ಅದಕ್ಕೆ ಕಾಂಗ್ರೆಸ್‌ನ ಚೆಲುವರಾಯ ಸ್ವಾಮಿ, ನರೇಂದ್ರ ಸ್ವಾಮಿ ಭಾಗವಹಿಸಿದ್ದರು ಎನ್ನುವ ಮಾತುಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಯಾಕೆಂದರೆ ಅದು ನಾನು ಮಾಡಿದ್ದ ಸಭೆ ಅಲ್ಲ. ಅದು ಬೇರೊಬ್ಬರ ಹುಟ್ಟುಹಬ್ಬದ ಕಾರ್ಯಕ್ರಮ. ಅದಕ್ಕೆ ನಾನು ಹೋಗಿದ್ದೆ. ನನ್ನ ಹಾಗೆ ಬೇರೆ ಪಕ್ಷದವರು ಬಂದಿದ್ದರು. ಆದರೆ, ಅದಕ್ಕೆಲ್ಲ ಬೇರೆ ಬೇರೆ ಬಣ್ಣ ಕಟ್ಟಿದರು. ಖಾಸಗಿ ಜೀವನದಲ್ಲಿ ನಡೆಯುವುದಕ್ಕೆಲ್ಲ ಉತ್ತರ ಕೊಡುವ ಅಗತ್ಯವಿಲ್ಲ.

7. ನಿಜ ಹೇಳಬೇಕು ಅಂದರೆ ಮಂಡ್ಯದಲ್ಲಿ ಮೈತ್ರಿ ರಾಜಕೀಯ ಅನ್ನೋದು ಕೆಲಸ ಮಾಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಬಹಿರಂಗ ರಹಸ್ಯ. ಯಾಕೆ ಅದು ಕೆಲಸ ಮಾಡಿಲ್ಲ, ಮೈತ್ರಿ ಅಭ್ಯರ್ಥಿ ಪರ ಅವರು ಯಾಕೆ ನಿಂತಿಲ್ಲ ಎಂಬುದು ಆಯಾ ಪಕ್ಷದ ಮುಖಂಡರು ಅವರ ಪಕ್ಷದವರ ಮೇಲೆ ಕ್ರಮ ಕೈಗೊಳ್ಳಲಿ. ಅದಕ್ಕೂ ನನಗೂ ಸಂಬಂಧವಿಲ್ಲ.

8.ಚುನಾವಣೆಯ ಸಮಯದಲ್ಲಿ ಎಚ್‌ ಡಿ ರೇವಣ್ಣ ಅವರ ಬೆಂಗಾವಲಿನ ವಾಹನದಲ್ಲಿ ಹಣ ಸಾಗಿಸುತ್ತಿದ್ದರು, ಅದು ಸಿಸಿ ಟಿವಿಯಲ್ಲಿ ರೆಕಾರ್ಡ್‌ಗೆ ಆಗಿದ್ದನ್ನು ಡಿಲೀಟ್‌ ಮಾಡಿದ್ದಾರೆ ಎಂಬುದರ ಬಗ್ಗೆ ನಾನು ಈಗ ಮಾತನಾಡಲ್ಲ. ನನಗೆ ಆ ವಿಷಯದ ಬಗ್ಗೆ ಹೆಚ್ಚು ಗೊತ್ತಿಲ್ಲ. ಮಾಹಿತಿಯೂ ಇಲ್ಲ.

9. ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬರೂ ಗೆಲ್ಲಲೇಬೇಕು ಎನ್ನುವ ಆಸೆ ಇರುತ್ತದೆ. ನನಗೂ ಅದೇ ಇದೆ. ಆದರೆ, ಅತಿಯಾದ ವಿಶ್ವಾಸ ಇಲ್ಲ. ಇಷ್ಟುಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎನ್ನುವ ಲೆಕ್ಕಾಚಾರಗಳು ಇಲ್ಲ. ಆದರೆ, ಜನ ನನ್ನ ಪರವಾಗಿ ಪಾಸಿಟಿವ್‌ ತೀರ್ಪು ಕೊಡುತ್ತಾರೆಂಬ ನಂಬಿಕೆ ಇದೆ. ನಾನು ಖಂಡಿತ ಮಂಡ್ಯದಲ್ಲೇ ವಾಸ್ತವ್ಯ ಮಾಡುತ್ತಾನೆ. ನಮ್ಮದೇ ಜಮೀನು ಇದೆ. ಅಲ್ಲೇ ಮನೆ ಕಟ್ಟಿಸುತ್ತೇನೆ. ಮಂಡ್ಯದ ಜನರ ಪರವಾಗಿ ಅಲ್ಲೇ ಇರುತ್ತೇನೆ.

10. ಚುನಾವಣೆ ನಂತರ ದರ್ಶನ್‌, ಯಶ್‌ ಅವರನ್ನು ಭೇಟಿ ಮಾಡಲಿಕ್ಕೆ ಆಗಲಿಲ್ಲ. ಯಾಕೆಂದರೆ ಅವರು ತಮ್ಮ ಚಿತ್ರಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಆದರೆ, ಫೋನ್‌ ಸಂಪರ್ಕದಲ್ಲಿದ್ದಾರೆ. ನನಗೆ ಚಿತ್ರರಂಗದಲ್ಲಿ ಎಲ್ಲರು ಬೆಂಬಲ ಕೊಟ್ಟಿದ್ದಾರೆ. ಕೆಲವರು ಪರೋಕ್ಷವಾಗಿ ಬೆಂಬಲಿಸಿದ್ದಾರೆ.

11. ಮಂಡ್ಯ ಚುನಾವಣೆ ಕಣದಿಂದ ಹಲವು ಸಿನಿಮಾ ಟೈಟಲ್‌ಗಳು ಹುಟ್ಟಿಕೊಂಡಿರುವುದನ್ನು ಕೇಳಿದ್ದೇನೆ. ಆ ಹೆಸರುಗಳಲ್ಲಿ ಸಿನಿಮಾ ಮಾಡುತ್ತಿರುವ ಎಲ್ಲರಿಗೂ ಒಳ್ಳೆಯದಾಗಲಿ.

12. ಡಾಟರ್‌ ಆಫ್‌ ಪಾರ್ವತಮ್ಮ ಚಿತ್ರದ ನಂತರ ನಾನು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಮಗನ ಚಿತ್ರದಲ್ಲಿ ನಟಿಸುವುದು ಸದ್ಯಕ್ಕೆ ಬೇಡ ಅಂದುಕೊಂಡಿದ್ದೇವೆ. ಎಲ್ಲ ಸಿನಿಮಾ ಮಾಡಿದರೂ ಕಲಾವಿದರಿಗೆ ಅದು ವಿಶೇಷವಾಗಿರುತ್ತದೆ. ನನಗೂ ‘ಡಾಟರ್‌ ಆಫ್‌ ಪಾರ್ವತಮ್ಮ’ ವಿಶೇಷ ಚಿತ್ರ. ಇಲ್ಲಿ ನನ್ನದು ಶಾಟ್‌ ಆಂಡ್‌ ಸ್ವೀಟ್‌ ರೋಲ್‌. ದೃಶ್ಯಗಳು, ತಾಯಿಮಗಳು ಸಂಬಂಧ ಚೆನ್ನಾಗಿರುತ್ತದೆ.