ಸಿನಿಮಾ ಜಗತ್ತಿಗೆ ಹೊಸದಾಗಿ ಪ್ರವೇಶಿಸಲಿಚ್ಚಿಸುವವರಿಗೆ ನಟನೆ, ನಿರ್ದೇಶನ, ನೃತ್ಯ, ನಿರೂಪಣೆ, ಸಂಕಲನ ಮತ್ತು ಯೋಗ ತರಬೇತಿ ನೀಡುವುದು ಅದರ ಉದ್ದೇಶ. ಬೆಂಗಳೂರಿನ ಬಸವೇಶ್ವರನಗರದಲ್ಲಿ ನೂತನವಾಗಿ ಆರಂಭಗೊಂಡ ಈ ‘ಕಲಾ ವಿಧ ಫಿಲಂ ಅಕಾಡೆಮಿ’ಗೆ ಕಿಚ್ಚ ಸುದೀಪ್ ಚಾಲನೆ ನೀಡಿದರು.

ಆ ದಿನ ಅಲ್ಲಿ ಅವರೇ ಮುಖ್ಯ ಆಕರ್ಷಣೆ ಆಗಿದ್ದರು. ಅವರನ್ನು ನೋಡುವುದಕ್ಕಾಗಿಯೇ ಭರ್ಜರಿ ಜನ ಸೇರಿದ್ದರು. ಸಿನಿಮಾ ಆಸಕ್ತರಿಗೆ ನಟನೆ, ನಿರ್ದೇಶನ ಕಲಿಸುವ ತರಬೇತಿ ಸಂಸ್ಥೆಗಳು ರೂಢಿಸಿಕೊಳ್ಳಬೇಕಾದ ಶಿಸ್ತಿನ ಪಾಠ ಮಾಡಿದರು.‘ಯಾರದೋ ಸಕ್ಸಸ್ ನೋಡಿ ಸಿನಿಮಾ ಜಗತ್ತಿಗೆ ಬರಬೇಡಿ. ಚಿತ್ರರಂಗಕ್ಕೆ ಬರುವ ಮುನ್ನ ನಿಮ್ಮ ಬಗ್ಗೆಯೂ ಯೋಚಿಸಿ, ನಿಮ್ದು ಕೂಡ ಹೊಟ್ಟೆ ತುಂಬಾ ಬೇಕು’ಅಂತ ಸಿನಿಮಾ ಆಸಕ್ತರಿಗೆ ಸಲಹೆ ನೀಡಿದರೆ, ತರಬೇತಿ ಸಂಸ್ಥೆ ಶುರು ಮಾಡುವವರಿಗೆ ಶಿಸ್ತು ಬೇಕು.

ಶಿಸ್ತು ಎಲ್ಲಾ ಕ್ಷೇತ್ರದಲ್ಲೂ ಬೇಕು. ಶಿಸ್ತು ಇದ್ದಾಗ ಹೊಸತನ್ನು ಕಲಿಸುವುದಕ್ಕೆ, ಕಲಿತವರು ಶ್ರದ್ಧೆಯಿಂದ ಈ ಕ್ಷೇತ್ರದಲ್ಲಿ ಗುರುತಿಸಿಕೊಂಡು ಬೆಳೆಯುವುದಕ್ಕೆ ಸಹಾಯಕವಾಗುತ್ತೆ ಎಂದು ಕಲಾವಿಧ ಅಕಾಡೆಮಿ ಸದಸ್ಯರಿಗೂ ಕಿವಿ ಮಾತು ಹೇಳಿದರು. ಸಿನಿಮಾ ಜಗತ್ತೇ ಒಂದು ಸುಂದರವಾದ ಲೋಕ. ಪ್ರತಿ ದಿನ ಇಲ್ಲಿ ಹೊಸದನ್ನು ನೋಡುತ್ತೇವೆ. ಹೊಸ ಮುಖಗಳು ಕಾಣುತ್ತವೆ. ಹೊಸ ಜಾಗಗಳಿಗೆ ಹೋಗುತ್ತೇವೆ. ಹೊಸತನ್ನು ಕಲಿಯುತ್ತೇವೆ. ಮತ್ತೊಂದು ಪಾತ್ರ ಮಾಡಿ, ಖುಷಿ ಪಡುತ್ತೇವೆ. ಹಾಗಾಗಿ ಈ ಕ್ಷೇತ್ರಕ್ಕೆ ಬರುವಾಗ ಕಾಣುವ ಮುಗ್ಧತೆ, ಇಲ್ಲಿಗೆ ಬಂದಾಗಲೂ ಇರಬೇಕು ಎಂದರು.

ಆರಂಭದಲ್ಲಿ ಯತಿರಾಜ್ ಮಾತನಾಡಿ, ಸಿನಿಮಾ ಬದುಕಿನ ಪಯಣದ ನೆನಪು ಬಿಚ್ಚಿಟ್ಟರು. ನಿರ್ಮಾಪಕ ಜಾಕ್ ಮಂಜು ಸಂಸ್ಥೆಯ ಯೂಟ್ಯೂಬ್ ಬಿಡುಗಡೆ ಮಾಡಿದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ವೆಬ್‌ಸೈಟ್ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು. ಅಕಾಡೆಮಿಗೆ ಸೇರಿದ ಮೊದಲ ನಾಲ್ಕು ವಿದ್ಯಾರ್ಥಿಗಳಿಗೆ ಸುದೀಪ್ ಬಣ್ಣ ಹಚ್ಚುವ ಮೂಲಕ ತರಬೇತಿ ತರಗತಿಗಳಿಗೆ ಚಾಲನೆ ಕೊಟ್ಟರು. ಯತಿರಾಜ್ ಈ ಸಾಹಸಕ್ಕೆ ಮತ್ತೋರ್ವ ಪತ್ರಕರ್ತ ಕಮ್ ನಟ ಅರವಿಂದ್ ರಾವ್ ಕೂಡ ಇದಕ್ಕೆ ಸಾಥ್ ನೀಡಿದ್ದಾರೆ. ಅವರೊಂದಿಗೆ ಸುಧೀಂದ್ರ ವೆಂಕಟೇಶ್, ಮೀನಾ ರಘು, ಭಾಸ್ಕರ್ ಶೆಟ್ಟಿ ಹಾಗೂ ಗಂಗಾಧರ್ ಭಟ್ ಇದ್ದಾರೆ.