Russia-Ukraine War: MBBS ಮಾಡಿದ ವಿದ್ಯಾರ್ಥಿಗಳ ಬದುಕೆ ಅತಂತ್ರ!
ಉಕ್ರೇನ್ ನಲ್ಲಿ ಎಂ.ಬಿ.ಬಿ.ಎಸ್ ಓದುತ್ತಿದ್ದ ವಿದ್ಯಾರ್ಥಿಗಳ ಪಾಲಿಗೆ ಭಾರತದ ಚಾಣಾಕ್ಷ ನೀತಿಯೇ ಮುಳುಗಡೆಯಾಗುವ ಸಂಧರ್ಭ ಎದುರಾಗಿದ್ದು, ಅವರ ವಿದ್ಯಾಭ್ಯಾಸಕ್ಕೆ ಕಂಟಕಪ್ರಾಯವಾಗಿದೆ. ಉಕ್ರೇನಿನಲ್ಲಿ
ವಿಜಯಪುರ (ಜುಲೈ 19): ಉಕ್ರೇನ್ ನಲ್ಲಿ ಎಂ.ಬಿ.ಬಿ.ಎಸ್ ಓದುತ್ತಿದ್ದ ವಿದ್ಯಾರ್ಥಿಗಳ ಪಾಲಿಗೆ ಭಾರತದ ಚಾಣಾಕ್ಷ ನೀತಿಯೇ ಮುಳುಗಡೆಯಾಗುವ ಸಂಧರ್ಭ ಎದುರಾಗಿದ್ದು, ಅವರ ವಿದ್ಯಾಭ್ಯಾಸಕ್ಕೆ ಕಂಟಕಪ್ರಾಯವಾಗಿದೆ. ಉಕ್ರೇನಿನಲ್ಲಿ ಓದಿ ಡಾಕ್ಟರ್ ಆಗುತ್ತೇನೆ ಎಂದು ಕನಸು ಕಂಡಿದ್ದ ಬಹುತೇಕರ ಕನಸು ಕನಸಾಗಿಯೇ ಉಳಿದಿದೆ.
ಖಿನ್ನತೆಗೆ ಒಳಗಾದ ಉಕ್ರೇನ್ MBBS ವಿದ್ಯಾರ್ಥಿಗಳು: ರಷ್ಯಾ(Russia)ಹಾಗೂ ಉಕ್ರೇನ್(Ukraine) ನಡುವೆ ನಡೆದ ಯುದ್ಧ(War) ಕೇವಲ ಆ ದೇಶದ ಮೇಲಷ್ಟೇ ಪರಿಣಾಮ ಬೀರಿಲ್ಲ ಬದಲಾಗಿ ಉಕ್ರೇನ್ ನಲ್ಲಿ ವಿದ್ಯಾಭ್ಯಾಸ(Education) ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ(Indian Students) ಮೇಲೂ ಪರಿಣಾಮ ಬೀರಿದೆ. ಈ ಕಾರಣದಿಂದ ವಿದ್ಯಾರ್ಥಿಗಳೂ ಮನೆಯಿಂದ ಹೊರಗೂ ಬರದೆ, ಎಲ್ಲೂ ಕಾಲೇಜಿನಲ್ಲಿ ಪ್ರವೇಶವೂ ಸಿಗದೆ ಜಿಲ್ಲೆಯ 17ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ(Depression) ಒಳಗಾಗಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ: ಈ ಯುದ್ಧದಲ್ಲಿ ಭಾರತ ರಾಜತಾಂತ್ರಿಕ ಹಿತದೃಷ್ಟಿಯಿಂದ ಯಾವುದೇ ದೇಶಕ್ಕೆ ಬೆಂಬಲ ಘೋಷಿಸಲಿಲ್ಲ, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರುವುದಷ್ಟೇ ಮೂಲ ಉದ್ದೇಶವಾಗಿತ್ತು. ಅದರಂತೆ ವಿದ್ಯಾರ್ಥಿಗಳೂ ಕೂಡಾ ಸುರಕ್ಷಿತವಾಗಿ ವಿದ್ಯಾರ್ಥಿಗಳು ದೇಶಕ್ಕೆ ಬಂದಿಳಿದರು, ಅದ್ದೂರಿಯಾಗಿ ಈ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ರಾಜಕಾರಣಿಗಳು ವಿಮಾನ ನಿಲ್ದಾಣದಲ್ಲಿ ಫೋಟೋಗೆ ಪೋಸ್ ನೀಡಿದ್ದಷ್ಟೇ ಬಂತು. ನಂತರ ಆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯಾರೂ ಚಿಂತಿಸಲಿಲ್ಲ.
ಭರವಸೆಯಾಗಿಯೇ ಉಳಿದ ರಾಜಕಾರಣಿಗಳ ವಾಗ್ದಾನ: ರಾಜಕಾರಣಿಗಳು, ಅಧಿಕಾರಿಗಳ ಗುಂಪು ವಿದ್ಯಾರ್ಥಿಗಳ ಮನೆಗೆ ಭೇಟಿ ಕೊಟ್ಟು ವಿದ್ಯಾಭ್ಯಾಸಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಅಂತ ಭರವಸೆ ಕೊಟ್ಟು ಬಂದ್ರು, ಆದರೆ ಆ ಭರವಸೆ ಕೇವಲ ಭರವಸೆ ಆಗಿಯೇ ಉಳಿಯಿತು.
ಇದನ್ನೂ ಓದಿ: ದಶಕದ ಹಿಂದಿನ ಮರ್ಡರ್ ಕೇಸ್ ಭೇದಿಸಿದ ವಿಜಯಪುರ ಪೊಲೀಸ್ರು, ಕುಡಿದ ನಶೆಯಲ್ಲಿ ಬಾಯ್ಬಿಟ್ಟ ಕಹಾನಿ
ಭಾರತೀಯ ವಿದ್ಯಾರ್ಥಿಗಳ ಮೇಲೆ ಯುಕ್ರೇನ್ ಸಿಟ್ಟು: ಭಾರತ ಆ ಎರಡು ದೇಶಗಳ ಯುದ್ಧದಲ್ಲಿ ಪರೋಕ್ಷವಾಗಿ ರಷ್ಯಾಗೆ ಬೆಂಬಲ ನೀಡಿತು, ಈ ಕಾರಣದಿಂದ ಸಿಟ್ಟಾದ ಉಕ್ರೇನಿಗರು ಭಾರತೀಯ ವಿದ್ಯಾರ್ಥಿಗಳ ಮೇಲೆ ಅವರ ಸಿಟ್ಟನ್ನು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳ ಪ್ರಮಾಣ ಪತ್ರ ಬೇಕಾದರೆ 4.5ಲಕ್ಷ ಹಣ ತುಂಬಬೇಕು, ಇಲ್ಲದಿದ್ರೆ ಮೂಲ ದಾಖಲಾತಿಗಳನ್ನು ಹಿಂದುರಿಗಿಸಲು ಸಾಧ್ಯವಿಲ್ಲ ಎನ್ನುವ ಮೇಲ್ ಗಳು, ಮೆಸೇಜ್ ಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಕಳಿಸುತ್ತಿದ್ದಾರೆ.
ಈಗ ಪೋಷಕರಲ್ಲಿ ಶುರುವಾಗಿರೋ ಆತಂಕ: ಪೋಷಕರಿಗೆ ಆತಂಕವಾಗಿರುವುದೇ ಇಲ್ಲಿ, ನಮ್ಮ ಮಕ್ಕಳು ಈಗ ಎಂ.ಬಿ.ಬಿ.ಎಸ್. ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ, ಅವರ ಭವಿಷ್ಯ ಅಡಕತ್ತರಿಯಲ್ಲಿದೆ. ಬಿ.ಎಲ್.ಡಿ.ಇ. ಹಾಗೂ ಕೆ.ಎಲ್.ಇ. ಸಂಸ್ಥೆಯಲ್ಲಿ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ತಾತ್ಕಾಕಾಲಿಕವಾಗಿ ಕಲಿಕೆಗೆ ಅವಕಾಶ ನೀಡಿದ್ದಾರೆ. ಆದರೆ ಪ್ರವೇಶ ನೀಡಿಲ್ಲ, ಜೊತೆಗೆ ಪರೀಕ್ಷೆ ಬರೆಯಲು ಕಾನೂನಿನ ಪ್ರಕಾರ ಅವಕಾಶವೂ ಇಲ್ಲ. ಹೀಗಾಗಿ ಸರ್ಕಾರ ಯಾವುದಾದರೂ ಒಂದು ನಿರ್ಧಾರ ಬೇಗ ಕೈಗೊಳ್ಳಬೇಕು ಎಂಬುದು ಪೋಷಕರ ಅಳಲಾಗಿದೆ.
ವಿದ್ಯಾರ್ಥಿಗಳು, ಪೋಷಕರ ಆಕ್ರೋಶ: ಜಿಲ್ಲೆಯಲ್ಲಿ ಈಗ 17 ವಿದ್ಯಾರ್ಥಿಗಳು ಹಾಗೂ ರಾಜ್ಯದ 690 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಮೆಡಿಕಲ್ ಓದುತ್ತಿದ್ದರು. ಈ ವಿದ್ಯಾರ್ಥಿಗಳ ಜೊತೆಗೆ ಈ ಹಿಂದೆ ಸಭೆ ನಡೆಸಿದ್ದ ಸಚಿವ ಸುಧಾಕರ್ ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು. ಈಗ ಸರಕಾರ ಯಾವುದೇ ನಿರ್ಧಾರ ಕೈಗೊಳ್ಳದಿರುವುದರಿಂದ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ವಿಜಯಪುರ: 5 ರೂ.ಗೆ ಮಣ್ಣು ಮಿಶ್ರಿತ ನೀರು, ಇದು ಶುದ್ಧ ಕುಡಿಯುವ ನೀರಿನ ಘಟಕದ
ವಿದ್ಯಾರ್ಥಿಗಳ ಓದಿಗೆ ಅನುವು ಮಾಡಿಕೊಡಿ: ಈಗ ನಮ್ಮ ನೆರವಿಗೆ ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಬರಬೇಕು. ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಅನುವು ಮಾಡಿಕೊಡಬೇಕು ಎಂಬುದು ಅವರ ಬೇಡಿಕೆಯಾಗಿದ್ದು, ಸರಕಾರ, ಮೆಡಿಕಲ್ ಕೌನ್ಸಿಲ್ ಇದಕ್ಕೆ ಧನಾತ್ಮಕವಾಗಿ ಸ್ಪಂಧಿಸಬೇಕಿದೆ.
ವಿಜಯಪುರದಲ್ಲಿ ಸುದ್ದಿಗೋಷ್ಟಿ ನಡೆದಿ ಮಾತನಾಡಿದ ಪೋಷಕರು: ಉಕ್ರೇನ್‌ನಲ್ಲಿ ಎಂಬಿಬಿಎಸ್ ಮಾಡಿರುವ ವಿದ್ಯಾರ್ಥಿನಿ ಸ್ನೇಹಾ ಪಾಟೀಲ್ ಮಾತನಾಡಿ ಈಗ ನಾವು ತಾತ್ಕಾಲಿಕವಾಗಿ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದೇವೆ. ನಮಗೆ ವಿದ್ಯಾಭ್ಯಾಸ ಮುಂದುವರೆಸಲು ಸರಕಾರ ಸಹಾಯ ಮಾಡಬೇಕು, ಇಲ್ಲಿಯ ಕಾಲೇಜುಗಳಲ್ಲಿ ಪ್ರವೇಶ ನೀಡಬೇಕು ಹಾಗೂ ವೈದ್ಯಕೀಯ ಮಂಡಳಿಯಿಂದ ಪ್ರಮಾಣಪತ್ರ ದೊರಕಿಸಿಕೊಡಬೇಕು. ವಿದ್ಯಾರ್ಥಿನಿ ತಂದೆ ರಮೇಶ ಪಾಟೀಲ್ ಮಾತನಾಡಿ ಸರಕಾರಗಳು ಕೆಲವು ನಿರ್ಧಾರಗಳನ್ನು ರಾತ್ರೋರಾತ್ರಿ ತಗೆದುಕೊಳ್ಳುತ್ತದೆ. ನಮ್ಮ ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಮಾತ್ರ ಮೌನವಾಗಿದೆ. ನಮಗೆ ಮುಂದೆ ಏನು ದಾರಿ ಎಂಬುದೇ ತೋಚುತ್ತಿಲ್ಲ. ನಮ್ಮ ಬೆಂಬಲಕ್ಕೆ ಸರಕಾರ ನಿಲ್ಲಬೇಕು ಎಂದಿದ್ದಾರೆ.