Asianet Suvarna News Asianet Suvarna News

ಮಹಿಳಾ ರಾಜಕಾರಣಕ್ಕೆ ಅರಿವೇ ಗುರು ಎಂದ ಹೆಬ್ಬೆಟ್ ರಾಮಕ್ಕ

ಮಹಿಳಾ ರಾಜಕಾರಣಕ್ಕೆ ಅರಿವೇ ಗುರು ಎಂದ ಹೆಬ್ಬೆಟ್ ರಾಮಕ್ಕ

ಆ ಊರಿನ ಪಂಚಾಯಿತಿ ಚುನಾವಣೆಗೆ ಮಹಿಳಾ ಮೀಸಲು ಫಿಕ್ಸ್ ಆಗುತ್ತದೆ. ಅನಕ್ಷರಸ್ಥೆ ರಾಮಕ್ಕನೇ ಅಲ್ಲಿಗೆ ಅಭ್ಯರ್ಥಿ. ಆಕೆಯ ಗಂಡ ಕಲ್ಲೇಶಪ್ಪನ ಪ್ರೇರಣೆ ಹಾಗೂ ಒತ್ತಡವೇ ಅದಕ್ಕೆ ಕಾರಣ. ಬೇಕೊ ಬೇಡವೋ ಗೆದ್ದು, ಪಂಚಾಯಿತಿ ಅಧ್ಯಕ್ಷೆಯಾಗುತ್ತಾಳೆ ರಾಮಕ್ಕ. ಹಾಗಂತ, ಆಕೆಗೆ ಓದು-ಬರಹ ಗೊತ್ತಿಲ್ಲ.  ಮುಗ್ದೆ. ಅದೇ ನೆಪದಲ್ಲಿ ಕಪಟ ರಾಜಕಾರಣಗಳಿಂದ ಶುರುವಾಗುತ್ತದೆ ರಾಜಕೀಯದ ಚದುರಂಗದಾಟ. ಹೆಂಡತಿ ಹೆಸರಲ್ಲಿ ಗಂಡನ ರಾಜಕೀಯ, ಶಾಸಕ ಮಹಾಶಯನಿಂದ ಅಧಿಕಾರ ದುರುಪಯೋಗ, ಅನಕ್ಷರಸ್ಥೆ ಎನ್ನುವ ಕಾರಣಕ್ಕೆ  ವಿರೋಧ ಪಕ್ಷದವರಿಂದ  ಅವಮಾನ, ಅಪಮಾನ. ಆಕೆಗದು ಅದು ಸ್ವಾಭಿಮಾನದ ಪ್ರಶ್ನೆಯಾದರೆ, ಪತಿಗೆ ಅಧಿಕಾರದ ದಾಹ. ಮತ್ತೊಂದೆಡೆ ಸ್ವಪಕ್ಷೀಯದವರಿಂದ ಆಕೆಯನ್ನು ಅಧಿಕಾರದಿಂದ ಕೆಳಗಿಳಿಸುವ ಕುತಂತ್ರ..ಮುಂದೇನಾಗುತ್ತೆ ಅನ್ನೋದು ಈ ಚಿತ್ರದ ಒಟ್ಟು ಕಥಾವಸ್ತು. 

ಮಹಿಳೆಯರಿಗೂ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎನ್ನುವ ಆಧಾರದಲ್ಲಿ ಜಾರಿಗೆ ಬಂದ  ಮಹಿಳಾ ಮೀಸಲಾತಿಯ ತಾಕಲಾಟವಿದು. ರಾಮಕ್ಕ ಇಲ್ಲಿ ಸಾಂಕೇತಿಕ ಮಾತ್ರ. ಯಾಕಂದ್ರೆ ಇದು ಈ ಹೊತ್ತಿನ ರಾಜಕೀಯದ ಬಹು ಚರ್ಚಿತ ವಿಷಯ. ಮಹಿಳಾ ಮೀಸಲಾತಿ ಬಂದ ನಂತರ ಇಂತಹ ಹಲವು ರಾಮಕ್ಕಂದಿರು ನಮ್ಮ ನಡುವಿದ್ದಾರೆ. ಅವರೆಲ್ಲ ನೆಪ ಮಾತ್ರಕ್ಕೆ ಗೆದ್ದವರು. ಅಧಿಕಾರ ನಡೆಸಿದವರೆಲ್ಲ ಅವರ ಗಂಡಂದಿರು. ಅವರ ಹೆಸರಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡು, ಅಕ್ರಮ ವೆಸಗಿದ್ದು ಕಪಟ ರಾಜಕಾರಣಿಗಳು. ಗ್ರಾಮೀಣ ಪ್ರದೇಶಗಳಲ್ಲಿ ನಾವು ಕಂಡ ಕೆಟ್ಟ ರಾಜಕಾರಣವೇ ಇದು. ಇದನ್ನೇ ಇಲ್ಲಿ ತೆರೆಗೆ ತಂದಿದ್ದಾರೆ ನಿರ್ದೇಶಕ ನಂಜುಂಡೇಗೌಡ.ಇದು ಕೊಂಚ ಕ್ಲಿಷ್ಟವಾದ, ಸಂಕೀರ್ಣವಾದ ವಿಷಯ. ಸಿನಿಮ್ಯಾಟಿಕ್ ರೂಪದಲ್ಲಿ ಇದನ್ನು ನಿಭಾಯಿಸುವುದು ಕಷ್ಟವೂ ಹೌದು. ಸಿನಿಮಾದ ಸಿದ್ಧ ಸೂತ್ರಗಳನ್ನು ಬಳಸಿ ಕಮರ್ಷಿಯಲ್ ರೂಪಕೊಟ್ಟರೆ ಅದರ ವಾಸ್ತವದ ತೀವ್ರತೆಯೇ ಮರೆಯಾಗಿ ಬಿಡುತ್ತದೆ. ಆ ಎಚ್ಚರದಲ್ಲೇ ಮಹಿಳಾ ಮೀಸಲು ವಿಷಯ ಮಂಡಿಸಿದ್ದಾರೆ ನಿರ್ದೇಶಕರು. ಆ ಕಾರಣಕ್ಕಾಗಿಯೇ ಚಿತ್ರದ ದೃಶ್ಯರೂಪಕ್ಕೆ  ಬಹುತೇಕ ಕಲಾತ್ಮಕತೆಯ ಛಾಯೆ ಹೆಚ್ಚು ಅವರಿಸಿಕೊಂಡಿದೆ. ನಿರೂಪಣೆ ನಿಧಾನ ಎನಿಸುತ್ತದೆ. ಆದರೂ ಅದು ಕುತೂಹಲ ಮೂಡಿಸುವುದು ಸಂಭಾಷಣೆ ಮತ್ತು ಕಲಾವಿದರ ಅಭಿನಯದ ಕಾರಣಕ್ಕೆ. 

ಮಹಿಳಾ ಮೀಸಲು ದುರುಪಯೋಗವನ್ನು ಕಣ್ಣಿಗೆ ಕಟ್ಟಿದ್ದಂತೆ ತೋರಿಸುತ್ತಲೇ, ಅನಕ್ಷರಸ್ಥೆ ಮಹಿಳೆಯರಿಗೆ ರಾಮಕ್ಕನ ಮೂಲಕ ಅರಿವಿನ ಗುರು ತೋರಿಸಿದ್ದಾರೆ ನಿರ್ದೇಶಕರು. ರಾಮಕ್ಕ ಅವಮಾನ ತಾಳಲಾಗದೆ ಅಕ್ಷರ ಕಲಿಯುತ್ತಾಳೆ. ಅದು ತನ್ನ ಅಧಿಕಾರ ದುರಪಯೋಗ ಪಡಿಸಿಕೊಳ್ಳಲು ಮುಂದಾದವರಿಗೆ ತಕ್ಕ ಉತ್ತರವೂ ಆಗುತ್ತದೆ. ಜತೆಗೆ ಆಕೆಗೂ ಅಧಿಕಾರ ಚಲಾಯಿಸುವ ಛಾತಿಯಿದೆ. ಸಿಕ್ಕ ಅಧಿಕಾರವನ್ನು ಜನಪರವಾಗಿಸುವ ತುಡಿತವಿದೆ ಎನ್ನುವುದನ್ನು ಹೇಳುತ್ತಲೇ ಆಕೆ ಪಂಚಾಯಿತಿ ಚುನಾವಣೆಯಿಂದ ಶಾಸಕಿ ಆಗುವ ಪರಿಯನ್ನು ಸಾಹಸದಂತೆ ಹೇಳುತ್ತಾ ಈ ಹೊತ್ತಿನ ಮಹಿಳಾ ರಾಜಕಾರಣಿಗಳಿಗೆ ಸ್ಫೂರ್ತಿ ಆಗುವ ಹಾಗೆ ಕತೆಯನ್ನು ಹೆಣೆದಿದ್ದು ಈ ಚಿತ್ರದ ಹೈಲೆಟ್.ಅದೇ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗರಿ ಮೂಡಿಸಿದೆ ಎನ್ನುವುದಕ್ಕೆ ಸಾಕ್ಷಿ. ಉಳಿದಂತೆ,ಅನಕ್ಷರಸ್ಥೆ ರಾಮಕ್ಕ ಅಕ್ಷರಸ್ಥೆ ಆಗುವುದು ಪವಾಡದಂತೆ ನಡೆದು ಹೋಗಿದೆ. ಹಾಗೆಯೇ ಆಕೆ ಮುಂದೆ ಶಾಸಕಿ ಆಗಿದ್ದು ಕೂಡ ಸೋಜಿಗ. ಆದರೂ ಅದು ಅಸಾಧ್ಯವಾದದ್ದೇನು ಅಲ್ಲ ಎಂದು ನೋಡುಗ ಸಮಾಧಾನ ಪಟ್ಟುಕೊಳ್ಳಲೂಬಹುದು ಬಿಡಿ.

ನಟಿ ತಾರಾ ಅವರದ್ದು ಇಲ್ಲಿ ರಾಮಕ್ಕನ ಪಾತ್ರ. ಹೇಳಿ, ಕೇಳಿ ಅವರು ನಿಜ ಜೀವನದಲ್ಲೂ ರಾಜಕಾರಣಿ. ತೆರೆ ಮೇಲೆಯೂ ಅಂಥದ್ದೊಂದು ಪಾತ್ರ ಸಿಕ್ಕರೆ, ಅದನ್ನು ಇಡೀಯಾಗಿ ನುಂಗಿಬಿಟ್ಟಾರೆನ್ನುವ ನಿಮ್ಮ ಊಹೆ ಇಲ್ಲಿ ನಿಜವೂ ಆಗುತ್ತೆ. ಹಾಗಿದೆ ಆ ಮುಗ್ದೆ ರಾಮಕ್ಕನ ಪಾತ್ರ ಪೋಷಣೆ. ನೈಜತೆಯೇ ಅದರ ಜೀವಾಳ. ರಾಮಕ್ಕನ ಪತಿ ಕಲ್ಲೇಶಪ್ಪನ ಪಾತ್ರದಲ್ಲಿ ದೇವರಾಜ್ ಇದ್ದಾರೆ. ಅವರ ಅಭಿನಯಕ್ಕೂ ಆಕರ್ಷಿಸುವ ಛಾತಿ ಇದೆ. ಹಾಗೆನೆ,  ನಿಜವಾಗಿಯೂ ತಂತ್ರಗಾರಿಕೆಯ ರಾಜಕಾರಣಿಯ ವರಸೆ ಹೇಗಿರುತ್ತೆ ಅನ್ನೋದಕ್ಕೆ ಇಲ್ಲಿ ನಟ ಹನುಮಂತೇಗೌಡ್ರು ನಿರ್ವಹಿಸಿದ ಪಾತ್ರ ನೋಡಿದ್ರೆ ಸಾಕು. ಅವರು ನಟ ಎನ್ನುವುದಕ್ಕಿಂತ ನಿಜವಾಗಿಯೂ ರಾಜಕಾರಣಿಯೇ ಇರಬೇಕು ಎಂದು ಕೊಂಡರೂ ಅಚ್ಚರಿ ಪಡಬೇಕಿಲ್ಲ. ಉಸ್ತುವಾಗಿ ಸಚಿವರಾಗಿ ನಾಗರಾಜ ಮೂರ್ತಿ, ಜಗದೀಶ ಜಾಲಿ, ಮೈಮ ನಂಜುಂಡ ಅವರ ಪಾತ್ರ ಪೋಷಣೆಯೂ ಅಚ್ಚಕಟ್ಟು. ಇದು ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ ಹಾಗಂತ ಹೇಳುತ್ತೆ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅವರ ಸಂಭಾಷಣೆ. ತುಮಕೂರು, ಮಂಡ್ಯ ಶೈಲಿಯ ಜವಾರಿ ಭಾಷೆ ಇಲ್ಲಿ ಬೆಸೆದುಕೊಂಡಿದೆ. ಮಾತಿನ ಜತೆಗೆ ಗ್ರಾಮೀಣ  ಮಾತಿಗೂ ಹೆಚ್ಚು ಆದ್ಯತೆ ಸಿಕ್ಕಿದೆ. ಸಾಹಿತಿಗಳು ಸಂಭಾಷಣೆ ಹೊಸೆದರೆ ಇದು ಮಾಮೂಲು. ತೇಜಸ್ವಿ ಸಂಗೀತ, ಸತೀಶ್ ಛಾಯಾಗ್ರಹಣ ಎರಡು ಸಹ್ಯ.

Video Top Stories