ವಿಜಯಪುರ: ಶಾಲೆ ಛಾವಣಿ ಕುಸಿವ ಆತಂಕದಲ್ಲೇ ಕಲಿಕೆ, ಜೀವಭಯದಲ್ಲಿ ವಿದ್ಯಾರ್ಥಿನಿಯರು..!

ಮಳೆಯಿಂದಾಗಿ ಬಹುತೇಕ ಶಿಥಿಲಾವಸ್ಥೆ ತಲುಪಿದ ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ 

Students Faces Problems Due to Fear of Falling School Roof at Nalatawad in Vijayapura grg

ಯೂನುಸ್‌ ಮೂಲಿಮನಿ

ನಾಲತವಾಡ(ಜು.29):  ಪಟ್ಟಣದ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಮಳೆಯಿಂದಾಗಿ ಬಹುತೇಕ ಶಿಥಿಲಾವಸ್ಥೆ ತಲುಪಿದೆ. ಶಾಲೆಯ ಛಾವಣಿ ಯಾವುದೇ ಸಮಯದಲ್ಲಾದರೂ ಕುಸಿದುಬೀಳುವ ಹಂತದಲ್ಲಿದ್ದು, ಮಕ್ಕಳು ಭಯದಲ್ಲಿಯೇ ಅಧ್ಯಯನ ಮಾಡಬೇಕಿದೆ. ಈ ಸರ್ಕಾರಿ ಶಾಲೆಯಲ್ಲಿ 1-7ನೇ ತರಗತಿಯಲ್ಲಿ ಒಟ್ಟು 96 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದು, ಒಟ್ಟು 15 ಕೊಠಡಿಗಳಿದ್ದರೂ ಪ್ರಯೋಜನವಿಲ್ಲದಂತಾಗಿದೆ. 6 ಕೊಠಡಿಗಳು ಮಾತ್ರ ಇದ್ದುದರಲ್ಲಿ ಸುಸ್ಥಿತಿಯಲ್ಲಿದ್ದು, ಉಳಿದ 9 ಕೊಠಡಿಗಳು ಒಂದಲ್ಲ ಒಂದು ಸಮಸ್ಯೆಯಿಂದ ಬಾಗಿಲುಮುಚ್ಚಿವೆ. ಕೆಲ ಕೊಠಡಿಗಳ ಛಾವಣಿ ಉಬ್ಬಿ ಕುಸಿಯುವ ಹಂತದಲ್ಲಿದ್ದರೆ, ಇನ್ನುಳಿದ ಕೊಠಡಿಗಳು ಮಳೆಯಿಂದ ವಿಪರೀತವಾಗಿ ಸೋರುತ್ತಿವೆ. ಮತ್ತೆ ಕೆಲವು ಕೊಠಡಿಗಳ ಬಾಗಿಲು ಮತ್ತು ಕಿಟಕಿಗಳು ಮುರಿದುಬಿದ್ದಿವೆ.

ಈ ಶಾಲೆ 1981ರಲ್ಲಿ ಉದ್ಘಾಟನೆಗೊಂಡಿದ್ದು, 41 ವರ್ಷದ ಹಳೆಯ ಕಟ್ಟಡ ಇದಾಗಿದೆ. ಗೋಡೆಗಳು ಗಟ್ಟಿಯಾಗಿದ್ದರೂ ಛಾವಣಿಯ ಭಯ ಮಕ್ಕಳನ್ನು ಕಾಡುತ್ತಿದೆ. ಸುಭದ್ರ ಕೊಠಡಿಗಳ ಕೊರತೆ ಇರುವುದರಿಂದ ಅನಿವಾರ್ಯವಾಗಿ ಎರಡು ತರಗತಿಗಳನ್ನು ಛಾವಣಿ ಉಬ್ಬಿರುವ ಕೊಠಡಿಗಳಲ್ಲಿಯೇ ನಡೆಸಬೇಕಾದ ಅನಿವಾರ್ಯತೆ ಇದೆ. ಇದಲ್ಲದೆ, ಮುಖ್ಯಶಿಕ್ಷಕರ ಕೊಠಡಿಯದ್ದೂ ಕೂಡ ಇದೇ ಸ್ಥಿತಿಯಾಗಿದೆ. ಮಳೆ ಆರಂಭವಾದರೆ ಶಾಲೆ ಹಾಗೂ ಮಕ್ಕಳಿಗೆ ಸಂಬಂಧಪಟ್ಟ ದಾಖಲೆ, ಕಾಗದಪತ್ರಗಳನ್ನು ರಕ್ಷಿಸುವುದೇ ಮುಖ್ಯಶಿಕ್ಷಕರಿಗೆ ಸವಾಲಿನ ಕೆಲಸವಾಗಿದೆ.

ಧಾರವಾಡ: ನಮ್ಮ ಪುಸ್ತಕ ಮ್ಯಾಲ ನೀರ ಸೋರಾಕತೈತ್ರಿ, ವಿದ್ಯಾರ್ಥಿಗಳಿಗೆ ಸಂಕಷ್ಟ..!

ಹೊಸಕೊಠಡಿ ನಿರ್ಮಿಸಲು ಪಾಲಕರ ಆಗ್ರಹ:

ಶಾಲೆಯ ಬಹುತೇಕ ಕೊಠಡಿಗಳು ನಿರುಪಯುಕ್ತವಾಗಿರುವ ಹಿನ್ನೆಲೆಯಲ್ಲಿ ಆ ಕೊಠಡಿಗಳನ್ನು ಸಂಪೂರ್ಣ ತೆರವುಗೊಳಿಸಿ, ಸಂಪೂರ್ಣವಾಗಿ ಹೊಸ ಕೊಠಡಿಗಳನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಅನಾಹುತ ಸಂಭವಿಸುವ ಮುನ್ನವೇ ಶಿಕ್ಷಣ ಇಲಾಖೆಯವರು ಸೂಕ್ತ ಕ್ರಮ ವಹಿಸಬೇಕು. ರಿಪೇರಿ ಮಾಡಿಸಲು ಯೋಗ್ಯವಾಗಿರುವ ಕೊಠಡಿಗಳ ರಿಪೇರಿ ಮಾಡಿಸಬೇಕು ಎಂದು ವಿದ್ಯಾರ್ಥಿನಿಯರ ಪೋಷಕರು ಆಗ್ರಹಿಸಿದ್ದಾರೆ.

ಒಟ್ಟು 15 ಕೊಠಡಿಗಳ ಪೈಕಿ 6 ಕೊಠಡಿಗಳನ್ನು ಮಾತ್ರ ಉಪಯೋಗಿಸುತ್ತಿದ್ದೇವೆ. ಬಹುತೇಕ ಕೊಠಡಿಗಳು ನಿರುಪಯುಕ್ತವಾಗಿವೆ. ಎಲ್ಲ ನಿರುಪಯುಕ್ತ ಕೊಠಡಿಗಳಿಗೆ ಬೀಗ ಜಡಿದಿದ್ದೇವೆ. ಛಾವಣಿ ಕುಸಿಯುವ ಆತಂಕದ ಕುರಿತು ಮೇಲಧಿ​ಕಾರಿಗಳ ಗಮನಕ್ಕೂ ತರಲಾಗಿದೆ ಅಂತ ಮುಖ್ಯಶಿಕ್ಷಕ ಎಸ್‌.ಎಸ್‌.ಕೌಡಿಮಟ್ಟಿ ತಿಳಿಸಿದ್ದಾರೆ.  

ಶಾಲೆಯ ಛಾವಣಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೆ ಚಾವಣಿ ಕುಸಿಯುವ ಸಾಧ್ಯತೆ ನಿಚ್ಚಳವಾಗಿದೆ. ಶಾಲಾವಧಿಯ ನಂತರವೂ ದಿನನಿತ್ಯ ನಮ್ಮ ಮಕ್ಕಳು ಏನು ಹೇಳಿದರೂ ಕೇಳದೇ ಶಾಲೆಯ ಆವರಣದಲ್ಲಿ ಆಟವಾಡಲು ಹೋಗುತ್ತಾರೆ. ಆದ್ದರಿಂದ ಅನಾಹುತ ಸಂಭವಿಸುವ ಮುನ್ನವೆ ಶಿಕ್ಷಣ ಇಲಾಖೆಯ ಅ​ಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮವಹಿಸಬೇಕು ಅಂತ ಪೋಷಕರಾದ ರಫೀಕ ಖಾಜಿ, ಜಾಫರ ಮಕಾಂದಾರ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios