ನಾಟಕವೆಂದರೆ ಜೈ, ಸಿನಿಮಾ ಅಂದರೆ ವೈ!
ಯುವ ಲೇಖಕ ಹನುಮಂತ ಹಾಲಿಗೇರಿ ಅವರ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಕೃತಿ ಆಧರಿಸಿದ ಸಿನಿಮಾವಿದು. ಫ್ಯಾಂಟಸಿ ಕತೆಗಳೇ ಸಿನಿಮಾ ಆಗುವಾಗ ಸಾಹಿತ್ಯ ಕೃತಿಯನ್ನೇ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಿರುವ ಉತ್ತರ ಕರ್ನಾಟಕ ಮೂಲದ ಹೊಸಬರ ತಂಡದ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಆದರೆ, ಸಾಹಿತ್ಯ ಕೃತಿಯನ್ನು ಸಿನಿಮಾ ರೂಪಕ್ಕೆ ತರುವಾಗ ಇರಬೇಕಾದ ಸಿದ್ಧತೆಯ ಕೊರತೆ ಇಲ್ಲಿ ಹೆಚ್ಚಾಗಿದೆ.
ದೇಶಾದ್ರಿ ಹೊಸ್ಮನೆ
ಕತೆಯಾಗಿ ಪ್ರೇಕ್ಷಕರಲ್ಲಿ ಚಿಂತನೆಗೆ ದಕ್ಕುವ ಈ ಸಿನಿಮಾ, ದೃಶ್ಯರೂಪದಲ್ಲಿ ರಂಜನೆಗೆ ನಿಲುಕುವುದಿಲ್ಲ. ಕತೆ ಚೆನ್ನಾಗಿದೆ, ಅದರೊಳಗೊಂದು ಸಂದೇಶವಿದೆ. ದೇವರೆಂಬ ಭಾವನಾತ್ಮಕ ವಿಚಾರ ಸಂಘರ್ಷಕ್ಕೆ ಕಾರಣವಾದರೆ ಹೇಗೆಲ್ಲ ಅದು ರೂಪ ಪಡೆದು ಜನರ ನೆಮ್ಮದಿ ಕದಡಬಲ್ಲದು ಎನ್ನುವ ಸೂಕ್ಷ್ಮ ಸಂಗತಿಯನ್ನು ಈ ಕತೆ ಹೇಳುತ್ತದೆ. ಆದರೆ ಅದನ್ನು ಸಿನಿಮ್ಯಾಟಿಕ್ ರೂಪದಲ್ಲಿ ಹೇಳುವಾಗ ನಿರ್ದೇಶಕರು ಹರ ಸಾಹಸ ಪಟ್ಟಿದ್ದಾರೆ. ಹೇಳಬೇಕಾಗಿದ್ದಕ್ಕೂ ಸರಿಯಾದ ರೂಪ ನೀಡಿಲ್ಲ. ಹನುಮಪ್ಪನೇ ಅವೆರಡು ಊರಿನ ನಡುವೆ ಜಗಳಕ್ಕೆ ಕಾರಣನಾಗುತ್ತಾನೆ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಹನುಮಪ್ಪನ ಔಚಿತ್ಯವೇ ತೆರೆಗೆ ಸರಿದಿದೆ. ಪ್ರೀತಿಗಾಗಿ ರಕ್ತಪಾತ ನಡೆಯುತ್ತದೆ. ಘರ್ಷಣೆಯಲ್ಲಿ ಶುರುವಾದ ಕತೆ, ಘರ್ಷಣೆಯಲ್ಲೇ ಅಂತ್ಯ ಕಾಣುತ್ತದೆ.
ಚಿತ್ರ: ಜೈ ಕೇಸರಿ ನಂದನ್
ತಾರಾಗಣ : ರಾಜು ತಾಳಿಕೋಟೆ, ಗುರುರಾಜ್ ಹೊಸಕೋಟೆ, ಅಮೃತಾ, ಓ.ಎಸ್. ಬಿರಾದಾರ್, ಇಳಕಲ್ ಪವಾರ್, ಚಂದ್ರಶೇಖರ ಶಾಸ್ತ್ರಿ, ಕಲ್ಲೇಶ್‌ವರ್ಧನ್, ಪ್ರವೀಣ್, ಅಶ್ವಿನಿ
ನಿರ್ದೇಶನ : ಶ್ರೀಧರ್ ಜಾವೂರ
ಛಾಯಾಗ್ರಹಣ : ಆಚಾರ್
ಸಂಗೀತ : ರಾಜ್ ಕಿಶೋರ್ ರಾವ್
ಈಗಾಗಲೇ ಈ ಕೃತಿಯು ನಾಟಕವಾಗಿ ಬಹುಜನಪ್ರಿಯತೆ ಪಡೆದಿದೆ. ಸರಿ ಸುಮಾರು 50ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಅದರ ಪರಿಣಾಮವೋ ಏನೋ ನಿರ್ದೇಶಕರು ಅದರ ಪ್ರಭಾವಕ್ಕೆ ಸಿಲುಕಿದ್ದಾರೆ. ಪ್ರತಿ ದೃಶ್ಯದಲ್ಲೂ ನಾಟಕದ ಛಾಯೆ ಎದ್ದು ಕಾಣುತ್ತದೆ. ಹಾಗಾಗಿಯೇ ಈ ಕೃತಿ ಸಿನಿಮಾದ ರೂಪಕ್ಕೆ ಬರುವಲ್ಲಿ ಪೇಲವವಾಗಿದೆ. ಆದರೂ ಕತೆಯ ಔಚಿತ್ಯ ಈ ಸಂದರ್ಭಕ್ಕೆ ಹತ್ತಿರವಾಗಿದ್ದರಿಂದ ಆ ಮೂಲಕವೇ ನೋಡುಗನಲ್ಲಿ ಒಂದಷ್ಟುರಂಜಿಸುತ್ತಾ ಸಾಗುತ್ತದೆ. ದರಗಟ್ಟಿಹಾಗೂ ವಜ್ರಗಟ್ಟಿಎಂಬ ಎರಡು ನೆರೆಹೊರೆ ಹಳ್ಳಿಗಳು. ಆವೆರೆಡು ಊರಿಗೂ ಒಬ್ಬನೇ ಹನುಮಪ್ಪ. ಜಾತ್ರೆ ಬಂದರೆ ಎರಡು ಊರಿನವರು ಸೇರಿಕೊಂಡು ಜಾತ್ರೆ ಮಾಡುತ್ತಾರೆ. ಆದರೆ ದರಗಟ್ಟಿಹುಡುಗರು ತಮ್ಮೂರಿಗೆ ಹನುಮಪ್ಪನನ್ನು ರಾತ್ರೋರಾತ್ರಿ ಕದ್ದು ತಂದ ಪರಿಣಾಮ ಹುಟ್ಟಿಕೊಂಡ ದ್ವೇಷ, ವೈಷಮ್ಯವು ಹಲವು ಬಗೆಯಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತೆ. ರಾಜಕಾರಣಿಯ ಪ್ರವೇಶ, ಪೊಲೀಸ್ ಕಂಪ್ಲೇಂಟು, ಕೊನೆಗೆ ರಾಜಿ ಸಂಧಾನ ಇತ್ಯಾದಿ ಸುತ್ತಣ ಅದು ಕೊನೆಗೆ ಶಾಂತಿಯುತವಾಗಿ ಅಂತ್ಯಕಂಡರೂ, ಅವೆರಡು ಊರಿನ ದ್ವೇಷಕ್ಕೆ ಕಾರಣವಾಗಿದ್ದು ನಾಯಕ-ನಾಯಕಿಯ ನಡುವಿನ ಪ್ರೀತಿ. ಕೊನೆಗದು ಏನಾಯಿತು ಅನ್ನೋದು ಚಿತ್ರದ ಕ್ಲೈಮ್ಯಾಕ್ಸ್.
ಈ ಸಿನಿಮಾದ ನಿರ್ಮಾಣ, ತಾಂತ್ರಿಕ ವರ್ಗ ಹಾಗೂ ತಾರಾಗಣವೂ ಸೇರಿ ಎಲ್ಲರೂ ಉತ್ತರ ಕರ್ನಾಟಕದ ಭಾಗದವರೇ. ಕಲಾವಿದರಂತೂ ಬಹುತೇಕ ರಂಗಭೂಮಿ ಹಿನ್ನೆಲೆಯಿಂದ ಬಂದವರೇ. ಇಲ್ಲಿನ ಸಂಭಾಷಣೆಗೂ ಉತ್ತರ ಕರ್ನಾಟಕದ ಜವಾರಿ ಭಾಷೆಯನ್ನು ದುಡಿಸಿಕೊಳ್ಳಲಾಗಿದೆ. ಹಾಗಾಗಿ ಕಲಾವಿದರ ಸಂಭಾಷಣೆಯಲ್ಲಿ ಸರಳತೆ, ಪಕ್ವತೆ ಇದ್ದರೂ, ನಟನೆಯಲ್ಲಿ ಸಿನಿಮ್ಯಾಟಿಕ್ ರೂಪದ ಕೊರತೆ ಎದ್ದು ಕಾಣುತ್ತದೆ. ಬಹುತೇಕ ಕಲಾವಿದರು ಸಿನಿಮಾಕ್ಕೆ ಅನಾನುಭವಿಗಳಂತೆ ಕಾಣುತ್ತಾರೆ. ಹಾಗೆ ನೋಡಿದರೆ ಕಲಾವಿದರ ಪೈಕಿ ರಾಜು ತಾಳಿಕೋಟೆ ಹಾಗೂ ಗುರುರಾಜ್ ಹೊಸಕೋಟೆ ಅನುಭವಿಗಳಾಗಿ ಉಳಿದವರ ಕೊರತೆ ನೀಗಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಸಾಕಷ್ಟುಲೋಪಗಳಿವೆ. ಆದರೂ ನಾಟಕ ನೋಡಿ ಖುಷಿ ಪಟ್ಟವರಿಗೆ ಈ ಸಿನಿಮಾ ತುಸು, ಭಿನ್ನ ನೋಟದಲ್ಲಿ ಮಾತ್ರ ರಂಜಿಸಬಲ್ಲದು. ಉಳಿದಂತೆ ಮನರಂಜನೆ ಅಂತ ಹೋದರೆ ನಿರಾಸೆಯೇ ಹೆಚ್ಚು.