ಬೆಂಗಳೂರುವ(ಸೆ.01):  ಬುಧವಾರ ತಮ್ಮ ಹುಟ್ಟುಹಬ್ಬದ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮನೆ ಬಳಿಗೆ ಬರುವುದು ಬೇಡ ಎಂದು ನಟ ಸುದೀಪ್‌ ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಅವರು ಸೋಮವಾರ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಸುಧೀರ್ಘವಾದ ಮನವಿ ಪತ್ರ ಬರೆದಿದ್ದಾರೆ.

ಪ್ರತಿವರ್ಷ ಹುಟ್ಟು ಹಬ್ಬದ ನೆಪದಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಿದ್ದೆವು. ಪ್ರತಿ ವರ್ಷ ನಿಮ್ಮನ್ನು ಭೇಟಿಯಾಗುವ ಅವಕಾಶ ಸಿಗುತ್ತಿತ್ತು. ಆದರೆ, ಬಾರಿ ನಿಮ್ಮನ್ನು ಹಾಗೆ ಭೇಟಿ ಮಾಡಲಾರೆ. ಸದ್ಯದ ಪರಿಸ್ಥಿತಿಯನ್ನು ನೀವೆಲ್ಲ ಅರ್ಥ ಮಾಡಿಕೊಳ್ಳುತ್ತೀರಿ ಎಂದು ನಂಬಿದ್ದೇನೆ. 

ಸುದೀಪ್‌ ಬರ್ತ್‌ಡೇಗೆ ಏನೆಲ್ಲಾ ಸ್ಪೆಷಲ್ ರೆಡಿಯಾಗುತ್ತಿದೆ?

ಈ ಬಾರಿ ಹುಟ್ಟು ಹಬ್ಬದ ಅಂಗವಾಗಿ ಮನೆಯ ಮುಂದೆ ಯಾವುದೇ ರೀತಿಯ ಕಾರ್ಯಕ್ರಮಗಳು ಇರುವುದಿಲ್ಲ. ನಮ್ಮ ನಮ್ಮ ಕುಟುಂಬಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು ಕಡೆ ಸೇರಿ ಅದರಿಂದ ಮತ್ತೆ ಏನಾದರೂ ತೊಂದರೆ ಆಗಿ ಅನಾರೋಗ್ಯಕ್ಕೆ ತುತ್ತಾದರೆ ಅದರ ನೋವು ನನಗೂ ಕಾಡುತ್ತದೆ. ಈ ಕಾರಣಕ್ಕೆ ಈ ಬಾರಿ ಹುಟ್ಟುಹಬ್ಬವನ್ನು ಮನೆಯ ಮುಂದೆ ದೊಡ್ಡ ಸಂಖ್ಯೆಯಲ್ಲಿ ಸೇರಿ ಮಾಡುವುದು ಬೇಡ ಎಂದಿದ್ದಾರೆ.

ಯಾವುದೇ ಸಂಭ್ರಮ, ಕಾರ್ಯಕ್ರಮ ಆಚರಣೆ ಮಾಡಬೇಡಿ. ಸಾಧ್ಯವಾದರೆ ನಿಮ್ಮ ಸುತ್ತ ಕಷ್ಟದಲ್ಲಿರುವವರಿಗೆ ಯಾವುದಾದರೂ ಒಂದು ರೀತಿಯಲ್ಲಿ ನೆರವು ನೀಡಿ, ಅವರಿಗೆ ಸಹಾಯ ಮಾಡಿ. ಅದು ನಿಮಗೂ ಒಳ್ಳೆಯದು ಮಾಡುತ್ತದೆ ಎಂದು ಸುದೀಪ್‌ ಮನವಿ ಮಾಡಿಕೊಂಡಿದ್ದಾರೆ.