ಕಲಬುರಗಿ :  ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರನ್ನು ಹೊರತುಪಡಿಸಿದರೆ ರಾಷ್ಟ್ರಮಟ್ಟದಲ್ಲಿ ಅತಿ ದೊಡ್ಡ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದ ಖ್ಯಾತಿ ನಿಸ್ಸಂದೇಹವಾಗಿ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲುತ್ತದೆ. ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರಾಗಿ ಐದು ವರ್ಷ ಸರ್ವಪ್ರಬಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥವಾಗಿ ಎದುರಿಸಿದವರು ಖರ್ಗೆ. 

ಕೇವಲ 40 ಸಂಸದರನ್ನು ಇಟ್ಟುಕೊಂಡು ಆಡಳಿತಾರೂಢ ಬಿಜೆಪಿಯನ್ನು ಹಲವು ವಿಚಾರಗಳಲ್ಲಿ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಹೀಗಾಗಿಯೇ ಖರ್ಗೆ ಅವರನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಣಿಸಿ ಪ್ರಭಾವಿ ವಾಗ್ಮಿ ಹಾಗೂ ಸಂಸದೀಯ ಪಟುವನ್ನು ಸಂಸತ್ತಿನಿಂದ ದೂರವಿಡಲು ಪ್ರಧಾನಿ ಮೋದಿ ಆದಿಯಾಗಿ ಬಿಜೆಪಿಯ ವರಷ್ಠರು ತಂತ್ರ ಹೂಡಿದ್ದಾರೆ ಎನ್ನಲಾಗುತ್ತಿದೆ. ಪರಿಣಾಮ, ಇದುವರೆಗೂ ಜತೆಯಲ್ಲಿದ್ದವರು ಈಗ ವಿರೋಧಿಗಳಾಗಿದ್ದಾರೆ. ಜತೆಯಲ್ಲಿದ್ದು ಪಟ್ಟು ಅರಿತವರು ಉಲ್ಟಾಆದಾಗ ಅದನ್ನು ಎದುರಿಸುವುದು ಕಷ್ಟ. ಈ ಸವಾಲನ್ನು ಎದುರಿಸಲು ಒಂಭತ್ತು ಬಾರಿ ವಿಧಾನಸಭೆ ಮತ್ತು ಒಂದು ಬಾರಿ ಲೋಕಸಭೆ ಸೇರಿ ಹತ್ತು ಬಾರಿ ಸತತ ಜಯ ಕಂಡಿರುವ ಮಲ್ಲಿಕಾರ್ಜುನ ಖರ್ಗೆ ಹೇಗೆ ಸಿದ್ಧತೆ ನಡೆಸಿದ್ದಾರೆ? ಈ ಬಾರಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಅವರಿಗೆ ಯಾವ ಹವಾ ಕಂಡಿದೆ? ಖರ್ಗೆಯಂತಹ ಹಿರಿಯ ರಾಜಕಾರಣಿಗೂ ಪುತ್ರ ವ್ಯಾಮೋಹ ಕಾಡಿತಾ? ಇದರಿಂದಾಗಿ ಉನ್ನತ ಹುದ್ದೆಗಳಿಂದ ಅವರು ವಂಚಿತರಾದರೇ ಎಂಬಿತ್ಯಾದಿ ಪ್ರಶ್ನೆಗಳಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಉತ್ತರ ಕರ್ನಾಟಕ ಭಾಷೆಯಲ್ಲೇ ಉತ್ತರ ನೀಡಿದ್ದಾರೆ.

ನೀವು ಪ್ರಧಾನಿಯಾಗಾಕ ಲಾಯಕ್‌ ಇರೋ ನಾಯಕ ಅಂತಾರಲ್ಲ?

ಖರ್ಗೆ ಸಿಎಂ ಆಗಬೇಕು, ಪಿಎಂ ಆಗಬೇಕು ಅಂತ ಇಂತಹ ಮಾತನ್ನ ಅನೇಕರು ಪ್ರೀತಿ-ವಿಶ್ವಾಸದಿಂದ ಹೇಳ್ತಾರ, ಯಾಕಂದ್ರ ರಾಜಕೀಯ ಪಯಣದಲ್ಲಿ ಹುರುಪು ತುಂಬೋದು ಹೀಂಗ ಮಾತಾಡಿದವರ ಉದ್ದೇಶ ಆಗಿರ್ತದ. ಆದರ, ನಾವು ಏನಿದ್ದೇವೆ? ನಮ್ಮ ಇತಿಮಿತಿ ಏನೈತಿ ಅಂತ ನಮಗೇ ಗೊತ್ತೈತಲ್ಲ. ರಾಜಕೀಯದಾಗೆ ಆಶೆಗಳಿರಬೇಕ್‌, ದುರಾಸೆ ಇರಬಾದ್‌ರ್‍. ಉನ್ನತ ಹುದ್ದೆ ಬಯಕೆ ಯಾರಿಗಿರೋದಿಲ್ಲ ಹೇಳ್ರಲ? ಸ್ಥಾನಮಾನದ ಹಂಬಲ ಇರಬೇಕ್‌, ಆದರೆ ಅತಿಯಾದ ಹಂಬಲ ಬ್ಯಾಡ ಅಂಬೋದ್‌ ನನ್ನ ಸಿದ್ಧಾಂತ.

ಪ್ರಚಾರ ಭರ್ಜರಿಯಾಗಿ ನಡಸಾಕತ್ತೀರಿ, ಮಂದಿ ನಾಡಿ ಮಿಡಿತ ಹೆಂಗೈತ್ರಿ?

ಹೋದ ಕಡ್ಯಾಗೆಲ್ಲ ಕಾಂಗ್ರೆಸ್‌ ಪರ ಸ್ಪಂದನೆ ಕಾಣಕತ್ತೈತಿ. ಜನ ಸ್ವಯಂ ಬರಾಕತ್ತಾರ. ನಮ್ಮ ಮಾತು ಕೇಳ್ಯಾರ. ಬಿಜೆಪಿ ಬಗ್ಗೆ ಮಂದ್ಯಾಗೆ ಬೇಸರ ಐತಿ. ಕಳೆದ 5 ವರ್ಷ ಅಧಿಕಾರ ಮಾಡಿದ ಮೋದಿ ತಾನು ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದ ಕಪ್ಪುಹಣ ತರುವ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಾಕುವ, ವಾರ್ಷಿಕ 2 ಕೋಟಿ ಉದ್ಯೋಗ ಸೃಜನೆ, ರೈತರ ಸಾಲಮನ್ನಾದಂತಹ ಯಾವ ಭರವಸೆಗಳನ್ನೂ ಈಡೇರಿಸಿಲ್ಲವೆಂಬುದು ಮಂದಿ ಮರೆತಿಲ್ಲ.

ರಾಷ್ಟ್ರದ ಎಲ್ಲೆಡೆ ಪ್ರಚಾರ ಮಾಡೀರಲ್ಲ. ಯಾವಾರ ಅಲೆ ಕಾಣ್ತಾ?

ಎಲ್ಲಿಯೂ ಎಂಥಾ ಗಾಳಿನೂ ಇಲ್ರೀ. ದೇಶಕ್ಕಾಗಿ ಯಾರು ದುಡೀತಾರೋ ಅವರ ಪರ ನಿಲ್ಲೋಣ ಅಂತ ಜನ ತೀರ್ಮಾನಿಸ್ಯಾರ. ದೇಶಕ್ಕಾಗಿ ಕಾಂಗ್ರೆಸ್‌ ಪಕ್ಷ ಮಾಡಿದಷ್ಟುತ್ಯಾಗ ಬಿಜೆಪಿ ಮಾಡಿದೆಯೆ? ಕೆಲವರು ಈ ದೇಶಕ್ಕೆ ತಾವೇ ಸ್ವಾತಂತ್ರ್ಯ ತಂದುಕೊಟ್ಟವರಂಗ ಆಡಕತ್ತಾರ. ಭಾರತದ ಪ್ರಗತಿಯಲ್ಲಿ ಕಾಂಗ್ರೆಸ್‌ ಪಾಲು ದೊಡ್ಡದೈತಿ. ಯುವಕರು ಕಾಂಗ್ರೆಸ್‌ ಪರ ವಾಲಾಕತ್ತಾರ. ಮೈತ್ರಿಕೂಟ ಬಲವಾಗೈತಿ.

ಬಿಜೆಪಿ ರಾಷ್ಟ್ರೀಯತೆ ಹಾಗೂ ಹಿಂದುತ್ವನ ಮುಂದ ಮಾಡ್ತೈತಪ್ಪ?

ರಾಷ್ಟ್ರೀಯತೆ ಹಾಗೂ ಹಿಂದುತ್ವದಂತಹ ವಿಚಾರ ಬಿಟ್ಟರೆ ಬಿಜೆಪಿಯವರಿಗೆ ಬೇರೆ ವಿಚಾರಗಳು ಏನಿವೆ? ಕಳೆದ 5 ವರ್ಷದಲ್ಲಿ ಅದೇನ್‌ ಕಡೆದು ಕಟ್ಟೆಹಾಕ್ಯಾರ? ಉದ್ಯೋಗ ಖಾತ್ರಿ, ಶಿಕ್ಷಣ ಖಾತ್ರಿ, ಆಹಾರ ಭದ್ರತೆಯಂತಹ ಅನೇಕ ಯೋಜನೆ ನಮ್ಮ ಕೊಡುಗೆ. ಜಿಎಸ್ಟಿತಂದ್ವಿ ಅಂತ ಹೇಳಲಿ ನೋಡೋಣ, ಸೈನಿಕರ ಹೆಸರಲ್ಲೂ ಓಟ್‌ ಕೇಳ್ತಾರ ಈ ಬಿಜೆಪಿ ಮಂದಿ. ಅಂತಹ ದುರ್ಗತಿ ಕಾಂಗ್ರೆಸ್ಸಿಗೆ ಬಂದಿಲ್ಲ, ನಮ್ಹತ್ರ ಸಾಧನೆಯ ಪ್ರೋಗ್ರೆಸ್‌ ಕಾರ್ಡ್‌ ಐತಿ, ಸುಳ್ಳು ಹೇಳೋದು ಬಿಟ್ರೆ ಬಿಜೆಪಿಯವ್ರ ಬಳಿ ಏನೈತಿ?

ಮೋದಿಗೆ ಟಕ್ಕರ್‌ ಕೊಡುವಂತಹ ನಾಯಕತ್ವ ಪ್ರತಿಪಕ್ಷದಾಗಿಲ್ಲ ಅಂತಾರ?

ಈ ಮೋದಿ ಮೊದ್ಲು ಏನಾಗಿದ್ದರು, ಮಧ್ಯಪ್ರದೇಶದಲ್ಲಿ ಬಗಲಿಗೆ ಚೀಲ ಹಾಕ್ಕೊಂಡು ಆರೆಸ್ಸೆಸ್‌ ಪ್ರಚಾರಕ ಆಗಿದ್ದರು. ಮೋದಿಯನ್ನ ಕರೆತಂದು ಸೀದಾ ಗುಜರಾತ್‌ ಸಿಎಂ ಕುರ್ಚಿ ಕೊಟ್ಟವ್ರು ಅಡ್ವಾಣಿ. ಆಗ ಮೋದಿ ಎಂಎಲ್‌ಎ ಸಹ ಆಗಿರಲಿಲ್ಲ, ಮೊದಲ ಬಾರಿಗೆ ಎಂಪಿ ಆಗಿ ಪ್ರಧಾನಿಯಾದರು. ಒಂದು ಸಂಸ್ಥೆ, ಪಕ್ಷದಲ್ಲಿ ಬೆಳೀಬೇಕಾದ್ರ ಹಲವರ ಬೆಂಬಲ, ಆಶೀರ್ವಾದ ಬೇಕಾಗ್ತದ. ಹಾಗಂತ ಕಾಂಗ್ರೆಸ್‌ ಪ್ರಧಾನಿ ಅಭ್ಯರ್ಥಿ ರಾಹುಲ್‌ ಗಾಂಧಿಯವರನ್ನ ಹೀಗಳಿಯೋದು ಯಾಕೆ? ರಾಹುಲ್‌ ಉನ್ನತ ಅಧ್ಯಯನ ಮಾಡಿದ ಯುವಕ. ರಾಜಕೀಯಕ್ಕೆ ಬಂದು 15 ವರ್ಷವಾಯ್ತು, 4ನೇ ಬಾರಿಗೆ ಚುನಾವಣೆ ಕಣದಲ್ಲಿದ್ದಾರೆ. ಅನುಭವ ಬಂದಂತೆ ಸಾಧನೆ ಮಾಡ್ತಾರೆ. ವಿಪಕ್ಷ ನಾಯಕನಾದಾಗ ನನಗೂ ದಿಲ್ಲಿಯಲ್ಲಿ ‘ಏ ಕೋನ್‌ ಆಯಾ ಮದ್ರಾಸಿ’ ಅಂತ ಟೀಕಿಸಿದ್ರು. ಆದ್ರೆ ಸದನದಲ್ಲಿ ನನ್ನ ಮೊದಲ ದಿನದ ಮಾತಿನಲ್ಲೇ ನನ್ನ ಶಕ್ತಿ-ಸಾಮರ್ಥ್ಯ ಸಾಬೀತು ಮಾಡ್ದೆ. 40 ಜನ ಎಂಪಿಗಳನ್ನು ಕಟ್ಕೊಂಡು 5 ವರ್ಷ ಮೋದಿ ವಿರುದ್ಧ ನಡೆಸಿದ ಹೋರಾಟ ಹಾಗೂ ಪಟ್ಟಶ್ರಮ ಎಂತದ್ದು ಅಂತ ನಂಗೆ ಗೊತ್ತು.

ಖರ್ಗೆ ಅವರನ್ನು ಉನ್ನತ ಸ್ಥಾನದಲ್ಲಿ ನೋಡಬಯಸೋ ಮಂದಿ ಅದಾರಲ್ಲ?

ತತ್ವ- ಸಿದ್ಧಾಂತ ನಂಬಿ ರಾಜಕೀಯದಲ್ಲಿದ್ದವ ನಾನು. ನಾ ನಂಬಿದ ಸಿದ್ಧಾಂತಗಳನ್ನು ಅನುಷ್ಠಾನಗೊಳಿಸಲು ಪಕ್ಷದ ವೇದಿಕೆಯನ್ನ ನಾನು ಬಲವಾದಂತಹ ಅಸ್ತ್ರವನ್ನಾಗಿ ಬಳಸುತ್ತ ಹೊರಟಿದ್ದೀನಿ. ಉನ್ನತ ಹುದ್ದೆ ಹಂಬಲ ಯಾರಿಗಿರೋದಿಲ್ಲ ಹೇಳ್ರಿ? ಹಾಗಂತ ನಾನು ಅದಾಗಬೇಕು, ಇದಾಗಬೇಕು, ನನ್ನ ಆಸೆ ಇದು, ಹಂಬಲ ಇದು ಅಂತ ಹೊರಗಡೆ ಹೇಳಬಾರ್ದು. ಅದೇನಿದ್ದರೂ ಪಕ್ಷದ ವೇದಿಕೆಯಲ್ಲೇ ಚರ್ಚಿಸೋ ವಿಚಾರ. ದವಾಖಾನಿಗೆ ‘ಇಲಾಜ್‌’ಗೆ ಅಂತ ಹೋದಾಗ ಅಲ್ಲಿರೋ ಡಾಕ್ಟರ್‌ಗೆ ನೇರವಾಗಿ ನಮ್ಮ ತೊಂದರೆ ಹೇಳಿ ಪರಿಹಾರ ಕಂಡುಕೊಳ್ಳುವಂತೆ ಪಕ್ಷದ ವ್ಯವಸ್ಥೆಯಲ್ಲಿಯೂ ಇಂತಹ ಅಹವಾಲುಗಳನ್ನು ಚರ್ಚಿಸಲು ಇರೋ ಸೂಕ್ತ ವೇದಿಕೆ ಬಳಸಬೇಕೆ ಹೊರತು ಬಿಡುಬೀಸಾಗಿ ಎಲ್ಲಾ ಕಡೆ ಮಾತಾಡೋದಲ್ಲ. ನನ್ನ ಬೇಕು- ಬೇಡಗಳನ್ನ ಸಮಯ-ಸಂದರ್ಭ ನೋಡಿಕೊಂಡು ಎಲ್ಲಿ ಹೇಳಬೇಕೋ ಅಲ್ಲಿ ಹೇಳ್ತೇನೆ.

ಆದರೆ ಖರ್ಗೆ ಅವರ ಪುತ್ರ ವ್ಯಾಮೋಹ, ಅವರಿಗೆ ರಾಜ್ಯದ ಉನ್ನತ ಹುದ್ದೆಯ ಬಾಗಿಲನ್ನು ಬಂದ್‌ ಮಾಡಿತು ಅಂತಾರ?

ಈ ಮಾತು ನನಗೂ ತುಂಬ ಬೇಸರ ತರುತ್ತಿದೆ. ನನ್ನ ಮಗನಿಗೆ ಸಣ್ಣ ಮಂತ್ರಿಗಿರಿ ದೊರಕಿಸಿಕೊಡಲು ನಾನು ಹಲವರನ್ನ ಬದಿಗೊತ್ತುವಷ್ಟುಚಿಲ್ಲರೆ, ಸಣ್ಣಮಟ್ಟದ ರಾಜಕೀಯ ಮಾಡೋ ಮನುಷ್ಯನಾ? ಹೀಗೆ ಹೇಳುತ್ತ ತಿರುಗೋವ್ರಿಗೆ ನಾಚಿಕಿ ಆಗ್ಬೇಕು. ರಾಜಕೀಯ ಪರಿಜ್ಞಾನ ಇಲ್ಲದ ಹೊಟ್ಟಿಕಿಚ್ಚಿನ ಮಂದಿ ಅವ್ರು. ಪರಿಶಿಷ್ಟಜಾತಿ ಕೋಟಾದಲ್ಲಿ ಪ್ರಿಯಾಂಕ್‌ ಮಂತ್ರಿ ಆಗಿದ್ದಾರೆ. ಈ ನಿರ್ಣಯವನ್ನು ಆಗಿನ ಸಿಎಂ ಸಿದ್ದರಾಮಯ್ಯ ತಂಗೋಡಿದ್ದು, ನಾನಲ್ಲ. ಎನ್‌ಎಸ್‌ಯುಐನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಪ್ರಿಯಾಂಕ್‌ ರಾಜಕೀಯವಾಗಿ ತಾನೇ ಬೆಳೆದವ. 2009ರಲ್ಲಿ ಚಿತ್ತಾಪುರ ಕಂಡ ಉಪ ಚುನಾವಣೆಯಲ್ಲಿ ನನ್ನ ಜಾಗದಲ್ಲಿ ನಿಲ್ಲಲು ಸೂಕ್ತ ವ್ಯಕ್ತಿಗಳು ಇಲ್ಲದಿರುವಾಗ ಪ್ರಿಯಾಂಕ್‌ನನ್ನು ನಿಲ್ಲಿಸಿದವರೇ ಇಂದು ಹೀಂಗ ಟೀಕಾ ಮಾಡ್ತಿದ್ದಾರ. ಇರೋ ವಾಸ್ತವಾಂಶ ಹೇಳ್ತೇನಿ, ಮಂದಿ ಹೊಟ್ಟೆಕಿಚ್ಚಿನಿಂದ ಟೀಕೆ ಮಾಡ್ತಾರ. ಎಲ್ಲದಕ್ಕೂ ದವಾ ಅದ, ಹೊಟ್ಟೆಕಿಚ್ಚಿಗೆ ಇಲಾಜ್‌ ಇಲ್ಲ.

ಅದ್ಯಾಕೋ ಎಲ್ಲರಿಗೂ ನಿಮ್ಮ ಮ್ಯಾಗೆ ಕಣ್ಣು. ನಿಮ್ಮನ್ನು ಸೋಲಿಸಲು ಎಲ್ಲರೂ ಒಟ್ಟಾಗ್ಯಾರಲ್ಲ?

ಜನಾಶೀರ್ವಾದದಿಂದ ದಿಲ್ಲಿಗೆ ಹೋದ, ಪಾರ್ಲಿಮೆಂಟ್‌ನಾಗ ತಲೆ ಎತ್ತಿ ಮಾತನಾಡ್ದ, ತೊಗರಿ ರೈತರ ಸಮಸ್ಯೆ ಹೇಳ್ದ, ನೋಟ್‌ಬ್ಯಾನ್‌ ಖಂಡಿಸ್ದ, ಮೋದಿಗೇ ಪ್ರಶ್ನೆಗಳ ಸುರಿಮಳೆ ಮಾಡ್ದ ಕಾರಣಕ್ಕೆ ಎಲ್ಲರೂ ಖರ್ಗೆ ವಿರುದ್ಧವಾಗ್ಯಾರ. ಹಳ್ಳಿಯಿಂದ ದಿಲ್ಲಿವರೆಗೂ ಎಲ್ಲರೂ ನನ್ನ ಸೋಲಿಸಲು ಒಂದಾಗ್ಯಾರ. ಬಿಜೆಪಿ ನನ್ನ ಟಾರ್ಗೆಟ್‌ ಮಾಡ್ಯದ. ಈ ಬಾರಿ ಸೋಲಿಸಿ ಖರ್ಗೆಯನ್ನ ರಾಜಕೀಯವಾಗಿ ಮುಗಿಸಿದ್ರಾಯ್ತು ಅಂತ ಮೋದಿ, ಶಾ ಮೊದಲ್ಗೊಂಡು ಎಲ್ರೂ ಬೆನ್ನ ಬಿದ್ದಾರ. ಕಲಬುರಗಿಗೆ ಏನೂ ಕೊಡುಗೆ ಕೊಡ್ದೆ ನನ್ನ ಸೋಲಿಸಲು ಹೊರಟಿರೋ ಬಿಜೆಪಿಗೆ ಮತದಾರರೇ ಪಾಠ ಕಲಿಸ್ತಾರೆ. ನಿಜಾಂ ರಾಜ್ಯದಾಗಿದ್ದ ಕಲಬುರಗಿ ಕೊನೆ ಸ್ಥಾನದಾಗಿತ್ತು. ಈಗ ಪ್ರಗತಿ ಸಾಧಿಸಿಲ್ವೇನು? ನೋಡ್ರಿ, ಏಕದಂ ಸಿಂಗಾಪುರ, ಹಳೆ ಮೈಸೂರು ಭಾಗದಂತೆ ಕಲಬುರಗಿಯನ್ನ ನಾನು ಮಾಡಲಾಗದಿದ್ರೂ ತಕ್ಕಮಟ್ಟಿನ ಪ್ರಗತಿ ಮಾಡಿರುವೆ.

ಜೊತ್ಯಾಗಿನ ಮಂದಿನೇ ನಿಮ್ಮ ವಿರುದ್ಧ ನಿಂತಾರಲ್ಲ?

ಆರು ತಿಂಗಳ ಆಚೆ ನನ್ನನ್ನ ಇಂದ್ರ-ಚಂದ್ರ ಅಂತ ಹೊಗಳಿದವ್ರು, ದಕ್ಷಿಣ ಭಾರತದ ಅಂಬೇಡ್ಕರ್‌ ಅಂತ ಅಂದವ್ರು, ಅಭಿವೃದ್ಧಿ ಹರಿಕಾರ ಅಂತ ಬಣ್ಣಿಸಿದವರು ಎಲ್ರೂ ವಿನಾಕಾರಣ ನನ್ನದಲ್ಲದ ದೋಷಗಳನ್ನು ನನ್ನವೇ ಎಂದು ಹೇಳುತ್ತ ದೂರಾಗ್ಯಾರ. ಬಿಜೆಪಿ ನನ್ನನ್ನೇ ಟಾರ್ಗೆಟ್‌ ಮಾಡೈತಿ. ಇದನ್ನೆಲ್ಲ ಮತದಾರರು ನೋಡಕತ್ತಾರ, ಮೋದಿ- ಷಾ ಎಲ್ರೂ ನಮ್ಮ ಕೆಲ್ಸಗಾರ ನಾಯಕನ ಬೆನ್ನು ಬಿದ್ದಾರ್ರಿ, ನಾವು ಖರ್ಗೆ ಕೈಬಿಡಬಾರ್ದು ಅಂತ ಕಲಬುರಗಿ ಮಂದಿ ಸ್ವಾಭಿಮಾನದಿಂದ ಹೊಂಟಾರ. ಹೀಂಗಾಗಿ ಎಲ್ಲ ಒಂದಾಗಿ ಸವಾಲ್‌ ಹಾಕಿದ್ರೂ ಕಲಬುರಗಿ ಮಂದಿ ನನ್ನ ಕೈ ಬಿಡೋದಿಲ್ಲ ಅನ್ನೋ ವಿಶ್ವಾಸೈತ್ರಿ ನಂಗೆ.

ಆದ್ರ ಈ ಮೈತ್ರಿ ಅನ್ನೋದು ಕಾಂಗ್ರೆಸ್‌ಗೆ ಭಾರಿ ನುಕ್ಸಾನ್‌ ಮಾಡ್ಲಿಕತ್ತದ ಅಂತಾರ್ರಿ?

ಇಲ್ಲಿ ಫಾಯ್ದಾ-ನುಕ್ಸಾನ್‌ (ಲಾಭ-ನಷ್ಟದ) ಮಾತಿರಾಂಗಿಲ್ಲ. ಸಾಮಾಜಿಕ ಸಾಮರಸ್ಯದ ಬಂಧ ಗಟ್ಟಿಯಾಗಿರಬೇಕು. ಕೋಮುವಾದಿ ಬಿಜೆಪಿ ಬಲ ಕುಗ್ಗಿಸಬೇಕೆಂಬ ಉದ್ದೇಶದಿಂದ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿವಿ. ನಮಗೆ (ಕಾಂಗ್ರೆಸ್‌ಗೆ) ಎಷ್ಟೇ ನುಕ್ಸಾನ್‌ ಆದ್ರೂ ರಾಜ್ಯ, ರಾಷ್ಟ್ರ ಹಿತಾಸಕ್ತಿ ಮುಖ್ಯ. ಹೀಗಾಗಿ ಮೈತ್ರಿ ಮಾಡಿಕೊಂಡೀವಿ.

ತಳ ಮಟ್ಟದಾಗ ಮೈತ್ರಿ ಸರಿಹೊಂದಿಲಿಲ್ವಲ್ಲ? ಗುರುಮಠಕಲ್‌ ಜೆಡಿಎಸ್‌ ಶಾಸಕರು ನಿಮ್ಮ ಪರ ಪ್ರಚಾರಕ್ಕೇ ಬರಕತ್ತಿಲ್ಲ?

ಮೈತ್ರಿಧರ್ಮವನ್ನು ಎಲ್ಲರೂ ಪಾಲಿಸಬೇಕು. ಆದರೆ, ಹಳ್ಳಿ ಮಟ್ಟದಲ್ಲಿ ಮೈತ್ರಿಧರ್ಮ ಏಕದಮ್‌ ಸಾಧಿಸಲಾಗೋದಿಲ್ಲ. ನಿಧಾನಕ್ಕೆ ಪಾಲನೆ ಆಕ್ಕತ್ತಿ. ಗುರುಮಠಕಲ್‌ ಜೆಡಿಎಸ್‌ ಶಾಸಕ ನಾಗಣಗೌಡ ಕಂದಕೂರ್‌ ಅವರೊಂದಿಗೆ ಈಗಾಗಲೇ ಸಿಎಂ ಕುಮಾರಸ್ವಾಮಿ, ದೇವೇಗೌಡರು ಮಾತನಾಡ್ಯಾರ. ನಾಮಿನೇಷನ್‌ ದಿನ ನಾನೂ ಅವರಿಗೆ ಕರೆ ಮಾಡಿದ್ದೆ, ಮಂಡ್ಯದಲ್ಲಿರುವುದಾಗಿ ಹೇಳಿದ್ರು. ಇಲ್ಲಿ ಹೊಂದಾಣಿಕೆ ನಿಧಾನವಾದ್ರೂ ವಿರುದ್ಧವಂತೂ ಮಾಡ್ತಿಲ್ಲ. ನಮ್ಮವರು ಮಾತನ್ನಾಡಿದ್ದಾರೆ. ಶೀಘ್ರವೇ ಎಲ್ಲವೂ ಸರಿ ಹೋಗುತ್ತದೆ.

ವರದಿ :  ಶೇಷಮೂರ್ತಿ ಅವಧಾನಿ

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.