ಭೋಪಾಲ್‌[ಮೇ.17]: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ನಾಥೂರಾಂ ಗೋಡ್ಸೆಯನ್ನು ದೇಶ ಭಕ್ತ ಎಂದು ಕರೆಯುವ ಮೂಲಕ ಭೋಪಾಲ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಲೇಗಾಂವ್‌ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ವಿವಾದ ಸೃಷ್ಟಿಸಿದ್ದಾರೆ. ಅವರ ಹೇಳಿಕೆಗೆ ಬಿಜೆಪಿಯಿಂದಲೇ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಾಧ್ವಿ ಕ್ಷಮೆ ಕೇಳಿದ್ದಾರೆ.

ದೇಶದ ಮೊದಲ ಉಗ್ರ ಹಿಂದು. ಅದು ನಾಥೂರಾಮ್‌ ಗೋಡ್ಸೆ ಎಂದು ಚಿತ್ರನಟ ಕಂ ರಾಜಕಾರಣಿ ಕಮಲ್‌ ಹಾಸನ್‌ ಕಳೆದ ಭಾನುವಾರ ವಿವಾದಿತ ಹೇಳಿಕೆ ನೀಡಿದ್ದರು. ಆ ಕುರಿತು ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಗುರುವಾರ ಪ್ರತಿಕ್ರಿಯಿಸಿದ ಪ್ರಜ್ಞಾ ಸಿಂಗ್‌, ಗೋಡ್ಸೆ ಒಬ್ಬ ದೇಶಭಕ್ತ ಆಗಿದ್ದರು, ಆಗಿದ್ದಾರೆ, ಆಗಿಯೇ ಇರುತ್ತಾರೆ. ಅವರನ್ನು ಭಯೋತ್ಪಾದಕ ಎನ್ನುವವರು ತಮ್ಮನ್ನು ತಾವು ನೋಡಿಕೊಳ್ಳಲಿ. ಅಂಥವರಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಅಬ್ಬರಿಸಿದ್ದರು.

ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಮಧ್ಯಪ್ರದೇಶ ಬಿಜೆಪಿ ಘಟಕ ಸಾಧ್ವಿ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತು. ಗಾಂಧಿಯನ್ನು ಕೊಂದವರು ದೇಶಭಕ್ತರಾಗಲು ಸಾಧ್ಯವಿಲ್ಲ. ಯಾವ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಲಾಗಿದೆ ಎಂದು ಪ್ರಜ್ಞಾ ಅವರನ್ನು ಕೇಳಲಾಗುವುದು ಎಂದು ಹೇಳಿತು. ಇದರ ಬೆನ್ನಲ್ಲೇ ಬಿಜೆಪಿ ಕೇಂದ್ರ ಘಟಕ ದೆಹಲಿಯಲ್ಲಿ ಹೇಳಿಕೆ ಬಿಡುಗಡೆ ಮಾಡಿ, ಸಾಧ್ವಿ ಅವರಿಂದ ಸ್ಪಷ್ಟನೆ ಕೇಳಲಾಗುವುದು. ಆಕ್ಷೇಪಾರ್ಹ ಹೇಳಿಕೆ ನೀಡಿರುವ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳುವುದು ಸೂಕ್ತ ಎಂದಿತು. ಇದರ ಬೆನ್ನಲ್ಲೇ ಸಾಧ್ವಿ ಕ್ಷಮೆ ಯಾಚಿಸಿದರು.

ಮಹಾರಾಷ್ಟ್ರ ಎಟಿಎಸ್‌ ಮುಖ್ಯಸ್ಥರಾಗಿದ್ದ ಹೇಮಂತ ಕರ್ಕರೆ ಅವರು ತಮ್ಮ ಶಾಪದಿಂದಲೇ ಹತರಾದರು ಎಂದು ಕೆಲ ವಾರಗಳ ಹಿಂದೆ ಹೇಳಿದ್ದ ಸಾಧ್ವಿ, ಆಗಲೂ ಕ್ಷಮೆ ಯಾಚಿಸಿದ್ದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.