-ಆರ್. ಕೇಶವಮೂರ್ತಿ
ಕನ್ನಡ ಚಿತ್ರರಂಗ ಹೇಗಿದೆ ಅಂತ ಕೇಳಿದರೆ ಚಪ್ಪಾಳೆ ತಟ್ಟಿ ಸಿಳ್ಳೆ ಹಾಕಿ ಸಂಭ್ರಮಿಸುವಷ್ಟು ಪ್ರಗತಿ ಅಲ್ಲಿ ಕಾಣಿಸುತ್ತಿದೆ. ಒಟ್ಟಾರೆಯಾಗಿ ಕೊಂಚ ನೀರಸ ಅನ್ನಿಸಬಹುದು. ಆದರೆ ಒಳಹೊಕ್ಕು ನೋಡಿದರೆ ಅಲ್ಲಿ ಅತ್ಯಂತ ಪ್ರತಿಭಾವಂತರು ಕೆಲಸ ಮಾಡುತ್ತಿರುವುದು ಕೆಲವರಿಗಾದರೂ ಕಣ್ಣಿಗೆ ಬಿದ್ದೀತು. ಎಲ್ಲಾ ಶೈಲಿಯ ಸಿನಿಮಾಗಳೂ ಇಲ್ಲಿ ಬರುತ್ತಿರುವುದನ್ನು ಕಾಣಬಹುದು.

ಬಿಡುಗಡೆಯ ಸಂಭ್ರಮ: 40-50 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದ್ದ ಸಿನಿಮಾ ಈಗ ಒಂದು ಸಾವಿರ ತೆರೆಗಳಲ್ಲಿ ರಾರಾಜಿಸುತ್ತಿದೆ. ಎಲ್ಲಾ ಚಿತ್ರಗಳಿಗೂ ಈ ಭಾಗ್ಯ ಸಿಗದೇ ಇರಬಹುದು. ಆದರೆ ಪ್ರತಿಷ್ಠಿತ ಸಿನಿಮಾಗಳು ಪರಭಾಷಾ ಸಿನಿಮಾಗಳಿಗೆ ಸವಾಲು ಹಾಕುವ ರೀತಿಯಲ್ಲೇ ತೆರೆಕಾಣುತ್ತಿವೆ. ವಿದೇಶಗಳಲ್ಲೂ ಪ್ರದರ್ಶನ ಕಾಣುತ್ತಿವೆ. ಹೊರರಾಜ್ಯಗಳಲ್ಲೂ ಬಿಡುಗಡೆ ಆಗುತ್ತವೆ.

ಖರ್ಚಿನ ಬಾಬತ್ತು: ಒಂದು ಕಾಲದಲ್ಲಿ ರಾಮು ಕೋಟಿ ನಿರ್ಮಾಪಕ ಅಂತ ಕರೆಸಿಕೊಳ್ಳುತ್ತಿದ್ದರು. ಇವತ್ತು ಕೋಟಿ ಲೆಕ್ಕವೇ ಅಲ್ಲ. ತಾರೆಯ ಸಿನಿಮಾದ ಖರ್ಚು 20 ಕೋಟಿ ದಾಟುತ್ತದೆ. ಮಹತ್ವದ ಸಿನಿಮಾ ಎಂದಾದರೆ 40 ಕೋಟಿ ಮುಟ್ಟಿದ್ದೂ ಇದೆ.

ಮಾರಾಟದ ಮೊತ್ತ: ಒಂದು ಸಿನಿಮಾ ನೂರು ಕೋಟಿ ಗಳಿಸುವ ದಿನಗಳು ದೂರವಿಲ್ಲ. ಉಪಗ್ರಹ ಹಕ್ಕು ಐದಾರು ಕೋಟಿಗಳಿಗೆ ಏರಿದೆ. ಡಿಜಿಟಲ್ ಹಕ್ಕು ಎಂಬ ಹೊಸ ವಿಭಾಗ ಹುಟ್ಟಿಕೊಂಡಿದೆ.

ಸಂಭಾವನೆ: ತಾರೆಯರ ಸಂಭಾವನೆಯ ಮೊತ್ತ ನಾಲ್ಕರಿಂದ ಹತ್ತು ಪಟ್ಟು ಹೆಚ್ಚಾಗಿದೆ. ಸಣ್ಣ ಪುಟ್ಟ ತಾರೆಯರೂ ಕೂಡ ಚೆನ್ನಾಗಿ ದುಡಿಯುತ್ತಿದ್ದಾರೆ. ಕನ್ನಡ ಕೇವಲ ಹೊಟ್ಟೆ ತುಂಬಿಸುತ್ತಿಲ್ಲ, ಜೇಬು ಕೂಡ ತುಂಬಿಸುತ್ತಿದೆ.

ಚಿತ್ರಮಂದಿರಗಳ ಬದಲು ಮಲ್ಟಿಪ್ಲೆಕ್ಸು: ಚಿತ್ರಮಂದಿರಗಳ ಸಂಖ್ಯೆ ಕುಸಿಯುತ್ತಿದೆ ಎಂದು ಹೇಳುತ್ತಿದ್ದಂತೆ ಮಲ್ಟಿಪ್ಲೆಕ್ಸುಗಳು ಏರುತ್ತಿವೆ. ಕೆಡವಿದ ಒಂದು ಚಿತ್ರಮಂದಿರಕ್ಕೆ ಹತ್ತು ಮಲ್ಟಿಪ್ಲೆಕ್ಸುಗಳು ತಲೆಯೆತ್ತುತ್ತಿವೆ. ಕನ್ನಡ ಚಿತ್ರಗಳಿಗೆ ಆತಂಕ ಕಾಣಿಸುತ್ತಿಲ್ಲ.

ಪ್ರೇಕ್ಷಕರಿಗೆ ಬರವಿಲ್ಲ: ಈಗ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ 200 ದಾಟಿದೆ. ಒಂದಿಷ್ಟು ಚೆನ್ನಾಗಿದ್ದರೆ ಸಾಕು, ಅವು ಲಾಭ ಗಳಿಸುತ್ತವೆ ಎಂದು ಚಿತ್ರರಂಗದ ಮಾಹಿತಿ ಹೇಳುತ್ತದೆ. ಸಿನಿಮಾ ಪ್ರೇಕ್ಷಕರಿಗೆ ಕೊರತೆಯಿಲ್ಲ. ಮೊದಲು ಹತ್ತು ಚಿತ್ರವನ್ನು ನೂರು ಮಂದಿ ನೋಡುತ್ತಿದ್ದರು. ಈಗ ನೂರು ಚಿತ್ರವನ್ನು ಹತ್ತು ಹತ್ತು ಮಂದಿ ನೋಡುತ್ತಿದ್ದಾರೆ. ಹತ್ತು ಪಟ್ಟು ಪ್ರೇಕ್ಷಕರ ಹೆಚ್ಚಿದ್ದಾರೆ.

ಸಿನಿಮಾಗಳ ಸಂಖ್ಯೆ ಏರಿದೆ: ವರ್ಷಕ್ಕೆ 50-80 ಸಿನಿಮಾಗಳು ಬರುತ್ತಿದ್ದವು. ಕಳೆದ ಐದಾರು ವರ್ಷಗಳಿಂದ ವರ್ಷಕ್ಕೆ 200 ಸಿನಿಮಾಗಳು ತೆರೆಕಾಣುತ್ತಿವೆ. ಕನಡದ ಜೊತೆಗೇ ತುಳು, ಕೊಂಕಣಿ, ಕೊಡವ, ಲಂಬಾಣಿ, ಬ್ಯಾರಿ ಭಾಷೆಗಳ ಸಿನಿಮಾಗಳೂ ಬೆಳೆಯುತ್ತಿವೆ. ಬೆಂಗಳೂರಲ್ಲೇ ಚಿತ್ರೋತ್ಸವ ನಡೆಯುತ್ತಿದೆ. ಕಾಲೇಜುಗಳಲ್ಲಿ ಕನಡ ಚಿತ್ರೋತ್ಸವಗಳು ಏರ್ಪಾಡಾಗುತ್ತಿವೆ. 

ಕಿರುಚಿತ್ರಗಳ ಹೊಸ ತಳಿ: ವರ್ಷಕ್ಕೆ ಕನ್ನಡದಲ್ಲಿ ಸುಮಾರು 500 ಕಿರುಚಿತ್ರಗಳು ನಿರ್ಮಾಣ ಆಗುತ್ತಿವೆ. ಹೊಸ ಪ್ರತಿಭಾವಂತರು ಕನ್ನಡವನ್ನು ಕಿರುಚಿತ್ರಗಳಲ್ಲಿ ಬೆಳಗಿಸುತ್ತಿದ್ದಾರೆ. ಕಿರುಚಿತ್ರಗಳಿಗೆ ಪ್ರಶಸ್ತಿಗಳೂ ಸಿಗುತ್ತಿವೆ.

ಚಿತ್ರಗೀತೆಗಳಿಗೆ ಹೊಸ ರಾಗ: ಜಯಂತ ಕಾಯ್ಕಿಣಿ, ಯೋಗರಾಜ ಭಟ್, ಹೃದಯ ಶಿವ, ನಾಗೇಂದ್ರಪ್ರಸಾದ್, ಕವಿರಾಜ್ ಮುಂತಾದ ಹಿರಿಯ ತಲೆಮಾರಿನ ಗೀತ ರಚನಕಾರರ ಜೊತೆಗೆ ತ್ರಿಲೋಕ್, ಸಂತೋಷ್ ಆನಂದರಾಮ್, ಚೇತನ್ ಮುಂತಾದ ಹೊಸ ಪ್ರತಿಭೆಗಳು ಅರಳಿದ್ದಾರೆ.

ಹೊಸ ಧ್ವನಿ, ಹೊಸ ರಾಗ: ವಿಜಯ್ ಪ್ರಕಾಶ್, ನವೀನ್ ಸಜ್ಜು, ಅನನ್ಯಾ ಭಟ್, ಅನುರಾಧ ಭಟ್, ಅಂಕಿತಾ ಕುಂಡು, ಶ್ವೇತಾ ದೇವನಹಳ್ಳಿ ಮೊದಲಾದ ಹೊಸ ದನಿಗಳು ಕಿವಿತುಂಬಿವೆ. ವಾಸುಕಿ ವೈಭವ್, ಅಜನೀಶ್ ಲೋಕನಾಥ್, ರವಿ ಬಸ್ರೂರ್, ಚರಣ್ರಾಜ್, ಅನೂಪ್ ಸೀಳಿನ್, ಜೂಡಾ ಸ್ಯಾಂಡಿ- ಹೀಗೆ ಹೊಸ ತಲೆಮಾರಿನ ಸಂಗೀತ ನಿರ್ದೇಶಕರ ಒಂದು ದಂಡು ಬಂದು ಬಿಟ್ಟಿದೆ. ಅವರ ಜೊತೆಗೆ ಹರಿಕೃಷ್ಣ, ಅರ್ಜುನ್ ಜನ್ಯ, ಗುರುಕಿರಣ್ ಕೂಡ ತಮ್ಮ ಕೊಡುಗೆ ನೀಡುತ್ತಿದ್ದಾರೆ.