Asianet Suvarna News Asianet Suvarna News

'ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ'ಯ ಆಯ್ದ ಭಾಗ

ಸತ್ಯದೊಂದಿಗೆ ಯಾವುದೇ ಬಗೆಯ ರಾಜಿಗೆ ಒಪ್ಪದ ಯೇಸುವಾಗಲೀ, ಸಾಕ್ರೆಟೀಸ್ ಆಗಲೀ ಅಥವಾ ಬಾಲಕ ಪ್ರಹ್ಲಾದ, ಸಂತ ಮೀರಾಬಾಯಿ ಇವರಾರೇ ಆಗಲಿ, ತಮಗೆ ಶಿಕ್ಷೆ ಕೊಟ್ಟವರ ಬಗ್ಗೆ, ಹಿಂಸಿಸಿದವರ ಬಗ್ಗೆ ದ್ವೇಷ ತಳೆಯಲಿಲ್ಲ. ಸತ್ಯಾಗ್ರಹಿಗಳಾದ ಅವರೆಲ್ಲರೂ ತಮಗೆ ನೀಡಲಾದ ಎಲ್ಲ ಸಂಕಟಗಳನ್ನೂ ಸಹಿಸಿಕೊಂಡರು. ನಾನು ಕೂಡಾ ಅವರ ದಾರಿಯಲ್ಲಿ ಸಣ್ಣ ಹೆಜ್ಜೆಯಿಡಲು ಪ್ರಾರಂಭಿಸಿದ್ದೇನೆ. ನನ್ನ ಬೆನ್ನ ಹಿಂದೆ ಕೂಡಾ ಜನರು ನಗಲು ಪ್ರಾರಂಭಿದ್ದಾರೆ ಎಂದು ನ್ಯಾಯಾಲಯವೇ ಹೇಳುತ್ತಿದೆ ಅಂದ ಬಳಿಕ, ನಾನು ಕೂಡಾ ಸತ್ಯಾಗ್ರಹದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂಬುದಕ್ಕೆ ಬೇರೆ ಸಾಕ್ಷಿಗಳು ಬೇಕಾಗಿಲ್ಲವೆಂದು ಸಂತೋಷ ಪಡುವೆ.

India MK Gandhi 150 yrs a reason to smile Kannada novel extract
Author
Bengaluru, First Published Oct 2, 2018, 12:59 PM IST

- ಬೊಳುವಾರು ಮಹಮದ್ ಕುಂಞಿ

‘ಇತ್ತೀಚೆಗೆ ಕೆಲವು ದಿನಗಳಿಂದ ಜನರೆಲ್ಲ ನಿಮ್ಮ ಬೆನ್ನ ಹಿಂದೆ ನಗುತ್ತಿರುವುದು ಯಾಕೆ ಎಂಬುದು ನಿಮಗೆ ಗೊತ್ತಿದೆಯೇ ಮಿಸ್ಟರ್ ಗಾಂಧೀ?’ ದಕ್ಷಿಣ ಆಫ್ರಿಕಾದ ನ್ಯಾಯಾಲಯದ ನ್ಯಾಯಪೀಠದಲ್ಲಿ ಕುಳಿತ ನ್ಯಾಯಾಧೀಶರೊಬ್ಬರು ಕೇಳಿದ್ದ ಪ್ರಶ್ನೆ ಇದು. ದಿನದ ಕಲಾಪಗಳೆಲ್ಲ ಮುಗಿದು ಹೋಗಿ ಇನ್ನೇನು, ನ್ಯಾಯಾಧೀಶರು ತನ್ನ ಪೀಠದಿಂದ ಏಳುವ ಹೊತ್ತು. ನ್ಯಾಯಾಲಯದ ಕೊಠಡಿಯಲಿದ್ದ ಐದಾರು ಮಂದಿಗೂ ನ್ಯಾಯಾಧೀಶರ ಪ್ರಶ್ನೆ ಕೇಳಿಸಿತ್ತು. ಆ ನ್ಯಾಯಾಧೀಶರು ತಮಾಷೆಯ ಮಾತುಗಳಿಗೆ ಪ್ರಸಿದ್ಧರು.  ನ್ಯಾಯಾಲಯದೊಳಗೆ ವಾದಿ ಪ್ರತಿವಾದಿಗಳ ಪರವಾಗಿ ಅವರವರ ವಕೀಲರುಗಳು ವಾದಿಸುತ್ತಾ ಜಗಳದ ಹಂತ ತಲುಪುತ್ತಿದ್ದಾಗ, ಇದ್ದಕ್ಕಿದ್ದಂತೆ ಏನಾದರೂ ಹಾಸ್ಯದ ತುಣುಕೊಂದನ್ನು ಉದ್ಧರಿಸಿ ವಾತಾವರಣವನ್ನು ತಿಳಿಗೊಳಿಸುವ ಜಾಣ ನ್ಯಾಯಾಧೀಶರು ಅವರು. ಅದರೆ, ಅವರು ಇಂದು ಕೇಳಿದ್ದ ಪ್ರಶ್ನೆಯು ತಮಾಷೆಯದ್ದಾಗಿರಲಿಲ್ಲ. 

ನ್ಯಾಯಾಧೀಶರೊಬ್ಬರು ತಮ್ಮ ನ್ಯಾಯ ಪೀಠದಲ್ಲಿ ಕುಳಿತ ಸಂದರ್ಭದಲ್ಲಿ ವಕೀಲರಿಗೆ ಕೇಳಬಾರದಿದ್ದ ಪ್ರಶ್ನೆ ಅದಾಗಿತ್ತು. ಹೊರಡಲು ಸಿದ್ಧರಾಗಿ  ತಮ್ಮ ಕಡತಗಳನ್ನು ಜೋಡಿಸಿಕೊಳ್ಳುತ್ತಿದ್ದ ಗಾಂಧಿಗೂ ನ್ಯಾಯಪೀಠದಲ್ಲಿ ಕುಳಿತವರ ಪ್ರಶ್ನೆ ಅನಿರೀಕ್ಷಿತವಾಗಿತ್ತು.

ಅವರ ತಲೆಯೊಳಗೆ ನೂರು ಪ್ರಶ್ನೆಗಳು ಏಕ ಕಾಲದಲ್ಲಿ ಹುಟ್ಟಿ ಕೊಂಡಿದ್ದವು. ತಾನು ದಕ್ಷಿಣ ಆಫ್ರಿಕಾದಲ್ಲಿ ಕಳೆದೆರಡು ವರ್ಷಗಳಿಂದ ವಕೀಲಿ  ವೃತ್ತಿ ಮಾಡುತ್ತಿರುವುದು ಕೆಲವು ಬಿಳಿಯ ವಕೀಲರುಗಳಿಗೆ ಅಸಹನೆಯನ್ನುಂಟು ಮಾಡುತ್ತಿದ್ದು, ತನ್ನ ಬೆನ್ನ ಹಿಂದೆ ಅವರೆಲ್ಲ ಗೇಲಿ ಮಾಡಿ ನಗುತ್ತಿದ್ದಾರೆ ಎಂಬುದೂ ಅರಿವಿಗೆ ಬಂದಿತ್ತು. ಆದರೆ ಯಾರೂ ಅದನ್ನು ಗಾಂಧಿಯ ಎದುರಿಗೆ ಬಾಯಿ ಬಿಟ್ಟು ಹೇಳಿದ್ದಿರಲಿಲ್ಲ. ಆದರೆ, ಇಂದು ನ್ಯಾಯಾಲಯದ ನ್ಯಾಯಪೀಠದಲ್ಲಿ ಕುಳಿತ ನ್ಯಾಯಾಧೀಶರೇ ಇಂಥ ಪ್ರಶ್ನೆಯನ್ನು ನೇರವಾಗಿ ಕೇಳಿದಾಗ, ತನ್ನ ಬೆನ್ನ ಹಿಂದೆ ಗೇಲಿ ಮಾಡಿ ನಗುತ್ತಿರುವವರಿಗೆಲ್ಲ ಸರಿಯಾದ ರೀತಿಯಲ್ಲಿ ಉತ್ತರಿಸಬೇಕೆನ್ನಿಸಿತು.

‘ಮಹಾಮಹಿಮರು ಆಲಿಸಿಕೊಳ್ಳಲು ಸಿದ್ಧವಿರುವುದಾದರೆ ನಾನು ನಿವೇದಿಸಿಕೊಳ್ಳುವೆ’ ಎಂದು ಗಂಭೀರವಾಗಿ ಮಾತು ಆರಂಭಿಸಿದ್ದ ಗಾಂಧಿ,  ಧಾನವಾಗಿ ತನ್ನ ಅನಿಸಿಕೆಗಳನ್ನು ನ್ಯಾಯಾಲಯದ ಮುಂದಿಟ್ಟರು. ‘ಮಹಾಮಹಿಮರಿಗೆ ಗೊತ್ತಿರಬಹುದು. ಜಗತ್ತಿಗೆ ಸಹನೆ ಮತ್ತು ದಯೆ ಎಂದರೇನೆಂದು ಕಲಿಸಿದ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದಾಗಲೂ ಕೆಲವರು ಬೆನ್ನ ಹಿಂದೆ ನಕ್ಕಿದ್ದರು. ಆದರೆ ಎಲ್ಲರೂ ನಗಲಿಲ್ಲ. 

ಅಥೆನ್ಸಿನ ಯುವ ಜನಾಂಗಕ್ಕೆ ಸತ್ಯವೆಂದರೆ ಏನು ಎಂದು ಬೋಧಿಸಿದ ಸಾಕ್ರೆಟೀಸ್‌ನ ಬೆನ್ನ ಹಿಂದೆಯೂ ಕೆಲವರು ನಕ್ಕರು; ಎಲ್ಲರೂ ನಗಲಿಲ್ಲ.  ಕ್ರೆಟೀಸ್‌ಗೆ ಮರಣ ದಂಡನೆಯಾದಾಗಲೂ ಕೆಲವರು ನಕ್ಕರು; ಆದರೆ, ಎಲ್ಲರೂ ನಗಲಿಲ್ಲ. ‘ನಿಮಗೆ ಹಿಂದೂ ಪುರಾಣದ ಕತೆಗಳು ಗೊತ್ತಿರಲಾರವು. ಬಾಲಕ ಪ್ರಹ್ಲಾದ, ತನ್ನ ತಂದೆ ಹಿರಣ್ಯಕಷಿಪುವಿನಿಂದ ಶಿಕ್ಷೆ ಅನುಭವಿಸುತ್ತಿದ್ದಾಗ ರಾಜಸಭೆಯಲ್ಲಿದ್ದವರಲ್ಲಿ ಕೆಲವರು ನಕ್ಕರು; ಆದರೆ ಎಲ್ಲರೂ ಅಲ್ಲ. ತನ್ನ ಇಚ್ಛೆಯಂತೆ ನಡೆಯದ ಮೀರಾಬಾಯಿಯನ್ನು ಆಕೆಯ ಗಂಡ ಹಿಂಸಿಸುತ್ತಿದ್ದಾಗ ಊರ ಕೆಲವರು ನಕ್ಕರು. 

ಆದರೆ ಅತ್ತವರೇ ಬಹಳ ಮಂದಿ. ‘ಸತ್ಯದೊಂದಿಗೆ ಯಾವುದೇ ಬಗೆಯ ರಾಜಿಗೆ ಒಪ್ಪದ ಯೇಸುವಾಗಲೀ, ಸಾಕ್ರೆಟೀಸ್ ಆಗಲೀ ಅಥವಾ ಬಾಲಕ ಪ್ರಹ್ಲಾದ, ಸಂತ ಮೀರಾಬಾಯಿ ಇವರಾರೇ ಆಗಲಿ, ತಮಗೆ ಶಿಕ್ಷೆ ಕೊಟ್ಟವರ ಬಗ್ಗೆ, ಹಿಂಸಿಸಿದವರ ಬಗ್ಗೆ ದ್ವೇಷ ತಳೆಯಲಿಲ್ಲ. ಸತ್ಯಾಗ್ರಹಿ ಗಳಾದ ಅವರೆಲ್ಲರೂ ತಮಗೆ ನೀಡಲಾದ ಎಲ್ಲ ಸಂಕಟಗಳನ್ನೂ ಸಹಿಸಿಕೊಂಡರು.

ನಾನು ಕೂಡಾ ಅವರ ದಾರಿಯಲ್ಲಿ ಸಣ್ಣ ಹೆಜ್ಜೆಯಿಡಲು ಪ್ರಾರಂಭಿಸಿದ್ದೇನೆ. ನನ್ನ ಬೆನ್ನ ಹಿಂದೆ ಕೂಡಾ ಜನರು ನಗಲು ಪ್ರಾರಂಭಿದ್ದಾರೆ ಎಂದು ನ್ಯಾಯಾಲಯವೇ ಹೇಳುತ್ತಿದೆ ಅಂದ ಬಳಿಕ, ನಾನು ಕೂಡಾ ಸತ್ಯಾಗ್ರಹದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂಬುದಕ್ಕೆ ಬೇರೆ ಸಾಕ್ಷಿಗಳು ಬೇಕಾಗಿಲ್ಲವೆಂದು ಸಂತೋಷ ಪಡುವೆ. ‘ತಮಗೆ ಸತ್ಯಾಗ್ರಹ ಎಂಬ ಪದದ ಬಗ್ಗೆ ಕುತೂಹಲವಿರಬಹುದು. ಇಲ್ಲಿ  ಭಾರತೀಯರು ನಡೆಸುತ್ತಿರುವ ‘ಸತ್ಯಾಗ್ರಹ’ದಲ್ಲಿ ಹಿಂಸೆಗೆ ಜಾಗವಿಲ್ಲ. ತಾಯಿಯ ಬಳಿ ತಿಂಡಿಗಾಗಿ ಪುಟ್ಟ ಮಕ್ಕಳು ಹಟ ಹಿಡಿದಂತೆ ಈ ಪ್ರತಿಭಟನೆ. ‘ಸತ್ಯಾಗ್ರಹ’ ಎಂಬ ಪದವು ‘ಸತ್ಯ’ ಮತ್ತು ‘ಆಗ್ರಹ’ ಎಂಬ ಎರಡು ಪದಗಳಿಂದ ಕೂಡಿದೆ. ಹಾಗೆಂದು ನಾನು ವಿವರಿಸುತ್ತಿರುವ ‘ಸತ್ಯಾಗ್ರಹ’ವು ಹೊಸ ತತ್ವವೇನೂ ಅಲ್ಲ. ಪ್ರೇಮವೇ ಸತ್ಯಾಗ್ರಹದ ಮೂಲಮಂತ್ರ. ಸಾವಿರಾರು ವರ್ಷಗಳಿಂದ ಗಂಡಹೆಂಡಿರ ನಡುವೆ ನಡೆದುಕೊಂಡು ಬಂದಿರುವ ಪ್ರೇಮಕಲಹಗಳೂ ಸತ್ಯಾಗ್ರಹವೆ. ಸಂಸಾರದಲ್ಲಿ ತೊಂದರೆಗೊಳಗಾದ ವ್ಯಕ್ತಿ ತನಗೆ ತೊಂದರೆ ನೀಡಿದವರನ್ನು ದ್ವೇಷಿಸುವುದಿಲ್ಲ. ತನ್ನ ಒಳಿತನ್ನು ಬಯಸುವ ಸತ್ಯಾಗ್ರಹಿಯು, ತನ್ನ ವಿರೋಧಿಯ ಕೇಡನ್ನು ಬಯಸುವುದಿಲ್ಲ.

‘ರಾಮಾಯಣ ಕತೆಯಲ್ಲಿ ಸೀತೆಯ ಅಗ್ನಿಪರೀಕ್ಷೆ ಮಾಡುವುದರಲ್ಲಿ ರಾಮನ ಸತ್ಯಾಗ್ರಹವಿದೆ. ವಿಶ್ವದ ಕೇಂದ್ರವು ಭೂಮಿ ಎಂಬುದಾಗಿ  ಗ್ರಹಿಸಿದ ಗೆಲಿಲಿಯೋನ ವಾದದಲ್ಲಿ ಸತ್ಯಾಗ್ರಹವಿದೆ. ಹೆಂಡತಿ ಮಕ್ಕಳನ್ನು ತೊರೆದು ನಡುರಾತ್ರಿಯಲ್ಲಿ ಎದ್ದು ಹೊರಟ ಗೌತಮಬುದ್ಧನ ಹುಡುಕಾಟದಲ್ಲಿ ಸತ್ಯಾಗ್ರಹವಿದೆ. ಗಾಯಗೊಂಡ ಕುರಿಮರಿಯನ್ನು ಯೇಸು ಎತ್ತಿ ಎದೆಗಪ್ಪಿಕೊಳ್ಳುವುದರಲ್ಲಿ ಸತ್ಯಾಗ್ರಹವಿದೆ. ಆದರೆ, ಮಹಾಭಾರತ ಪುರಾಣದಲ್ಲಿ ಬರುವ ಧೃತರಾಷ್ಟ್ರನ ಪುತ್ರಪ್ರೇಮದಲ್ಲಿ ಸತ್ಯಾಗ್ರಹವಿಲ್ಲ. ಹೋಮರನ ಮಹಾಕಾವ್ಯ ಒಡೆಸ್ಸಿಯಲ್ಲಿ ಬರುವ...’ ‘ಸಾಕಪ್ಪ ಸಾಕು, ದಯವಿಟ್ಟು ನಿಮ್ಮ ಮಾತು ನಿಲ್ಸಿ, ಮಿಸ್ಟರ್ ಗಾಂಧಿ.’ ನ್ಯಾಯಾಧೀಶರು ಗಾಬರಿಯಿಂದಲೇ ಆದೇಶ ನೀಡಿದ್ದರು. ಅವರಿಗೆ  ತಾನು ಗಾಂಧಿಯನ್ನು ಯಾತಕ್ಕಾಗಿ ಅಂತಹ ಪ್ರಶ್ನೆ ಕೇಳಿದೆನೋ ಎಂದೆನಿಸಿತ್ತು. ಗಾಂಧಿ ಮಾತು ಮುಗಿಸಿದಾಗ ನ್ಯಾಯಾಲಯದ ಕೊಠಡಿ ಜನರಿಂದ ಕಿಕ್ಕಿರಿದಿತ್ತು. ಗಾಂಧಿಯ ಮಾತೆಂದರೆ ಹಾಗೆ; ಎಲ್ಲರಿಗೂ ಒಂದು ಬಗೆಯ ಕುತೂಹಲ. ನ್ಯಾಯಾಧೀಶರು ಹತಾಶೆಯ ಸ್ವರದಲ್ಲಿ ಹೇಳಿದ್ದರು, ‘ಮಿಸ್ಟರ್ ಗಾಂಧಿ, ನಾನು ಕೇಳಿದ್ದು ತೀರಾ ಸರಳವಾದ ಪ್ರಶ್ನೆಯನ್ನು. ಆದರೆ ನೀವು ಅದಕ್ಕಿನ್ನೂ ಉತ್ತರಿಸಿಯೇ ಇಲ್ಲ. ನೀವು ಇದುವರೆಗೆ ಉತ್ತರಿಸಿದ್ದು, ನಾನು ಕೇಳಿರದ ಪ್ರಶ್ನೆಗೆ. ಆದರೂ ಮಿಸ್ಟರ್ ಗಾಂಧಿ, ನಿಮ್ಮನ್ನು ನಾನು ಮೊದಲಾಗಿ ಅಭಿನಂದಿಸುವೆ. ‘ನಿಮ್ಮ ‘ಸತ್ಯಾಗ್ರಹ’ ಎಂಬ ಶಬ್ದದ ವಿವರಣೆಯಿಂದ ನ್ಯಾಯಾಲಯದ ಅರಿವಿನ ವ್ಯಾಪ್ತಿ ವಿಸ್ತರಿಸಿದೆ ಎಂಬುದಂತೂ ನಿಜ. ಸತ್ಯದ ಬಗೆಗಿನ ನಿಮ್ಮ ಆಗ್ರಹದ ಬಗ್ಗೆ ತಿಳಿಯುವ ಕುತೂಹಲ ನಮಗಿದೆ. ಇಲ್ಲಿ ಸೇರಿರುವ ಇನ್ನೂ ಕೆಲವರಿಗೆ ನನ್ನಂತೆ ಆ ಕುತೂಹಲವಿರಬಹುದು. ನಿಮಗೆ ಅಭ್ಯಂತರವಿಲ್ಲ ಎಂದು ಅನ್ನಿಸಿದರೆ, ವಾರದ ಯಾವುದಾದರೊಂದು ಸಂಜೆ ನಿಮ್ಮ ಭಾಷಣದ ಕಾರ್ಯಕ್ರಮವನ್ನು ನಡೆಸುವಂತೆ
ಕೋರ್ಟ್ ಅಧಿಕಾರಿಗಳಿಗೆ ಸೂಚನೆ ನೀಡುವೆ. ಆದರೆ, ಮಿಸ್ಟರ್ ಗಾಂಧಿ, ನನ್ನ ಸರಳ ಪ್ರಶ್ನೆ ಮಾತ್ರ ಉತ್ತರವಿಲ್ಲದ ಬರಿಯ ಪ್ರಶ್ನೆಯಾಗಿಯೇ ಉಳಿದುಬಿಟ್ಟಿತು ನೋಡಿ.’

ಗಾಂಧಿಗೂ ಮುಜುಗರವಾಗಿತ್ತು. ತಾನು ನ್ಯಾಯಾಧೀಶರು ಬಯಸಿರದ ವಿಷಯದ ಬಗ್ಗೆ ಮಾತನಾಡುವ ಮೂಲಕ, ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡಿಬಿಟ್ಟೆನೇನೋ ಎಂದು ಪರಿತಪಿಸಿದರು. ಇನ್ನು ಗೊಂದಲಗೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ನಿರ್ಧರಿಸಿದ ಗಾಂಧಿ, ನೇರವಾಗಿ ಕೇಳಿದರು, ‘ಮಹಾಮಹಿಮರು ಕೇಳಿರುವ ಪ್ರಶ್ನೆಯನ್ನು ನಾನು ಸರಿಯಾಗಿ ಅರ್ಥಮಾಡಿಕೊಂಡು ಉತ್ತರಿಸದ ಬಗ್ಗೆ ವಿಷಾದಿಸುತ್ತೇನೆ. ದಯವಿಟ್ಟು, ತಮ್ಮ ಮನಸ್ಸಿನಲ್ಲಿ ಯಾವ ಪ್ರಶ್ನೆಯಿತ್ತು ಎಂಬುದನ್ನು ವಿವರಿಸ ಬೇಕು ಎಂದು ಪ್ರಾರ್ಥಿಸುತ್ತೇನೆ’.

ಈಗ ಗೊಂದಲಗೊಳ್ಳುವ ಸರದಿ ನ್ಯಾಯಾಧೀಶರದಾಗಿತ್ತು. ಅರೆಕ್ಷಣ ಯೋಚಿಸಿದವರು, ‘ಮರೆತುಬಿಡಿ ಮಿಸ್ಟರ್ ಗಾಂಧಿ. ನಾನು ಈಗ ಕೋರ್ಟ್ ಕಲಾಪಗಳನ್ನು ಮುಗಿಸುವ ಆದೇಶ ನೀಡುತ್ತಿರುವೆ’ ಎಂದವರೇ ಎದ್ದು ನಿಂತರು.

ಗಾಂಧಿ ಮಾತ್ರವಲ್ಲ, ಗಾಂಧಿಯ ಜತೆಗಿದ್ದ ಎಲ್ಲರೂ ಎದ್ದು ನಿಂತರು. ಅತ್ಯಂತ ಕುತೂಹಲದ ಘಟ್ಟ ತಲುಪಿದ್ದ ಪ್ರಕರಣವೊಂದು ಟುಸ್ಸೆಂದು ಕರಗಿ ಹೋದದ್ದು ಸೇರಿದ್ದವರಿಗೆಲ್ಲ ನಿರಾಸೆಯನ್ನುಂಟುಮಾಡಿತು. ಜನರೆಲ್ಲ ಕೊಠಡಿಯಿಂದ ಹೊರಗೆ ಹೊರಟರು. ಗಾಂಧಿ ಕೂಡಾ ತಮ್ಮ ಕಡತಗಳನ್ನು ಎತ್ತಿಕೊಂಡು ನ್ಯಾಯಾಧೀಶರ ವರ್ತನೆ ಬಗ್ಗೆ ಅಚ್ಚರಿಪಡುತ್ತಾ ನಿಧಾನವಾಗಿ ಹೊರಗೆ ಹೊರಟರು.

ನ್ಯಾಯಾಲಯದ ಮೆಟ್ಟಲಿಳಿಯುತ್ತಿದ್ದಾಗ ಅಲ್ಲಿಯ ಜವಾನನೊಬ್ಬ ಗಾಂಧಿ ಬಳಿಗೆ ಬಂದು ‘ನ್ಯಾಯಾಧೀಶರು ಅವರ ಕೊಠಡಿಯಲ್ಲಿ ತಮ್ಮನ್ನು ನಿರೀಕ್ಷಿಸುತ್ತಿದ್ದಾರೆ. ತಾವು ಕೂಡಲೇ ಬಂದು ಕಾಣಬೇಕಂತೆ’ ಎಂಬ ಸಂದೇಶ ಕೊಟ್ಟು ಹೋದ. 

ಸಾಮಾನ್ಯವಾಗಿ ನ್ಯಾಯಾಧೀಶರ ಕೊಠಡಿಗೆ ವಕೀಲರುಗಳಾರೂ ಹೋಗುವಂತಿರಲಿಲ್ಲ. ಬಹಳ ಹಿರಿಯರಾದ ಬಿಳಿಯ ವಕೀಲರು ಕೆಲವೊಮ್ಮೆ  ಅವರ ಕೊಠಡಿಗೆ ಹೋಗಿ ಬರುತ್ತಿರುವುದನ್ನು ಗಾಂಧಿ ಕಂಡಿದ್ದರು. ಅನುಮಾನದಿಂದಲೇ ಜವಾನ ಹೋದ ದಿಕ್ಕಿನತ್ತ ಗಾಂಧಿ ಕಾಲೆಳೆದರು. ನ್ಯಾಯಾಲಯದ ಕೊಠಡಿಯಲ್ಲಿ ಅರ್ಧ ತಾಸಿನಷ್ಟು ಕಾಲ ಗಾಂಧಿಯ ಸತ್ಯಾಗ್ರಹದ ಕತೆ ಆಲಿಸಿದ್ದ ವಕೀಲರುಗಳು, ಒಂದು ಹತ್ತು ನಿಮಿಷಗಳ ಬಳಿಕ ನ್ಯಾಯಾಧೀಶರ ಕೊಠಡಿಯ ಹೊರಗೇನಾದರೂ ನಿಂತುಕೊಂಡಿರುತ್ತಿದ್ದರೆ, ಕೊಠಡಿಯ ಒಳಗೆ ನ್ಯಾಯಾಧೀಶರ ಜೊತೆಗೆ ಗಾಂಧಿ ಕೂಡಾ ಬಿದ್ದು ಬಿದ್ದು ನಗುತ್ತಿರುವುದನ್ನು ಕೇಳಿಸಿಕೊಳ್ಳಬಹುದಾಗಿತ್ತು.

ನಗುವಿನ ಕಾರಣವು ನಗುವಂಥದ್ದೇ ಅಗಿತ್ತು.

***
ಕಾರಣವೇನೆಂದರೆ... ಹೆಂಡತಿ ಮಕ್ಕಳ ಜತೆಗೆ ಮನೆ ಮಾಡಿ ಸಂಸಾರ ನಡೆಸಲಾರಂಭಿಸಿದ್ದ ಗಾಂಧಿಗೆ ತನ್ನ ವಕೀಲಿ ವೃತ್ತಿಯಲ್ಲಿ ಚೆನ್ನಾಗಿಯೇ ಸಂಪಾದನೆಯಾಗುತ್ತಿತ್ತು. ಆದರೆ, ಪರಿಸರದ ಬಡಜನರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅವರಿಗೆ ಸರಳ ಜೀವನದ ಪಾಠ ಹೇಳುತ್ತಿದ್ದ ಗಾಂಧಿಗೆ, ತನ್ನ ಮನೆಯೊಳಗೂ ಸರಳ ಜೀವನದ ಪ್ರಯೋಗವನ್ನು  ಅಳವಡಿಸುವುದು ತೀರಾ ಅಗತ್ಯವೆಂದು ಅನ್ನಿಸಿತ್ತು. ಯಾವ ಕೆಲಸಕ್ಕೂ ಸೇವಕರನ್ನು ಅವಲಂಬಿಸ ಬಾರದು ಎಂಬುದು ಸ್ವಾವಲಂಬನೆಯ ಬದುಕಿನ ಮೊದಲ ಪಾಠ. 

ಕನ್ನಡಿ ನೋಡಿಕೊಂಡು ಮುಖದ ಕ್ಷೌರ ಮಾಡುವುದು ಅಂತಹ ಕಷ್ಟದ ಕೆಲಸವೇನೂ ಅಲ್ಲ. ಆದರೆ ತಲೆಗೂದಲು ಕತ್ತರಿಸಿಕೊಳ್ಳುವುದೂ? ಆದರೆ ಗಾಂಧಿ ಒಮ್ಮೆ ಏನನ್ನಾದರೂ ನಿರ್ಧರಿಸಿ ಬಿಟ್ಟರೆಂದರೆ ಅದನ್ನು ಕೊನೆ ಮುಟ್ಟಿಸುವ ತನಕ ಸುಮ್ಮನಿರುವವರಲ್ಲ. ಮರುದಿನವೇ ಹರಿತವಾದ ಕತ್ತರಿಯೊಂದನ್ನು ಖರೀದಿಸಿ ತಂದೇ ಬಿಟ್ಟರು. ಅವರ ಇಬ್ಬರು ಸ್ವಂತ ಮಕ್ಕಳ ಜತೆ, ಅಕ್ಕನ ಮಗನೂ ಗಾಂಧಿಯ ಕ್ಷೌರ ಪ್ರಯೋಗಕ್ಕೆ ಮೊದಲ ಬಲಿಗಳಾಗಿ ತಮ್ಮ ತಲೆಯೊಪ್ಪಿಸಿದರು. ತಂದೆಯಿಂದ ತಲೆಗೂದಲು ಕತ್ತರಿಸಿಕೊಂಡಿದ್ದ ಮಕ್ಕಳನ್ನು ಗುರುತಿಸಲೂ ಕಸ್ತೂರಿಗೆ ಕಷ್ಟವಾಗಿತ್ತು.

ಮುಂದಿನದು ಗಾಂಧಿಯ ಸರದಿ.
ಮಕ್ಕಳ ಮೇಲೆ ಕ್ಷೌರ ಪ್ರಯೋಗ ಮಾಡುವಾಗ ಅವರ ತಲೆಯಲ್ಲಿ ಬೆಳೆದಿದ್ದ ಕೂದಲು ಗಾಂಧಿಯ ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುತಿತ್ತು. ಆದರೆ, ತನ್ನ ತಲೆಗೂದಲು ಕತ್ತರಿಸಿಕೊಳ್ಳಲು ಕನ್ನಡಿಯೆದುರು ಕುಳಿತರೆ, ಗಾಂಧಿಗೆ ತನ್ನ ಹಣೆಯ ಎದುರಿನ ತಲೆಗೂದಲು ಮಾತ್ರ ಕಾಣಿಸುತ್ತಿತ್ತು.

ಕಣ್ಣನ್ನು ಸರಿಯಾಗಿ ಹೊಂದಿಸಿಕೊಂಡರೆ ನೆತ್ತಿಯ ಹಿಂಭಾಗದ ಒಂದಾರಿಂಚು, ಕಿವಿಗಳ ಹಿಂದಿನ ತಲಾ ಎರಡೆರಡು ಇಂಚು ಕೂದಲು ಕಾಣಿಸುತ್ತಿತ್ತು. ಆದರೆ ತಲೆಗೂದಲಿನ ಮಧ್ಯಭಾಗ, ಹಿಂಭಾಗ ಕಾಣಿಸುತ್ತಿರಲಿಲ್ಲ. ಗಾಂಧಿಗೆ ಕ್ಷೌರಿಕನ ಅಂಗಡಿಯಲ್ಲಿ ಎದುರುಬದುರಾಗಿ ತೂಗಾಡಿಸಿದ್ದ ಕನ್ನಡಿಗಳು ನೆನಪಾಗಿದ್ದವು. 

ಕೂಡಲೇ ಹೊಸದೆರಡು ಕನ್ನಡಿಗಳನ್ನು ಖರೀದಿಸಿ ಮನೆಗೆ ತಂದರು. ಅವುಗಳನ್ನು ಮನೆಯ ಗೋಡೆಗಳಲ್ಲಿ ಎದುರು ಬದುರಾಗಿ ತೂಗಿಸಿದರು. ಕತ್ತರಿ ಪ್ರಯೋಗಕ್ಕೆ ಸಿದ್ಧರಾಗಿ ಕುರ್ಚಿಯಲ್ಲಿ ಕುಳಿತರು. ಕನ್ನಡಿಯೊಳಕ್ಕೆ ಕಣ್ಣು ತೂರಿದರು. ಉತ್ತರದಿಕ್ಕಿನಲ್ಲಿ ತೂಗಾಡಿಸಿದ್ದ ಕಣ್ಣೆದುರಿನ ಕನ್ನಡಿಯಲ್ಲಿ ತನ್ನ ಮುಖವೇನೋ ಚೆನ್ನಾಗಿ ಕಾಣಿಸುತ್ತಿತ್ತು.

ಆದರೆ, ಉತ್ತರದಿಕ್ಕಿನ ಗೋಡೆಯಲ್ಲಿ ತೂಗಿಸಿದ್ದ ಕನ್ನಡಿಯೊಳಗಿನ ಪ್ರತಿಬಿಂಬದಲ್ಲಿ ಕಾಣಿಸುತ್ತಿದ್ದ, ದಕ್ಷಿಣ ದಿಕ್ಕಿನ ಗೋಡೆಯಲ್ಲಿ ತೂಗಿಸಿದ್ದ  ಕನ್ನಡಿಯಲ್ಲಿ ಪ್ರತಿಬಿಂಬಿಸುತಿದ್ದ ಕೂದಲು ತನ್ನದೋ ಬೇರೆಯವರದ್ದೋ ಎಂಬುದೇ ಸಂಶಯಕ್ಕೆ ಕಾರಣವಾಗಿತ್ತು.

ಹಾಗೆಯೇ ಉತ್ತರ ದಿಕ್ಕಿನ ಗೋಡೆಯಲ್ಲಿ ತೂಗಿಸಿದ್ದ ಕನ್ನಡಿಯೊಳಗಿನ ಪ್ರತಿಬಿಂಬದಲ್ಲಿ ಎಡಗೈಯಾಗಿ ಕಾಣಿಸುತ್ತಿದ್ದ ತನ್ನ ಬಲಗೈ, ದಕ್ಷಿಣ ದಿಕ್ಕಿನ ಗೋಡೆಯಲ್ಲಿ ತೂಗಿಸಿದ್ದ ಕನ್ನಡಿಯಲ್ಲಿ ಮತ್ತೆ ಬಲಗೈಯಾಗಿ ಕಾಣಿಸುತ್ತಿದ್ದು, ತಾನು ಕತ್ತರಿ ಹಿಡಿದ ಕೈ ಯಾವುದು ಎಂಬುದೇ ಮರೆತು ಹೋಗುತ್ತಿತ್ತು.

ಒಮ್ಮೆ ತನ್ನ ಎಡವು ಬಲವಾಗಿ, ಮತ್ತೊಮ್ಮೆ ತನ್ನ ಬಲವು ಎಡವಾಗಿ ಕಾಣಿಸತೊಡಗಿದಾಗ ಗಾಂಧಿಯ ಮನಸ್ಸಿನಲ್ಲಿ ಹೊಸ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಪ್ರತಿಬಿಂಬದಲ್ಲಿ ಎಡವು ಬಲವಾಗಿ ಮತ್ತು ಬಲವು ಎಡವಾಗಿ ಕಾಣಿಸುತ್ತಿರುವಾಗ, ತನ್ನ ಮುಖದ ಮೇಲುಭಾಗದಲ್ಲಿರುವ ಹಣೆಯು, ಮುಖದ ತಳಬಾಗದಲ್ಲಿರುವ ಗದ್ದದ ಭಾಗದಲ್ಲಿ ಯಾಕೆ ಕಾಣಿಸುವುದಿಲ್ಲ? ತನ್ನ ತಲೆಗೂದಲು ಕುತ್ತಿಗೆಯ ಭಾಗದಲ್ಲೂ, ಕುತ್ತಿಗೆಯು ಹಣೆಯ ಮೇಲ್ಭಾಗದಲ್ಲೂ ಕಾಣಿಸಬೇಕಲ್ಲವೇ?

ಗಾಂಧೀಯದ್ದು ಯಾವಾಗಲೂ ಪ್ರಯೋಗಶೀಲ ಮನಸ್ಸು. ನೆಲಕ್ಕೆ ಸಮಾನಾಂತರವಾಗಿ ಎರಡು ಕಣ್ಣು ಇರುವುದರಿಂದಾಗಿ ಹೀಗೆ ಕಾಣಿಸುತ್ತಿರಬಹುದೇ ಎಂಬ ಅನುಮಾನ ಹುಟ್ಟಿತು. ಹಾಗಾದರೆ ಒಂದು ಕಣ್ಣಿನಿಂದ ನೋಡಿದರೆ ಎಡವು ಎಡವಾಗಿಯೂ, ಬಲವು ಬಲವಾಗಿಯೂ ಕಾಣಿಸಬೇಕಲ್ಲವೇ? 

ಒಂದು ಕಣ್ಣು ಮುಚ್ಚಿ ನೋಡಿದರು. ಉಹುಂ, ಯಾವುದೇ ವ್ಯತ್ಯಾಸವಾಗಲಿಲ್ಲ. ನೆಲಕ್ಕೆ ಸಮಾನಾಂತರವಾಗಿ ಮಲಗಿದ್ದಾಗ ಎತ್ತರದಲ್ಲಿ ತೂಗುತ್ತಿದ್ದ ಕನ್ನಡಿಯೇ ಕಾಣಿಸಲಿಲ್ಲ. ಗಾಂಧಿಯ ತಲೆ ಹನ್ನೆರಡಾಣೆಯಾಗಿತ್ತು. ತಮ್ಮ ಮಕ್ಕಳ ಮುಖದ ಲಕ್ಷಣವನ್ನೇ ಬದಲಿಸಿ ಗುರುತು ಸಿಗದಂತೆ ಮಾಡಿದ್ದ ತನ್ನ ಗಂಡ, ಇದೀಗ ಸ್ವತಃ ತನ್ನ ಮೇಲೆಯೇ ಕ್ಷೌರಪ್ರಯೋಗ ಮಾಡಿಕೊಳ್ಳಲು ಹೆಣಗುತ್ತಿರುವುದನ್ನು, ಕಸ್ತೂರಿ ಬಾಯಿಯವರು ಬಾಗಿಲ ಮರೆಯಲ್ಲಿ ನಿಂತು ನೋಡುತ್ತಲೇ ಇದ್ದರು. 

ಮರುದಿನದಿಂದ ನ್ಯಾಯಾಲಯದಲ್ಲಿ ಗಾಂಧಿಯ ತಲೆಯ ಹಿಂಬದಿಯ ಕೂದಲು ಇಲಿ ಕತ್ತರಿಸಿ ತಿಂದಂತಿರುವುದನ್ನು ಕಂಡ ಎಲ್ಲರೂ, ಗಾಂಧಿಯ ಬೆನ್ನ ಹಿಂದೆ ಮುಸಿ ಮುಸಿ ನಗತೊಡಗಿದ್ದರು. ನ್ಯಾಯಾಧೀಶರ ಗಮನಕ್ಕೂ ಅದು ಬಂದಿತ್ತು. ಅವರು ನ್ಯಾಯಾಲಯದಲ್ಲಿ ಗಾಂಧಿಯನ್ನು ಕೇಳಬಯಸಿದ್ದ ಪ್ರಶ್ನೆ ಅದುವೇ; ತೀರಾ ಸರಳವಾದ ಪ್ರಶ್ನೆ ನ್ಯಾಯಾಧೀಶರದ್ದು, ‘ನಿಮ್ಮ ತಲೆಗೂದಲನ್ನು ಇಲಿಗಳು
ತಿಂದವೇನೂ ಮಿಸ್ಟರ್ ಗಾಂಧೀ?’ ನ್ಯಾಯಾಧೀಶರು ಗಾಂಧಿಯನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಅದೇ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿದ್ದರು.

ಗಾಂಧಿಗೆ ನಗುವೇ ನಗು.
ಇಂತಹ ಸರಳ ಪ್ರಶ್ನೆಗೆ ಉತ್ತರವಾಗಿ ಜಗತ್ತಿನ ಪುರಾಣಗಳನ್ನೆಲ್ಲ ನ್ಯಾಯಾಲಯದ ಕಟಕಟೆಯಲ್ಲಿಟ್ಟು ವಿಚಾರಿಸಿಕೊಂಡ ಗಾಂಧಿಯ ಮುಗ್ಧ ಮನಸ್ಸನ್ನು ಕಂಡು ನ್ಯಾಯಾಧೀಶರಿಗೆ ನಗುವೇ ನಗು. ಇಬ್ಬರೂ ಮನಸಾರೆ ನಕ್ಕಿದ್ದರು. 

(ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಮೊತ್ತ ಮೊದಲ ಪ್ರಶಸ್ತಿ ತಂದುಕೊಟ್ಟ, ‘ಪಾಪುಗಾಂಧಿ ಗಾಂಧಿಬಾಪು ಆದ ಕತೆ’ ಕಾದಂಬರಿಯಿಂದ ಆರಿಸಲಾದ ಭಾಗ)
 

Follow Us:
Download App:
  • android
  • ios