‘ನಿನ್ನ ಕೊನೆಯ ಆಸೆ ಏನು’ ಅಂತ ಕೇಳಿದರೆ ನೇಣುಗಂಬದ ಮುಂದೆ ನಿಂತವನು ಏನು ಹೇಳಕ್ಕೆ ಸಾಧ್ಯ?

- ಹೀಗೊಂದು ಪ್ರಶ್ನೆ ಹಾಕಿ ಹುಟ್ಟು, ಸಾವು ಮತ್ತು ಸಾಧನೆಗೆ ತಮ್ಮದೇ ಆದ ಹೊಸ ಆಯಾಮ ಕೊಟ್ಟಿದ್ದು ಅಂಕಲ್‌ ಲೋಕನಾಥ್‌. ಅದು ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ಬೆಳ್ಳಿ ಹೆಜ್ಜೆ ಕಾರ್ಯಕ್ರಮ. ‘ನಿಮ್ಮ ಕೊನೆಯ ಆಸೆ ಏನು? ನೀವು ಯಾವ ಪಾತ್ರ ಮಾಡುವುದು ಉಳಿದುಕೊಂಡಿದೆ?’ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಅಂಕಲ್‌ ಕೇಳಿದ ಮರು ಪ್ರಶ್ನೆ ಇದು.

‘ಸಾಯುವವನು ಏನು ಕೇಳುತ್ತಾನೆ? ನನ್ನ ಬದುಕಿಸಿ ಅಂತ ಕೇಳುತ್ತಾನೆ. ಅದು ಆಗುತ್ತದೆಯೇ? ಆಗಲ್ಲ. ನಾನೂ ಅಷ್ಟೆ. ವಯಸ್ಸಾಗಿದೆ. ಮನೆಯಲ್ಲಿ ಕೂತಿದ್ದೇನೆ. ಈ ವಯಸ್ಸಿನಲ್ಲಿ ನಿಮಗೇನು ಬೇಕು ಅಂದರೆ ಬಿಡಿಎ ಸೈಟು ಬೇಕು, ನಮ್ಮ ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಸರ್ಕಾರಿ ಕೆಲಸ ಕೊಡಿ ಎನ್ನಲಾಗದು. ನನ್ನ ಕೊನೆಯ ಉಸಿರು ಇರುವತನಕ ಸಿನಿಮಾಗಳಲ್ಲಿ ನಟಿಸುತ್ತಲೇ ಇರಬೇಕು. ಬಣ್ಣ ಹಚ್ಚಿಕೊಂಡಿದ್ದಾಗಲೇ ನಾನು ಸಾಯಬೇಕು. ಅದೇ ನನ್ನ ಕೊನೆಯ ಆಸೆ’ ಎಂದು ನಗುನಗುತ್ತಲೇ ಸಾವಿನ ಮಾತಿಗೆ ಮುಖಾಮುಖಿ ಆಗಿದ್ದರು ಲೋಕನಾಥ್‌.

ತಮ್ಮ ಬಣ್ಣದ ಬದುಕನ್ನು ಹೀಗೆ ಹೇಳಿಕೊಂಡಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಅಂಕಲ್‌ ಲೋಕನಾಥ್‌ ಇನ್ನು ನೆನಪು ಮಾತ್ರ. ಹಲವು ದಶಕಗಳ ಕಾಲ ರಂಗಭೂಮಿ, ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಕಲಾವಿದರಾಗಿ ತಮ್ಮದೇ ಆದ ಛಾಪು ಮೂಡಿಸಿದ ಅವರಿಗೆ 91 ವರ್ಷ ವಯಸ್ಸಾಗಿತ್ತು. 1927ರಲ್ಲಿ ಹುಟ್ಟಿದ ಲೋಕನಾಥ್‌ ಅವರು ಬಹು ದೊಡ್ಡ ಕುಟುಂಬದಿಂದ ಬಂದವರು. 40 ಮಂದಿ ಸದಸ್ಯರನ್ನು ಒಳಗೊಂಡ ಅವಿಭಕ್ತ ಕುಟುಂಬದಿಂದ ಬಂದ ಅವರದ್ದು ಜವಳಿ ವೃತ್ತಿಯನ್ನು ನಂಬಿದ್ದ ಕುಟುಂಬ. ಓದಿದ್ದು ಎಂಜಿನಿಯರಿಂಗ್‌. ವೃತ್ತಿ ಮಾಡಿದ್ದು ಜವಳಿ ಅಂಗಡಿಯಲ್ಲಿ. ಆಸಕ್ತಿ ಬೆಳೆಸಿಕೊಂಡಿದ್ದು ಮಾತ್ರ ಸಂಗೀತದ ಮೇಲೆ. ಮುಂದೆ ಸಂಗೀತದ ಜತೆಗೆ ತಬಲಾ ಕಲಿಯಬೇಕೆಂದುಕೊಂಡವರನ್ನು ಗುರುತಿಸಿದ್ದು ಟಿ.ಪಿ. ಕೈಲಾಸಂ. ಕಾಕನಕೋಟೆ, ಚಂದ್ರಹಾಸ, ರಕ್ತಾಕ್ಷಿ, ಗೋಸ್ಟ್‌ ಈಡಿಪಸ್‌, ಮ್ಯಾಕ್‌ಬೆತ್‌, ಗೆಲಿಲಿಯೋ, ಡಾಲ್‌ ಹೌಸ್‌, ನಾನೇನು ಹೇಳಬೇಕು, ಅವನು ನಾನಲ್ಲ, ತನುವು ನಿನ್ನದೇ ಮನವು ನಿನ್ನದೇ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ ಕೀರ್ತಿ ಅಂಕಲ್‌ ಲೋಕನಾಥ್‌ ಅವರದ್ದು.

ವರ್ಷಕ್ಕೆ ಐದು ನಾಟಕಗಳಂತೆ 25 ವರ್ಷ ರಂಗಭೂಮಿಯಲ್ಲೇ ಪಯಣಿಸಿದ ಅಂಕಲ್‌ ಲೋಕನಾಥ್‌ ಅವರಿಗೆ ಸಿಜಿಕೆ, ಕೆ.ವಿ. ಅಯ್ಯರ್‌, ಬಿ.ಎಸ್‌. ನಾರಾಯಣ, ಜೆ.ಪಿ. ರಾಜರತ್ನಂ ಅವರಂತಹ ದಿಗ್ಗಜರ ಪ್ರೋತ್ಸಾಹವೂ ಸಿಕ್ಕಿತು. ರಂಗಭೂಮಿಯಲ್ಲಿದ್ದಾಗಲೇ ನಿರ್ದೇಶನಕ್ಕೂ ಮುಂದಾದ ಅಂಕಲ್‌, ಮರಾಠಿಯಿಂದ ಕನ್ನಡಕ್ಕೆ ತಂದ ‘ತನುವು ನಿನ್ನದೇ ಮನವು ನಿನ್ನದೇ’ ನಾಟಕವನ್ನು ತಾವೇ ನಿರ್ದೇಶಿಸಿದರು. ಹೀಗೆ ರಂಗಭೂಮಿಯಲ್ಲೇ ತಮ್ಮ ಕಲಾ ಸೇವೆ ಮುಂದುವರಿಸಿಕೊಂಡು ಹೋಗುತ್ತಿದ್ದ ಲೋಕನಾಥ್‌ ಅವರು ಚಿತ್ರರಂಗಕ್ಕೆ ಬಂದಿದ್ದು ಆಕಸ್ಮಿಕವಾಗಿ. ‘ನನಗೆ ಸಿನಿಮಾ ಅಷ್ಟೇನೂ ಇಷ್ಟವಿರಲಿಲ್ಲ. ಆದರೂ ಗೆಳೆಯರ ಬಲವಂತಕ್ಕೆ ಚಿತ್ರರಂಗಕ್ಕೆ ಬಂದವನು ನಾನು. ನನಗೆ ರಂಗಭೂಮಿಯೇ ಪಂಚಪ್ರಾಣ’ ಎಂದು ಹೇಳುತ್ತಿದ್ದ ಅಂಕಲ್‌ ಲೋಕನಾಥ್‌ ಅವರು ಮುಂದೆ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದು ಈಗ ಇತಿಹಾಸ.

ರಂಗಭೂಮಿಯಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ರಂಗದ ನಂಟು ಕಳಚಿಕೊಂಡಿದ್ದ ಕಾರಣ ಪಿ. ಲಂಕೇಶ್‌ ಅವರ ಗುಣಮುಖ ನಾಟಕ. ಎಷ್ಟೇ ಉದ್ದದ ಸಂಭಾಷಣೆಗಳಿದ್ದರೂ ನೆನಪಿನಲ್ಲಿಟ್ಟುಕೊಂಡು ಚಾಚೂತಪ್ಪದೇ ರಂಗದ ಮೇಲೆ ಹೇಳುತ್ತಿದ್ದವರಿಗೆ ಅದ್ಯಾಕೋ ‘ಗುಣಮುಖ’ ನಾಟಕದ ಸಂಭಾಷಣೆಗಳು ಹಲವು ಬಾರಿ ಪೂರ್ವಾಭ್ಯಾಸ ಮಾಡಿಕೊಂಡರೂ ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಆಗಲೇ ಅಂಕಲ್‌ ಲೋಕನಾಥ್‌ ಅವರಿಗೆ ಅನಿಸಿದ್ದು ನಾಟಕದಲ್ಲಿ ತಮಗೆ ನೀಡಿದ್ದ ಪಾತ್ರ ಮಾಡಲು ಸಾಧ್ಯವಿಲ್ಲ ಎಂದು. ‘ರಂಗಭೂಮಿ ತುಂಬಾ ಶುದ್ಧವಾದ ಕಲಾ ಜಗತ್ತು. ಇಲ್ಲಿ ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕೆ ಆಗಲಿಲ್ಲ ಎಂದ ಮೇಲೆ ಇಲ್ಲಿರುವುದು ಬೇಕಾಗಿಲ್ಲ’ ಎಂದು ತಮಗೆ ತಾವೇ ಶಿಕ್ಷಿ ವಿಧಿಸಿಕೊಂಡವರಂತೆ ರಂಗಭೂಮಿಂದ ದೂರವಾದವರನ್ನು ಮುಂದೆ ಕೈ ಹಿಡಿದಿದ್ದು ಚಿತ್ರರಂಗ.

ಅಂದಹಾಗೆ ಅಂಕಲ್‌ ಲೋಕನಾಥ್‌ ನಟನೆಯ ಮೊದಲ ಸಿನಿಮಾ ‘ಸಂಸ್ಕಾರ.’ ಆದರೆ, ಇವರ ನಟನೆಯಲ್ಲಿ ಮೊದಲು ತೆರೆಕಂಡಿದ್ದು ‘ಗೆಜ್ಜೆಪೂಜೆ’. ಮುಂದೆ ‘ಆಸ್ಫೋಟ’, ‘ಭೂತಯ್ಯನ ಮಗ ಅಯ್ಯು’, ‘ನಾಗರಹಾವು’, ‘ಹೊಸ ನೀರು’, ‘ಸಿಂಗಾಪುರದಲ್ಲಿ ರಾಜಾ ಕುಳ್ಳ’, ‘ಮನೆ ಮನೆ ಕಥೆ’, ‘ಮಾಲ್ಗುಡಿ ಡೇಸ್‌’, ‘ಹೃದಯ ಸಂಗಮ’, ‘ಕಥಾಸಂಗಮ’, ‘ಕಿಟ್ಟು ಪುಟ್ಟು’, ‘ಮಿಂಚಿನ ಓಟ’, ‘ಕರ್ತವ್ಯ’, ‘ಈ ಜೀವ ನಿನಗಾಗಿ’, ‘ಅನುರಾಗ’, ‘ಪುಷ್ಪಕ ವಿಮಾನ’, ‘ಪ್ರೇಮಾಚಾರಿ’, ‘ಎಲ್ಲರಂತಲ್ಲ ನನ್ನ ಗಂಡ’, ‘ಬೆಳದಿಂಗಳ ಬಾಲೆ’, ‘ಕಾಡ ಬೆಳದಿಂಗಳು’, ‘ಶುಭಂ’, ‘ಭೀಮಾ ತೀರದಲ್ಲಿ’ ಸೇರಿದಂತೆ 650ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಅಮೋಘ ನಟನೆಯಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತಿದ್ದಾರೆ. ಅದರಲ್ಲೂ ‘ಭೂತಯ್ಯನ ಮಗ ಅಯ್ಯು’ ಹಾಗೂ ‘ಮಿಂಚಿನ ಓಟ’ ಚಿತ್ರಗಳಲ್ಲಿ ಅಂಕಲ್‌ ಲೋಕನಾಥ್‌ ಅವರ ನಟನೆ ನೋಡುವುದೇ ಚೆಂದ. ಯಾವಾಗ ಉಪ್ಪಿನಕಾಯಿ ಡಬ್ಬಿ ಕದ್ದರೋ ಆಗಲೇ ಕನ್ನಡ ಚಿತ್ರರಂಗದ ಪ್ರೇಕ್ಷಕರ ಮನ ಗೆದ್ದ ಸಹಜವಾದ ಕಲಾವಿದ.

ಲೋಕನಾಥ್‌, ಅಂಕಲ್‌ ಆಗಿದ್ದು ಹೇಗೆ?

ಸಿನಿಮಾ ನಟರಾಗಿ ಚಿತ್ರರಂಗಕ್ಕೆ ಬಂದಾಗಲೇ ಲೋಕನಾಥ್‌ ಅವರು ಐದು ಮಕ್ಕಳ ತಂದೆ. ಹೀಗಾಗಿ ಯಾರೂ ಅವರನ್ನು ಹೆಸರಿಡಿದು ಕರೆಯುತ್ತಿರಲಿಲ್ಲ. ಸಿನಿಮಾ ಸೆಟ್‌ನಲ್ಲಿ ಎಲ್ಲರೂ ‘ಅಂಕಲ್‌’ ಎಂದೇ ಕರೆಯುತ್ತಿದ್ದರು. ಡಾ

ರಾಜ್‌ಕುಮಾರ್‌ ಅವರೂ ಸಹ ಲೋಕನಾಥ್‌ ಅವರನ್ನು ‘ಅಂಕಲ್‌’ ಅಂತಲೇ ಕೂಗುತ್ತಿದ್ದರು. ಅಲ್ಲಿಗೆ ಸಿನಿಮಾ ನಟರ ಹೆಸರಿಗೆ ಸ್ಟಾರ್‌ ಪಟ್ಟಜತೆಯಾಗುವಂತೆ ಲೋಕನಾಥ್‌ ಅವರಿಗೆ ‘ಅಂಕಲ್‌’ ಎನ್ನುವ ಸ್ಟಾರ್‌ಡಮ್‌ ಸೇರಿಕೊಂಡು 91ನೇ ವಯಸ್ಸಿನಲ್ಲೂ ಅವರು ಅಂಕಲ್‌ ಆಗಿಯೇ ನಮ್ಮನ್ನು ಅಗಲಿದ್ದಾರೆ.