ಸೋಮರಡ್ಡಿ ಅಳವಂಡಿ, ಕನ್ನಡಪ್ರಭ

ಕೊಪ್ಪಳ[ಏ.21]: ಕೊಪ್ಪಳ ಜಿಲ್ಲೆಯ ಐದು, ರಾಯಚೂರು ಜಿಲ್ಲೆಯ ಎರಡು ಮತ್ತು ಬಳ್ಳಾರಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರವನ್ನೊಳಗೊಂಡ ಕೊಪ್ಪಳ ಲೋಕಸಭಾ ಕ್ಷೇತ್ರ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿದ್ದು, ನೀರಿನ ಅಭಾವದಿಂದ ಭಣಗುಡುತ್ತಿದೆ. ನಾಲ್ಕು ವರ್ಷಗಳಿಂದ ಮಳೆಯೇ ಇಲ್ಲದೆ ರೈತ ಸಮುದಾಯ ಸುಸ್ತಾಗಿದ್ದರೂ ಚುನಾವಣಾ ಉತ್ಸಾಹ ಮಾತ್ರ ತುಸು ಜೋರಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಹಾಗೂ ಹಾಲಿ ಸಂಸದರಾಗಿರುವ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಅವರ ನಡುವೆ ಕ್ಷೇತ್ರದಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ.

ಕೊಪ್ಪಳ ರಾಜಕೀಯ ಇತಿಹಾಸದಲ್ಲಿ ಸಂಗಣ್ಣ ಕರಡಿ ಮತ್ತು ಮಾಜಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಹಿಟ್ನಾಳ ಪರಸ್ಪರ ರಾಜಕೀಯ ಎದುರಾಳಿಗಳು. ಇವರಿಬ್ಬರ ನಡುವೆ ಪರಸ್ಪರ ಐದು ಬಾರಿ (1 ಬಾರಿ ಲೋಕಸಭೆ, 4 ಬಾರಿ ವಿಧಾನಸಭೆ) ಚುನಾವಣಾ ಹಣಾಹಣಿ ನಡೆದಿದೆ. ಒಮ್ಮೆ ಮಾತ್ರ ಬಸವರಾಜ ಹಿಟ್ನಾಳ್‌ ಗೆದ್ದಿದ್ದರೆ, ಉಳಿದ ನಾಲ್ಕು ಬಾರಿ ಗೆಲುವಿನ ನಗೆ ಬೀರಿದ್ದು ಸಂಗಣ್ಣ ಅವರೇ. ಇದೀಗ ಈ ಕುಟುಂಬದ ಕುಡಿಗಳೂ ರಾಜಕೀಯ ಎದುರಾಳಿಗಳಾಗಿ ಪರಸ್ಪರ ಹೋರಾಡುತ್ತಿದ್ದಾರೆ. ಬಸವರಾಜ ಅವರ ಪುತ್ರ ರಾಘವೇಂದ್ರ ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಒಮ್ಮೆ ಸಂಗಣ್ಣ ಅವರನ್ನೇ ಮಣಿಸಿದ್ದರೆ, ಇನ್ನೊಮ್ಮೆ ಅವರ ಪುತ್ರನನ್ನು ಸೋಲಿಸಿದ್ದಾರೆ. ಇದೀಗ ಸಂಗಣ್ಣ ಕರಡಿ ಎದುರಾಳಿಯಾಗಿ ಬಸವರಾಜ ಅವರ ಎರಡನೇ ಪುತ್ರ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್‌ ಕಣದಲ್ಲಿದ್ದಾರೆ. ಮತ್ತೊಮ್ಮೆ ಹಿಟ್ನಾಳ್‌, ಕರಡಿ ಕುಟುಂಬದ ನಡುವೆ ಫೈಟ್‌ ಏರ್ಪಟ್ಟಂತಾಗಿದೆ.

‘ವಿಧಾನಸಭಾ ಚುನಾವಣೆಯಲ್ಲಿ ಪದೇಪದೇ ನನ್ನ ಅಪ್ಪನನ್ನು ಸೋಲಿಸುತ್ತಿದ್ದ ಸಂಗಣ್ಣ ಕರಡಿ ಅವರನ್ನು ನನ್ನ ಸಹೋದರ ಸೋಲಿಸಿದ್ದಾನೆ. ಈಗ ನಾನು ಲೋಕಸಭಾ ಚುನಾವಣೆಯಲ್ಲಿ ಸಂಗಣ್ಣ ಅವರನ್ನು ಸೋಲಿಸುವ ಮೂಲಕ ತಂದೆಯ ಸೇಡು ತೀರಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ರಾಜಶೇಖರ್‌.

ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಮೂರರಲ್ಲಿ ಕಾಂಗ್ರೆಸ್‌ ಶಾಸಕರು ಹಾಗೂ ಒಬ್ಬ ಜೆಡಿಎಸ್‌ ಶಾಸಕರಿದ್ದಾರೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಯಾಗಿರುವುದರಿಂದ ನಾಲ್ಕು ಬಿಜೆಪಿ ಶಾಸಕರು ಮತ್ತು ನಾಲ್ಕು ಮೈತ್ರಿ ಶಾಸಕರು ಇದ್ದಂತಾಗಲಿದೆ. ಈ ಲೆಕ್ಕಾಚಾರದಲ್ಲಿ ನೋಡಿದರೆ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಬಲವೇ ಇದೆ.

ಲಿಂಗಾಯತರೇ ನಿರ್ಣಾಯಕರು

ಕ್ಷೇತ್ರದಲ್ಲಿ ಲಿಂಗಾಯತರು 3.45 ಲಕ್ಷ, ಎಸ್‌ಸಿ 2.92 ಲಕ್ಷ, ಕುರುಬ 2.47 ಲಕ್ಷ, ಎಸ್‌ಟಿ/ವಾಲ್ಮೀಕಿ 2.04 ಲಕ್ಷ, ಮುಸ್ಲಿಂ 2 ಲಕ್ಷ, ಉಪ್ಪಾರ 61 ಸಾವಿರ, ಬ್ರಾಹ್ಮಣ 40 ಸಾವಿರ ಮತದಾರರು ಇದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 16 ಬಾರಿ ಚುನಾವಣೆ ನಡೆದಿದ್ದು, ಎಚ್‌.ಜಿ.ರಾಮುಲು ಅವರಿದ್ದಾಗ ಮಾತ್ರ ಕ್ಷೇತ್ರದಲ್ಲಿ ಹಿಂದುಳಿದ ವರ್ಗದವರು ಮೇಲುಗೈ ಸಾಧಿಸಿದ್ದರು. ಉಳಿದಂತೆ ಹೆಚ್ಚಿನ ಬಾರಿ ಲಿಂಗಾಯತರೇ ಆಯ್ಕೆಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಇಲ್ಲಿ ಲಿಂಗಾಯತ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುವಂತೆ ಸ್ವತಃ ಕಾಂಗ್ರೆಸ್‌ ನಾಯಕರೇ ಹೈಕಮಾಂಡ್‌ಗೆ ಪತ್ರ ಬರೆದು, ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಇದಕ್ಕೆ ಕಾಂಗ್ರೆಸ್‌ ಮಾಡಿಕೊಳ್ಳುವ ಸಮರ್ಥನೆ ಎಂದರೆ- ಜೆಡಿಎಸ್‌ ಬೆಂಬಲ ನೀಡಿರುವುದರಿಂದ ಒಡೆದು ಹೋಗುತ್ತಿದ್ದ ಹಿಂದುಳಿದ ಮತಗಳು ಒಂದಾಗಲಿವೆ. ಇದರಿಂದ ನಮಗೆ ಹೆಚ್ಚು ಅವಕಾಶ ಇದೆ ಎನ್ನುತ್ತಾರೆ. ಆದರೆ, ಮೈತ್ರಿ ಪಕ್ಷವಾಗಿರುವ ಜೆಡಿಎಸ್‌ ಮತದಾರರು ಯಾರ ಪರ ಒಲವು ತೋರುತ್ತಾರೆ ಎನ್ನುವುದರ ಮೇಲೆಯೇ ಕ್ಷೇತ್ರದ ಫಲಿತಾಂಶ ನಿಂತಿದೆ. ಸಂಗಣ್ಣ ಲಿಂಗಾಯರಾಗಿದ್ದರೆ, ಹಿಟ್ನಾಳ್‌ ಕುರುಬ ಸಮುದಾಯಕ್ಕೆ ಸೇರಿದವರು.

ಹ್ಯಾಟ್ರಿಕ್‌ ತವಕದಲ್ಲಿ ಬಿಜೆಪಿ

ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಬಿಜೆಪಿ 2009ರಲ್ಲಿ ಭೇದಿಸಿದೆ. ಅಲ್ಲಿಯವರೆಗೂ ಬಿಜೆಪಿಗೆ ಈ ಕ್ಷೇತ್ರದಲ್ಲಿ ಅಸ್ತಿತ್ವವೇ ಇರಲಿಲ್ಲ. ಜನತಾ ಪರಿವಾರ ಮತ್ತು ಕಾಂಗ್ರೆಸ್‌ ನಡುವೆಯೇ ಫೈಟ್‌ ನಡೆದುಕೊಂಡು ಬಂದಿತ್ತು. 2009ರಲ್ಲಿ ಬಿಜೆಪಿ ಆಕಸ್ಮಿಕವಾಗಿ ಶಿವರಾಮಗೌಡ ಅವರನ್ನು ಅಖಾಡಕ್ಕೆ ಇಳಿಸಿದರೂ ಅನಿರೀಕ್ಷಿತ ಎಂಬಂತೆ ಕಮಲ ಅರಳಿತು. ಇದಾದ ಮೇಲೆ 2014ರಲ್ಲಿ ಶಿವರಾಮಗೌಡ ಅವರಿಗೆ ಟಿಕೆಟ್‌ ತಪ್ಪಿಸಿ ಸಂಗಣ್ಣ ಕರಡಿ ಅವರನ್ನು ಅಖಾಡಕ್ಕೆ ಇಳಿಸಿಯೂ ಜಯ ಸಾಧಿಸಿತು. ಬಿಜೆಪಿ ಮಾಡಿದ ಎರಡೂ ಪ್ರಯೋಗಗಳು ಯಶಸ್ವಿಯಾದವು. ಆದರೆ, ಈ ಬಾರಿ ಮಾತ್ರ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್‌ ನೀಡುವ ಕುರಿತು ಹೊಯ್ದಾಟ ನಡೆದು, ಕೊನೆಗೂ ಅವರನ್ನೇ ಬಿಜೆಪಿ ಕಣಕ್ಕೆ ಇಳಿಸಿದೆ. ಗೆದ್ದರೆ ಬಿಜೆಪಿ ಪಾಲಿಗೆ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸಾಧನೆ.

ವಿಧಾನಸಭಾ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್‌ ಕೊಡಿಸುವ ವಿಚಾರದಲ್ಲಿ ವಿವಾದ ಮಾಡಿಕೊಂಡು ಪಕ್ಷದಲ್ಲಿ ಇರಸುಮುರಸಿಗೆ ಕಾರಣವಾಗಿರುವ ಸಂಸದ ಸಂಗಣ್ಣ ಕರಡಿ ಅವರಿಗೆ ಒಂದಷ್ಟುದಿನ ಕಾದು, ಅಳೆದು ತೂಗಿ ಕೊನೆಗೆ ಪಕ್ಷದ ಟಿಕೆಟ್‌ ನೀಡಲಾಯಿತು. ಟಿಕೆಟ್‌ ನೀಡುವಾಗಲೂ ಹಲವು ಷರತ್ತು ವಿಧಿಸಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಅವರಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿಯೇ ಪರಿಣಮಿಸಿದೆ.

ಮೋದಿ ಅಲೆಯೇ ಬಲ

ಕಳೆದ ಲೋಕಸಭಾ ಚುನಾವಣೆಯಲ್ಲೂ ಕೊನೇ ಗಳಿಗೆಯಲ್ಲಿ ಸಂಗಣ್ಣ ಕರಡಿ ಅವರಿಗೆ ಟಿಕೆಟ್‌ ಸಿಕ್ಕರೂ ಮೋದಿ ಅಲೆ ಅವರ ಕೈಹಿಡಿದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಸಂಗಣ್ಣ ಕರಡಿ ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿದು ಗೆದ್ದುಬಂದಿದ್ದರು. ಈಗಲೂ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಜತೆಗೆ ಕ್ಷೇತ್ರದಾದ್ಯಂತ ಇರುವ ಪ್ರಧಾನಿ ಮೋದಿ ಅವರ ಅಲೆಯನ್ನೇ ಹೆಚ್ಚಾಗಿ ನಂಬಿಕೊಂಡಿದ್ದಾರೆ. ಅದರಲ್ಲೂ ಸರ್ಜಿಕಲ್‌ ಸ್ಟೆ್ರೖಕ್‌ನಿಂದ ಯುವಕರ ಒಲವು ಹೆಚ್ಚಳವಾಗಿದೆ ಎನ್ನುವುದು ಅವರ ವಿಶ್ಲೇಷಣೆ.

ಶಾಸಕ ಮತ್ತು ಸಂಸದೀಯ ಕಾರ್ಯದರ್ಶಿ ರಾಘವೇಂದ್ರ ಹಿಟ್ನಾಳ ಅವರ ಸಹೋದರ ಹಾಗೂ ಜಿಲ್ಲಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳರ ಪುತ್ರ ರಾಜಶೇಖರ ಹಿಟ್ನಾಳ ಅವರು ಕುಟುಂಬ ರಾಜಕಾರಣದ ಆರೋಪ ಎದುರಿಸುತ್ತಿದ್ದಾರೆ. ಎಲ್ಲ ಅಧಿಕಾರವೂ ಅವರ ಕುಟುಂಬಕ್ಕೆ ನೀಡಬೇಕೇ ಎನ್ನುವುದು ಅದೇ ಸಮುದಾಯದವರ ಪ್ರಶ್ನೆ. ಇದು ಚುನಾವಣೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದೇ ಸದ್ಯದ ಕುತೂಹಲ. ಇದರ ಜತೆಗೆ ಕಾಂಗ್ರೆಸ್‌ನಲ್ಲೇ ಇರುವ ಕೆಲ ಹಿರಿಯರು ಈ ವಿಚಾರವಾಗಿ ಮುನಿಸಿಕೊಂಡಿದ್ದು, ಅವರ ಮುನಿಸು ತಗ್ಗಿಸುವ ಪ್ರಯತ್ನವನ್ನು ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾಡಿದ್ದಾರೆ.

ಸಿದ್ದರಾಮಯ್ಯಗೆ ಪ್ರತಿಷ್ಠೆ ಪ್ರಶ್ನೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಟ್ನಾಳ ಕುಟುಂಬದ ಪರವಾದ ಒಲವು ಹೊಂದಿದ್ದಾರೆ. ಈ ಕುಟುಂಬದ ಪರ ಅವರೇ ಕೆಪಿಸಿಸಿ ಮತ್ತು ಎಐಸಿಸಿಯಲ್ಲಿ ಬ್ಯಾಟಿಂಗ್‌ ಮಾಡಿ ಟಿಕೆಟ್‌ ಕೊಡಿಸಿದ್ದಾರೆ. ಹೀಗಾಗಿ, ಇದು ಅವರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ರಾಜಶೇಖರ ಹಿಟ್ನಾಳ ಅವರನ್ನು ಗೆಲ್ಲಿಸಲೇಬೇಕು ಎಂದು ಸ್ಥಳೀಯ ನಾಯಕರಿಗೆ ಖಡಕ್‌ ಆಗಿಯೇ ತಾಕೀತು ಮಾಡಿದ್ದಾರೆ. ಒಂದೆರಡು ಸುತ್ತಿನ ಮಾತುಕತೆಯನ್ನಾಡಿರುವ ಅವರು ಸ್ಥಳೀಯ ನಾಯಕರಿಗೆ ಖಡಕ್‌ ಎಚ್ಚರಿಕೆಯನ್ನೂ ರವಾನೆ ಮಾಡಿದ್ದಾರೆ. ಸಿದ್ದರಾಮಯ್ಯ ಪ್ರಯತ್ನ ಕೈಗೂಡಿದ್ದೇ ಆದಲ್ಲಿ ಬಿಜೆಪಿಗೆ ಕ್ಷೇತ್ರ ಕಬ್ಬಿಣದ ಕಡಲೆಯಾಗುವುದು ನಿಶ್ಚಿತ.

2014 ಚುನಾವಣೆಯ ಫಲಿತಾಂಶ

ಸಂಗಣ್ಣ ಕರಡಿ(ಬಿಜೆಪಿ)-486383

ಬಸವರಾಜ ಹಿಟ್ನಾಳ(ಕಾಂಗ್ರೆಸ್‌)-453969

ಅಂತರ- 32414

14 ಅಭ್ಯರ್ಥಿಗಳು ಕಣದಲ್ಲಿ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ನಿಂದ ರಾಜಶೇಖರ ಹಿಟ್ನಾಳ, ಬಿಜೆಪಿಯಿಂದ ಸಂಗಣ್ಣ ಕರಡಿ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಶರಣಯ್ಯ, ಮಾಕ್ರ್ಸಿಸ್ಟ್‌ ಲೆನಿನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ರೆಡ್‌ಫ್ಲ್ಯಾಗ್‌)ದಿಂದ ಬಸಲಿಂಗಪ್ಪ, ಸರ್ವ ಜನತಾ ಪಾರ್ಟಿಯಿಂದ ಬಿ.ಅನ್ನೋಜಿರಾವ್‌, ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾಕ್ರ್ಸಿಸ್ಟ್‌-ಲೆನಿನಿಸ್ಟ್‌ ರೆಡ್‌ಸ್ಟಾರ್‌) ಹೇಮರಾಜ ವೀರಾಪುರ, ಬಹುಜನ ಸಮಾಜ ಪಾರ್ಟಿಯಿಂದ ಶಿವಪುತ್ರಪ್ಪ ಮೆಣೆದಾಳ, ಪಕ್ಷೇತರರಾಗಿ ಸುರೇಶ್‌, ನಾಗರಾಜ ಕಲಾಲ, ಬಾಲರಾಜ, ಸತೀಶ ರೆಡ್ಡಿ, ಮಲ್ಲಿಕಾರ್ಜುನ ಹಡಪದ, ಪ.ಯ. ಗಣೇಶ, ಸುರೇಶ ಎಚ್‌. ಕಣದಲ್ಲಿದ್ದಾರೆ.

ಒಟ್ಟು ಮತದಾರರು 1716760 |ಮಹಿಳೆಯರು 862903 | ಪುರುಷರು 853745 | ಇತರ 112