ಸಿಕ್ಕುವ ತನಕ ರುಕ್ಕು, ಕಳಕೊಂಡ ಮೇಲೆ ಬಿಕ್ಕು!

ಪ್ರಪಂಚದಲ್ಲಿ ಆಗಾಗ ನಡೆಯಬಾರದ ವಿಕೋಪಗಳು ನಡೆದುಹೋಗುತ್ತವೆ.ಕೆಲವರ ಬದುಕಿನಲ್ಲೂ ಜರುಗುತ್ತವೆ. ಆಗಬಾರದು, ನೋಡಬಾರದು,ನಡೆಯಬಾರದು ಅಂತಂದುಕೊಳ್ಳುವ ಮೊದಲೇ ಆ ಘಟನೆ ಸಂಭವಿಸಿ ತಲೆ ಸಿಡಿದು ಸಾವಿರ ಹೋಳಾಗುತ್ತವೆ. ಆ ವಿಕೋಪಗಳು ಚಿತ್ರಮಂದಿರಗಳಲ್ಲೂ ಜರುಗಬಹುದು, ಶೂಟಿಂಗ್ ಸ್ಪಾಟ್‌ಗಳಲ್ಲೂ ಜರುಗಬಹುದು. ಆದರೆ ಈ ನಮ್ಮ ಚಿತ್ರನಾಯಕನ ಬಾಳಲ್ಲಿ ಅಂಥದ್ದೊಂದು ವಿಕೋಪ ಜರುಗುವುದು ವೃದ್ಧಾಶ್ರಮದಲ್ಲಿ. ಯುವಕ ಮಂಡಲದ ಧೀರೋದಾತ್ತ ನಾಯಕ, ಹೆವೀ ಇಂಟ್ರಡಕ್ಷನ್ ಸೀನ್‌ನ ಒಡೆಯ, ಲೋಕಲ್ ಕಬಡ್ಡಿ ತಂಡದ ಇಂಟರ್‌ನ್ಯಾಷನಲ್ ಹೀರೋ ಕಣ್ಣಿಗೆ ಆ ಹುಡುಗಿ ಬೀಳುವ ಸುಮುಹೂರ್ತದಲ್ಲಿ ಅಣ್ಣಂಗೆ ಲವ್ವಾಗುತ್ತದೆ. ಅಲ್ಲಿಗೆ ಕತೆ ಮುಗಿಯುತ್ತದೆ ಅಂತ ಬ್ರೇಕಪ್ ಆದವರೆಲ್ಲಾ ನಂಬುತ್ತಾರೆ. ಆದರೆ ಸಿನಿಮಾ ಪ್ರೇಮಿಗಳು ನಂಬಬಾರದು. ಹಾಗಾಗಿ ಚಿತ್ರ ಮುಂದುವರಿಯುತ್ತದೆ.ಈ ಲವ್ ಎಪಿಸೋಡು ಜರುಗುತ್ತಿರುವಾಗಲೇ ವೃದ್ಧಾಶ್ರಮದಲ್ಲಿ ಹೀರೋ ‘ರಾಜಕುಮಾರ’ನಷ್ಟು ಒಳ್ಳೆಯವನಾಗುವ ಭಾವಪೂರ್ಣ ಮಹತ್ವಪೂರ್ಣ ಘಟನೆಗಳೂ ನಡೆಯುತ್ತವೆ. ನಿರ್ದೇಶಕರು ತಮಗೆ ಸಾಧ್ಯವಾದಷ್ಟು ಮಧ್ಯ ಮಧ್ಯದಲ್ಲಿ ಸಮಾಜಕ್ಕೆ ಒಳ್ಳೆಯದಾಗುವ ಸಾಮಾಜಿಕ ಸಂದೇಶಗಳನ್ನು ನೀಡಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಕಡೆಗೂ ಇದೊಂದು ಪ್ರೇಮಕತೆಯಾಗಿಯೇ ಉಳಿಯುವುದರಿಂದ ಈ ಯಾವ ಸಂದೇಶಕ್ಕೂ ಮೂರು ಕಾಸಿನ ಬೆಲೆ ಸಿಕ್ಕಿಲ್ಲ ಅನ್ನುವುದಕ್ಕೆ ಪ್ರೀತಿಯನ್ನು ದೂರಬೇಕೋ ಪ್ರೇಮಿಗಳನ್ನು ದೂರಬೇಕೋ ಸರ್ವಶಕ್ತ ದಯಾಮಯನಾದ ಭಗವಂತನನ್ನು ದೂರಬೇಕೋ ದೇವರಾಣೆ ಗೊತ್ತಾಗುವುದಿಲ್ಲ. ಇನ್ನು ಸರಿಯಾಗಿ ಸಿನಿಮಾ ಬಗ್ಗೆ ಹೇಳುವುದಾದರೆ ನಿರ್ದೇಶಕ, ನಾಯಕ, ನಾಯಕಿ ಮತ್ತು ಪೋಷಕ ಪಾತ್ರಧಾರಿಗಳ ಸಿನಿಮಾ ಪ್ರೀತಿ ಈ ಚಿತ್ರದಲ್ಲಿ ಎದ್ದೆದ್ದು ಕಾಣುತ್ತದೆ. ಆದರೆ ಆ ಪ್ರೀತಿಗೆ ಸರಿಯಾಗಿ ಏನೇನು ಕೆಲಸಗಳಾಗಬೇಕೋ ಅವು ಯಾವುವೂ ಸರಿಯಾಗಿ ಜರುಗಿಲ್ಲವಾದ್ದರಿಂದ ಈ ರುಕ್ಕು ಎಂಬ ದುರಂತ ಪ್ರೇಮಕತೆಯ ಕುರಿತಾಗಿ ಜಾಸ್ತಿ ಏನು ಹೇಳಿದರೂ ಬೆಲೆ ಇಲ್ಲವಾಗುತ್ತದೆ..

Comments 0
Add Comment