ಬೆಂಗಳೂರು (ಆ. 13): ಸಮಾಜವೇ ಮುಖ್ಯ ಎನ್ನುವ ಅಪ್ಪ, ಇಲ್ಲ ನನಗೆ ಶಿಕ್ಷಣವೇ ಮುಖ್ಯ ಎನ್ನುವ ಮಗ. ಅವರ ವಾಗ್ವಾದದಲ್ಲಿ ಗೆದ್ದಿದ್ದು ಮಗನ ಛಲ. ನೀವು ನಂಬಿದ ಸಮಾಜವೇ ನಿಮಗೆ ಮುಖ್ಯವಾಗುವುದಾದರೆ, ನಾನು ನಂಬಿದ ಸಮಾಜಕ್ಕೆ ಈಗ ಬೇಕಿರುವುದು ಶಿಕ್ಷಣ, ಅದರ ಜತೆಗೆ ಸುಧಾರಣೆ ಅಂತ ಮನೆಬಿಟ್ಟು ಬಂದವರು ಜ್ಯೋತಿ ಬಾ ಪುಲೆ.

ಅವರನ್ನೇ ಕೈ ಹಿಡಿದು ಮಹಿಳೆಯರು, ಶೂದ್ರರ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಸಾವಿತ್ರಿಬಾಯಿ ಪುಲೆ. ಈ ಮಹಾನ್ ಸಮಾಜ ಸುಧಾರಕ ದಂಪತಿಗಳ ಬದುಕಿನ ಕಥಾ ಸಾರವೇ ‘ಸಾವಿತ್ರಿಬಾಯಿ ಪುಲೆ’ಚಿತ್ರ. ಪತ್ರಕರ್ತ ಸರಜೂ ಕಾಟ್ಕರ್ ಬರೆದ ‘ಸಾವಿತ್ರಿ ಬಾಯಿ ಪುಲೆ’ ಕಾದಂಬರಿಯನ್ನೇ ಸಿನಿಮಾ ರೂಪಕ್ಕೆ ತಂದಿದ್ದಾರೆ ನಿರ್ದೇಶಕ ವಿಶಾಲರಾಜ್.

ಸಿನಿಮಾ ಭಾಷೆಯಲ್ಲಿ ಇದು ಬಯೋಪಿಕ್.ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ದೇಶದ ಮೊದಲ ಶಿಕ್ಷಕಿ ಎಂದೇ ಹೆಸರಾದ ಸಾವಿತ್ರಿ ಬಾಯಿ ಪುಲೆ ಬದುಕನ್ನೇ ಹೆಚ್ಚು ಫೋಕಸ್ ಮಾಡಿದೆ ಈ ಚಿತ್ರ.ಜ್ಯೋತಿ ಬಾ ಪುಲೆ ಹಾಗೂ ಸಾವಿತ್ರಿ ಬಾಯಿಪುಲೆ ದಂಪತಿ ಬದುಕಿದ್ದ ಕಾಲಘಟ್ಟವೇ ವಿಚಿತ್ರ ಸನ್ನಿವೇಶದ್ದು. ಆ ಸಂದರ್ಭದಲ್ಲಿ ಶೂದ್ರರು ಹಾಗೂ ಸ್ತ್ರೀಯರಿಗೆ ಶಿಕ್ಷಣ ನಿಷೇಧ. ಹಾಗಂತ ಮನುಸೃತಿಯೇ ಹೇಳಿದೆ ಎನ್ನುವುದನ್ನು ಪ್ರತಿಪಾದಿಸುತ್ತಿದ್ದ ವರ್ಗವೇ ಇತ್ತು.

ಇನ್ನು ಸತಿಸಹಗಮನ ಪದ್ಧತಿ, ಜಾತಿ ಪದ್ಧತಿ ಒಪ್ಪಿತ ವ್ಯವಸ್ಥೆಯೇ ಎನ್ನುವ ಹಾಗಿತ್ತು ಕಾಲ. ಅಂತಹ ವಿಷಮ ಪರಿಸ್ಥಿತಿಯಲ್ಲಿ ಜ್ಯೋತಿ ಬಾ ಪುಲೆ ಹಾಗೂ ಸಾವಿತ್ರಿ ಬಾಯಿ ಪುಲೆ ದಂಪತಿಯು ವ್ಯವಸ್ಥೆಯ ವಿರುದ್ಧ ನಿಂತು ಶೂದ್ರರು ಹಾಗೂ ಮಹಿಳೆಯರಿಗೆ ಹೇಗೆ ಶಿಕ್ಷಣ ಕಲಿಸಿದರು, ಶಿಕ್ಷಣ ಕಲಿತ ಸಮಾಜ ಹೇಗೆ ಸುಧಾರಣೆಯತ್ತ ಸಾಗಿತು ಎನ್ನುವುದನ್ನು ಹೇಳುತ್ತದೆ ಈ ಚಿತ್ರ.

ಒಂದೆಡೆ ಭೂತ, ಮತ್ತೊಂದೆಡೆ ವರ್ತಮಾನ. ಎರಡರ ಛಾಯೆಯೂ ಇಲ್ಲಿ ಮುಖಾಮುಖಿ ಆಗಿವೆ. ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ಎನ್ನುವ ಮಾತು ಈಗ ಮಾಮೂಲು. ಆದರೆ,ಅಂತಹದೊಂದು ಮಾತು ಜನಜನಿತವಾಗುವುದಕ್ಕೆ ನೂರಾರು ವರ್ಷಗಳೇ ಕಳೆದವು. ಅದರ ಮೂಲ ಹೋರಾಟ ಹೇಗಿತ್ತು ಎನ್ನುವುದನ್ನು ಸಾವಿತ್ರಿ ಬಾಯಿ ಪುಲೆಯವರು ಪಟ್ಟ ಪರಿಶ್ರಮ, ಅನುಭವಿಸಿದ ನೋವು, ಅಪಮಾನ, ಯಾತನೆಯ ಸನ್ನಿವೇಶಗಳನ್ನು ಪ್ರತ್ಯೇಕ ಘಟಾವಳಿಗಳ ಮೂಲಕ ನೋಡುಗರ ಮನ ಮುಟ್ಟುವಂತೆ ಕಟ್ಟಿಕೊಟ್ಟಿದ್ದು ನಿರ್ದೇಶಕರ ಜಾಣ್ಮೆಯೂ ಹೌದು. ಬಯೋಪಿಕ್ ಮಾದರಿಯ ಸಿನಿಮಾಗಳು ಕೇವಲ ರಂಜನೀಯ ಸರಕಲ್ಲ ಎನ್ನುವ ದಾಟಿಯಲ್ಲೇ ಈ ಸಿನಿಮಾ ನೋಡುತ್ತಾ ಹೋದರೆ ಆರಂಭದಿಂದ ಅಂತ್ಯದ ನಡುವಿನ ಸಮಯವೇ ಗೊತ್ತಾಗುವುದಿಲ್ಲ.

ಪುಲೆ ದಂಪತಿಯ ವಿರೋಚಿತ ಬದುಕಿನ ಈ ಕತೆ ಆರಂಭದಿಂದ ಅಂತ್ಯದ ತನಕ ಕಾಡಿಸುವ ಕತೆಯಾಗಿ ಸಾಗುತ್ತಾ ಹೋದರೆ, ಅದಕ್ಕೆ ಆನೆ ಬಲ ತಂದು ಕೊಟ್ಟಿದ್ದು ನಟಿ ತಾರಾ ಮತ್ತು ಸುಚೇಂದ್ರ ಪ್ರಸಾದ್ ಅವರ ಮಾಗಿದ ನಟನೆ. ಸಾವಿತ್ರಿ ಬಾಯಿ ಪುಲೆ ಪಾತ್ರದೊಳಗಿನ ತಾರಾ ಅವರನ್ನು ನೋಡುತ್ತಾ ಹೋದರೆ ನಿಜವಾದ ಸಾವಿತ್ರಿ ಬಾಯಿ ಪುಲೆ ಹೀಗಿಯೇ ಇದ್ದರೆ? ಹಾಗೊಂದು ಪ್ರಶ್ನೆ ನಿಮ್ಮನ್ನೆ ಕಾಡಿಸುತ್ತೆ. ಜ್ಯೋತಿ ಬಾ ಪುಲೆ ಪಾತ್ರದೊಳಗಿನ ಮಾತು, ನಟನೆ ಜತೆಗೆ ಸುಚೇಂದ್ರ ಪ್ರಸಾದ್ ಅದ್ಭುತ ಕಲಾವಿದರಾಗಿ ಕಾಣಿಸಿಕೊಳ್ಳುತ್ತಾರೆ.

ವಿವಿಧ ಪಾತ್ರಗಳಲ್ಲಿ ಬಂದು ಹೋಗುವ ಶ್ರೀಪತಿ ಮಂಜನಬೈಲು, ತನುಜ, ಮ್ಯತ್ಯುಂಜಯ ಹಿರೇಮಠ, ಉಮೇಶ ತೇಲಿ, ಆದೇಶ ಏಣಗಿ, ಮಹಾಂತೇಶ ಗಜೇಂದ್ರಗಡ್ .. ಹೀಗೆ ಚಿತ್ರದೊಳಗಿನ ಪ್ರತಿಯೊಬ್ಬರ ಪಾತ್ರವೂ ಇಲ್ಲಿ ಆಕರ್ಷಕ. ಹಾಗೆಯೇ ನಾಗರಾಜ ಅದೊನಿ ಛಾಯಾಗ್ರಹಣ ಚಿತ್ರವನ್ನು ಹೆಚ್ಚು ಆಕರ್ಷಣೀಯಗೊಳಿಸಿದೆ. ಶಿರೀಷ್ ಜೋಷಿ ಸಂಭಾಷಣೆ, ಸಂಗೀತ ಕಟ್ಟಿ ಸಂಗೀತ ಹಾಗೂ ದಯಾನಂದ ಅವರ ಪ್ರಸಾದನ ಎಲ್ಲವೂ ಅಚ್ಚುಕಟ್ಟು. ಒಂದೇ ದಾರದಲ್ಲಿ ಮುತ್ತು ಪೋಣಿಸಿದ ಹಾಗಿವೆ ಅವುಗಳ ಮೆರಗು. ಮನರಂಜನೆ ಎನ್ನುವ ಲೆಕ್ಕಾಚಾರದ ಆಚೆ, ವಿಚಾರಗಳ ಮಂಥನಕ್ಕೆ ಅಂತಾದರೂ ಚಿತ್ರಮಂದಿರಕ್ಕೆ ಹೋದರೆ, ನಿಮ್ಮನ್ನು ಒಂದು ಕ್ಷಣ ಕಾಡಿಸದೆ  ಬಿಡುವುದಿಲ್ಲ ಈ ಸಿನಿಮಾ.