‘ಅಂಗಡಿ ಮುಚ್ಚಲು’ ಕೈ ಕಸರತ್ತು ಕಾರ‍್ಯ‘ಸಾಧು’ವೇ?

‘ಅಂಗಡಿ ಮುಚ್ಚಲು’ ಕೈ ಕಸರತ್ತು ಕಾರ‍್ಯ‘ಸಾಧು’ವೇ?| ನಾಲ್ಕನೇ ಬಾರಿಗೆ ಅದೃಷ್ಟಪರೀಕ್ಷೆಗೆ ಮುಂದಾದ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ| ಡಾ.ವಿರೂಪಾಕ್ಷ ಸಾಧುನವರ ಪ್ರಥಮ ಬಾರಿಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ| ಇಲ್ಲಿ ಕೈ- ಕಮಲ ನೇರ ಹಣಾಹಣಿ| ಆದರೆ ಗಡಿ ವಿವಾದ ಮುಂದಿಟ್ಟು ಎಂಇಎಸ್‌ನಿಂದ 50 ಸದಸ್ಯರು ಕಣದಲ್ಲಿ|  ಎಂಇಎಸ್‌ನ 50 ಅಭ್ಯರ್ಥಿಗಳು ಇರುವುದು ಬಿಜೆಪಿಗೆ ಮಗ್ಗಲಮುಳ್ಳು

Loksabha Elections 2019 Suresh Angadi VS Virupaksha Sadhunavar  Belgaum Constituency

ಕ್ಷೇತ್ರ ಸಮೀಕ್ಷೆ: ಬೆಳಗಾವಿ ಲೋಕಸಭಾ ಕ್ಷೇತ್ರ

ಶ್ರೀಶೈಲ ಮಠದ, ಕನ್ನಡಪ್ರಭ

ಬೆಳಗಾವಿ[ಏ.14]: ರಾಜಕೀಯವಾಗಿ ಸದಾ ಚಟುವಟಿಕೆಯಿಂದ ಕೂಡಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದೊಳಗಿನ ಆಂತರಿಕ ಭಿನ್ನಮತದ ಪರಿಣಾಮ ಸಹಜವಾಗಿಯೇ ಕುತೂಹಲ ಕೆರಳಿಸಿದೆ.

ಸತತ ಮೂರು ಬಾರಿ ಗೆಲುವಿನ ಮೂಲಕ ಹ್ಯಾಟ್ರಿಕ್‌ ಬಾರಿಸಿರುವ ಬಿಜೆಪಿಯ ಸಂಸದ ಸುರೇಶ್‌ ಅಂಗಡಿ ಅವರಿಗೆ ಬ್ರೇಕ್‌ ಹಾಕಲು ಮುಂದಾಗಿರುವ ಕಾಂಗ್ರೆಸ್‌ ನಡೆಸುತ್ತಿರುವ ತೀವ್ರ ಪ್ರಯತ್ನ ಈ ಬಾರಿ ಯಶಸ್ಸು ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ಸುರೇಶ್‌ ಅಂಗಡಿ ಅವರನ್ನು ಎದುರಿಸಲು ಈ ಬಾರಿ ಕಾಂಗ್ರೆಸ್‌ ಪಕ್ಷವು ಡಾ.ವಿ.ಎಸ್‌.ಸಾಧುನವರ ಎಂಬ ಹೊಸ ಮುಖಕ್ಕೆ ಅವಕಾಶ ಕಲ್ಪಿಸಿದ್ದು, ಇವರು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿದ್ದಾರೆ. ನಾಲ್ಕನೇ ಬಾರಿ ಗೆಲುವಿನ ನಿರೀಕ್ಷೆಯಲ್ಲಿರುವ ಅಂಗಡಿ ಅವರನ್ನು ಸಮರ್ಥವಾಗಿ ಎದುರಿಸಲು ಸಾಧುನವರ ಅವರಿಗೆ ಸಾಧ್ಯವೇ ಎಂಬುದರ ಬಗ್ಗೆ ಖುದ್ದು ಕಾಂಗ್ರೆಸ್‌ ಪಕ್ಷಕ್ಕೂ ಅನುಮಾನವಿದೆ. ಆದರೂ ಹೊಸ ಸಮರ್ಥ ಅಭ್ಯರ್ಥಿಗಳ ಕೊರತೆ ಕಾರಣವೋ ಅಥವಾ ಪ್ರಯೋಗವೋ ಹೊಸಬರನ್ನು ಕಣಕ್ಕಿಳಿಸುವ ಧೈರ್ಯ ಪ್ರದರ್ಶಿಸಿದೆ.

ಬಿಜೆಪಿಯ ಸುರೇಶ್‌ ಅಂಗಡಿ ಮತ್ತು ಕಾಂಗ್ರೆಸ್ಸಿನ ಸಾಧುನವರ ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹೇಳಿಕೊಳ್ಳುವಂಥ ಬಲ ಇಲ್ಲದಿದ್ದರೂ ಅಲ್ಲಲ್ಲಿ ಕೆಲವು ಪ್ರದೇಶಗಳಲ್ಲಿ ಆ ಪಕ್ಷದ ಬಗ್ಗೆ ಒಲವು ಹೊಂದಿದವರು ಇದ್ದಾರೆ. ಇದೀಗ ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌ ಪಕ್ಷಕ್ಕೆ ತುಸು ನೆರವಾಗುವ ನಿರೀಕ್ಷೆ ಇದೆಯಾದರೂ ಅದು ಗೆಲುವು ತಂದುಕೊಡುವಷ್ಟುಅಲ್ಲ. ಕಾಂಗ್ರೆಸ್‌ ಪಕ್ಷದ ನಾಯಕರ ಶ್ರಮವೇ ಗೆಲುವು ತಂದು ಕೊಡಬೇಕು.

ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿರಲಿಲ್ಲ. ಹಾಲಿ ಸಂಸದ ಸುರೇಶ್‌ ಅಂಗಡಿ ಅವರ ವಿರುದ್ಧವೂ ಪಕ್ಷದಲ್ಲಿ ಅಪಸ್ವರ ಕೇಳಿಬಂದಿತ್ತು. ರಾಜ್ಯದ ಹಾಲಿ ಬಿಜೆಪಿ ಸಂಸದರ ಪೈಕಿ ಕೆಲವರಿಗೆ ಮತ್ತೆ ಟಿಕೆಟ್‌ ಸಿಗುವುದಿಲ್ಲ ಎಂಬ ವದಂತಿ ಹಬ್ಬಿದಾಗ ಅದರಲ್ಲಿ ಸುರೇಶ್‌ ಅಂಗಡಿ ಅವರ ಹೆಸರೂ ಇತ್ತು. ಆದರೆ, ಅಂತಿಮವಾಗಿ ಎಲ್ಲ ಹಾಲಿ ಸಂಸದರಿಗೂ ಟಿಕೆಟ್‌ ನೀಡುವ ನಿರ್ಧಾರ ಕೈಗೊಂಡಿದ್ದರಿಂದ ಅಂಗಡಿ ಅವರ ಆತಂಕ ನಿವಾರಣೆಯಾಯಿತು.

ಭಾಷಾ ವಿವಾದದ ಗಡಿನಾಡು:

ಒಂದೆಡೆ ಸಹ್ಯಾದ್ರಿ ಸುತ್ತುವರಿದ ಪ್ರದೇಶ, ಇನ್ನೊಂದೆಡೆ ಬಯಲುಸೀಮೆ. ಹೀಗೆ ಭೌಗೋಳಿಕ ವೈವಿಧ್ಯ ಹೊಂದಿರುವ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಬೆಳಗಾವಿ ಲೋಕಸಭೆ ಕ್ಷೇತ್ರ ರಾಜಕೀಯವಾಗಿ ರಾಜ್ಯದಲ್ಲಿ ಗಮನ ಸೆಳೆಯುವ ಕ್ಷೇತ್ರಗಳಲ್ಲೊಂದು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆಗಾಗ ಗಡಿವಿವಾದ, ಭಾಷಾ ವಿವಾದವನ್ನು ಕೆದಕಿದಾಗ ಬೆಳಗಾವಿ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆಯುತ್ತದೆ. ಆದರೆ ಇದು ವಿವಾದವೇ ಅಲ್ಲವೆಂದು ಪರಿಗಣಿಸಿರುವ ಕ್ಷೇತ್ರದ ಜನತೆ ನಿರಂತರ ಭಾಷಾ ಬಾಂಧವ್ಯ ಮೆರೆಯುತ್ತಿದ್ದಾರೆ. ಇದೀಗ ರಾಜ್ಯದ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಯೊಂದಿಗೆ ಗಡಿನಾಡಿನ ಗರಿಮೆ ಹೆಚ್ಚಿಸಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೈ- ಕಮಲದ ನಡುವೆ ನೇರ ಹಣಾಹಣಿ ನಡೆಯಲಿದೆ.

ಅಂಗಡಿಗೆ ನೆರವಾಗಿತ್ತು ಮೋದಿ ಅಲೆ, ಎಂಇಎಸ್‌ ತಾಟಸ್ಥ್ಯ:

2014ರ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿತ್ತು. ಬಿಜೆಪಿ ವಶದಲ್ಲಿದ್ದ ಈ ಕ್ಷೇತ್ರವನ್ನು ಮತ್ತೆ ತನ್ನ ಸಾಮ್ರಾಜ್ಯ ಮರು ಸ್ಥಾಪನೆಗೆ ಕಾಂಗ್ರೆಸ್‌ ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕಣಕ್ಕಿಳಿಸಿತ್ತು. ಹಾಲಿ ಸಂಸದ ಸುರೇಶ ಅಂಗಡಿ ಬಿಜೆಪಿ ಹುರಿಯಾಳಾಗಿದ್ದರು. ಕಣದಲ್ಲಿ ಒಟ್ಟು 15 ಅಭ್ಯರ್ಥಿಗಳಿದ್ದರೂ ಕಾಂಗ್ರೆಸ್‌- ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

ಈ ಕ್ಷೇತ್ರದಲ್ಲಿ ಲಿಂಗಾÜಯತ ಮತಗಳೇ ನಿರ್ಣಾಯಕ. ಹಾಗಾಗಿ ಬಿಜೆಪಿ, ಕಾಂಗ್ರೆಸ್‌ ಎರಡೂ ರಾಷ್ಟ್ರೀಯ ಪಕ್ಷಗಳು ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಿದ್ದವು. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸದಿರುವುದು ಹಾಗೂ ನರೇಂದ್ರ ಮೋದಿ ಅಲೆ ಬಿಜೆಪಿಯ ಸುರೇಶ ಅಂಗಡಿ ಅವರನ್ನು ಗೆಲವಿನ ದಡಕ್ಕೆ ಸೇರಿಸಿತು. ಒಂದು ವೇಳೆ ಎಂಇಎಸ್‌ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದರೆ , ಬಿಜೆಪಿಗೆ ಅನನೂಕೂಲವಾಗುವ ಸಾಧ್ಯತೆ ಇತ್ತು. ಆದರೆ, ಇದು ಕಾಂಗ್ರೆಸ್‌ಗೆ ಮೈನಸ್‌ ಪಾಯಿಂಟ್‌ ಆಯಿತು.

ಲಿಂಗಾಯತರದ್ದೇ ಪ್ರಾಬಲ್ಯ:

ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಲಿಂಗಾಯತರದ್ದೇ ಪ್ರಾಬಲ್ಯವಿದೆ. ಈ ಕ್ಷೇತ್ರದಲ್ಲಿ 4.50 ಲಕ್ಷ ಲಿಂಗಾಯತರಿದ್ದಾರೆ. 2.50 ಲಕ್ಷ ಕುರುಬರು ನಂತರ ಸ್ಥಾನದಲ್ಲಿದ್ದಾರೆ. 2 ಲಕ್ಷ ಮರಾಠಿಗರು, 1.84 ಲಕ್ಷ ಮುಸ್ಲಿಮರು,1.67 ಪರಿಶಿಷ್ಟಜಾತಿ, 80 ಸಾವಿರ ಪರಿಶಿಷ್ಟಪಂಗಡ, 37 ಸಾವಿರ ಬ್ರಾಹ್ಮಣರು, 50 ಸಾವಿರ ಉಪ್ಪಾರರು ಇದ್ದಾರೆ . ಇತರೆ ಸಮುದಾಯದ 1.65 ಲಕ್ಷ ಮತದಾರರು ಇದ್ದಾರೆ.

ಹೊಸ ಮುಖ ಸಾಧುನವರಗೆ ಇವೆ ಸಮಸ್ಯೆ:

ಕಾಂಗ್ರೆಸ್‌ ಅಭ್ಯರ್ಥಿ ಡಾ.ವಿ.ಎಸ್‌.ಸಾಧುನವರ ಅವರಿಗೆ ಇದು ಮೊದಲ ಲೋಕಸಭಾ ಚುನಾವಣೆ. ಇವರು ಹೊಸ ಮುಖ. ಕ್ಷೇತ್ರಕ್ಕೆ ಅಷ್ಟೊಂದು ಹೇಳಿಕೊಳ್ಳುವಂತಹ ಪರಿಚಯ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಇತರೆ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಆದರೆ, ಕಾಂಗ್ರೆಸ್‌ ನಾಯಕರ ಭಿನ್ನಮತ, ಒಗ್ಗಟ್ಟಿನ ಕೊರತೆ, ಮಾಜಿ ಸಚಿವ, ಗೋಕಾಕದ ಪ್ರಭಾವಿ ಕಾಂಗ್ರೆಸ್‌ ನಾಯಕ ರಮೇಶ ಜಾರಕಿಹೊಳಿ ಅವರು ಚುನಾವಣಾ ಪ್ರಚಾರ ಕಾರ್ಯದಿಂದ ದೂರ ಉಳಿದಿರುವುದು ಕಾಂಗ್ರೆಸ್‌ ಅಭ್ಯರ್ಥಿ ಸಾಧುನವರ ಅವರಿಗೆ ಸಮಸ್ಯೆ ಸೃಷ್ಟಿಸಬಹುದು. ಎಂಇಎಸ್‌ ಬೆಂಬಲಿತ ಅಭ್ಯರ್ಥಿಗಳು ಪಡೆಯುವ ಮತ ಒಡೆದರೆ ಅದು ಕಾಂಗ್ರೆಸ್‌ಗೆ ವರದಾನವಾಗಲಿದೆ. ಬಿಜೆಪಿಗೆ ಮೈನಸ್‌ ಆಗಬಹುದು. ಕಾಂಗ್ರೆಸ್‌ ನಾಯಕರ ಭಿನ್ನಮತ ಬಿಜೆಪಿ ಅನುಕೂಲವಾಗಬಹುದು.

ಕಳೆದ ಹಲವು ದಿನಗಳ ಹಿಂದೆ ಕಾಂಗ್ರೆಸ್‌ನಲ್ಲಿ ಬಂಡಾಯಗ ಬಾವುಟ ಹಾರಿಸಿ ಸಚಿವ ಸ್ಥಾನ ಕಳೆದುಕೊಂಡ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿ ಅವರು ಕಾಂಗ್ರೆಸ್‌ನಿಂದ ದೂರವೇ ಉಳಿದಿದ್ದಾರೆ. ಇದು ಬಿಜೆಪಿಗೆ ನೆರವಾಗುವ ಸಾಧ್ಯತೆಯಿದೆ.

ಬಿಜೆಪಿಗೆ ಮರಾಠಿ ಮತಗಳ ವಿಭಜನೆ ಭೀತಿ:

ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಬೆಂಬಲಿತ 50ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅರಭಾವಿ, ಗೋಕಾಕ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ ಯಲ್ಲಮ್ಮ ಹಾಗೂ ರಾಮದುರ್ಗ ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದ್ದು ಈವರೆಗೆ ಇದು ಬಿಜೆಪಿಯ ಭದ್ರಕೋಟೆ ಎನಿಸಿದೆ. ಎಂಟು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಈಗಲೂ ಬಿಜೆಪಿಯದ್ದೇ ಪ್ರಾಬಲ್ಯವಿದೆ. ಬೆಳಗಾವಿ ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಕ್ಷೇತ್ರಗಳಲ್ಲಿ ಕನ್ನಡ ಹಾಗೂ ಮರಾಠಿ ಪ್ರಾಬಲ್ಯವಿದೆ. ಭಾಷೆ, ಪ್ರಾಂತೀಯ ಭಾವನಾತ್ಮಕತೆಯಿಂದ ಕೂಡ ಇಲ್ಲಿ ಅಭ್ಯರ್ಥಿಗಳನ್ನು ನಿರ್ಧರಿಸುತ್ತವೆ ಎಂಬುದು ವಿಶೇಷ.

ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಹಿಡಿತ ಸಾಧಿಸಿರುವುದು ಅಂಗಡಿಗೆ ಇದು ಅನುಕೂಲ. ಆದರೆ, ಕಣದಲ್ಲಿ 50ಕ್ಕೂ ಅಧಿಕ ಎಂಇಎಸ್‌ ಬೆಂಬಲಿತ ಅಭ್ಯರ್ಥಿಗಳು ಇರುವುದರಿಂದ ಮತಗಳು ಒಡೆದು, ಬಿಜೆಪಿಗೆ ತಲೆನೋವು ತಂದಿದೆ. ಈ ಬಾರಿಯೂ ಮೋದಿ ಅಲೆಯೇ ಅಂಗಡಿ ಅವರ ಕೈ ಹಿಡಿಯುವ ಸಾಧ್ಯತೆ ಇದೆ. ಬೆಳಗಾವಿ ಗಡಿ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಬಾಕಿ ಉಳಿದಿದ್ದು, ಗಡಿಭಾಗದಲ್ಲಿರುವ ಮರಾಠಿ ಬಹುಭಾಷಿತ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಆಗ್ರಹಿಸಿ ಕೇಂದ್ರದ ಗಮನ ಸೆಳೆಯಲು ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿ ಕ್ಷೇತ್ರದಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಆದರೆ, ಅದರಲ್ಲಿ ಅರ್ಧದಷ್ಟುಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದಾರೆ.

2014ರ ಫಲಿತಾಂಶ

- ಸುರೇಶ ಅಂಗಡಿ (ಬಿಜೆಪಿ)... 552417

- ಲಕ್ಷ್ಮಿ ಹೆಬ್ಬಾಳಕರ (ಕಾಂಗ್ರೆಸ್‌).... 478557

- ಗೆಲವಿನ ಅಂತರ...... 73860

57 ಮಂದಿ ಕಣದಲ್ಲಿ: ಸುರೇಶ ಅಂಗಡಿ (ಬಿಜೆಪಿ), ಡಾ.ವಿ.ಎಸ್‌.ಸಾಧುನವರ (ಕಾಂಗ್ರೆಸ್‌) ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 57 ಮಂದಿ ಕಣದಲ್ಲಿದ್ದಾರೆ.

ಮತದಾರರು : 1749005 | ಪುರುಷ ಮತದಾರರು: 879619 | ಮಹಿಳಾ ಮತದಾರರು:869333 | ಇತರೆ ಮತದಾರರು : 53 | ಸೇವಾ ಮತದಾರರು: 6956

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Latest Videos
Follow Us:
Download App:
  • android
  • ios