ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರವೊಂದಕ್ಕೆ ಬಣ್ಣ ಹಚ್ಚಲೂ ರೆಡಿ ಆಗಿದ್ದಾರೆ. ಕೆಲ ದಿನಗಳ ಹಿಂದೆ ವಂಚನೆ ಆರೋಪಕ್ಕೆ ಒಳಗಾದ ನಂತರ ತೆರೆಮರೆಯಲ್ಲಿ ಉಳಿದಿದ್ದರ ಹಿಂದಿನ ಕತೆ ಬಿಚ್ಚಿಟ್ಟರು. ಓವರ್ ಟು ಧರ್ಮ.

ನನಗೆ ಗೊತ್ತಿಲ್ಲದ ಕತೆ ಅದು..

ಚಿತ್ರೋದ್ಯಮಕ್ಕೆ ನಾನೇನು ಹೊಸಬನಲ್ಲ. ಇಲ್ಲಿಗೆ ಬಂದು ಹಲವು ವರ್ಷಗಳೇ ಆದವು. ಉದ್ಯಮ ಹೇಗೆ ಅಂತ ನಾನು ಅರ್ಥ ಮಾಡಿಕೊಂಡ ಹಾಗೆಯೇ ನಾನೇನು ಅನ್ನೋದು ಇಲ್ಲಿರುವ ಬಹಳಷ್ಟು ಜನರಿಗೂ ಗೊತ್ತು. ಸಂಪ್ರದಾಯಸ್ಥ, ಸಂಸ್ಕೃತಿ ಇರುವಂತಹ ಫ್ಯಾಮಿಲಿಯಿಂದ ಬಂದವನು ನಾನು. ಸಿನಿಮಾ, ಶೂಟಿಂಗ್ ಎನ್ನುವುದರ ಆಚೆ ನಾನೆಂದಿಗೂ ಇನ್ನೆಲ್ಲೋ ಹೋಗಿ, ತಲೆ ತಗ್ಗಿಸುವ ಕೆಲಸ ಮಾಡಿಲ್ಲ. ಹಾಗೆಯೇ ಮತ್ತೊಬ್ಬರಿಂದ ಹಣ ವಂಚಿಸುವಷ್ಟು ಕ್ರೂರಿಯೂ ನಾನಲ್ಲ. ಆದರೂ ನನ್ನ ಮೇಲೆ ವಂಚನೆ ಆರೋಪ ಬಂತು. ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಎಫ್‌ಐ ಆರ್ ಕೂಡ ದಾಖಲಾಯಿತು. ದೂರು ಸಲ್ಲಿಕೆ ಆಗಿ, ಅದರ ಆಧಾರದಲ್ಲಿ ತಿಂಗಳಾದ ನಂತರ ಎಫ್‌ಐಆರ್ ದಾಖಲಾದಾಗಲೇ ನನಗೆ ಈ ವಿಷಯ ಗೊತ್ತಾಗಿದ್ದು. ಆಗಲೇ ನಾನು ಪೊಲೀಸು, ದೂರು, ಎಫ್‌ಐಆರ್ ಅಂತೆಲ್ಲ ನೋಡಿದ್ದು. ಈ ಹಂತದಲ್ಲಿ ಬ್ಯುಸಿ ಆದೆ. ಬಂದ ಆರೋಪಕ್ಕೆ ತಕ್ಷಣವೇ ಸ್ಪಷ್ಟನೆ ನೀಡಲು ಸಾಧ್ಯವಾಗಲಿಲ್ಲ. ಆಗ ನನ್ನದೇ ತಪ್ಪು ಎನ್ನುವಂತೆ ಬಿಂಬಿಸಲಾಯಿತು. ಕೊನೆಗೆ ಆಗಿದ್ದೇನು? ಜಾಮೀನು ಸಿಕ್ಕಿತು. ಆರೋಪದ ಸತ್ಯಾಸತ್ಯತೆ ಏನು ಅಂತ ಹುಡುಕುತ್ತಾ ಹೋದೆ. ಪೊಲೀಸರಿಗೂ ಅದು ಮನವರಿಕೆ ಆಯಿತು. ನನ್ನ ಮೇಲೆ ಆರೋಪ ಮಾಡಿದ್ದ ನಟಿಯೇ ಅದು ಹಾಗಲ್ಲ , ಹೀಗೆ ಎಂದರು. ತಕ್ಷಣವೇ ಮಾಧ್ಯಮದ ಮುಂದೆ ಬಂದು ವಾಸ್ತವ ಹೇಳಿಕೊಂಡಾಗಲೇ ಇದು ಇನ್ನೇನೋ ಆಗಿದ್ದು ಅಂತ. ಆ ಕತೆ ಅಲ್ಲಿಗೆ ಮುಗಿಯಿತು.

ನಾನೆಲ್ಲೂ ಹೋಗಿರಲಿಲ್ಲ..

ಈ ಪ್ರಕರಣ ಆದ ನಂತರ ನಾನು ಒಂದಷ್ಟು ದಿನ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡಿಲ್ಲ. ಅದಕ್ಕೆ ಕಾರಣ ಇದೇ ಘಟನೆ ಅಲ್ಲ. ಅಥವಾ ನಾನು ವಂಚಿಸಿದ್ದೆ ಎನ್ನುವ ಭಯಕ್ಕಲ್ಲ. ನಾನು ಅಂಥಾ ಅನ್ಯಾಯವೇ ಮಾಡಿಲ್ಲ ಅಂದ್ಮೇಲೆ ನಾನೇಕೆ ಭಯ ಪಡಲಿ? ಒಮೊಮ್ಮೆ ಏನು ಇಲ್ಲದಿದ್ದಾಗ ಸುಖ ಸುಮ್ಮನೆ ಆರೋಪ ಬಂದಾಗ ಮರ್ಯಾದಸ್ಥರಿಗೆ ತುಂಬಾ ಕಷ್ಟ ಆಗುತ್ತೆ. ಜಾಮೀನು -ಗೀಮೀನು ಅಂತೆಲ್ಲ ನೋಡಬೇಕಾಗಿ ಬಂತು. ಅದಕ್ಕೆ ಒಂದಷ್ಟು ಸಮಯ ಹಿಡಿಯಿತು. ಇನ್ನೇನು ಅದರಿಂದ ಮುಕ್ತವಾಗುವ ಹೊತ್ತಿಗೆ ಅಮ್ಮ ಹುಷಾರು ಇಲ್ಲದಂತಾದರು. ಅವರನ್ನು ಆಸ್ಪತ್ರೆಗೆ ಸೇರಿಸಿ, ಓಡಾಡುವ ಒತ್ತಡದಲ್ಲಿ ಸಿನಿಮಾಗಳಲ್ಲಿ ಅಭಿನಯಿಸುವುದು ನಿಲ್ಲಿಸಿದೆ. ಬಂದ ಆಫರ್ ಬೇಡ ಎಂದೆ. ಇನ್ನೇನು ಅಮ್ಮ ಹುಷಾರಾಗುತ್ತಾರೆ ಎನ್ನುವ ನಿರೀಕ್ಷೆ ಇತ್ತಾದರೂ ದುರಾದೃಷ್ಟವಶಾತ್ ಅವರು ತೀರಿಕೊಂಡರು. ನಮ್ಮನ್ನು ಬಿಟ್ಟು ಹೋದರು. ಆ ದುಃಖದಲ್ಲಿ ಸುಮ್ಮನೆ ಮನೆ ಹಿಡಿದೆ. ಹೀಗೆಲ್ಲ ನನ್ನದೇ ಸಿನಿಮಾದಿಂದ ದೂರ ಉಳಿಯುವಂತಾಯಿತೇ ಹೊರತು ಇನ್ನಾವುದೋ ಪೊಲೀಸ್ ಪ್ರಕರಣ, ಎಫ್‌ಐಆರ್ ಅಂತೆಲ್ಲ ಕಾರಣಕ್ಕೆ ಸಿನಿಮಾಗಳಿಂದ ದೂರ ಉಳಿದಿದ್ದೇ ಎನ್ನುವುದು ಸರಿಯಲ್ಲ....