ಶಿವರಾಜ್ ಕುಮಾರ್ 56ನೇ ಹುಟ್ಟುಹಬ್ಬ ಸಂಭ್ರಮ

First Published 12, Jul 2018, 11:54 AM IST
Shivrajkumar celebrates 56th birthday
Highlights

ಇಂದು ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ. ೫೬ ವರ್ಷ ಪೂರೈಸಿ ೫೭ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ ಹ್ಯಾಟ್ರಿಕ್ ಹೀರೋ. ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬದ ಆಚರಣೆಗೆ ಶಿವು ಅಡ್ಡ ಹಾಗೂ ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಭರ್ಜರಿ ಸಿದ್ಧತೆ ನಡೆಸಿವೆ. ಬೆಂಗಳೂರಿನ ನಾಗವಾರದಲ್ಲಿರುವ ಶಿವರಾಜ್ ಕುಮಾರ್ ನಿವಾಸಕ್ಕೆ ಅಭಿಮಾನಿಗಳ ಮಹಾಪೂರವೇ ಹರಿದು ಬರಲಿದ್ದು, ಅಭಿಮಾನಿಗಳು ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಶಿವರಾಜ್ ಕುಮಾರ್ ಕೇಕ್ ಕತ್ತರಿಸಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದಾರೆಂದು ಅವರ ಆಪ್ತ ವಲಯಗಳು ತಿಳಿಸಿವೆ.

ಶಿವು ಅಡ್ಡ ಹಾಗೂ ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಬೃಹತ್ ಗಾತ್ರದ ಕೇಕ್ ತಯಾರಿಸಿದೆ. ‘ಟಗರು’ ಚಿತ್ರ ತಂಡ ಶಿವರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ೧೫ ನೇ ದಿನದ ಸಂಭ್ರಮಾಚರಣೆ ಆಯೋಜಿಸಿದೆ. ಚಿತ್ರತಂಡದೊಂದಿಗೆ ಶಿವರಾಜ್ ಕುಮಾರ್ ಭಾಗವಹಿಸಿ, ಹುಟ್ಟುಹಬ್ಬದ ಜತೆಗೆ ಟಗರು ೧೫ನೇ ದಿನ ಸಂತಸ ಹಂಚಿಕೊಳ್ಳಲಿದ್ದಾರೆಂದು ನಿರ್ಮಾಪಕ ಕೆ.ಪಿ. ಶ್ರೀಕಾಂತ್ ತಿಳಿಸಿದ್ದಾರೆ. ಶಿವರಾಜ್ ಕುಮಾರ್ ಈಗ ‘ರುಸ್ತುಂ’, ‘ಕವಚ ’ಹಾಗೂ ‘ದ್ರೋಣ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಮೂರು ಚಿತ್ರತಂಡಗಳೂ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಲು ಮುಂದಾಗಿವೆ. ‘ಕವಚ’ ಚಿತ್ರತಂಡ ಟೀಸರ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ‘ರುಸ್ತುಂ’ ತಂಡ ಮೋಷನ್ ಪೋಸ್ಟರ್ ಲಾಂಚ್ ಮಾಡುತ್ತಿದೆ ಎನ್ನಲಾಗಿದೆ. ಬಹು ನಿರೀಕ್ಷಿತ ‘ದಿ ವಿಲನ್’ ಚಿತ್ರ ರಿಲೀಸ್ಗೆ ರೆಡಿ ಆಗಿದ್ದು, ನಿರ್ದೇಶಕ ಪ್ರೇಮ್ ಕೂಡ ಶಿವಣ್ಣ ಅವರಿಗೆ ಹುಟ್ಟು ಹಬ್ಬದ ಕಾಣಿಕೆಯಾಗಿ ಚಿತ್ರದ ಸ್ಪೆಷಲ್ ಪೋಸ್ಟರ್ ಲಾಂಚ್ ಮಾಡಲಿದ್ದಾರೆ. ಇವೆಲ್ಲ ಕಾರ್ಯಕ್ರಮಗಳು ಇಂದು ಶಿವರಾಜ್ ಕುಮಾರ್ ನಿವಾಸದಲ್ಲೇ ನಡೆಯಲಿವೆ.

ಶಿವು ಅಡ್ಡ ಅಭಿಮಾನಿಗಳ ಸಂಘ ಸೋಷಲ್ ಮೀಡಿಯಾದಲ್ಲಿ ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲು ಉದ್ದೇಶಿಸಿದ್ದು, ‘ಶಿವಣ್ಣನ್ ಅಭಿಮಾನೋತ್ಸವ’ ಎಂಬ ವಿಭಿನ್ನ ಡಿಪಿ ಸಿದ್ಧಗೊಳಿಸಿದೆ ಮತ್ತು ಶಿವಣ್ಣನ ಅಭಿಮಾನಿಗಳು ಆ ಡಿಪಿಯನ್ನು ತಮ್ಮ ಸೋಷಲ್ ಮೀಡಿಯಾ ಖಾತೆಯಲ್ಲಿ ಬಳಸಿಕೊಂಡಿದ್ದಾರೆ. ಈ ಡಿಪಿ ಪೋಸ್ಟರ್ ಅನ್ನು ಅನೀಶ್ ತೇಜೇಶ್ವರ್, ಧನಂಜಯ್, ಮಾನ್ವಿತಾ ಬಿಡುಗಡೆ ಮಾಡಿದ್ದಾರೆ.

loader