Asianet Suvarna News Asianet Suvarna News

ಮಳೆ ಎಂಬ ನವರಸ ನಾಯಕ!

ತೆರೆ ಮೇಲೆ ಮಳೆ ಮೂಡಿದ್ದು ನಾಯಕಿಯನ್ನು ಮುದ್ದೆ ಮಾಡುವುದಕ್ಕೆ. ಹಾಗೆ ನಟಿಯನ್ನು ನೆನೆಸಲು ಬಂದ ಮಳೆ ಒಂದು ರೋಮ್ಯಾಂಟಿಕ್  ಮೂಡು ಕ್ರಿಯೇಟ್ ಮಾಡುವುದಕ್ಕೆ ಹೊರಟಿತು. ಅಲ್ಲಿಂದ ಗ್ಲಾಮರ್ನ ಭಾಗವಾಗಿ ಮಳೆ ಆಗಾಗ ಸಿನಿಮಾಗಳಲ್ಲಿ ಸುರಿಯುವುದಕ್ಕೆ  ಶುರುವಾಯಿತು.  

Rainy days sets a trend in movies

ಚಳಿ ಚಳಿ ತಾಳೆನು ಈ ಚಳಿಯಾ ಎಂದು ಮಳೆಗಾಲದಲ್ಲಿ ಗಡ ಗಡ ನಡುಗುತ್ತ ಕಂಬಳಿ ಹೊದ್ದು ಮನೆಯಲ್ಲಿ ಕೂರುವ ಜಾಯಮಾನ ಅಲ್ಲ ಇದು. ಮಳೆಯನ್ನೂ ಕೂಡ ಬದುಕಿನ ಒಂದು ಟ್ರಿಪ್ ಎನ್ನುತ್ತಿರುವ ದಿನಗಳು. ಜೋರು ಮಳೆ ಸುರಿಯುತ್ತಿರುವಾಗ ಯಾವುದಾದರೂ ಗುಡ್ಡ ಹತ್ತಿ ಕೇಕೆ ಹಾಕುತ್ತ ಮಳೆ ಜತೆ ಸೆಲ್ಫಿ ತೆಗೆಸಿಕೊಳ್ಳುವಂತಹ ಸಾಹಸಗಳು ಮನಸ್ಸಿನಲ್ಲಿ  ಗುಡುಗು, ಸಿಡಿಲು ಮಿಂಚಿನಷ್ಟೆ ವೇಗವಾಗಿ ಬಂದು ಹೋಗುತ್ತವೆ. ಆ ಕ್ಷಣಕ್ಕೆ ಆಗುಂಬೆ, ಚಾರ್ಮಾಡಿಘಾಟ್, ಕೊಡಚಾದ್ರಿ ಗುಡ್ಡ, ನಂದಿ ಬೆಟ್ಟವೋ, ಗನನ ಚುಕ್ಕಿ- ಭರ ಚುಕ್ಕಿಯೋ, ಅಬ್ಬಿ ಪಾಲ್ಸ್, ಜೋಗದ ಜಲಪಾತವೋ, ರಂಗನ ತಿಟ್ಟೋ... ಹೀಗೆ ಹತ್ತಾರು ನೀರು- ಜಲಪಾತಗಳ ತೊರೆಗಳು ನಮ್ಮೆದುರು ಬಂದು ನಿಂತು ಬಾ ಎಂದು ಕರೆಯುತ್ತವೆ.

ನಿಜ ಜೀವನದಲ್ಲಿ ಮಳೆ ಮನುಷ್ಯನ ಕನಸು- ಪಯಣದ  ಕಾಲಿಗೆ ಚಕ್ರ ಕಟ್ಟಿದರೆ, ಅದೇ ಮಳೆ ಸಿನಿಮಾ ಮಂದಿಗೆ ಮನರಂಜನೆಯ ಸರಕು ಮತ್ತು ಕ್ಯಾರೆಕ್ಟರ್ ಎರಡೂ ಹೌದು. ನಿಜ ಹೇಳಬೇಕು ಅಂದರೆ ಸಿನಿಮಾ ಮತ್ತು ಮಳೆ ನಡುವೆ ಬಿಡಿಸಲಾಗದ ಆಪ್ತತೆ. ಮಳೆ ಒಂದು ಸಿನಿಮಾ ಪಾಲಿಗೆ ಎಮೋಷನಲ್ ಗಂಗೆ, ಕಮರ್ಷಿಯಲ್ ತಿರುವು, ಪಡ್ಡೆ ಹುಡುಗರ ಹಾಟ್ ಫೇವರೇಟ್, ನಟಿಯರ ಪಾಲಿಗೆ ಚೆಂದದ ತಿಳಿ ತೋರಣ... ಮಳೆ ಹೀಗೆ ಸಿನಿಮಾದಲ್ಲಿ ಯಾವ ಪಾತ್ರ ಬೇಕಾದರೂ ಲೀಲಾಜಾಲವಾಗಿ ನಿಭಾಯಿಸಿಬಿಡುತ್ತದೆ. ಹಾಡಿನಲ್ಲಿ ನಾಯಕಿಯನ್ನು ಮುದ್ದೆ ಮಾಡಿ ಅದನ್ನು ನೋಡುವವರ ಕಣ್ಣು ತಂಪು ಮಾಡುವುದಕ್ಕೆ ಬಂದು ಮುಂದೆ ನಾಯಕ ಹತ್ತಾಗ ಜತೆಯಾಯಿತು, ನಾಯಕ ಮತ್ತು ಖಳನಾಯಕ ಹೊಡೆದಾಡುವುದಕ್ಕೂ ಸಾಕ್ಷಿ ಆಯಿತು.

ಬಿಳಿ ಪರದೆ ಮೇಲೆ ನೀಲಿ ಮೋಡಗಳ ತಿಳಿ ಹನಿಗಳ ಲೀಲೆಗಳು ಒಂದೆರಡಲ್ಲ. ಮಳೆಯಿಂದಲೇ ಹಾಡು ಹುಟ್ಟಿಕೊಂಡಿತು, ಮಳೆಯಿಂದಲೇ ಪ್ರೀತಿ ಹುಟ್ಟಿಕೊಂಡಿತು, ಮಳೆಯಿಂದಲೇ ಸಾಹಸ ಹುಟ್ಟಿಕೊಂಡಿತು, ಮಳೆಯಿಂದಲೇ ಭಾವುಕತೆ ಆವರಿಸಿಕೊಂಡಿತು. ಮಳೆಯ ಮೋಡಿ ಎನ್ನುವುದು ಸಿನಿಮಾದ ಮಾಯೆಯಷ್ಟೆ ನೋಡುಗರನ್ನು ಪ್ರಭಾವಿಸಿತು. ಬೆಳ್ಳಿತೆರೆ ಮೇಲೆ ಮಳೆಯ ಇಂಥ ಲೀಲೆಗಳ ಜಾಡು ಹಿಡಿದು ಹೊರಟಾಗ... ನಾಯಕಿ ಮತ್ತು ರೊಮ್ಯಾಂಟಿಕ್ ಮೂಡು ತೆರೆ ಮೇಲೆ ಮಳೆ ಮೂಡಿದ್ದು ನಾಯಕಿಯನ್ನು ಮುದ್ದೆ ಮಾಡುವುದಕ್ಕೆ. ಹಾಗೆ ನಟಿಯನ್ನು ನೆನೆಸಲು ಬಂದ ಮಳೆ ಒಂದು ರೋಮ್ಯಾಂಟಿಕ್  ಮೂಡು ಕ್ರಿಯೇಟ್ ಮಾಡುವುದಕ್ಕೆ ಹೊರಟಿತು. ಅಲ್ಲಿಂದ ಗ್ಲಾಮರ್'ನ ಭಾಗವಾಗಿ ಮಳೆ ಆಗಾಗ ಸಿನಿಮಾಗಳಲ್ಲಿ ಸುರಿಯುವುದಕ್ಕೆ ಶುರುವಾಯಿತು.

‘ಸ್ವಾತಿಮುತ್ತಿನ ಮಳೆ ಹನಿಯೇ...ಮೆಲ್ಲ ಮೆಲ್ಲನೇ ಧರೆಗಿಳಿಯೇ’ ಅಥವಾ ‘ಮಳೆ ಬಿಲ್ಲೇ ಮಳೆ ಬಿಲ್ಲೇ ಕೊಡೆ ಹಿಡಿಯೇ ಮಳೆ ಬಿಲ್ಲೆ’ ಹಾಗೂ ‘ಸೌಂದರ್ಯ ಸಮರ ಸೋತೋನೆ ಅಮರ’  ನ್ನುವ ಹಾಡಿನ ಸಾಲುಗಳು ಮಳೆ ಮತ್ತು ಸಾಹಿತ್ಯದ ಗ್ರಾಮರ್‌ಗೆ ಮಾತ್ರ ಸೀಮಿತವಾಗದೆ ಆ ಹಾಡಿಗೆ ಹೆಜ್ಜೆ ಹಾಕುವ ನಟಿಯ ಮೈಮಾಟಕ್ಕೂ ಕನ್ನಡಿ ಹಿಡಿಯುವ ರೋಮ್ಯಾಂಟಿಕ್ ಬಾಯ್ ಎನ್ನುವ ಇಮೇಜ್ ಅನ್ನು ಮಳೆಗೆ ಕೊಟ್ಟ ಕೀರ್ತಿ ಸಿನಿಮಾ ಪರದೆಗೆ ಸಲ್ಲಬೇಕು. ಆರಂಭದ ದಿನಗಳಲ್ಲಿ ಹೀಗೆ ಮಳೆ ಪ್ರೀತಿ- ಪ್ರೇಮ, ಹೆಣ್ಣಿನ ಸೌಂದರ್ಯದ ಜತೆ ನಂಟು ಬೆಳೆಸಿಕೊಂಡು ಪ್ರೇಕ್ಷಕರನ್ನು ಬೆಚ್ಚಗಿಡುವುದಕ್ಕೆ ಮಾತ್ರ ಸೀಮಿತವಾಗಿತ್ತು.

ಪ್ರಸಿದ್ಧಿಗೆ ಬಂದ ಮಳೆಯ ಹಾಡುಗಳು
ಹಾಗೆ ರೋಮ್ಯಾಂಟಿಕ್ ಹೀರೋನಂತೆ ಎಂಟ್ರಿ ಕೊಟ್ಟ ಮಳೆರಾಯ ಮಡಿಲಲ್ಲಿ ಹತ್ತಾರು ಹಾಡುಗಳು ಮೂಡಿವೆ. ಒಂದೊಂದು ಹಾಡು ಒಂದೊಂದು ಮೂಡು ಕ್ರಿಯೇಟ್ ಮಾಡುತ್ತದೆ. ಮಳೆ ಹಾಡುಗಳಿಗೆ ಎಂದಿಗೂ ಸಾವಿಲ್ಲ ಎನ್ನುವ ಮಟ್ಟಿಗೆ ತೆರೆ ಮೇಲೆ ಮಳೆ ಹನಿಗಳ ಹಾಡಿನ ಲೀಲೆ ತೆರೆ ಮೇಲೆ ಮೋಡಿ ಮಾಡಿದೆ. ಕೇಳಿದರೆ ಮತ್ತೆ ಕೇಳಬೇಕು, ಗುನುಗಿದರೆ ಮತ್ತೊಮ್ಮೆ ಗುನುಗಬೇಕು ಎನ್ನುವಷ್ಟರ ಮಟ್ಟಿಗೆ ಮನಸ್ಸಿಗೆ ಉಲ್ಲಾಸ ತುಂಬಿದ ಹೆಮ್ಮೆ ಮಳೆ ಹಾಡುಗಳಿಗೆ ಸಲ್ಲಬೇಕು. ಮಳೆ ಕೂಡ ನವರಸ ನಾಯಕನೇ!

ಇದು ತಮಾಷೆಯಲ್ಲ. ರೋಮ್ಯಾಂಟಿಕ್ ಹಾಡುಗಳಿಗೆ ಬಳಕೆ ಆದ ಮಳೆ ಮುಂದೆ ನಾನಾ ರೀತಿಯ ಪಾತ್ರಗಳನ್ನು ಮಾಡುವ ಜವಾಬ್ದಾರಿ ಹೊತ್ತುಕೊಂಡಿತು. ಯೋಗರಾಜ್ ಭಟ್‌ರಂತಹ ನಿರ್ದೇಶಕರು ಮಳೆ ಜತೆ ಸರಸವಾಡುತ್ತ ಅದನ್ನು ಸೌಂದರ್ಯದ ಕಣಿಯಾಗಿ ಬಳಸಿಕೊಂಡರೆ, ಸೂರಿ ಅದೇ ಮಳೆಯಲ್ಲಿ ರಕ್ತ ಹರಿಸಿ ಮಳೆಗೂ ರೌದ್ರ ಮುಖವಿದೆ ಎಂದರು. ಒಬ್ಬರು ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಎಂದು ಹಾಡಿಸಿದರೆ, ‘ನೆಲದ ಗಾಯ ಹೊಲಿಯುವಂತೆ ಸುರಿಯೇ ಮಳೆಯೇ...’ ಎಂದು ಮಳೆಗೆ ನೆತ್ತರಿನ ನೆಲೆ ಕೊಡಲಾಯಿತು. ಅಂದರೆ ಮಳೆ ತೆರೆಯನ್ನು ಆರಂಭದ ದಿನಗಳಲ್ಲಿ ಯಾವ ಉದ್ದೇಶಕ್ಕಾಗಿ ಆವರಿಸಿಕೊಂಡಿತು ಅಷ್ಟಕ್ಕೆ ಮುಂದೆ ಸೀಮಿತವಾಗಲಿಲ್ಲ.

ನಾಯಕನ ಎಂಟ್ರಿ (ವಿಶೇಷವಾಗಿ ಫೈಟ್ ಸೀನ್‌ಗಳಿಗೆ) ದೃಶ್ಯ, ಇಂಟರ್‌ವೆಲ್ ಪಾಯಿಂಟ್, ಕ್ಲೈಮ್ಯಾಕ್ಸ್  ಫೈಟ್, ವಿಲನ್ ಹೀರೋಗೆ ಮುಖಾಮುಖಿ ಆದಾಗ, ನಾಯಕಿ ಅಳುವುದಕ್ಕೆ ಶುರು ಮಾಡುವಾಗ, ಸೆಂಟಿಮೆಂಟ್ ದೃಶ್ಯಗಳಿಗೆ  ಹತ್ತಾರು ಮುಖಗಳನ್ನು ಹೊತ್ತ ಮಳೆ ಇಂದು ತೆರೆ ಮೇಲೆ ನಿಂತಿದೆ. ದಶವತಾರಿ ಕಮಲ್‌ಹಾಸನ್‌ರನ್ನೇ ಮೀರಿಸುವಷ್ಟು ಮಳೆ ತನ್ನನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತ ಎಲ್ಲ ಪಾತ್ರಗಳಿಗೂ ಸೈ ಎನ್ನುತ್ತಿದೆ. ಆ ಮೂಲಕ ಮಳೆ ತಾನು ಕೂಡ ನವರಸ ನಾಯಕನೇ ಎನ್ನುವ ಗಟ್ಟಿ ನಂಬಿಕೆ ಮೂಡಿಸುತ್ತಿದೆ.

ಮಳೆಗೆ ಬೇಡಿಕೆ ಬಂದಿದ್ದು ಹೇಗೆ?
ಹಾಗೆ ನೋಡಿದರೆ ಕಳೆದ ಹತ್ತು ವರ್ಷಗಳ ಈಚೆಗೆ ಮಳೆಗೂ ಬೇಡಿಕೆ  ಬಂದಿದೆ ಎಂದರೆ ‘ಮುಂಗಾರು ಮಳೆ’ ಚಿತ್ರದ ಜಾದು. ಜೋಗ ಮತ್ತು ಮಳೆಯಿಂದ ಸ್ವತಃ ನಟ ಗಣೇಶ್ ಕೂಡ ಆಚೆ ಬರಲಿಲ್ಲ. ಹೀಗಾಗಿಯೇ ಅವರೇ ‘ಮಳೆಯಲಿ ಜೊತೆಯಲಿ’, ‘ಕೂಲ್’, ‘ಮುಗುಳು ನಗೆ’ ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಮಳೆಯ ಮೊರೆ ಹೋದರು. ಮುಂಗಾರು ಮಳೆಯ ಸೂತ್ರಧಾರ ಯೋಗರಾಜ್ ಭಟ್ ಕೂಡ ‘ಗಾಳಿಪಟ’, ‘ಮನಸಾರೆ’, ‘ಪಂಚರಂಗಿ’ ಹೀಗೆ ಹಲವು ಸಂದರ್ಭಗಳಲ್ಲಿ ಮಳೆ ಜತೆ ಗೆಳೆತನ ಮುಂದುವರಿಸಿದರು.

ಮತ್ತೊಂದು ಕಡೆ ಮುಂಗಾರು ಮಳೆ ಗೆದಿದ್ದೇ ತಡ ಪ್ರತಿಯೊಬ್ಬರು ಜೋಗ ಜಲಪಾತಕ್ಕೆ ಕ್ಯಾಮೆರಾ ಹಿಡಿಯುವುದಕ್ಕೆ ಹೊರಟರು. ಎಲ್ಲರಿಗೂ ಸಕಲೇಶಪುರ, ಕೊಡಚಾದ್ರಿ, ಚಾರ್ಮಾಡಿಘಾಟ್ ಹೀಗೆ ಸದಾ ಮಳೆಯಿಂದ ನೆನೆಯುವ ಹಸಿರು ಗುಡ್ಡಗಳೇ  ವಿದೇಶಿ ತಾಣಗಳಂತೆ ಕಂಡವು. ಮುಂಗಾರು ಮಳೆ ನಂತರ ಬಂದ ಬಹುತೇಕ ಹೀರೋಗಳು ತೆರೆ ಮೇಲಿನ ಮಳೆಯಲ್ಲಿ ನೆನೆಯುವುದು ವಾಡಿಕೆ ಆಯಿತು. ಹತ್ತು ವರ್ಷಗಳ ಹಿಂದೆ ಬಾಲಿವುಡ್, ಹಾಲಿವುಡ್ ನಾಯಕಿಯಂತೆ ಸಿನಿಮಾ ಪರದೆಗೆ ಅಪರಿಚಿತ ಅತಿಥಿಯಂತಿದ್ದ ಮಳೆ, ತವರು ಮನೆಯ ತಂಗಿಯಾಗಿಬಿಟ್ಟರು. ಅಷ್ಟರ ಮಟ್ಟಿಗೆ ಭಟ್ಟರು ಮಳೆಗೆ ಕಮರ್ಷಿಯಲ್ ಟಚ್ ಕೊಟ್ಟರು. ಇನ್ನೂ ಮನೋಮೂರ್ತಿ ರಾಗ, ಜಯಂತ್ ಕಾಯ್ಕಿಣಿ  ಸಾಹಿತ್ಯ, ಸೋನು ನಿಗಮ್, ಶ್ರೇಯಾ ಘೋಶಾಲ್ ಕಂಠ ಇದ್ದರೆ ಅಲ್ಲೊಂದು ಮಳೆ ಗೀತೆ ಇದ್ದೇ ಇರುತ್ತದೆ. ಮಳೆಯನ್ನು ಸಂಗೀತ ಪ್ರೇಮಿಗಳ ಪಾಲಿಗೆ ಭಕ್ತಿ ಗೀತೆಯಾಗಿಸಿದ ಕೀರ್ತಿ ಇವರದ್ದು.   

 

-ಆರ್.ಕೇಶವಮೂರ್ತಿ 

Follow Us:
Download App:
  • android
  • ios