ನವದೆಹಲಿ(ಮೇ.30): ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರಮಾಣವಚನ ಸಮಾರಂಭಕ್ಕಾಗಿ ರಾಷ್ಟ್ರಪತಿ ಭವನ ಸಜ್ಜಾಗಿದೆ.

ಈ ಮಧ್ಯೆ ಪ್ರಮಾಣವಚನ ಸಮಾರಂಭದ ನೇರ ಪ್ರಸಾರ ಮಾಡುವ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಹೊಸ ಸಲಹೆಯೊಂದನ್ನು ನೀಡಿದ್ದು, ಸಮಾರಂಭ ಮುಗಿಯುವವರೆಗೂ ಪತ್ರಕರ್ತರು ಟೋಪಿ ಮತ್ತು ಸನ್‌ಗ್ಲಾಸ್ ಹಾಕಿಕೊಳ್ಳುವಂತೆ ಸೂಚನೆ ನೀಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬಿಸಲಿನ ತಾಪ ಹೆಚ್ಚಿದ್ದು, ಸಂಜೆಯಿಂದಲೇ ನೇರ ಪ್ರಸಾರ ಶುರು ಮಾಡುವ ಸುದ್ದಿವಾಹಿನಿಗಳ ವರದಿಗಾರರು ರಕ್ಷಣೆಗಾಗಿ ಟೋಪಿ ಮತ್ತು ತಂಪು ಕನ್ನಡಕ ಬಳಸುವಂತೆ ಮನವಿ ಮಾಡಲಾಗಿದೆ.

ನವದೆಹಲಿಯಲ್ಲಿ ಇಂದು ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮ ಮಿತ್ರರು ಬಿಸಿಲಿನಿಂದ ರಕ್ಷಣೆ ಪಡೆಯುವಂತೆ ಪ್ರಧಾನಿಯವರ ಪ್ರಚಾರ ಮತ್ತು ಉಲ್ಲೇಖ ಘಟಕ ಮನವಿ ಮಾಡಿದೆ.