ತಮಿಳು ಬಾವುಟದ ಕನ್ನಡ ಧ್ವಜ!
ಚಿತ್ರ : ಧ್ವಜ ತಾರಾಗಣ: ರವಿ, ಪ್ರಿಯಾಮಣಿ, ದಿವ್ಯ ಉರುಡುಗ, ಟಿ ಎನ್ ಸೀತಾರಾಮ್, ತಬಲಾ ನಾಣಿ, ವೀಣಾ ಸುಂದರ್, ಸುಂದರ್ ರಾಜ್, ಮಂಡ್ಯ ರವಿ. ನಿರ್ದೇಶನ ಹಾಗೂ ಛಾಯಾಗ್ರಹಣ : ಅಶೋಕ್ ಕಶ್ಯಪ್ ಸಂಗೀತ : ಸಂತೋಷ್ ನಾರಾಯಣ್ ನಿರ್ಮಾಣ: ಸುಧಾ ಬಸವೇಗೌಡ
ಇದು ಹೊಸ ರೀತಿಯ ರಾಜಕೀಯ ಚಿತ್ರ. ಕನ್ನಡಕ್ಕೆ ಇದು ಹೊಸ ಕತೆ. ತಮಿಳಿನ ‘ಕೋಡಿ’ ಚಿತ್ರದ ರಿಮೇಕ್ ಆಗಿದ್ದು ಅಲ್ಲಿನ ಧನುಷ್-ತ್ರಿಷಾ ಪಾತ್ರವನ್ನು ಇಲ್ಲಿ ರವಿ-ಪ್ರಿಯಮಣಿ ಮಾಡಿದ್ದಾರೆ. ಚಿತ್ರಕತೆ ಹಾಗೂ ಸಂಭಾಷಣೆಯೂ ಮೂಲದಲ್ಲೇ
ಗಟ್ಟಿಯಾಗಿದೆ. ಅದನ್ನೇ ಇಲ್ಲಿ ಯಥಾವತ್ತಾಗಿಯೇ ತರಲಾಗಿದೆ. ಆದರೆ ಈ ಚಿತ್ರದ ಎಂಡಿಂಗ್ ಬೇರೆ ರೀತಿಯಲ್ಲಿ ಮಾಡಲಾಗಿದೆ.‘ಓಯ್ತಾ ಇರು’ ಡೈಲಾಗ್ ಈ ಚಿತ್ರದ ವಿಶೇಷ ಆಕರ್ಷಣೆ! ಮುಂದಿನ ಕತೆ ಹೀಗೇ ಆಗುತ್ತದೆಂದು ಊಹಿಸಲೂ ಬಾರದಂತೆ ನೋಡಿಸಿಕೊಂಡು ಹೋಗುತ್ತದೆ.
‘ಪ್ರಜಾಮತ’ ಪಕ್ಷಕ್ಕಾಗಿ ದುಡಿವ ಕಟ್ಟಾ ಅಭಿಮಾನಿ ತಬಲ ನಾಣಿ ತನಗೆ ಮಾತು ಬಾರದಿದ್ದರೂ ತನ್ನ ಅವಳಿ ಗಂಡು ಮಕ್ಕಳಲ್ಲಿ ಒಬ್ಬನು ತಾನು ದುಡಿದ ಪಕ್ಷದಲ್ಲಿ ದೊಡ್ಡ ನಾಯಕನಾಗಬೇಕೆಂದು ಆಶಿಸಿದವನು. ಪಕ್ಷದ ಹೋರಾಟಕ್ಕೆ ಬೆಂಬಲ ಸೂಚಿಸಲು ತನ್ನ ಪ್ರಾಣವನ್ನೇ ಬಲಿ ಕೊಡುತ್ತಾನೆ. ಇವನ ಮಗನೇ ‘ಧ್ವಜ’. ಈ ಧ್ವಜ ಒಬ್ಬ ಪಕ್ಕಾ ಮಾಸ್ . ಮತ್ತೊಬ್ಬ ‘ಜನ’ (ಜನಾರ್ದನ್) ಕಾಲೇಜ್ ಲೆಕ್ಚರರ್. ಅಮ್ಮನಾಗಿ ವೀಣಾ ಸುಂದರ್ ಪೂರ್ಣ ಪ್ರಮಾಣದಲ್ಲಿ ಚೆನ್ನಾಗಿ ನಟಿಸಿದ್ದಾರೆ.
ಮತ್ತೊಂದು ಪಕ್ಷ ಜನಶಕ್ತಿಯಲ್ಲಿನ ರಮ್ಯಾ ಪಾತ್ರದ ಪ್ರಿಯಮಣಿ ಚಿತ್ರದ ನಾಯಕಿ ಹಾಗೂ ವಿಲನ್ ಕೂಡ ಆಗಿದ್ದು ತಮ್ಮ ಪ್ರತಿಭೆಯನ್ನು ತೋರಿದ್ದಾರೆ. ಡ್ರಾಮಾ ಜ್ಯೂನಿಯರ್ಸ್‌ನ ಮಕ್ಕಳಿಬ್ಬರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಾಯ ನಾಯಕಿ ಇಬ್ಬರೂ ಪಕ್ಷಗಳು ಬೇರಾದರೂ ಪ್ರೇಮಿಗಳಾಗಿರುತ್ತಾರೆ.
ಕಾಲೇಜ್ ಲೆಕ್ಚರರ್‌ಗೆ ಮೊಟ್ಟೆ ವ್ಯಾಪಾರ ಮಾಡುವ ಚೂಟಿಹುಡುಗಿಯಾಗಿ ದಿವ್ಯ ಉರುಡುಗ ಚೆಲ್ಲು ಚೆಲ್ಲಾಗಿ ಚೆನ್ನಾಗಿಯೇನಟಿಸಿದ್ದಾರೆ. ಸಾಕಷ್ಟು ಹೊಸಬರೇ ಇದ್ದರೂ ಸುಂದರ್‌ರಾಜ್ ಅವರಂತಹ ಹಳಬರೂ ಇದ್ದಾರೆ. ನಿರ್ಮಾಪಕರು ಸಾಕಷ್ಟು ಅದ್ದೂರಿಯಾಗಿಯೇ ಚಿತ್ರಿಸಿದ್ದಾರೆ. ರವಿ ಎಂಬ ಹೊಸ ಹುಡುಗ ಮೊದಲ ಚಿತ್ರದಲ್ಲೇ ಮಿಂಚಿದ್ದಾರೆ. ಅವರ ಡಬಲ್ ರೋಲ್‌ನಲ್ಲಿ, ಡಾನ್ಸ್ ಹಾಗೂ ಬಾಡಿ ಲಾಂಗ್ವೇಜ್‌ಗಳಲ್ಲಿ ಲವಲವಿಕೆಯಿದೆ. ಕನ್ನಡಕ್ಕೊಬ್ಬ ಹೊಸ ನಾಯಕ ನಟ ಸಿಕ್ಕಂತಾಗಿದೆ. ಇಲ್ಲಿನ ಡಬಲ್ ರೋಲನ್ನು ಕ್ಯಾಮರಾಮನ್ ಕೂಡ ಆಗಿರುವ ನಿರ್ದೇಶಕ ಅಶೋಕ್ ಕಶ್ಯಪ್ ಅಷ್ಟೇ ಚಾಕಚಕ್ಯತೆಯಿಂದ ನಿರ್ವಹಿಸಿದ್ದಾರೆ. ರಾಜಕೀಯ ಪಕ್ಷಗಳಲ್ಲಿನ ವ್ಯಕ್ತಿಗಳ ಸ್ವಾರ್ಥ, ಪಕ್ಷಕ್ಕಾಗಿ ವ್ಯಕ್ತಿಗಳ ಬಲಿ. ಎರಡೂ ಪಕ್ಷಗಳ ತಿಕ್ಕಾಟ, ಚುನಾವಣೆ ಕಾಲದ ಒಳಸಂಚುಗಳು, ರಾಜಕೀಯವಾಗಿ ಅಡ್ಡಬಂದವರನ್ನು ಮುಗಿಸಿ ಬಿಡುವ ಕುತಂತ್ರಗಳು ಹೀಗೆ ರಾಜಕೀಯದ ಎಲ್ಲಾ ಚದುರಂಗದಾಟವೂ ಇಲ್ಲಿದೆ. ಪಕ್ಷದ ಅಧ್ಯಕ್ಷರ ಪಾತ್ರದಲ್ಲಿ ಟಿ.ಎನ್ ಸೀತಾರಾಮ್ ಗಮನ ಸೆಳೆಯುತ್ತಾರೆ.
ಅವಳಿಗಳಲ್ಲಷ್ಟೇ ಇರುವ ವಿಶೇಷ ವೈಜ್ಞಾನಿಕ ಬದಲಾವಣೆಯನ್ನೇ ಮೂಲವಾಗಿಟ್ಟುಕೊಂಡು ಕತೆಯನ್ನು ಹೆಣೆಯಲಾಗಿದೆ. ಅವಳಿಗಳಲ್ಲಿ ಒಬ್ಬನ ಸಾವಿನ ನಂತರ ಉಳಿದಿರುವ ಮತ್ತೊಬ್ಬನು ಸತ್ತ ವ್ಯಕ್ತಿಯ ಪಾತ್ರದಂತೆಯೇ ಮಾರ್ಪಾಟಾಗುವ ಪ್ರಕ್ರಿಯೆಯೇ ಈ ಚಿತ್ರದ ಹೈಲೈಟ್. ರಾಜಕೀಯವಾಗಿ ಮುಂದುವರೆಯಲು ನಾಯಕಿಯೇ ವಿಲನ್ ಆಗಿ ನಾಯಕನನ್ನೇ ಕೊಲ್ಲುವವರೆಗೂ ಸಾಗುತ್ತದೆ. ಪಾದರಸದ ಕಾರ್ಖಾನೆಯು ಮುಚ್ಚಿದ್ದರೂ ಅದರ ದುಷ್ಪರಿಣಾಮದಿಂದ ಆ ಪ್ರದೇಶದವರಿಗಾದ ಅನಾರೋಗ್ಯದ ಬಗ್ಗೆ ಕಾಳಜಿ ಇಲ್ಲಿದ್ದು ಪರಿಸರ ಸಂರಕ್ಷಣೆಯ ವಿಚಾರವನ್ನು ಸಾರುವ ಚಿತ್ರವಾಗಿದೆ.ಕನ್ನಡದ ಮಟ್ಟಿಗಿದು ಹೊಸ ರೀತಿಯ ಚಿತ್ರ . ಸೆಂಟಿಮೆಂಟ್, ಫೖಟ್, ರಾಗ-ದ್ವೇಷ, ಅನುರಾಗಗಳೂಇಲ್ಲಿವೆ. ರಿಮೇಕ್ ಚಿತ್ರ ಎನ್ನುವುದನ್ನು ಬಿಟ್ಟರೆ ಕನ್ನಡಕ್ಕೊಬ್ಬ ಹೊಸ ನಟ ಸಿಕ್ಕ ಖುಷಿಯಿದೆ. ಒಳ್ಳೆಯ ಟೈಮ್‌ಪಾಸ್ ಚಿತ್ರ ಎಂಬುದೇ ಪ್ಲಸ್ ಪಾಯಿಂಟ್.