ನವದೆಹಲಿ(ಡಿ.05): 2018ರ ಫೋರ್ಬ್ಸ್‌ ಇಂಡಿಯಾ ಸೆಲೆಬ್ರಿಟಿ 100 ಲಿಸ್ಟ್‌ ಬಿಡುಗಡೆಯಾಗಿದ್ದು, ಈ ಪೈಕಿ ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ದೇಶದ ಅತಿ ಶ್ರೀಮಂತ ಸೆಲೆಬ್ರಿಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸತತ 3 ವರ್ಷಗಳಿಂದ ಸಲ್ಮಾನ್‌ ಖಾನ್‌ ದೇಶದ ಅತಿ ಶ್ರೀಮಂತ ಸಲೆಬ್ರಿಟಿ ಎನಿಸಿಕೊಂಡಿದ್ದು, ಈ ಬಾರಿಯೂ ನಂ. 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. 

ಮನರಂಜನೆಗೆ ಸಂಬಂಧಿಸಿದ ಸೆಲೆಬ್ರಿಟಿಗಳ ವರ್ಷದ ಆದಾಯದ ಮೇರೆಗೆ ಫೋರ್ಬ್ಸ್‌ ಪ್ರತಿ ವರ್ಷ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. 2018ರ ಪಟ್ಟಿಯನ್ನು ಅಕ್ಟೋಬರ್ 1, 2017 ರಿಂದ ಸೆಪ್ಟೆಂಬರ್‌ 30, 2018ರವರೆಗೆ ಸೆಲೆಬ್ರಿಟಿಗಳು ಗಳಿಸಿದ ಆದಾಯದ ಮೇರೆಗೆ ಈ ಪಟ್ಟಿಯನ್ನು ಮಾಡಲಾಗಿದೆ.

 

ಸಲ್ಲು ಗಳಿಸಿದ್ದೇಷ್ಟು?:
ನಟ ಸಲ್ಮಾನ್‌ ಖಾನ್ ಈ ವರ್ಷ ಅಂದಾಜು 253.25 ಕೋಟಿ ರೂ. ಆದಾಯ ಗಳಿಸಿದ್ದು, ಟೈಗರ್‌ ಜಿಂದಾ ಹೈ ಹಾಗೂ ರೇಸ್‌ 3 ಚಿತ್ರಗಳು ಹಿಟ್‌ ಆದ ಕಾರಣ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ. ಜೊತೆಗೆ, ಪ್ರಮುಖ ಜಾಹೀರಾತುಗಳಲ್ಲೂ ಸಲ್ಲು ಹಣ ಗಳಿಸಿದ್ದಾರೆ. 

ಒಟ್ಟಾರೆ ಟಾಪ್ 100 ಸೆಲೆಬ್ರಿಟಿಗಳ ವರ್ಷದ ಆದಾಯ 3,140.25 ಕೋಟಿ ರೂ. ಗಳಾಗಿದ್ದು, ಈ ಪೈಕಿ ಸಲ್ಮಾನ್‌ ಖಾನ್‌ ಒಬ್ಬರೇ ಶೇ.8 ರಷ್ಟು ಆದಾಯ ಗಳಿಸಿದ್ದಾರೆ. ಎಂದು ಫೋರ್ಬ್ಸ್‌ ಮಾಹಿತಿ ನೀಡಿದೆ.

ವಿರಾಟ್ ಟಾಪ್ 2:
ಇನ್ನು, ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಈ ಬಾರಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಒಂದು ವರ್ಷದಲ್ಲಿ 228.09 ಕೋಟಿ ರೂ. ಆದಾಯ ಗಳಿಸಿದ್ದು, ಇದು ಕಳೆದ ವರ್ಷಕ್ಕಿಂತ ಶೇ.116.53ರಷ್ಟು ಹೆಚ್ಚಾಗಿದೆ. 

ಅಲ್ಲದೇ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ 2.0 ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ಅಕ್ಷಯ್‌ ಕುಮಾರ್ ಮೂರನೇ ಸ್ಥಾನದಲ್ಲಿದ್ದು, 185 ಕೋಟಿ ರೂ. ಆದಾಯ ಗಳಿಸಿದ್ದಾರೆ.

ಪಟ್ಟಿಯಿಂದ ಶಾರೂಖ್ ಔಟ್:
ಈ ಮಧ್ಯೆ ಮತ್ತೋರ್ವ ಬಾಲಿವುಡ್ ನಟ ಶಾರುಖ್‌ ಖಾನ್‌ಗೆ ಹಿನ್ನೆಡೆಯಾಗಿದ್ದು, ನಂ. 10 ಸ್ಥಾನದಿಂದ ಹೊರಹೋಗಿದ್ದಾರೆ. ಕಳೆದ ವರ್ಷ ಅಂದರೆ 2017ರ ಫೋರ್ಬ್ಸ್‌ ಪಟ್ಟಿಯಲ್ಲಿ ಟಾಪ್ 2 ರಲ್ಲಿದ್ದ ಶಾರುಖ್‌ ಖಾನ್‌ ಈ ಬಾರಿ ಟಾಪ್‌ 10ರಿಂದಲೇ ಹೊರಹೋಗಿದ್ದು, 13ನೇ ಸ್ಥಾನಕ್ಕಿಳಿದಿದ್ದಾರೆ. 2017ರಲ್ಲಿ ಶಾರುಖ್‌ರ ಯಾವುದೇ ಹೊಸ ಚಿತ್ರ ಬಿಡುಗಡೆಯಾಗದ ಕಾರಣ ಅವರ ಆದಾಯ ಕಳೆದ ವರ್ಷಕ್ಕಿಂತ ಶೇ. 33 ರಷ್ಟು ಕಡಿಮೆಯಾಗಿದೆ.

ಡಿಪ್ಪಿಗೆ ಸಿಕ್ತು ಸ್ಥಾನ:
ಇದೇ ಮೊದಲ ಬಾರಿಗೆ ಫೋರ್ಬ್ಸ್‌ ಪಟ್ಟಿಯ ಟಾಪ್‌ 5 ಪಟ್ಟಿಯಲ್ಲಿ ಮಹಿಳೆಯೊಬ್ಬರು ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ವಿವಾಹವಾದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ 112.8 ಕೋಟಿ ರೂ. ಆದಾಯ ಗಳಿಸಿಕೊಳ್ಳುವ ಮೂಲಕ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಪದ್ಮಾವತ್‌ ಚಿತ್ರ ಸೂಪರ್‌ ಹಿಟ್ ಆಗಿರುವುದು ಹಾಗೂ ಹಲವು ಜಾಹೀರಾತುಗಳಲ್ಲಿ ನಟನೆ ಇದಕ್ಕೆ ಕಾರಣ ಎನ್ನಲಾಗಿದೆ.

ಇನ್ನೂ ಯಾರಾರಿದ್ದಾರೆ ಪಟ್ಟಿಯಲ್ಲಿ?:
ಟಾಪ್‌ 5 ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸ್ಥಾನಗಳಿಸಿದ್ದು, ವರ್ಷದಲ್ಲಿ 101.77 ಕೋಟಿ ರೂ. ಆದಾಯ ಗಳಿಸಿದ್ದಾರೆ. ನಂತರ ನಟ ಆಮೀರ್ ಖಾನ್‌ ( 97.50 ಕೋಟಿ ರೂ. ). ಆದಾಯ ಗಳಿಸಿದ್ದಾರೆ.

 ಅಮಿತಾಭ್‌ ಬಚ್ಚನ್‌ ( 96.17 ಕೋಟಿ ರೂ. ), ರಣವೀರ್‌ ಸಿಂಗ್ ( 84.7 ಕೋಟಿ ರೂ.), ಸಚಿನ್ ತೆಂಡೂಲ್ಕರ್‌ ( 80 ಕೋಟಿ ರೂ. ) ಹಾಗೂ ನಟ ಅಜಯ್ ದೇವಗನ್ ( 74.50 ಕೋಟಿ ರೂ. ) ಆದಾಯ ಗಳಿಸುವ ಮೂಲಕ ಕ್ರಮವಾಗಿ 6, 7, 8, 9 ಹಾಗೂ 10 ನೇ ಸ್ಥಾನ ಗಳಿಸಿದ್ದು, ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ದಕ್ಷಿಣದ ಸೆಲಿಬ್ರಿಟಿಗಳ ಕಥೆ ಏನು?:
ಇನ್ನೊಂದೆಡೆ, ದಕ್ಷಿಣ ಭಾರತ ಚಿತ್ರದ ನಟರು ಹೆಚ್ಚಿನ ಮಂದಿ ಟಾಪ್‌ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 2017 ರ ಫೋರ್ಬ್ಸ್‌ ಲಿಸ್ಟ್‌ನಲ್ಲಿ 13 ಮಂದಿ ಸ್ಥಾನಗಳಿಸಿದ್ದರೆ, ಈ ಬಾರಿ 17 ಸೆಲೆಬ್ರಿಟಿಗಳು ಸ್ಥಾನಗಳಿಸಿಕೊಂಡಿದ್ದಾರೆ. ಆದರೆ, ಬಾಲಿವುಡ್‌ ಸೆಲೆಬ್ರಿಟಿಗಳ ಸಂಖ್ಯೆ ಕಳೆದ ವರ್ಷ 33 ಇದ್ದದ್ದು ಈ ಬಾರಿ 31ಕ್ಕೆ ಇಳಿಕೆಯಾಗಿದೆ.

ಒಟ್ಟಿನಲ್ಲಿ ಈ ಬಾರಿಯ 2018ರ ಫೋರ್ಬ್ಸ್‌ ಇಂಡಿಯಾ ಸೆಲೆಬ್ರಿಟಿ 100 ಲಿಸ್ಟ್‌ ತೀವ್ರ ಕುತೂಹಲ ಮೂಡಿಸಿದ್ದು, ಪ್ರಮುಖವಾಗಿ ಸಲ್ಮಾನ್ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗದಿರುವುದು, ಶಾರೂಖ್ ಖಾನ್ ಟಾಪ್ 10 ಪಟ್ಟಿಯಿಂದಲೇ ಹೊರಹೋಗಿರುವುದು ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.