Asianet Suvarna News Asianet Suvarna News

‘ಕಿತ್ತಾಡುತ್ತೇವೆ, ಮರುಕ್ಷಣವೇ ಎಲ್ಲವನ್ನೂ ಮರೆತು ಒಂದಾಗುತ್ತೇವೆ’

ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕೆನ್ನುವ ವಾದವನ್ನು ಇನ್ನೂ ಸಮರ್ಥಿಸಿಕೊಳ್ಳುತ್ತಲೇ ಬಂದಿರುವ ಗೃಹ ಸಚಿವ ಎಂ.ಪಿ.ಪಾಟೀಲ್‌ ಅವರು ಸ್ವಪಕ್ಷೀಯ ಸಹೋದ್ಯೋಗಿಗಳ ಹೇಳಿಕೆಯನ್ನೂ ಖಂಡಿಸುವುದರ ಜೊತೆಗೆ ಹೋರಾಟವನ್ನು ಜೀವಂತವಾಗಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ಉತ್ತರ ಕರ್ನಾಟಕದ ಕಾಂಗ್ರೆಸ್‌ ಅಭ್ಯರ್ಥಿಗಳು ಈ ಭಾರಿ ಜಯಸಾಧಿಸುತ್ತಾರೆನ್ನುವ ವಿಶ್ವಾಸದೊಂದಿಗೆ ನಾನೂ ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದೇನೆಯೇ ಹೊರತು, ಆಗಿಯೇ ತೀರಬೇಕೆಂಬ ದುರಾಸೆ ನನಗಿಲ್ಲ ಎಂದಿದ್ದಾರೆ. ಉಳಿದಂತೆ ಅವರ ಸಂದರ್ಶನ ಹೆಚ್ಚಿನ ವಿಚಾರ ಈ ಕೆಳಗಿನಂತೆ

Lok Sabha Elections 2019 Congress Leader MB Patil interview
Author
Bengaluru, First Published Apr 21, 2019, 3:55 PM IST

ಹುಬ್ಬಳ್ಳಿ :  ಅದೇನು ವಿವಾದಗಳೇ ಅವರನ್ನು ಹುಡುಕಿಕೊಂಡು ಬರುತ್ತವೆಯೋ ಅಥವಾ ಅವರಿಗೆ ವಿವಾದಗಳು ಎಂದರೆ ಇಷ್ಟವೋ ಗೊತ್ತಿಲ್ಲ. ಆದರೆ, ಎಂ.ಬಿ. ಪಾಟೀಲ್‌ ಎಂದಾಕ್ಷಣ ಹಲವು ವಿವಾದಾತ್ಮಕ ಹೇಳಿಕೆಗಳು ಹಾಗೂ ನಿರ್ಧಾರಗಳು ಕಣ್ಣಮುಂದೆ ಬರುತ್ತವೆ. ವಿಧಾನಸಭಾ ಚುನಾವಣೆ ವೇಳೆ ಪ್ರತ್ಯೇಕ ಲಿಂಗಾಯತ ಧರ್ಮದ ಪರ ನಿಂತ ಎಂ.ಬಿ.ಪಾಟೀಲ್‌ ಹಲವು ನಾಯಕರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದ್ದು ಉಂಟು. ಇದೀಗ ಲೋಕಸಭಾ ಚುನಾವಣೆಯಲ್ಲೂ ಅವರು ಇಂತಹುದೇ ಮಾತಿನ ಚಕಮಕಿಗೆ ಮುಂದಾಗಿದ್ದಾರೆ. ಈ ಬಾರಿ ತಮ್ಮದೇ ಪಕ್ಷದ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ವಾದ-ಪ್ರತಿವಾದ ಆರಂಭಿಸಿದ್ದಾರೆ. ಇದಕ್ಕೂ ಪ್ರತ್ಯೇಕ ಲಿಂಗಾಯತ ಧರ್ಮವೇ ಮೂಲ ಎಂಬುದು ವಿಶೇಷ. ಹೀಗೇಕೆ? ಎಂ.ಬಿ. ಪಾಟೀಲ್‌ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ಆಸಕ್ತರೇ? ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಅನ್ಯ ಜಾತಿಯ ನಾಯಕರು ಮಾತನಾಡಬಾರದೇ? ಶಿವಕುಮಾರ್‌ ಹೇಳಿದ್ದಂತೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕಾಂಗ್ರೆಸ್‌ಗೆ ತಿರುಗುಬಾಣವಾಯ್ತೆ? ಹೀಗಾಗಿ ಲಿಂಗಾಯತ ಧರ್ಮ ವಿಚಾರವನ್ನು ಕಾಂಗ್ರೆಸ್‌ ಕೈಬಿಟ್ಟಿತೇ? ಕಾಂಗ್ರೆಸ್‌ ಕೈಬಿಟ್ಟರೂ ಎಂ.ಬಿ. ಪಾಟೀಲ್‌ ಈ ವಿಚಾರವನ್ನು ಕೈಬಿಡುವರೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಗೃಹ ಸಚಿವ ಹಾಗೂ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕ ಎಂ.ಬಿ. ಪಾಟೀಲ್‌ ಕನ್ನಡಪ್ರಭಕ್ಕೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದ್ದು ಹೀಗೆ-

ಚುನಾವಣೆಯಲ್ಲಿ ಪ್ರತಿಪಕ್ಷದ ದಾಳಿಗಿಂತ ನಿಮ್ಮನಿಮ್ಮಲ್ಲೇ ಕಿತ್ತಾಡಿಕೊಳ್ಳುವ ಸದ್ದು ಜೋರಾಗಿ ಕೇಳಿಸುತ್ತಿದೆಯಲ್ಲ?

ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ನಾನು ಒಳ್ಳೆಯ ಸ್ನೇಹಿತರು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ, ನಮ್ಮ ಅಸ್ಮಿತೆಗೆ ಸಂಬಂಧಿಸಿದ ಹೇಳಿಕೆ ನೀಡಿದ್ದರಿಂದ ನಾನೂ ಪ್ರತಿ ಹೇಳಿಕೆ ನೀಡಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಮುಜುಗರ ಆಗಬಾರದೆಂದು ಸದ್ಯಕ್ಕೆ ಈ ವಿಷಯ ಚರ್ಚಿಸಲು ನಾನು ಬಯಸುವುದಿಲ್ಲ. ಏ.23ರ ನಂತರ ವಿಸ್ತಾರವಾಗಿ ಪ್ರತಿಕ್ರಿಯಿಸುತ್ತೇನೆ. ಬಹುಶಃ ಅವರಿಗೂ ಯಾವುದೇ ದುರುದ್ದೇಶ ಇದ್ದಂತಿಲ್ಲ.

ನಿಮ್ಮೊಂದಿಗೆ ಧರ್ಮದ ಹೋರಾಟದಲ್ಲಿದ್ದ ಬಸವರಾಜ ಹೊರಟ್ಟಿ, ವಿನಯ ಕುಲಕರ್ಣಿ ಈಗ ಹೋರಾಟ ಮುಗಿದ ಅಧ್ಯಾಯ ಎನ್ನುತ್ತಿದ್ದಾರೆ. ಹೋರಾಟ ಕೈಬಿಟ್ರಾ?

ಜೈನರು, ಬೌದ್ಧರಂತೆ ಲಿಂಗಾಯತ ಧರ್ಮ ನಮ್ಮ ಅಸ್ಮಿತೆ. ಹೊರಟ್ಟಿಯವರು ಮತ್ತು ವಿನಯ ಕುಲಕರ್ಣಿ ಹೋರಾಟ ಮುಗಿದ ಅಧ್ಯಾಯ ಎಂದಿಲ್ಲ, ಬದಲಾಗಿ ಈ ಚುನಾವಣೆಯಲ್ಲಿ ಅದನ್ನು ಪ್ರಸ್ತಾಪಿಸುವುದಿಲ್ಲ ಎಂದಿದ್ದಾರೆ. ಮೇಲಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸಿಲ್ಲ ಹಾಗೂ ಲಿಂಗಾಯತ ಹೋರಾಟ ಚುನಾವಣೆ ಪ್ರಚಾರದ ಸರಕಲ್ಲ. ಧರ್ಮವೇ ಬೇರೆ, ಪಕ್ಷ ಮತ್ತು ಚುನಾವಣೆಯೇ ಬೇರೆ.

ವಿನಯ ಕುಲಕರ್ಣಿ ಲಿಂಗಾಯತ ಹೋರಾಟವನ್ನು ವಿರೋಧಿಸುತ್ತಿದ್ದ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿರುವುದು ಲಿಂಗಾಯತರನ್ನು ಕೆರಳಿಸಿದೆಯಲ್ಲ?

ಆಶೀರ್ವಾದ ಪಡೆದದ್ದರಲ್ಲಿ ಯಾವುದೇ ತಪ್ಪಿಲ್ಲ. ಹಿಂದೆ ಕಾಶಿ ಶ್ರೀಗಳು ನನಗೆ ಫೋನ್‌ ಮಾಡಿ ಕರೆಸಿಕೊಂಡು ಒಂದಿಷ್ಟುಕೆಲಸಗಳ ಬಗ್ಗೆ ಹೇಳಿದ್ದರು, ಮಾಡಿಕೊಟ್ಟೆ. ಎಲ್ಲ ಶ್ರೀಗಳ ಆಶೀರ್ವಾದ ನಾವು ಪಡೆಯಬೇಕು. ಅವರು ಕೂಡ ಎಲ್ಲರಿಗೂ ಆಶೀರ್ವದಿಸುತ್ತಾರೆ. ಇದೂ ಸಹ ಕುಟುಂಬದೊಳಗಿನ ಅಣ್ಣ-ತಮ್ಮಂದಿರ ಜಗಳ. ಮುಂದೆ ಸರಿಯಾಗುತ್ತೆ.

ಕೆಲವರು ನಿಮ್ಮ ಆತ್ಮಗೌರವಕ್ಕೆ ಧಕ್ಕೆಯಾಗುವಂತೆ ವರ್ತಿಸುತ್ತಿದ್ದಾರೆ?

ಯಾರೊಂದಿಗೂ ನನಗೆ ವೈರತ್ವವಿಲ್ಲ, ವೈಚಾರಿಕ ಭೇದ ಅಷ್ಟೆ. ಆದಾಗ್ಯೂ ಪಕ್ಷ ಎಲ್ಲವನ್ನೂ ಗಮನಿಸುತ್ತಿರುತ್ತದೆ. ಸಂದರ್ಭ ಬಂದಾಗ ಸೂಕ್ತ ನಿರ್ಣಯ ಕೈಕೊಳ್ಳುತ್ತದೆ.

ಶಾಸಕ ಎ.ಎಸ್‌.ಪಾಟೀಲ್‌ ನಡಹಳ್ಳಿ ಮತ್ತು ತಮ್ಮ ಮಧ್ಯೆ ಏನದು ರಗಳೆ?

ಯಾರೋ ಒಬ್ಬ ದೊಡ್ಡವರನ್ನು ಟೀಕೆ ಮಾಡುವುದು ಮತ್ತು ಅವರು ಪ್ರತಿಕ್ರಿಯಿಸಿದಾಗ ನಾನೂ ದೊಡ್ಡವನಾದೆ ಎಂದು ಭ್ರಮಿಸುವ ಫಿಲಾಸಪಿ ನಡಹಳ್ಳಿ ಅವರದು. ಹಾಗಾಗಿ ನನ್ನ ವಿರುದ್ಧ ಟೀಕೆ ಮಾಡಿ ದೊಡ್ಡವನಾಗಲು ಹೊರಟಿದ್ದಾರೆ. ಕುಮಾರಸ್ವಾಮಿಗೆ ಬೆಳ್ಳಿ ಕುರ್ಚಿ ಕೊಟ್ಟು, ಕಾಂಗ್ರೆಸ್ಸಿಗೆ ಬಂದು ಟಿಕೆಟ್‌ ಪಡೆದರು. ಗಾರ್ಮೆಂಟ್‌ ಯೂನಿಟ್‌ ಹಾಕುತ್ತೇನೆ, 10 ಸಾವಿರ ಜನರಿಗೆ ಉದ್ಯೋಗ ಕೊಡುತ್ತೇನೆ ಎಂದಿದ್ದರು. ಜನರಿಗೆ ಇವರ ಇತಿಹಾಸ ಗೊತ್ತಿದೆ. ಹಾಗಾಗಿ ನಾನು ಪ್ರತಿಕ್ರಿಯಿಸುವುದಿಲ್ಲ.

ಹಿಂದೆ ತಾವು ‘ನನಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ, ಆಸೆಯೂ ಇದೆ’ ಎಂದಿದ್ದಿರಿ. ಅದರ ಪರಿಣಾಮವೇ ಈ ಪ್ರತಿರೋಧವೇ?

ರಾಜಕಾರಣದಲ್ಲಿ ಇದ್ದವರಿಗೆ ಅಧಿಕಾರದ ಆಸೆ ಸಹಜ. ಕಾಂಗ್ರೆಸ್ಸಿನಲ್ಲಿ ನಾನಷ್ಟೇ ಅಲ್ಲ, ನನ್ನಂತೆ ಹಲವರು ಸಿಎಂ ಸ್ಥಾನಕ್ಕೆ ಅರ್ಹರು, ಆಕಾಂಕ್ಷಿಗಳೂ ಇದ್ದಾರೆ. ನಮಗೆ ಹೈಕಮಾಂಡ್‌ ಇದೆ, ಶಾಸಕರು ಒಪ್ಪಬೇಕು. ಕಾಂಗ್ರೆಸ್‌ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದರಿಂದ ಅರ್ಹತೆಯ ಮೇರೆಗೆ ಅಧಿಕಾರಗಳು ಅವರವರಿಗೆ ಲಭಿಸುತ್ತವೆ. ಹಾಗಾಗಿ ನಾನೂ ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದೇನೆಯೇ ಹೊರತು, ಆಗಿಯೇ ತೀರಬೇಕೆಂಬ ದುರಾಸೆ ನನಗಿಲ್ಲ.

ಸಮ್ಮಿಶ್ರ ಸರ್ಕಾರದ ಗೊಂದಲ, ಕಿತ್ತಾಟ ರೇಜಿಗೆ ತರಿಸಿದೆ. ಜನತೆ ನಿಮಗೆ ವೋಟ್‌ ಹಾಕುವರೆ?

ದೇಶದಲ್ಲಿ ಆಳ್ವಿಕೆ ಮಾಡಿದ ಎಲ್ಲ ಸಮ್ಮಿಶ್ರ ಸರ್ಕಾರದಲ್ಲಿ ಇಂಥ ಸಮಸ್ಯೆ ಸಾಮಾನ್ಯ. ಹಿಂದೆ ಜೆಡಿಎಸ್‌-ಬಿಜೆಪಿ ಸರ್ಕಾರದ ಕಥೆ ಕೇಳಿದ್ದೀರಿ. ಇದು ಒಂದು ರೀತಿ ಗಂಡ, ಹೆಂಡಿರ ಜಗಳ ಇದ್ದಂತೆ. ನಮಗೆ ಅವರು ಬೇಕು- ಅವರಿಗೆ ನಾವು ಬೇಕು. ಕಿತ್ತಾಡುತ್ತೇವೆ, ಮರುಕ್ಷಣವೇ ಎಲ್ಲವನ್ನೂ ಮರೆತು ಒಂದಾಗುತ್ತೇವೆ. ಇದರಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ಸಿದ್ಧಾಂತ, ಜನೋಪಯೋಗಿ ಆದರ್ಶ ಮುಖ್ಯವಾಗುತ್ತದೆ. ಜನಪರ ಮತ್ತು ಅಭಿವೃದ್ಧಿಪರ ಸರ್ಕಾರಕ್ಕಾಗಿ ಜನತೆ ಕಾಂಗ್ರೆಸ್ಸನ್ನು ಬೆಂಬಲಿಸಬೇಕಿದೆ.

ರಾಜ್ಯದಲ್ಲಿನ ಕಾಂಗ್ರೆಸ್‌ ದೇವೇಗೌಡರ ಕುಟುಂಬಕ್ಕೆ ಶರಣಾಗಿದೆ ಎನ್ನುವ ಮಾತು ಕೇಳಿಬರುತ್ತಿದೆಯಲ್ಲ?

ನಾವು 82 ಸ್ಥಾನ ಗೆದ್ದಿದ್ದರೂ 38 ಶಾಸಕರನ್ನು ಹೊಂದಿರುವ ಜೆಡಿಎಸ್‌ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ನಮ್ಮ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ದೇಶಕ್ಕೆ ಒಂದು ಸಂದೇಶ ನೀಡಿದ್ದಾರೆ. ನಮಗೆ ಅಧಿಕಾರ ಮುಖ್ಯವಲ್ಲ, ಜಾತ್ಯತೀತ ಪಕ್ಷಗಳು ಒಂದಾಗಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಮೂಲಕ ದೇಶದಲ್ಲಿ ಸೌಹಾರ್ದತೆ ಕಾಪಾಡಿ ಎಂದಿದ್ದಾರೆ. ಹಾಗಾಗಿ ನಮ್ಮ ಅಧಿಕಾರಕ್ಕಿಂತ ನಾಡಿನ ಹಿತ ಮುಖ್ಯ. ಇದರಲ್ಲಿ ಶರಣಾಗತಿ ಪ್ರಶ್ನೆ ಬರುವುದಿಲ್ಲ.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಅಷ್ಟಾಗಿ ಇಲ್ಲ, ಇದ್ದವರೂ ನಿಮ್ಮೊಂದಿಗೆ ಬೆರೆಯುತ್ತಿಲ್ಲ?

ಹಿಂದೆ ನಾವು-ಅವರು ಪ್ರತ್ಯೇಕವಾಗಿ ಚುನಾವಣೆ ಎದುರಿಸಿದ್ದರಿಂದ ಈಗ ಒಟ್ಟಾಗಿ ಮತ ಕೇಳಲು ಮುಜುಗರ ಅನಿಸುತ್ತಿದೆ. ಆದಾಗ್ಯೂ ಅದನ್ನೆಲ್ಲ ಮರೆತು ಪ್ರಚಾರಕ್ಕಿಳಿದಿದ್ದೇವೆ. ವಿಜಯಪುರದಲ್ಲಿ ನಾಮಿನೇಶನ್‌ನಿಂದ ಹಿಡಿದು ಈವರೆಗೆ ಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ಬೇರೆಡೆ ಸಣ್ಣಪುಟ್ಟವ್ಯತ್ಯಾಸಗಳಿದ್ದವು, ಹಿರಿಯರು ಎಲ್ಲವನ್ನೂ ಸರಿ ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಲಿಂಗಾಯತ, ಹಿಂದುಳಿದವರಂತೆ ಮುಸ್ಲಿಂ ಮತದಾರರೂ ಅಧಿಕ ಸಂಖ್ಯೆಯಲ್ಲಿದ್ದಾರೆ. 12 ಕ್ಷೇತ್ರಗಳಲ್ಲಿ ಒಂದೂ ಮುಸ್ಲಿಮರಿಗೆ ನೀಡಿಲ್ಲ. ಈಗ ಅವರ ಮತ ಹೇಗೆ ಕೇಳುತ್ತೀರಿ?

ಧಾರವಾಡ ಕ್ಷೇತ್ರಕ್ಕೆ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಲಾಗಿತ್ತು. ಆದರೆ, ದೆಹಲಿಯಲ್ಲಿ ನಡೆದ ಸಭೆಯಲ್ಲಿ ಇಲ್ಲಿನ ಸ್ಥಳೀಯ ಮುಸಲ್ಮಾನ ಮುಖಂಡರೇ ಮುಂದಾಗಿ ವಿನಯ ಕುಲಕರ್ಣಿ ಅವರಿಗೆ ಟಿಕೆಟ್‌ ಕೊಡಿ ಎಂದರು. ಈದ್ಗಾ ಹೋರಾಟದ ನಂತರ ಇಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ಸೇರಿದಂತೆ ಸಂಘ ಪರಿವಾರ ಪ್ರಬಲವಾಗಿದೆ. ಇನ್ನಿಲ್ಲದ ನೆಪವೊಡ್ಡಿ ಕೋಮು ಭಾವನೆ ಕೆರಳಿಸುತ್ತಾರೆ. ರಾಜ್ಯಸಭೆ, ವಿಧಾನಪರಿಷತ್ತಿಗೆ ಮುಸ್ಲಿಂ ಮುಖಂಡರನ್ನು ನೇಮಕ ಮಾಡಿ, ಟಿಕೆಟ್‌ ಕೊಟ್ಟು ನಮ್ಮನ್ನು ಬಲಿಪಶು ಮಾಡಬೇಡಿ ಎಂದು ಕೇಳಿಕೊಂಡರು. ಬೆಂಗಳೂರು ಒಂದು ಕೊಟ್ಟಿದ್ದೀರಿ ಸಾಕು ಎಂದರು.

ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ತಮಗೆ ಮತ್ತು ತಮ್ಮ ಪರವಾಗಿ ಪ್ರಚಾರ ಮಾಡುವವರಿಗೆ ಭಯವಿದೆ ಎಂದಿದ್ದರಲ್ಲ, ಗೃಹ ಸಚಿವರಾಗಿ ಏನು ಹೇಳುತ್ತೀರಿ?

ಸುಮಲತಾ ಅವರು ಪ್ರಚಾರ ಸಭೆಯಲ್ಲಿ ಹಾಗೆ ಹೇಳಿರಬಹುದು. ಆದರೆ ಅಧಿಕೃತವಾಗಿ ರಕ್ಷಣೆ ಕೇಳಿದರೆ ಪೊಲೀಸ್‌ ಇಲಾಖೆ ರಕ್ಷಣೆಗೆ ಸಿದ್ಧವಿದೆ. ಇದರಲ್ಲಿ ಯಾವುದೇ ಭೇದವೂ ಇಲ್ಲ.

ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆದ್ದರೆ ಪಕ್ಷದಲ್ಲಿ ತಮ್ಮ ಬಲ ಹೆಚ್ಚುವ ವಿಶ್ವಾಸವಿದೆಯೇ?

ಕಾಂಗ್ರೆಸ್‌ ನನ್ನ ಮೇಲೆ ಯಾವಾಗಲೂ ವಿಶ್ವಾಸ ಇಟ್ಟಿದೆ. ಹಿಂದೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷನಾಗಲು ಅವಕಾಶ ನೀಡಿತ್ತು. ಜಲಸಂಪನ್ಮೂಲ ಸಚಿವನಾಗಿದ್ದರಿಂದ ಹಿಡಿದ ಕೆಲಸ ಅರ್ಧಕ್ಕೆ ನಿಲ್ಲಬಾರದು ಎನ್ನುವ ಕಾರಣಕ್ಕೆ ಒಪ್ಪಿಕೊಳ್ಳಲಿಲ್ಲ. ಈಗಲೂ ಅಷ್ಟೇ. ಕೆಲಸ ಮಾಡುವವರು, ಪಕ್ಷದ ನಿಷ್ಠಾವಂತರನ್ನು ಕಾಂಗ್ರೆಸ್‌ ಎಂದೂ ಕೈ ಬಿಡುವುದಿಲ್ಲ.

ವರದಿ :  ಮಲ್ಲಿಕಾರ್ಜುನ ಸಿದ್ದಣ್ಣವರ

Follow Us:
Download App:
  • android
  • ios