ನನ್ನ ನಾಟಕಗಳು ಡಿವೈನ್‌ ಆಗಬೇಕಿದ್ದರೆ ಅದನ್ನು ಅರ್ಜುನ್‌ ಮಾಡಬೇಕು!

ಹಾಗಂತ ಹೇಳಿದ್ದರು ಗಿರೀಶ್‌ ಕಾರ್ನಾಡ್‌. ಅವರು ಆ ಮಾತು ಹೇಳಿದ್ದು ಅರ್ಜುನ್‌ ಸಜನಾನಿ ಕುರಿತು. ಆ ಮಾತು ಹೇಳಲಿಕ್ಕೆ ಕಾರಣ ಅರ್ಜುನ್‌ ಸಜನಾನಿ ನಿರ್ದೇಶಿಸಿದ ‘ಅಗ್ನಿ ಮತ್ತು ಮಳೆ’ ಮತ್ತು ಅದನ್ನು ಆಧರಿಸಿದ ‘ಅಗ್ನಿವರ್ಷ’ ಹಿಂದಿ ಚಲನಚಿತ್ರ. ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಅವರು ಮನೆಯ ಪಕ್ಕದಲ್ಲೇ ಇದ್ದ ಅರ್ಜುನ್‌ ಸಜನಾನಿ ಅವರ ಸನ್ನೀಸ್‌ ಇಟಾಲಿಯನ್‌ ರೆಸ್ಟುರಾಂಟ್‌ನ ತಣ್ಣೆಳನಲ್ಲಿ ಕುಳಿತೇ ಬಂದವರ ಜೊತೆ ಮಾತಾಡುತ್ತಿದ್ದದ್ದು.

ಅರ್ಜುನ್‌ ಸಜನಾನಿ ಬೆಂಗಳೂರಿನ ನಾಟಕಪ್ರಿಯರಿಗೆ ಪರಿಚಿತ ಹೆಸರು. ಇಂಗ್ಲಿಷ್‌ ನಾಟಕ ಬಲ್ಲವರಿಗೆ ಮತ್ತೂ ಚಿರಪರಿಚಿತ. ಅವರು ನಾಟಕ ಮಾಡಲಿಕ್ಕೆ ಹೊರಟರೆ ಅದು ಸಣ್ಣ ಮಟ್ಟಿನ ನಾಟಕವಂತೂ ಆಗಿರುವುದಿಲ್ಲ ಅನ್ನುವುದು ಅವರನ್ನು ಬಲ್ಲವರಿಗೆಲ್ಲ ಗೊತ್ತಿದೆ. ಅದು ಗಿರೀಶ್‌ ಕಾರ್ನಾಡರಿಗೂ ಗೊತ್ತಿತ್ತು.

‘ಕನ್ನಡದ ಕೋಟ್ಯಧಿಪತಿ’ ಹಾಟ್ ಸೀಟ್ ನಲ್ಲಿ ಪುನೀತ್ ಬದಲು ರಚಿತಾ ರಾಮ್!

ಮೊದಲಿನಿಂದಲೂ ಕಾರ್ನಾಡರಿಗೆ ಒಂದು ಸಣ್ಣ ನೋವಿತ್ತು. ತಾವು ಬರೆಯುವ ಐತಿಹಾಸಿಕ ನಾಟಕಗಳನ್ನು ಆಡುವ ತಂಡಗಳು ತೀರಾ ಕಡಿಮೆ. ಕರ್ನಾಟಕದಲ್ಲಂತೂ ಅವು ಪ್ರದರ್ಶನ ಕಾಣುವುದೇ ಅಪರೂಪ. ಯಾಕೆಂದರೆ ಕನ್ನಡ ರಂಗಭೂಮಿಗೆ ತನ್ನ ನಾಟಕಗಳ ಅದ್ದೂರಿತನವನ್ನು ತಡೆದುಕೊಳ್ಳುವ ಶಕ್ತಿಯಿಲ್ಲ ಅನ್ನುವುದು ಕಾರ್ನಾಡರಿಗೂ ಗೊತ್ತಿತ್ತು!

ಈ ಬಗ್ಗೆ ಅರ್ಜುನ್‌ ಸಜನಾನಿ ಅವರ ಜೊತೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

- ಗಿರೀಶರ ರಾಕ್ಷಸ ತಂಗಡಿ ನಿಮ್ಮಲ್ಲಿ ಕ್ರಾಸಿಂಗ್‌ ತಾಳಿಕೋಟವಾಗಿ ರೂಪು ತಳೆದಿದ್ದು ಹೇಗೆ?

ಹಲವು ಕಾರಣಗಳಿಗೆ ಗಿರೀಶ್‌ ಅವರ ಸಾಹಿತ್ಯ ಬಹಳ ಸ್ಪೂರ್ತಿ ಕೊಡುವಂಥಾದ್ದು. ಕೆಲವು ನಿಮಗಿಷ್ಟಆಗಬಹುದು. ಆಗದೆಯೂ ಇರಬಹುದು. ಆದರೆ ಆಸಕ್ತಿ ಕೆರಳಿಸೋದಂತೂ ಸತ್ಯ. ಅವರ ಎಲ್ಲ ನಾಟಕ ವಿಚಾರಗಳ ಗುಚ್ಛ. ಚಿಂತನೆಯ ಮಹಾ ಪ್ರವಾಹ ಅದು. ಅವರು ನಿಮಗೆ ಒಂದೊಂದೇ ಚಿತ್ರ ಕಾಣಿಸುತ್ತಾ ಹೋಗುತ್ತಾರೆ. ತಾವರೆ ಹೂವು ಒಂದೊಂದೇ ಎಸಳು ಅರಳಿಸಿ ಕೊನೆಗೆ ಪೂರ್ಣ ಅರಳಿಕೊಳ್ಳುವ ಹಾಗೆ.

ಅವರು ರಾಕ್ಷಸ ತಂಗಡಿ ನಾಟಕ ಬರೆದಾದ ಕೂಡಲೇ ನನಗೆ ಹೇಳಿದರು, ನಾನಿದನ್ನು ನಿನಗೆ ಓದಿ ಹೇಳಬೇಕು ಅಂತ. ಹೊಸ ಸ್ಕಿ್ರಪ್ಟ್‌ ಓದುತ್ತೀನಿ ಅಂದರೆ ಕೇಳೋಕೆ ಯಾರಿಗಿಷ್ಟಇರಲ್ಲ, ಖಂಡಿತಾ ಓದಿ, ನಾನು ಕೇಳ್ತೀನಿ ಅಂದೆ. ಅವರು ತಲೆಯಾಡಿಸಿ, ಇಲ್ಲ, ನೀನಂದುಕೊಂಡ ಹಾಗಿಲ್ಲ. ಇದು ಮೆಗಾ, ನಿಜಕ್ಕೂ ಮೆಗಾ ಅಂದ್ರು. ನನಗೆ ಭಯವಾಯ್ತು. ಆದರೂ, ಸರಿ, ಓದುತ್ತೀನಿ ಅಂತ ಹೇಳಿದೆ. ಅದನ್ನು ಓದಿದೆ ಕೂಡ. ಆಮೇಲೆ ಮತ್ತೊಂದು ಭಯ ಶುರುವಾಯ್ತು. ಗಿರೀಶ್‌, ಇದು ನಿಮ್ಮ ಅದ್ಭುತ ವರ್ಕ್ ಅನ್ನೋದರ ಬಗ್ಗೆ ನನ್ನ ಎರಡು ಮಾತಿಲ್ಲ. ಆದರೆ ಇಂಥ ದೊಡ್ಡ ಕ್ಯಾನ್ವಾಸ್‌ ಅನ್ನು ಚಿಕ್ಕ ರಂಗಭೂಮಿ ತಾಳಿಕೊಳ್ಳುತ್ತಾ? ರಂಗಕ್ಕೆ ಅಳವಡಿಸೋದು ಬಹಳ ಕಷ್ಟಅಂದೆ.

ಅಷ್ಟೊತ್ತಿಗೆ ಶಬಾನ ದೀದಿ ಬಂದ್ರು. ಅವರು ನನ್ನ, ಗಿರೀಶ್‌ನ ಆತ್ಮೀಯ ಸ್ನೇಹಿತೆ. ಗಿರೀಶ್‌ ಜೊತೆಗೆ ಕೆಲವೊಂದು ಪ್ರಾಜೆಕ್ಟ್ನಲ್ಲಿ ಕೆಲಸ ಮಾಡಿದ್ದಾರೆ. ಆಕೆ ಸುಮ್ನಿರದೇ ಈ ಸ್ಟ್ರಿಪ್ಟ್‌ ಓದಿ, ಅರ್ಜುನ್‌ ಇದು ನಿಮ್‌ ಕೈಲಾಗುತ್ತೆ, ಮಾಡಿ ಅಂದ್ರು. ಇವ್ರೆಲ್ಲ ಏನ್‌ ಮಾತಾಡ್ತಿದ್ದಾರೆ, ಇದೆಲ್ಲ ಆಗೋ ಹೋಗೋ ಮಾತಾ ಒಂದೂ ಗೊತ್ತಾಗಿಲ್ಲ. ಆದರೂ ನೋಡೋಣ, ಬಜೆಟ್‌ ವ್ಯವಸ್ಥೆ ಮಾಡಲಿಕ್ಕಾಗುತ್ತಾ ನೋಡಿ ಅಂತ ಹಾರಿಕೆಯ ಮಾತು ಹೇಳಿದೆ. ಗಿರೀಶ್‌ ನಂದನ್‌ ನೀಲೇಕಣಿ ಅವರ ಜೊತೆಗೆ ಈ ವಿಚಾರ ಮಾತಾಡಿದ್ರು.

ಬಣ್ಣ ಬಣ್ಣಗಳ ನಂಟು ಭಾವ ನೂರೆಂಟು; ‘ಅನುಬಂಧ’ ದಲ್ಲಿ ಯಾರಿಗೆ ಯಾವ ಪ್ರಶಸ್ತಿ?

- ನಂದನ್‌ಗೆ ಈ ಬಗ್ಗೆ ಕಾರ್ನಾಡರೇ ಹೇಳಿದ್ರಾ?

ಅವ್ರೇನೋ ಮಾತಿಗೆ ಹೇಳಿರಬಹುದು. ನನಗೆ ನಂದನ್‌ ಅವರಿಂದ ಮೇಲ್‌ ಬಂತು. ‘ನಿಮಗೆ ಗಿರೀಶ್‌ ಅವರ ನಾಟಕವನ್ನು ರಂಗದ ಮೇಲೆ ತರಲು ಆಸಕ್ತಿ ಇದೆ ಅಂತ ತಿಳಿಯಿತು. ಫಂಡಿಂಗ್‌ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಆ ಜವಾಬ್ದಾರಿ ನಮಗೆ ಬಿಡಿ ಅಂತ. ಈತ ನನಗೆ ತಪ್ಪಿಸಿಕೊಳ್ಳಲು ದಾರಿಯೇ ಇರಲಿಲ್ಲ. ಫಂಡಿಂಗ್‌ ಮಾಡ್ತೀನಿ ಅಂತೇನೋ ಅಂದ್ರು, ಆದರೆ ಇದೊಂದು ದೊಡ್ಡ ಕ್ಯಾನ್ವಾಸ್‌. ಅಷ್ಟೆಲ್ಲ ಹಣ ಬರಬಹುದಾ ಅನ್ನೋ ಯೋಚನೆ ಇತ್ತು. ಏನಾದರಾಗಲೀ, ಈ ಮಟ್ಟಿನ ಸಹಾಯ ಸಿಕ್ಕಿದ್ದಕ್ಕೆ ಖುಷಿಯಾಯ್ತು.

ಗಿರೀಶ್‌ಗೆ ಫೋನ್‌ ಮಾಡಿ ಖುಷಿ ಹಂಚಿಕೊಂಡೆ. ಆದರೆ ನಂದನ್‌ರಿಂದ ಒದಗಿದ ನೆರವು ನನ್ನ ಭಯ ಆಧಾರ ರಹಿತವಾದದ್ದು ಅಂತ ತೋರಿಸಿತು. ಇರಲಿ, ಗಿರೀಶ್‌ ಹತ್ರ ನನ್ನ ಎಸ್ಟಿಮೇಟ್‌ ಹೇಳಿದ್ದಕ್ಕೆ ಇದೇನೂ ದೊಡ್ಡ ಅಮೌಂಟ್‌ ಅಲ್ಲ ಬಿಡಿ ಅಂದ್ರು. ಹಾಗೆಲ್ಲ ಆಗಿ ಹೀಗೆಲ್ಲ ಆಯ್ತು.

ಸದ್ಯಕ್ಕೀಗ ನನಗಿರುವುದು ನಾಟಕದ ಬಗ್ಗೆ ಎಕ್ಸೈಟ್‌ಮೆಂಟ್‌ ಮತ್ತು ಭಯ. ಆದರೆ ಇದನ್ನೂ ಮೀರಿದ ನೋವಿದೆ. ಈ ರಂಗಪ್ರಯೋಗದ ಬಗ್ಗೆ ಅಷ್ಟೆಲ್ಲ ಕನಸು ಕಂಡ ಗಿರೀಶ್‌ಗೇ ಈ ಪ್ರದರ್ಶನ ತೋರಿಸಲಾಗುತ್ತಿಲ್ಲವಲ್ಲ. ಇದನ್ನೆಲ್ಲ ಕಣ್ತುಂಬಿಕೊಳ್ಳಲು ಅವರೇ ಇಲ್ಲವಲ್ಲ ಅನ್ನುವ ನೋವು ಕಾಡಿದಾಗ ಎಲ್ಲ ಖಾಲಿ ಅನಿಸುತ್ತೆ.

- ಆದರೆ ಅಷ್ಟೊತ್ತಿಗಾಗಲೇ ನೀವು ಈ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತೀರಿ ಅಂತ ಅವರಿಗೆ ಗೊತ್ತಾಗಿತ್ತಲ್ಲಾ, ಬಹುಶಃ ಇದರಿಂದ ಕೊನೆಗೂ ತನ್ನ ಕೃತಿಗೆ ನ್ಯಾಯ ಸಿಗುತ್ತಿದೆ ಅನ್ನೋ ಖುಷಿ ಅವರಿಗಾಗಿತ್ತು ಅನಿಸುತ್ತೆ. ಏಕೆಂದರೆ ಅವರಿಗೆ ತನ್ನ ನಾಟಕವನ್ನು ಸಮರ್ಥ ನಿರ್ದೇಶಕರು ರಂಗದ ಮೇಲೆ ತರುತ್ತಿಲ್ಲ ಅನ್ನುವ ನೋವಿತ್ತು.

ಯೆಸ್‌, ಗೊತ್ತಾಗಿತ್ತು. ಆದಷ್ಟುಬೇಗ ಈ ನಾಟಕ ರಂಗದ ಮೇಲೆ ತರಬೇಕು ಅಂತ ನಾನು ಡೇಟ್‌ ಫಿಕ್ಸ್‌ ಮಾಡಿದ್ದೆ. ರಂಗಮಂದಿರವನ್ನೂ ಬುಕ್‌ ಮಾಡಲು ಹೊರಟಿದ್ದೆ. ಅವರ ಆರೋಗ್ಯ ಕ್ಷೀಣಿಸುತ್ತಿದೆ ಅಂತ ನನಗೆ ತಿಳಿದಿತ್ತು. ಆದರೆ ಆ ಹೊತ್ತಿಗೆ ನಮ್ಮ ನಾಟಕ ರೆಡಿಯಾಗ್ಲಿಲ್ಲ. ಅಟ್‌ಲೀಸ್ಟ್‌ ಎಪ್ರಿಲ್‌ನಲ್ಲಿ ಮಾಡ್ತಿದ್ರೂ ಅವರು ನೋಡ್ತಿದ್ರು ಅನಿಸುತ್ತೆ. ಆದರೆ ಅದೂ ಆಗಲಿಲ್ಲ. ಅವರು ಹೋದ ಮೇಲೆ ನಮ್ಮ ಜವಾಬ್ದಾರಿ ಹೆಚ್ಚಿದೆ. ಏಕೆಂದರೆ ಇದು ಅವರ ನಿಜವಾದ ಆಸ್ತಿ. ಒಬ್ಬ ನಿರ್ದೇಶಕನಾಗಿ, ಸಂಭಾಷಣಕಾರನಾಗಿ ನಾನದಕ್ಕೆ ಎಲ್ಲೂ ಅನ್ಯಾಯ ಆಗದ ಹಾಗೆ ನೋಡಿಕೊಳ್ಳಬೇಕು. ಅವರ ಕಡೆಯಿಂದ ನನಗೆ ಬಹಳ ಸಪೋರ್ಟ್‌ ಸಿಕ್ಕಿದೆ. ಅದನ್ನು ಬ್ಯೂಟಿಫುಲ್‌ ಆಗಿ ಪ್ರೆಸೆಂಟ್‌ ಮಾಡಬೇಕು.

ರಾಕ್ಷಸ ತಂಗಡಿಯಿಂದ ಕ್ರಾಸಿಂಗ್‌ ತಾಳಿಕೋಟ ಆಗುವಾಗ ಒಂದಿಷ್ಟುಬದಲಾವಣೆ ಆಗಿದೆ. ಆದರೆ ಇದೆಲ್ಲ ಗಿರೀಶರ ಮುಂದೆಯೇ ಆಗಿದ್ದು. ಇದಕ್ಕೆ ಅವರ ಒಪ್ಪಿಗೆ ಇತ್ತು. ಇಲ್ಲವಾದರೆ ನನಗಿದು ಸಾಧ್ಯವಾಗುತ್ತಿರಲಿಲ್ಲ. ಇದು ನಿನ್ನದೇ ನಾಟಕ ಅಂದುಕೋ, ಬೇಕಾದ ಬದಲಾವಣೆ ಮಾಡು ಅಂತ ಹೇಳ್ತಿದ್ರು.

- ಅವರು ಹೊಸದನ್ನು ಸೇರಿಸೋಕೆ ಒಪ್ತಿರಲಿಲ್ಲ, ಡಿಲೀಟ್‌ ಮಾಡೋಕೆ ಅಡ್ಡಿ ಮಾಡ್ತಿರಲಿಲ್ಲ!

ಹೌದು (ನಗು) ಅವರು ಹೋದ ಮೇಲೆ ಜನಕ್ಕೆ ಈ ನಾಟಕದ ಬಗ್ಗೆ ಪ್ರೀತಿ ಹೆಚ್ಚಾಗುತ್ತಾ ಹೋಯ್ತು. ಅಯ್ಯೋ, ಎಷ್ಟೊಳ್ಳೆ ನಾಟಕ, ತೆರೆ ಮೇಲೆ ಬರೋ ಹೊತ್ತಿಗೆ ಅವರೇ ಇಲ್ಲವಲ್ಲ ಅಂತ ರಂಗಭೂಮಿಯ ಮಂದಿ ಹೇಳ್ತಿದ್ದಾರೆ. ಸದ್ಯಕ್ಕೆ ಈ ನಾಟಕದ ಜೊತೆಗೆ ಜನರ ಭಾವನಾತ್ಮಕ ಅಟ್ಯಾಚ್‌ಮೆಂಟ್‌ ಹೆಚ್ಚಾಗಿದೆ. ನಾಟಕ ನೋಡಲು ಎಲ್ಲರೂ ಕಾತುರರಾಗಿದ್ದಾರೆ. ಈ ನಿರೀಕ್ಷೆ ನಮ್ಮ ಜವಾಬ್ದಾರಿ ಹೆಚ್ಚಿಸಿದೆ.

- ನಿಮ್ಮ ರಿಹರ್ಸಲ್‌ ಅವರು ಹೋಗುವ ಮೊದಲೇ ಆರಂಭವಾಗಿರಬೇಕಲ್ಲಾ?

ಹೌದು. ಕಾಸ್ಟಿಂಗ್‌ ಆಗಿತ್ತು. ಜೂನ್‌ನಲ್ಲಿ ರಿಹರ್ಸಲ್‌ ಶುರುವಾಗಿತ್ತು.

- ಈ ನಾಟಕದಲ್ಲಿ ಯಾವ ಪಾತ್ರ ನಿಮಗೆ ಬಹಳ ಇಂಟೆರೆಸ್ಟಿಂಗ್‌ ಅನಿಸಿತು. ಅಗ್ನಿ ಮತ್ತು ಮಳೆಯಲ್ಲಿ ನಿತ್ತಿಲೆಯನ್ನು ಮೆಚ್ಚಿಕೊಂಡಿದ್ದಿರಿ.

ಹೌದು, ಅವಳೊಬ್ಬ ಅದ್ಭುತ ನಾಯಕಿ, ಎಂಥಾ ಮುಗ್ಧತೆ ಅವಳದು. ಆ ಕೃತಿಯಲ್ಲಿ ಬಹಳ ಎಮೋಶನಲ್‌ ಆಗಿ ಮಾನವನ ವೃತ್ತಾಂತ ಹೇಳಿದ್ದಾರೆ. ಇದಿಲ್ಲವಾದರೆ ಇದೊಂದು ಡ್ರೈ ಪೊಲಿಟಿಕಲ್‌ ಪ್ಲೇ ಆಗಿರುತ್ತಿತ್ತು.

ಈ ನಾಟಕದಲ್ಲಿ.. (ಯೋಚಿಸಿ) ಬಹಳ ಇಷ್ಟಆಗಿದ್ದು ಆದಿಲ್‌ ಶಾ ಪಾತ್ರ. ಹಸನ್ಮುಖಿ, ಸ್ನೇಹಮಯಿ. ಪ್ರಾಮಾಣಿಕ ಹೀರೋ ಆತ. ಪಾಸಿಟಿವ್‌ ಕ್ಯಾರೆಕ್ಟರ್‌. ರಾಮರಾಯನಾಗಲೀ, ಆತನ ತಮ್ಮಂದಿರಾಗಲೀ ನನಗೆ ಇವನಷ್ಟುಎಕ್ಸೈಟಿಂಗ್‌ ಅನಿಸಿಲ್ಲ. ರಾಮರಾಯನ ಹೆಂಡತಿ ಸತ್ಯಭಾಮೆ, ತಾಯಿ ಪಾತ್ರ ಚೆನ್ನಾಗಿದೆ. ಸದಾಶಿವನ ಪಾತ್ರ ಬಹಳ ಇಂಟೆರೆಸ್ಟಿಂಗ್‌. ಹೆಸರಿಗೆ ಮಾತ್ರ ರಾಜ. ಜೀವಮಾನವಿಡೀ ಸೆರೆಯಲ್ಲಿ. ಅವನೊಬ್ಬ ಹುಚ್ಚನೇ. ಇಪ್ಪತ್ತು ವರ್ಷಗಳಲ್ಲಿ ಹೊರಜಗತ್ತನ್ನು ಒಮ್ಮೆಯೂ ಕಾಣದ ಅವನ ಮನಸ್ಥಿತಿ ಹೇಗಿರಬಹುದು.. ಯೋಚಿಸಿದ್ರೆ ಅಬ್ಬಾ ಅನಿಸುತ್ತೆ. ಅವನಿಲ್ಲಿ ಬರೋದು ಬರೀ ಎರಡು ಸೀನ್‌ನಲ್ಲಿ. ಅಷ್ಟರಲ್ಲೇ ಆ ವ್ಯಕ್ತಿತ್ವ ಛಾಪಿಸುತ್ತದೆ. ಇದನ್ನು ಹಾಸ್ಯದ ತೇಪದೊಂದಿಗೆ ತಂದಿದ್ದಾರೆ. ಹೇಗಿರಬಹುದು ಆ ಮನಸ್ಥಿತಿ, ನಮ್ಮ ನಟರು ಆ ಫೀಲ್‌ ಅಭಿವ್ಯಕ್ತಿಗೆ ಬಹಳ ಪ್ರಯತ್ನಿಸಿದ್ದಾರೆ. ಗಿರೀಶ್‌ ಈ ನಟನ ಅಭಿನಯ ಕಂಡು ನಕ್ಕಿದ್ದರು.

ಉಳಿದಂತೆ, ಈ ನಾಟಕದಲ್ಲಿರುವುದೆಲ್ಲ ದುಷ್ಟಪಾತ್ರಗಳೇ. ರಾಮರಾಯ, ಅವನ ತಮ್ಮಂದಿರು, ಮೊಘಲ್‌ ದೊರೆ, ಬೇಗಮ್‌ ಹೀಗೆ.. ಇಲ್ಲಿರುವ ಕೇಂದ್ರ ಪಾತ್ರಗಳೇ ದುರ್ಬದ್ಧಿಯವಾದ ಕಾರಣ ಪ್ರೇಕ್ಷಕನ ಪ್ರತಿಕ್ರಿಯೆ ಇದಕ್ಕೆ ಹೇಗಿರಬಹುದು ಅನ್ನುವುದು ನನ್ನ ಕುತೂಹಲ. ಜೊತೆಗೆ ಇಲ್ಲಿ ಅತೀ ಹೆಚ್ಚು ಕೆಲಸ ಇರೋದು ತಲೆಗೇ. ಒಂದು ವಾಕ್ಯ ತಪ್ಪಿಹೋದರೂ ಮಹತ್ವವಾದದ್ದೇ ಮಿಸ್‌ ಆದಂತೆ. ಬಹಳ ಇಂಟೆರೆಸ್ಟಿಂಗ್‌ ಆದ ಸಂಕೀರ್ಣ ನಾಟಕ. ಐದು ಮುಖ್ಯ ಪಾತ್ರಗಳು. ಮೂವತ್ತಕ್ಕೂ ಹೆಚ್ಚು ಇತರ ಪಾತ್ರಗಳಿವೆ.

- ಈ ನಾಟಕದಲ್ಲಿ ರಾಮರಾಯ ಅಧಿಕಾರ ಉಚ್ಚೆಯ ವಾಸನೆಯಂತೆ ಹೇಳುವ ದೃಶ್ಯವೊಂದಿದೆ...

ಎಪಿಕ್‌ ಸೀನ್‌ ಅದು. ಕರೆಕ್ಟ್ ಟೈಮ್‌ನಲ್ಲೇ ಬರುತ್ತೆ. ಗಿರೀಶರ ಬ್ರಿಲಿಯೆಂಟ್‌ ಸ್ಕಿ್ರಪ್ಟಿಂಗ್‌ಗೆ ಇದು ಬೆಸ್ಟ್‌ ಉದಾಹರಣೆ. ಈ ಸನ್ನಿವೇಶದಲ್ಲಿ ಚಲನೆಯೂ ಅಷ್ಟೇ ನಿಖರವಾಗಿದೆ. ಈ ಸನ್ನಿವೇಶದ ಮೂಲಕ ರಾಮರಾಯನ ಸ್ಥಿತಿ ಏನು ಅಂತ ಕ್ಲುಪ್ತವಾಗಿ ಅಷ್ಟೇ ಹರಿತವಾಗಿ ಹೇಳುತ್ತಾರೆ. ಬಹಳ ಎಮೋಶನಲ್‌ ಆಗಿ ಕೊನೆಯಾಗುತ್ತದೆ.

- ಮೊಘಲರಲ್ಲಿ ಕುತುಬ್‌ ಷಾ ಪಾತ್ರ ಹೆಚ್ಚು ಕ್ರೌರ್ಯದಿಂದ ಕೂಡಿದೆ ಅಂತನಿಸುತ್ತಲ್ವಾ?

ಹೌದೌದು. ಆ ಪಾತ್ರದಲ್ಲಿ ಸ್ವಲ್ಪ ಹೆಚ್ಚೇ ಕ್ರೌರ್ಯ ತುಂಬಿಕೊಂಡಿದೆ ಅನಿಸುತ್ತೆ. ನಾನು ಬರೀದ್‌ ಶಾ ಪಾತ್ರ ನಾನು ಮಾಡ್ತಿದ್ದೀನಿ. ಆತ ಬಹಳ ಕಾಲದಿಂದ ರಾಮರಾಯನ ಜೊತೆಗೆ ಇದ್ದವನು. ರಾಯನಿಗೆ ಸಪೋರ್ಟಿವ್‌ ಆಗಿದ್ದವನು. ಯುದ್ಧಕ್ಕೂ ಹೋಗುತ್ತಾನೆ. ರಾಜಕೀಯದ ನೈತಿಕತೆಯ ಪುಟಿದೇಳುವಿಕೆ, ಅಹಂನ ವಿಜೃಂಭಣೆ ಇದಕ್ಕೆಲ್ಲ ಸಾಕ್ಷಿಯಾಗುವ ಪಾತ್ರ. ಶಶಾಂಕ್‌ ಪುರುಷೋತ್ತಮ್‌ ಆದಿಲ್‌ ಷಾ ಪಾತ್ರ ಮಾಡುತ್ತಿದ್ದಾರೆ.

- ವಸ್ತ್ರ ವಿನ್ಯಾಸದ ಬಗ್ಗೆ?

ನಾಟಕದ ಅಷ್ಟೂಪಾತ್ರಗಳಿಗೆ ಬೇಕಾದ ಕಾಸ್ಟೂ್ಯಮ್‌ಗಳು ಬಾಂಬೆಯಲ್ಲಿ ರೆಡಿಯಾಗಿವೆ. ಒಟ್ಟು 32 ಪಾತ್ರಗಳಿಗೆ ಪ್ರಿಯಾ ಎಂಬ ಡಿಸೈನರ್‌ ಕಾಸ್ಟೂ್ಯಮ್‌ ಡಿಸೈನ್‌ ಮಾಡಿದ್ದಾರೆ.ಪ್ರೊಡಕ್ಷನ್‌ ಇನ್‌ಚಾಜ್‌ರ್‍ ಅರುಣ್‌ ಸಾಗರ್‌. ಪ್ರಕಾಶ್‌ ಸೊಂಟಕ್ಕೆ ಅವರ ಸಂಗೀತವಿದೆ. ನಮ್ಮ ಪ್ರದೀಪ್‌ ಬೆಳವಾಡಿ ಲೈಟಿಂಗ್‌ ಮಾಡಿದ್ದಾರೆ. ಅಫ್‌ಕೋರ್ಸ್‌, ಪ್ರಕಾಶ್‌ ಬೆಳವಾಡಿ ತಿರುಮಲ ಪಾತ್ರ ಮಾಡಬೇಕು ಬಹಳ ಅನಿಸಿತ್ತು. ಆದರೆ ಅವರು ಸಿನಿಮಾದಲ್ಲಿ ಬ್ಯುಸಿ ಇದ್ದ ಕಾರಣ ಬರಲಿಲ್ಲ. ಮೂರು ತಿಂಗಳ ರಿಹರ್ಸಲ್‌ ಟೈಮ್‌ ಬೇಕಿತ್ತು. ಬಹಳ ಕಷ್ಟದ ಕೆಲಸ ಇದು. ಈ ಸಂಕೀರ್ಣ ನಾಟಕ ಅರ್ಥ ಮಾಡಿಕೊಳ್ಳುವುದೇ ಮೊದಲ ಹೆಜ್ಜೆ.

ಪ್ರತೀ ಹಂತದಲ್ಲೂ ಇದನ್ನು ರಂಗಕ್ಕೆ ತರುವುದು ಚಾಲೆಂಜಿಂಗ್‌ ಆಗಿತ್ತು. ಇದೆಲ್ಲ ನಾಟಕ ನೋಡುವಾಗ ಗೊತ್ತಾಗುತ್ತೋ ಇಲ್ವೋ.. ಸತತ ಒಂದು ತಿಂಗಳು ನಾಟಕ ರೀಡಿಂಗ್‌ಗೇ ಮೀಸಲಿಟ್ಟಿದ್ವಿ. ನಮ್ಮ ಕಲಾವಿದರು ಬಹಳ ಬೇಗ ಅರ್ಥ ಮಾಡಿಕೊಂಡರು. ಆಮೇಲೆ ಅದರ ಬಗ್ಗೆ ಚರ್ಚೆ ಮಾಡಿದ್ವಿ. ತಾಂತ್ರಿಕವಾದ ವಿಚಾರಗಳೂ ಬಹಳ ಇದ್ದವು. ಒಟ್ಟಾರೆ ಬಹಳ ಚಾಲೆಂಜಿಂಗ್‌ ಆದ, ನಮಗೂ ಪ್ರೇಕ್ಷಕರಿಗೂ ಏಕಕಾಲದಲ್ಲಿ ನಿರೀಕ್ಷೆ ಹೆಚ್ಚಿಸಿದ ನಾಟಕ ‘ಕ್ರಾಸಿಂಗ್‌ ತಾಳಿಕೋಟ’ ಅಕ್ಟೋಬರ್‌ 2 ರಿಂದ 6ರವರೆಗೆ ಮತ್ತು ಅಕ್ಟೋವರ್‌ 20 ಕ್ಕೆ ಪ್ರದರ್ಶನ ಇದೆ.

- ಪ್ರಿಯಾ ಕೇರ್ವಾಶೆ