ನಾಗ​ರಾಜ ಎಸ್‌.​ಬ​ಡ​ದಾ​ಳ್‌, ಕನ್ನಡಪ್ರಭ

ಕ್ಷೇತ್ರ ಸಮೀಕ್ಷೆ: ದಾವಣಗೆರೆ ಲೋಕಸಭಾ ಕ್ಷೇತ್ರ

ದಾವ​ಣ​ಗೆರೆ[ಏ.15]: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ ಮತ್ತು ಶಾಮನೂರು ಕುಟುಂಬದ ನಡುವ ಮತ್ತೊಮ್ಮೆ ಜಿದ್ದಾಜಿದ್ದಿ ನಡೆಯಲಿದೆ ಎಂಬ ನಿರೀಕ್ಷೆ ಇದೀಗ ಹುಸಿಯಾಗಿರುವುದು ಈ ಬಾರಿಯ ಚುನಾವಣೆಯ ವಿಶೇಷಗಳಲ್ಲಿ ಒಂದು.

ಶಾಮನೂರು ಕುಟುಂಬದ ಸದಸ್ಯರು ಕಣದಲ್ಲಿ ಇದ್ದಿದ್ದರೆ ಅದರ ಚಿತ್ರಣವೇ ಬದಲಾಗುತ್ತಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಶಾಮನೂರು ಕುಟುಂಬದಿಂದ ಯಾರಿಗೂ ಟಿಕೆಟ್‌ ಬೇಡ ಎಂದು ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ ಬಳಿಕ ಜಿಲ್ಲಾಧ್ಯಕ್ಷರಾಗಿದ್ದ ಎಚ್‌.ಬಿ.ಮಂಜಪ್ಪ ಅವರನ್ನು ಕಣಕ್ಕಿಳಿಸಲಾಯಿತು. ಪರಿಣಾಮ, ಬಿಜೆಪಿಯ ಸಿದ್ದೇಶ್ವರ್‌ ಅವರ ನಾಲ್ಕನೇ ಬಾರಿ ಗೆಲುವಿಗೆ ಈ ಬಾರಿಯಾದರೂ ಕಾಂಗ್ರೆಸ್‌ ಅಡ್ಡಿ ಮಾಡಬಲ್ಲದೆ ಎಂಬುದರ ಬಗ್ಗೆ ಆ ಪಕ್ಷದಲ್ಲೇ ಜಿಜ್ಞಾಸೆ ಆರಂಭವಾಗಿದೆ.

ಹಾಗಂತ ಬಿಜೆಪಿಗೆ ಈ ಬಾರಿಯ ಗೆಲುವು ನಿರಾಯಾಸ ಎಂದೂ ಹೇಳುವಂತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಬಲವಾಗಿ ಬೀಸುತ್ತಿರುವುದೇನೊ ನಿಜ. ಕಾಂಗ್ರೆಸ್ಸಿನ ಅಭ್ಯರ್ಥಿ ಕುರುಬ ಸಮುದಾಯಕ್ಕೆ ಸೇರಿದ ಮಂಜಪ್ಪ ಅವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಬಿಜೆಪಿಯ ಸಿದ್ದೇಶ್ವರ್‌ ಅವರನ್ನು ಎದುರಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಮತಗಳೆಲ್ಲವೂ ಕ್ರೋಡೀಕರಣಗೊಂಡಲ್ಲಿ ಮಾತ್ರ ಸಿದ್ದೇಶ್ವರ್‌ ಅವರನ್ನು ಮಣಿಸಲು ಸಾಧ್ಯ. ಇಲ್ಲವಾದರೆ ಸಿದ್ದೇಶ್ವರ್‌ ನಾಲ್ಕನೇ ಬಾರಿ ಜಯಭೇರಿ ಬಾರಿಸುವುದು ಕಷ್ಟವಾಗಲಿಕ್ಕಿಲ್ಲ.

ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ದಾವಣಗೆರೆಯಲ್ಲಿ ತೊಂಬ​ತ್ತರ ದಶ​ಕದ ಆರಂಭ​ದಿಂದಲೇ ಟಿಸಿಲೊಡೆದ ಬಿಜೆಪಿಯು ಇಂದು ಆಳ​ವಾಗಿ ಬೇರೂ​ರಿದೆ. ಮತ್ತೊಂದು ಕಡೆ ತನ್ನ ಸಾಂಪ್ರದಾ​ಯಿಕ ಎದು​ರಾಳಿ ಕಾಂಗ್ರೆಸ್‌ ಪಾಳ​ಯಕ್ಕೆ ಮಧ್ಯ ಕರ್ನಾ​ಟ​ಕದ ಈ ಜಿಲ್ಲೆ​ಯನ್ನು ಕಬ್ಬಿ​ಣದ ಕಡ​ಲೆ​ಯ​ನ್ನಾ​ಗಿ​ಸಿದೆ. ಕಳೆದ 11 ಚುನಾ​ವ​ಣೆ​ಗಳಲ್ಲಿ 6 ಸಲ ಕಾಂಗ್ರೆಸ್‌ ಜಯ ದಾಖ​ಲಿ​ಸಿ​ದ್ದರೆ, 5 ಸಲ ಬಿಜೆಪಿ ಗೆದ್ದು ಸಮ​ಬ​ಲದ ಹೋರಾಟ ಕಂಡ ನೆಲ​ವಿದು. ಈಚೆಗೆ ನಡೆದ 6 ಚುನಾ​ವ​ಣೆ​ಗ​ಳಲ್ಲಿ 5ರಲ್ಲಿ ಬಿಜೆಪಿಯೇ ಮೇಲುಗೈ ಸಾಧಿ​ಸಿದೆ. ಅಹಿಂದ-ಲಿಂಗಾ​ಯತರ ಮಧ್ಯೆ ನಡೆ​ಯು​ತ್ತಿದ್ದ ಚುನಾ​ವಣೆ ಕಳೆದ 6 ಚುನಾ​ವ​ಣೆ​ಗ​ಳಲ್ಲಿ ಪ್ರಬಲ ಲಿಂಗಾ​ಯತ ಜನಾಂಗದ ನಾಯ​ಕ​ರು, ಬೀಗ​ರಾದ ಶಾಮ​ನೂರು ಶಿವ​ಶಂಕ​ರ​ಪ್ಪ-ಜಿ.ಮ​ಲ್ಲಿ​ಕಾ​ರ್ಜು​ನಪ್ಪ ಮಧ್ಯೆ ಹಾಗೂ ಮಕ್ಕಳ ಮಧ್ಯೆ ನಡೆ​ದಿದ್ದು ಗಮ​ನಾರ್ಹ. ಇಂದು ಬಿಜೆಪಿ ಇಲ್ಲಿ ಆಳ​ವಾಗಿ ಬೇರೂ​ರಿದ್ದು, ಕಾಂಗ್ರೆಸ್‌ ಪಕ್ಷವು ಕ್ಷೇತ್ರ ಕೈವಶಕ್ಕೆ ಇನ್ನಿ​ಲ್ಲದ ಸಾಹ​ಸಕ್ಕೆ ಮುಂದಾ​ಗಿದೆ.

8 ಕ್ಷೇತ್ರ​ದಲ್ಲಿ 6ರಲ್ಲಿ ಬಿಜೆಪಿ ಪಾರ​ಮ್ಯ

ದಾವ​ಣ​ಗೆರೆ ಲೋಕ​ಸಭಾ ಕ್ಷೇತ್ರದ ವ್ಯಾಪ್ತಿಗೆ ಬಳ್ಳಾರಿ ಜಿಲ್ಲೆಯ ಹರ​ಪ​ನ​ಹಳ್ಳಿ ತಾಲೂ​ಕೂ ಸೇರಿ​ದಂತೆ 8 ವಿಧಾ​ನ​ಸಭಾ ಕ್ಷೇತ್ರ​ಗಳು ಒಳ​ಪ​ಡು​ತ್ತವೆ. ಈ ಕ್ಷೇತ್ರ​ಗಳ ಪೈಕಿ ದಾವಣ​ಗೆರೆ ದಕ್ಷಿ​ಣ​, ಹರಿ​ಹರ ಕ್ಷೇತ್ರದ ಮಾತ್ರ ಕಾಂಗ್ರೆಸ್‌ ಶಾಸ​ಕ​ರಿ​ದ್ದಾರೆ. ದಾವ​ಣ​ಗೆರೆ ಉತ್ತರ, ಮಾಯ​ಕೊಂಡ, ಜಗ​ಳೂರು, ಹರ​ಪ​ನ​ಹಳ್ಳಿ, ಹೊನ್ನಾಳಿ, ಚನ್ನ​ಗಿರಿ ಕ್ಷೇತ್ರ​ದಲ್ಲಿ ಬಿಜೆಪಿ ಶಾಸ​ಕ​ರಿ​ದ್ದಾರೆ.

ಹಿಂದೆ ಸಿದ್ದ​ರಾ​ಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾ​ರದ ವೇಳೆ ಕಾಂಗ್ರೆ​ಸ್ಸಿನ 7 ಶಾಸ​ಕ​ರು, ಒಬ್ಬ ಜೆಡಿ​ಎಸ್‌ ಶಾಸ​ಕ​ರಿ​ದ್ದಾ​ಗಲೂ ಬಿಜೆ​ಪಿ​ಯಿಂದ ಜಿ.ಎಂ.​ಸಿ​ದ್ದೇ​ಶ್ವರ ಪುನ​ರಾ​ಯ್ಕೆ​ಯಾಗಿ ಹ್ಯಾಟ್ರಿಕ್‌ ಸಾಧನೆ ಮಾಡಿ​ದ್ದರು. ಬಿಜೆ​ಪಿಯ ಒಬ್ಬ ಶಾಸ​ಕ​ರಿ​ಲ್ಲ​ದಿ​ದ್ದಾ​ಗಲೂ ಮೋದಿ ಅಲೆ​ಯಲ್ಲಿ ಗೆದ್ದ​ರೆಂಬ ಹೆಗ್ಗಳಿಕೆ ಸಿದ್ದೇ​ಶ್ವರ ಅವರಿಗಿದೆ.

ಕಾಂಗ್ರೆ​ಸ್ಸಿ​ನಿಂದ ಅಹಿಂದ ಅಸ್ತ್ರ

ನಾನೂ ಒಲ್ಲೆ, ನೀನೂ ಒಲ್ಲೆ ಎಂಬಂತೆ ಕಾಂಗ್ರೆಸ್‌ ಪಕ್ಷದ ಸ್ಥಳೀಯ ನಾಯಕರು ಲೋಕ​ಸಭೆ ಚುನಾ​ವ​ಣೆಗೆ ಸ್ಪರ್ಧಿ​ಸಲು ಹಿಂದೆ ಸರಿ​ದ​ರು. ಕಾಂಗ್ರೆಸ್‌ ಮುಖಂಡರು, ಕಾರ್ಯಕ​ರ್ತರು ಈ ಬಾರಿ ಮೈತ್ರಿ ಪಕ್ಷ ಜೆಡಿ​ಎಸ್‌, ಮಿತ್ರ ಪಕ್ಷ​ಗ​ಳಾದ ಕಮ್ಯು​ನಿಸ್ಟ್‌ ಪಕ್ಷ ಸೇರಿ​ದಂತೆ ವಿವಿಧ ಸಂಘ​ಟ​ನೆ​ಗಳ ಬಲವೂ ಇದ್ದು, ಎಸ್‌.​ಎ​ಸ್‌.​ಮ​ಲ್ಲಿ​ಕಾ​ರ್ಜು​ನ ಗೆಲು​ವಿಗೆ ಪೂರಕ ವಾತಾ​ವ​ರ​ಣ​ವಿತ್ತು. ಆದರೆ, ಎಸ್‌.ಎಸ್‌.ಮಲ್ಲಿ​ಕಾ​ರ್ಜುನ ಕಡೇ ಕ್ಷಣ​ದಲ್ಲಿ ಸ್ಪರ್ಧೆಗೆ ಹಿಂದೇಟು ಹಾಕಿ​ದರು. ಹೈಕ​ಮಾಂಡ್‌ ಶಾಮ​ನೂರು ಶಿವಶಂಕ​ರ​ಪ್ಪಗೆ ಬಿ ಫಾರಂ ನೀಡಿ​ದರೂ ವಯಸ್ಸು, ಆರೋ​ಗ್ಯದ ಕಾರ​ಣಕ್ಕೆ ಅವರ ಸ್ಪರ್ಧೆಗೆ ಮಕ್ಕಳು ಒಪ್ಪ​ಲಿಲ್ಲ. ಅನಿ​ವಾ​ರ್ಯ​ವಾಗಿ ಹೊಸ ಪೈಲ್ವಾ​ನನ್ನು ಅಖಾ​ಡಕ್ಕೆ ಇಳಿ​ಸ​ಬೇ​ಕಾದ ಅನಿ​ವಾ​ರ್ಯತೆ ಕಾಂಗ್ರೆಸ್‌ ಹೈಕ​ಮಾಂಡ್‌ ಮುಂದಿತ್ತು.

ಆಗ ಮಾಜಿ ಮುಖ್ಯಮಂತ್ರಿ ದಿ.ಜೆ.ಎ​ಚ್‌.​ಪ​ಟೇ​ಲರ ಸಹೋ​ದರನ ಪುತ್ರ, ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ವಿ.ಪ​ಟೇ​ಲ್‌ಗೆ ಟಿಕೆಟ್‌ ನೀಡಲು ಮಾಜಿ ಮುಖ್ಯಮಂತ್ರಿ ಸಿದ್ದ​ರಾ​ಮಯ್ಯ, ಕೆಪಿ​ಸಿಸಿ ಅಧ್ಯಕ್ಷ ದಿನೇಶ ಗುಂಡೂ​ರಾವ್‌ ಬಳಿ ವಿಪ ಸದ​ಸ್ಯರು, ಮಾಜಿ ಶಾಸ​ಕರು ಒತ್ತಡ ಹೇರಿ​ದ್ದರು. ಯಾವಾಗ ತೇಜಸ್ವಿ ಪಟೇಲ್‌ ಹೆಸರು ಕೇಳಿ ಬರತೊಡ​ಗಿತೋ ಆಗ ಎಸ್ಸೆಸ್‌ ಮಲ್ಲಿ​ಕಾ​ರ್ಜುನ ಅವರು ಕುರುಬ ಸಮುದಾಯದ ​ಮಂಜ​ಪ್ಪ ಅವರನ್ನು ಕಣ​ಕ್ಕಿ​ಳಿ​ಸು​ವಂತೆ ಮಾಡು​ವಲ್ಲಿ ಯಶ​ಸ್ವಿ​ಯಾ​ದರು.

ಬಿಜೆಪಿ ಲಿಂಹಿಂದ ಬಲ!

ಸಾಮಾ​ನ್ಯ​ವಾಗಿ ಕಳೆದ 6 ಚುನಾ​ವ​ಣೆ​ಗ​ಳು ಲಿಂಗಾ​ಯ​ತರ ಮಧ್ಯೆಯೇ ನಡೆ​ದಿವೆ. ಅಲ್ಪ​ಸಂಖ್ಯಾ​ತರು, ಹಿಂದು​ಳಿ​ದ​ವರು, ದಲಿ​ತರ ಮತ​ಗಳ ಪೈಕಿ ಬಹು​ತೇಕ ಕಾಂಗ್ರೆಸ್‌ ಪಾಲಾ​ದರೆ, ಬಹು​ಸಂಖ್ಯಾತ ವೀರ​ಶೈವ ಲಿಂಗಾ​ಯ​ತರು, ಹಿಂದು​ಳಿ​ದ​ವರು, ದಲಿ​ತರ ಮತ​ಗಳ ಆಧಾರ​ದಲ್ಲಿ ಬಿಜೆಪಿ ಮೇಲುಗೈ ಸಾಧಿ​ಸುತ್ತಾ ಬಂದಿದೆ.

ಕ್ಷೇತ್ರ​ದ​ಲ್ಲಿ ಲೋಕ​ಸಭೆ ಚುನಾ​ವಣೆ ವೇಳೆ ಮಠಮಾನ್ಯ​ಗಳು, ಮಠಾ​ಧೀ​ಶರೂ ಮುಖ್ಯ ಪಾತ್ರ ವಹಿ​ಸುತ್ತಾ ಬಂದಿ​ದ್ದಾ​ರೆಂಬು​ದ​ರಲ್ಲೂ ಎರಡು ಮಾತಿಲ್ಲ. ವೀರ​ಶೈವ ಲಿಂಗಾ​ಯ​ತ ಮಠ​ಗಳು, ಹಿಂದು​ಳಿದ ವರ್ಗ​ಗಳು, ದಲಿತ ಸಮು​ದಾ​ಯದ ವಿವಿಧ ಮಠ​ಗಳ ಪಾತ್ರವೂ ಇಲ್ಲಿ ಮಹ​ತ್ವ​ದ್ದಾ​ಗಿ​ರು​ತ್ತದೆ. ಪ್ರತಿ ಚುನಾ​ವ​ಣೆ​ಯಲ್ಲೂ ಮಠ​ಗ​ಳಿಗೆ ಅಭ್ಯರ್ಥಿಗಳು, ಮುಖಂಡರು ಎಡ​ತಾ​ಕು​ತ್ತಾರೆ. ಇದೇನೂ ಹೊಸ ಪರಂಪ​ರೆಯೂ ಅಲ್ಲ. 1996ರ ನಂತರ ಮಠ​ಗಳೂ ಪರೋ​ಕ್ಷ​ವಾಗಿ ರಾಜ​ಕಾ​ರ​ಣಕ್ಕೆ ತಮ್ಮ ಹಸ್ತ​ಗ​ಳನ್ನು ಚಾಚಿ​ದವು. ಅಂದಿ​ನಿಂದ ಇಂದಿ​ನ​ವ​ರೆಗೂ ಇದು ಪ್ರತ್ಯ​ಕ್ಷ​ವಾ​ಗಿಯೋ, ಪರೋ​ಕ್ಷ​ವಾ​ಗಿಯೋ ಮುಂದು​ವ​ರಿ​ಕು​ಕೊಂಡೇ ಬರು​ತ್ತಿದೆ. ಕಳೆದ 24 ವರ್ಷ​ದಿಂದ ಲಿಂಗಾ​ಯ​ತರ ಮಧ್ಯೆ ಇದ್ದ ರಾಜ​ಕೀಯ ಜಿದ್ದಾ​ಜಿದ್ದಿ, ಪೈಪೋಟಿ ಈ ಬಾರಿ ಲಿಂಗಾ​ಯತ ಮತ್ತು ಕುರುಬ ಸಮು​ದಾ​ಯದ ಅಭ್ಯರ್ಥಿ ಮಧ್ಯೆ ಏರ್ಪ​ಡ​ಲಿದೆ.

ಸದ್ಯದ ಪರಿ​ಸ್ಥಿ​ತಿ​ಯಲ್ಲಿ ಕಾಂಗ್ರೆ​ಸ್ಸಿಗೆ ಮೈತ್ರಿ ಪಕ್ಷ​ವಾಗಿ ಜೆಡಿ​ಎಸ್‌ ಬೆನ್ನೆ​ಲು​ಬಾಗಿ ನಿಂತಿದೆ. ಕಳೆದ ಚುನಾ​ವ​ಣೆ​ಗಳಲ್ಲಿ ಕಾಂಗ್ರೆ​ಸ್ಸಿನ ಕೆಲವೇ ಸಾವಿರ ಮತ​ಗಳ ಸೋಲಿಗೆ ಪರೋಕ್ಷ​ವಾಗಿ ಕಾರ​ಣ​ವಾ​ಗಿದ್ದ ಜೆಡಿ​ಎಸ್‌ ಪಕ್ಷ ಈಗ ಕಾಂಗ್ರೆಸ್‌ ಪರ ಪ್ರಚಾ​ರ​ಕ್ಕಿ​ಳಿ​ದಿದ್ದು, ಕಮ್ಯು​ನಿಸ್ಟ್‌ ಪಕ್ಷವೂ ಕೋಮು​ವಾದಿ ಪಕ್ಷ​ವನ್ನು ದೂರ​ವಿ​ಡ​ಬೇ​ಕೆಂಬ ಕಾರ​ಣಕ್ಕೆ ಎಚ್‌.​ಬಿ.​ಮಂಜಪ್ಪ ಪರ ಪ್ರಚಾ​ರಕ್ಕೆ ಮುಂದಾ​ಗಿದ್ದು, ಕೈ ದಂಡಿನ ಬಲ ಹೆಚ್ಚಿ​ಸಿದೆ. ಅದೇ ರೀತಿ ಬಿಜೆ​ಪಿಗೆ ಮಿತ್ರ ಪಕ್ಷ ಜೆಡಿಯು ಸಾಥ್‌ ನೀಡ​ಲಿದೆ.

ಲಿಂಗಾ​ಯ​ತ ಮತ​ಗಳೇ ನಿರ್ಣಾ​ಯ​ಕ

ಕ್ಷೇತ್ರದಲ್ಲಿ 4.30 ಲಕ್ಷ ವೀರ​ಶೈವ ಲಿಂಗಾ​ಯ​ತ, 1.45 ಲಕ್ಷ ಕುರು​ಬ; ಮಾದಿ​ಗ, ಲಂಬಾಣಿ, ಭೋವಿ, ಚಲ​ವಾದಿ ಸೇರಿ​ದಂತೆ 3.50 ಲಕ್ಷದಷ್ಟುಪರಿ​ಶಿಷ್ಟಜಾತಿ, 1.92 ಲಕ್ಷ ಪರಿ​ಶಿಷ್ಟಪಂಗ​ಡ, 1.93 ಲಕ್ಷ ಮುಸ್ಲಿಂ, 40 ಸಾವಿರ ಉಪ್ಪಾ​ರರು, 36 ಸಾವಿರ ಮರಾ​ಠ, 25 ಸಾವಿರ ಯಾದ​ವ, 22 ಸಾವಿರ ವಿಶ್ವ​ಕರ್ಮ, 16 ಸಾವಿರ ನೇಕಾ​ರ, 17 ಸಾವಿ​ರ ರೆಡ್ಡಿ, 20 ಸಾವಿ​ರ ಮಡಿ​ವಾಳ, 9 ಸಾವಿರ ಆರ್ಯ​ವೈಶ್ಯ, 11,500 ಬ್ರಾಹ್ಮಣ, 7 ಸಾವಿರ ಸವಿತಾ ಸಮಾಜ, ಇತರೆ 40 ಸಾವಿ​ರಕ್ಕೂ ಅಧಿಕ ಮತದಾರಿ​ದ್ದಾ​ರೆ.

‘ಅರಿವೇ ಹಾವೇ’ ಕಳೆದ ಸಲ ‘ಕೈ ಕಚ್ಚಿ​ತ್ತು’!

ಕಳೆದ ಚುನಾ​ವ​ಣೆ​ಯಲ್ಲಿ ಬಿಜೆ​ಪಿಯ ಸಿದ್ದೇ​ಶ್ವರ 518894 ಮತ​ಗ​ಳನ್ನು, ಕಾಂಗ್ರೆ​ಸ್ಸಿನ ಎಸ್ಸೆಸ್‌ ಮಲ್ಲಿ​ಕಾ​ರ್ಜುನ 501287 ಮತಗಳನ್ನು, ಜೆಡಿ​ಎ​ಸ್‌ನ ಮಹಿಮಾ ಜೆ. ಪಟೇಲ್‌ 46911 ಮತ ಪಡೆ​ದಿ​ದ್ದಾರೆ. ಒಟ್ಟು ಚಲಾ​ವ​ಣೆ​ಯಾದ ಮತ​ಗ​ಳಲ್ಲಿ ಸಿದ್ದೇ​ಶ್ವರ ಶೇ.46.5 ಮತ​ಗ​ಳನ್ನು, ಮಲ್ಲಿ​ಕಾ​ರ್ಜುನ ಶೇ.45.01 ಮತ​ವನ್ನು ಹಾಗೂ ಮಹಿಮಾ ಪಟೇಲ್‌ ಶೇ.1.6 ಮತ ಗಳಿ​ಸಿ​ದ್ದರು. ಅರಿವೆ ಹಾವು ಎಂಬು​ದಾಗಿ ಕಾಂಗ್ರೆ​ಸ್ಸಿ​ಗ​ರಿಂದ ಲೇವ​ಡಿ​ಗೊ​ಳ​ಗಾ​ಗಿದ್ದ ಜೆಡಿ​ಎ​ಸ್‌ನ ಮಹಿಮಾ ಪಟೇ​ಲ್‌ ಫಲಿ​ತಾಂಶದ ಮೇಲೆ ಪರಿ​ಣಾಮ ಬೀರಿ​ದ್ದನ್ನು ಇನ್ನೂ ಯಾರೂ ಮರೆ​ತಿಲ್ಲ. ಕಳೆದ ಬಾರಿ ಅರಿವೇ ಹಾವನ್ನೇ ರೊಚ್ಚಿ​ಗೆ​ಬ್ಬಿ​ಸಿ, ಕಚ್ಚಿ​ಸಿ​ಕೊಂಡಿದ್ದ ಕೈಗ​ಳಿಗೆ ಇನ್ನೂ ಗಾಯದ ಕಲೆ, ಕಚ್ಚಿದ್ದ ನೋವು ಇನ್ನೂ ಮರೆ​ತಿ​ಲ್ಲ​ವೆಂಬ ಮಾತು ಸಹ ಇಲ್ಲಿ ಜನರ ಸ್ಮೃತಿ ಪಟ​ಲ​ದ​ಲ್ಲಿ​ದೆ.

ಕಳೆದ ಬಾರಿಯ ಫಲಿ​ತಾಂಶ

ಜಿ.ಎಂ.​ಸಿ​ದ್ದೇ​ಶ್ವ​ರ​(​ಬಿ​ಜೆ​ಪಿ)-518894

ಎಸ್‌.​ಎ​ಸ್‌.​ಮ​ಲ್ಲಿ​ಕಾ​ರ್ಜು​ನ​(​ಕಾಂಗ್ರೆ​ಸ್‌)-501287

ಮಹಿಮಾ ಜೆ.ಪ​ಟೇ​ಲ್‌​(​ಜೆ​ಡಿ​ಎ​ಸ್‌)-46911.

ಅಂತ​ರ-17607.

26 ಅಭ್ಯ​ರ್ಥಿ​ಗಳು ಕಣ​ದ​ಲ್ಲಿ

ಬಿಜೆಪಿಯಿಂದ ಜಿ.ಎಂ.ಸಿದ್ದೇಶ್ವರ, ಕಾಂಗ್ರೆ​ಸ್‌ನಿಂದ ಎಚ್‌.​ಬಿ.​ಮಂಜ​ಪ್ಪ​, ಬಿಎ​ಸ್‌ಪಿ​ಯಿಂದ ಬಿ.ಎ​ಚ್‌. ಸಿ​ದ್ದಪ್ಪ, ಇಂಡಿಯಾ ಪ್ರಜಾ​ಬಂಧು ಪಕ್ಷ​ದಿಂದ ಎಚ್‌.​ಈ​ಶ್ವ​ರಪ್ಪ, ಉತ್ತಮ ಪ್ರಜಾ​ಕೀಯ ಪಕ್ಷ​ದಿಂದ ಬಿ.ಎ.​ಗ​ಣೇಶ್‌, ಸೋ​ಷ​ಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿ​ಯಾ​ದ (​ಕ​ಮ್ಯು​ನಿಸ್ಟ್‌) ಟಿ.ಜೆ.​ಮಧು, ಇಂಡಿ​ಯನ್‌ ಲೇಬರ್‌ ಪಾರ್ಟಿ​(​ಅಂಬೇ​ಡ್ಕರ್‌ ಪುಲೆ)ಯ ಎನ್‌.ರ​ವೀಂದ್ರ ಹಾಗೂ ಪಕ್ಷೇ​ತ​ರರೂ ಸೇರಿದಂತೆ ಒಟ್ಟು 26 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಒಟ್ಟು ಮತ​ದಾ​ರ​ರು-1611965 | ಪುರು​ಷ-814413 | ಮಹಿ​ಳೆ-796874 | ಇತ​ರೆ​-110 ಇತರೆ |

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.