ಬದಲಿಗೆ ಚಿತ್ರದ ಟೈಟಲ್‌ ಏನು, ಕತೆ ಏನು ಅಂತೆಲ್ಲ ಲಾಜಿಕ್‌ ಹುಡುಕಿದರೆ ಪ್ರೇಕ್ಷಕನಿಗೆ ರಂಜನೆಗಿಂತ ನಿರಾಸೆ ಖಚಿತ. ಅದರಲ್ಲೂ ಕರಾವಳಿ ಕನ್ನಡವನ್ನು ಇಷ್ಟಪಡುವರಿಗೆ ಅಲ್ಲಿನ ಹಾಸ್ಯದ ಸನ್ನಿವೇಶಗಳೆಲ್ಲ ರಂಜನೀಯ. ಉಳಿದಂತೆ, ಇದೊಂದು ಸಿಂಪಲ್‌ ಕತೆ. ದಿಕ್ಕು ದೆಸೆ ಇಲ್ಲದ ಇಬ್ಬರು ಅನಾಥರು. ಕಳ್ಳತನವೇ ಅವರ ವೃತ್ತಿ. ಡೀಲ್‌ವೊಂದರಲ್ಲಿ ಸಿಕ್ಕ ಡೈಮಂಡ್‌ ಅನ್ನು ದುಬಾರಿಗೆ ಬೆಲೆ ಮಾರಲು ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಾರೆ. ಹಾಗೆ ಅವರು ಮಂಗಳೂರಿಗೆ ಕಾಲಿಟ್ಟನಂತರ ಅಲ್ಲಿ ನಡೆಯುವ ಹುಡುಗಾಟದ ಪ್ರಸಂಗಗಳು, ಅವರಿಂದ ಇಕ್ಕಟ್ಟಿಗೆ ಸಿಲುಕಿದವರ ಗೋಳಾಟ, ಗೆಳೆಯನ ಸಹವಾಸ ಮಾಡಿ ಕಷ್ಟಅನುಭವಿಸುವವನ ಒದ್ದಾಟ...ಇತ್ಯಾದಿ ಘಟನೆಗಳ ಒಟ್ಟು ಹೂರಣವೇ ಈ ಚಿತ್ರ.

ಗಂಭೀರವಲ್ಲದ ಕತೆಯೊಂದನ್ನು ಹೇಳುತ್ತಾ ತುಸು ಹೆಚ್ಚಾಗಿಯೇ ಹಾಸ್ಯ ಪ್ರಸಂಗಗಳನ್ನು ಜೋಡಿಸಿದ್ದಾರೆ. ಅವು ಚಿತ್ರಕ್ಕೂ ಪ್ಲಸ್‌ ಆಗಿವೆ. ಕೊಂಚ ನಾಟಕೀಯ ಎನಿಸಿದರೂ, ನೋಡಿ ನಗಲು ಮಾತ್ರ ಅಡ್ಡಿಯಿಲ್ಲ. ನಿರ್ದೇಶಕರು, ಕಲಾವಿದರು ಸೇರಿ ಇಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಅವರ ಪ್ರಯತ್ನ ಮನಸ್ಸಿಗೆ ಹಿಡಿಸುತ್ತೆ. ಆದರೆ, ಈ ಹೊತ್ತಿನ ಸಿನಿಮಾ ನಿರ್ಮಾಣದ ವೈಖರಿ, ಪ್ರೇಕ್ಷಕರ ಅಭಿರುಚಿ ಅವ್ಯಾವುವೂ ಅವರಿಗೆ ಅರ್ಥವೇ ಆಗಿಲ್ಲ. ಸಿನಿಮಾ ಮಾಡುವುದಕ್ಕೆ ಅವರು ಇನ್ನಷ್ಟುಕಲಿಯಬೇಕಿದೆ. ತಾಂತ್ರಿಕತೆಯ ಅರಿವು ಬೇಕಿದೆ. ಒಂದೊಳ್ಳೆ ಕತೆ ಇರಬೇಕು ಎನ್ನುವ ಜ್ಞಾನವೂ ಬೇಕಿದೆ.

ಕಲಾವಿದರ ಅಭಿನಯದಲ್ಲೂ ಅದು ಭಿನ್ನವಾಗಿ ಕಾಣುತ್ತಿಲ್ಲ. ನಾಯಕ ನಟ ಪೃಥ್ವಿ ಅಂಬರ ಅವರಿಗೆ ಕಿರುತೆರೆಯ ಅನುಭವ ಇದೆ. ಆದರೂ, ಅದನ್ನು ಸರಿಯಾಗಿ ದುಡಿಸಿಕೊಂಡಿಲ್ಲ. ಬಹುತೇಕ ಅವರ ಅಭಿನಯ ಫೇಲವ ಆಗಿದೆ. ನಾಯಕಿ ರಿಷಾಗೆ ಇದು ಮೊದಲ ಸಿನಿಮಾ. ಸಿಕ್ಕ ಅವಕಾಶದಲ್ಲಿ ಸಾಧ್ಯವಾದಷ್ಟುನಟನೆ ತೋರಿಸಿದ್ದಾರೆ. ಡಾನ್‌ ಪಾತ್ರದಲ್ಲಿ ರಘು ಪಾಂಡೇಶ್ವರ್‌ ಘರ್ಜಿಸುವಾಗಲೂ ನಗಿಸುತ್ತಾರೆ. ಹಾಗೆ ನೋಡಿದರೆ ಎಂಎಲ್‌ಎ ಪುತ್ರನ ಪಾತ್ರದಲ್ಲಿ ಭೋಜರಾಜ್‌ ವಾಮಂಜೂರು ಮತ್ತವರ ಸುತ್ತಲ ಪಾತ್ರಗಳೇ ಚಿತ್ರಕ್ಕೆ ಜೀವಾಳ. ಅವರೇ ಪ್ರೇಕ್ಷಕರಲ್ಲಿ ನಗು ತರಿಸುತ್ತಾರೆ. ಉದಯ್‌ ಬಲ್ಲಾಳ್‌ ಛಾಯಾಗ್ರಹಣದಲ್ಲೇನು ಹೊಸತನ ಕಾಣದು. ಒಂದು ಹಾಡಿನಲ್ಲಿ ಮಾತ್ರ ಡೊಲ್ವಿನ್‌ ತಮ್ಮ ಇರುವಿಕೆ ತೋರಿಸುತ್ತಾರೆ.