ಮುಂಬೈ[ಜೂ.23]: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಆಗಿರುವ ‘ಬಿಗ್‌ಬಾಸ್’ನಲ್ಲಿ ‘ಬಿಗ್‌ಬಾಸ್’ ಹೇಳಿದಂತೆಯೇ ಸ್ಪರ್ಧಿಗಳು ಕೇಳಬೇಕು. ‘ಬಿಗ್ ಬಾಸ್’ ಹೇಳಿದ್ದೇ ನಿಯಮ. ಆದರೆ ‘ಬಿಗ್ ಬಾಸ್’ಗೆ ಕೇರ್ ಮಾಡದ ಪೊಲೀಸರು ‘ಬಿಗ್ ಬಾಸ್’ ಮನೆಗೇ ನುಗ್ಗಿ ಸ್ಪರ್ಧಿಯೊಬ್ಬನನ್ನು ಬಂಧಿಸಿರುವ ಅಪರೂಪದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ

ಮುಂಬೈನ ಗೋರೆಗಾಂವ್ ಫಿಲ್ಮ್‌ಸಿಟಿಯಲ್ಲಿ ಮರಾಠಿ ಬಿಗ್‌ಬಾಸ್ ಸೀಸನ್-೨ ನಡೆಯುತ್ತಿದೆ. ಅದರಲ್ಲಿ ಭಾಗಿಯಾಗಿರುವ ಅಭಿಜಿತ್ ಬಿಚುಕಾಲೆ ಎಂಬಾತನ ವಿರುದ್ಧ ಚೆಕ್‌ಬೌನ್ಸ್ ಪ್ರಕರಣದಲ್ಲಿ ಸತಾರಾ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆದಾಗ್ಯೂ ಆತ ಕೋರ್ಟಿಗೆ ಹಾಜರಾಗಿರಲಿಲ್ಲ. ಅಭಿಜಿತ್ ‘ಬಿಗ್‌ಬಾಸ್’ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದ ವಿಷಯ ತಿಳಿದು ಗುರುವಾರ ರಾತ್ರಿ ‘ಬಿಗ್‌ಬಾಸ್’ ಮನೆಗೇ ತೆರಳಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಏಕಾಏಕಿ ಪೊಲೀಸರು ಬಂದಿದ್ದರಿಂದ ಸ್ಪರ್ಧಿಗಳು ಒಮ್ಮೆ ಗಾಬರಿಗೊಂಡರೂ, ಅಭಿಜಿತ್‌ನನ್ನು ಬಂಧಿಸಲು ವಿರೋಧ ವ್ಯಕ್ತಪಡಿಸಲಿಲ್ಲ.

ಅಭಿಜಿತ್‌ನನ್ನು ಶನಿವಾರ ಸತಾರಾಕ್ಕೆ ಕರೆತಂದಿರುವ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದಾರೆ. ಅಭಿಜಿತ್ ೩೫ ಸಾವಿರ ರು.ನ ಚೆಕ್ ಅನ್ನು ನೀಡಿದ್ದು, ಅದು ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಿಗ್‌ಬಾಸ್‌ನಲ್ಲಿಯೂ ಆತ ಸಹ ಸ್ಪರ್ಧಿಗಳ ಜೊತೆ ಜಗಳವಾಡಿಕೊಂಡಿದ್ದ. ನಟಿಯೊಬ್ಬಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಹೀಗಾಗಿ ಆತನನ್ನು ಶೋನಿಂದ ಹೊರಗಿಡಬೇಕು ಎಂದು ವೀಕ್ಷಕರಿಂದ ಒತ್ತಾಯವೂ ಕೇಳಿಬಂದಿದ್ದವು.

ಅಭಿಜಿತ್ ರಾಜಕಾರಣಿ ಕೂಡ ಆಗಿದ್ದು, ನಗರಸಭೆಯಿಂದ ಸಂಸತ್ತಿನವರೆಗೆ ಎಲ್ಲ ಚುನಾವಣೆಗಳಲ್ಲೂ ಸ್ಪರ್ಧಿಸಿದ್ದ. ಆದರೆ ಗೆದ್ದಿರಲಿಲ್ಲ