ಭಾರತದಲ್ಲಿ ವಿದೇಶಿ ವಿವಿ ಸ್ಥಾಪನೆಗೆ ಅಸ್ತು: ಆನ್‌ಲೈನ್ ಕ್ಲಾಸ್‌ಗೆ ಅವಕಾಶವಿಲ್ಲ
ದೇಶದ ಉನ್ನತ ಶಿಕ್ಷಣ ವಲಯದ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡುವಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲೂ ತಮ್ಮ ಕ್ಯಾಂಪಸ್ ಸ್ಥಾಪನೆಗೆ ಅವಕಾಶ ಮಾಡಿಕೊಡಲು ಮುಂದಾಗಿದೆ.
ನವದೆಹಲಿ: ದೇಶದ ಉನ್ನತ ಶಿಕ್ಷಣ ವಲಯದ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡುವಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲೂ ತಮ್ಮ ಕ್ಯಾಂಪಸ್ ಸ್ಥಾಪನೆಗೆ ಅವಕಾಶ ಮಾಡಿಕೊಡಲು ಮುಂದಾಗಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಇದು ಶಿಕ್ಷಣ ವಲಯದಲ್ಲಿ ಹೊಸ ಸಾಧ್ಯತೆಗಳಿಗೆ ಮುನ್ನುಡಿ ಬರೆಯಲಿದೆ ಎಂದು ವಿಶ್ಲೇಷಿಸಲಾಗಿದೆ.
ಭಾರತದಲ್ಲಿ ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ನಿರ್ವಹಣೆ ಕುರಿತ ಕರಡು ವರದಿಯನ್ನು ಗುರುವಾರ ಇಲ್ಲಿ ಬಿಡುಗಡೆ ಮಾಡಿದ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ)ದ (University Grants Commission) ಅಧ್ಯಕ್ಷ ಎಂ.ಜಗದೀಶ್ ಕುಮಾರ್ (M. Jagadish Kumar), ನೂತನ ರಾಷ್ಟ್ರೀಯ ಶಿಕ್ಷಣ ನೀತಿ (new National Education Policy-2020) 2020ರ ಅನ್ವಯ ಇದೀಗ ವಿದೇಶಿ ವಿವಿಗಳಿಗೂ ಭಾರತದಲ್ಲಿ ಉನ್ನತ ಶಿಕ್ಷಣದ ಕ್ಯಾಂಪಸ್ ತೆರೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಪ್ರವೇಶಾತಿ, ಶುಲ್ಕ ನಿಗದಿ ಮತ್ತು ಶುಲ್ಕವಾಗಿ ಸಂಗ್ರಹಿಸಿದ ಹಣವನ್ನು ತವರು ದೇಶಕ್ಕೆ ಕಳುಹಿಸುವ ವಿಷಯದಲ್ಲಿ ವಿದೇಶಿ ವಿವಿಗಳು (foreign universities) ಸ್ವಾಯತ್ತೆ ಹೊಂದಿರಲಿವೆ ಎಂದು ತಿಳಿಸಿದ್ದಾರೆ.
Mysuru : ಉನ್ನತ ಶಿಕ್ಷಣದ ಪ್ರಮಾಣ ಶೇ.32ಕ್ಕೆ ಏರಿಸುವ ಗುರಿ
ಯಾರಿಗೆ ಅವಕಾಶ?:
ಎರಡು ರೀತಿಯ ವಿವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಂದು, ಜಾಗತಿಕವಾಗಿ ಟಾಪ್ 500 ರಾರಯಂಕ್‌ನೊಳಗೆ (top 500 global rankings)ಇರುವ ವಿವಿಗಳು ಅಥವಾ ವಿಷಯವಾರು ಜಾಗತಿಕವಾಗಿ ಉತ್ತಮವಾಗಿ ರಾರಯಂಕಿಂಗ್ ಪಡೆದಿರುವ ವಿವಿಗಳು. ಇನ್ನೊಂದು ತಮ್ಮ ದೇಶದಲ್ಲಿ ಖ್ಯಾತನಾಮವಾಗಿರುವ ವಿವಿಗಳು ಅರ್ಜಿ ಸಲ್ಲಿಸಬಹುದು.
ವರದಿಯಲ್ಲೇನಿದೆ?:
ಯಾವುದೇ ವಿದೇಶಿ ವಿವಿಗಳು ಭಾರತದಲ್ಲಿ ಉನ್ನತ ಶಿಕ್ಷಣ ನೀಡಲು ತಮ್ಮ ಕ್ಯಾಂಪಸ್ ತೆರೆಯಬಹುದು. ಪ್ರವೇಶ ನಿಯಮ, ಶುಲ್ಕ ಜಾರಿಯಲ್ಲಿ ವಿವಿಗಳು ಸ್ವಾಯತ್ತೆ (autonomy) ಹೊಂದಿರುತ್ತವೆ. ಆದರೆ ಇಂಥ ನಿಯಮ ಮತ್ತು ಶುಲ್ಕವು ಕ್ರಮವಾಗಿ ಪಾರದರ್ಶಕ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಇರಬೇಕು. ಕೋರ್ಸ್‌ಗಳು ಪೂರ್ಣಾವಧಿಯದ್ದಾಗಿರಬೇಕು. ಆನ್‌ಲೈನ್ ತರಗತಿಗಳಿಗೆ ಅವಕಾಶ ಇರುವುದಿಲ್ಲ, ಕೇವಲ ಆಫ್‌ಲೈನ್‌ನಲ್ಲೇ ಶಿಕ್ಷಣ ನೀಡಬೇಕು. ವಿವಿಗಳು ಸ್ವದೇಶಿ ಅಥವಾ ವಿದೇಶಿ ಬೋಧಕರ ನೇಮಕ ಮಾಡಿಕೊಳ್ಳಬಹುದು. ವಿದೇಶಗಳಲ್ಲಿ ತಾವು ನೀಡುತ್ತಿರುವ ಗುಣಮಟ್ಟದ ಶಿಕ್ಷಣವನ್ನೇ ಭಾರತದಲ್ಲೂ ನೀಡಬೇಕು.
ವಿವಿಗಳಿಗೆ ಮೊದಲಿಗೆ 10 ವರ್ಷಗಳಿಗೆ ಇಂಥ ಅನುಮತಿ ನೀಡಲಾಗುತ್ತದೆ. ಕೆಲವೊಂದು ಷರತ್ತು ಪೂರ್ಣಗೊಳಿಸಿದ ವಿವಿಗಳಿಗೆ 9ನೇ ವರ್ಷದಲ್ಲಿ ಅನುಮತಿ ನವೀಕರಿಸಲಾಗುತ್ತದೆ. ಇಂಥ ವಿವಿಗಳು, ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವ ಅಥವಾ ದೇಶದಲ್ಲಿನ ಉನ್ನತ ಶಿಕ್ಷಣದ ಗುಣಮಟ್ಟಕ್ಕೆ ಧಕ್ಕೆ ತರುವ ಯಾವುದೇ ಅಧ್ಯಯನ ಯೋಜನೆಗೆ ಅನುಮತಿ ನೀಡುವಂತಿಲ್ಲ. ವಿವಿ ಸ್ಥಾಪಿಸುವ ದೇಶ ಮತ್ತು ಭಾರತದ ನಡುವಿನ ಸಂಬಂಧ, ದೇಶದ ಸಾರ್ವಭೌಮತೆ, ಸಾರ್ವಜನಿಕ ಶಿಸ್ತು, ನೈತಿಕತೆಗೆ ಭಂಗ ತರುವ ಯತ್ನ ಮಾಡಬಾರದು. ಕರಡು ಯೋಜನೆಗೆ ವ್ಯಕ್ತವಾಗುವ ಅಭಿಪ್ರಾಯ, ಸಲಹೆಗಳನ್ನು ಆಧರಿಸಿ ಮಾಸಾಂತ್ಯದ ವೇಳೆಗೆ ಅಂತಿಮ ವರದಿ ಬಿಡುಗಡೆ ಮಾಡಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕಾನೂನು ಚೌಕಟ್ಟು:
ವಿದೇಶಿ ವಿವಿಗಳ ಆಗಮನಕ್ಕೆ ಅವಕಾಶ ಕಲ್ಪಿಸಲು ಸೂಕ್ತ ಶಾಸನಾತ್ಮಕ ಚೌಕಟ್ಟು ರೂಪಿಸಲಾಗುವುದು. ಹೀಗೆ ಪ್ರವೇಶ ಪಡೆಯುವ ವಿವಿಗಳಿಗೆ ಆಡಳಿತ, ನಿಯಂತ್ರಣ, ಪಠ್ಯದ ವಿಷಯಗಳ ಬಗ್ಗೆ ದೇಶದಲ್ಲಿನ ಇತರೆ ಸ್ವಾಯತ್ತ ವಿವಿಗಳ ರೂಪದಲ್ಲೇ ವಿಶೇಷ ಸೌಲಭ್ಯ ಒದಗಿಸಲಾಗುವುದು. ಎಲ್ಲಾ ಹಣಕಾಸಿನ ವಿಚಾರಗಳು 1999ರ ಫೆಮಾ ಕಾಯ್ದೆಗೆ ಒಳಪಟ್ಟಿರಲಿವೆ. ಎಲ್ಲಾ ವಿವಿಗಳು ಪ್ರತಿ ವರ್ಷ ಲೆಕ್ಕಪರಿಶೋಧನೆ ವರದಿ ಸಲ್ಲಿಸುವುದು ಕಡ್ಡಾಯ ಎಂದು ಕರಡು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪಿಯುಗೆ ಬಹು ಆಯ್ಕೆ ಪ್ರಶ್ನೆ ಮಾದರಿ ಜಾರಿಗೆ ಸರಕಾರದ ಚಿಂತನೆ
ಉದ್ದೇಶ, ಲಾಭ ಏನು?:
ವಿಶ್ವದ ಅತ್ಯಂತ ಪ್ರತಿಷ್ಠಿತ ವಿವಿಗಳು ಭಾರತದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಅನುವು ಮಾಡಿಕೊಡುತ್ತದೆ. ದೇಶದ ಉನ್ನತ ಶಿಕ್ಷಣ ವಲಯಕ್ಕೆ ಹೊಸ ಆಯಾಮ ಸಿಗಲಿದೆ. ಈ ಮೂಲಕ ಭಾರತೀಯ ವಿದ್ಯಾರ್ಥಿಗಳು ಸ್ವದೇಶದಲ್ಲೇ ಜಾಗತಿಕ ಮಟ್ಟದ ಶಿಕ್ಷಣವನ್ನು ಅಗ್ಗದ ದರದಲ್ಲಿ ಪಡೆಯಬಹುದು. ಭಾರತ ಜಾಗತಿಕ ಶಿಕ್ಷಣ ವಲಯದಲ್ಲಿ ಹೊಸ ಕೇಂದ್ರವಾಗಿ ಹೊರಹೊಮ್ಮಬಹುದು.