Asianet Suvarna News Asianet Suvarna News

ಬೆಳೆ ನಷ್ಟಕ್ಕೆ ಕಂಗಾಲದ ರೈತರು: ಖಾಸಗಿ ಶಾಲೆಯಿಂದ ಹೊರ ಬಂದ ಮಕ್ಕಳು..!

*  ಆರ್ಥಿಕ ಸಂಕಷ್ಟದಿಂದ ಖಾಸಗಿ ಶಾಲೆಯಿಂದ ವಿಮುಖ
*  ಶಾಲೆ ಶುಲ್ಕ ಕಟ್ಟಲು ಸಾಧ್ಯವಾಗದೆ ಸರ್ಕಾರಿ ಶಾಲೆಗೆ ಸೇರಿಸುತ್ತಿರುವ ಪೋಷಕರು
*  ಮೆಣಸಿನಕಾಯಿ ಬೆಳೆ ನಷ್ಟ; ಬೆಳೆದ ಬತ್ತಕ್ಕೆ ಸಿಗುತ್ತಿಲ್ಲ ಬೆಂಬಲ ಬೆಲೆ
 

Farmers Admit to Government Schools To their Children due to Crop Loss in Karnataka grg
Author
Bengaluru, First Published Jun 7, 2022, 3:55 PM IST

ಬಳ್ಳಾರಿ(ಜೂ.07):  ಮೆಣಸಿನಕಾಯಿ ಬೆಳೆ ನಷ್ಟ, ಬತ್ತದ ಬೆಳೆಗೆ ಸಿಗದ ಬೆಂಬಲ ಬೆಲೆಗೆ ತತ್ತರಿಸಿ ಹೋಗಿರುವ ಜಿಲ್ಲೆಯ ರೈತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಬಿಡಿಸಿ ಸರ್ಕಾರಿ ಶಾಲೆಗೆ ದಾಖಲು ಮಾಡುತ್ತಿದ್ದಾರೆ!
ಪ್ರಸಕ್ತ ವರ್ಷದ ಶೈಕ್ಷಣಿಕ ದಾಖಲಾತಿ ಪ್ರಕ್ರಿಯೆ ಚುರುಕುಗೊಂಡಿದ್ದು ಡೊನೇಷನ್‌ ಹಾಗೂ ಶುಲ್ಕ ಪಾವತಿ ಮಾಡದ ಸ್ಥಿತಿಯಲ್ಲಿರುವ ರೈತಾಪಿ ಜನರು ಸರ್ಕಾರಿ ಶಾಲೆಗಳ ಕಡೆ ಮುಖವೊಡ್ಡಿದ್ದಾರೆ.

ಪರಿಣಾಮ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ ಪ್ರಮಾಣ ಇಳಿಮುಖವಾಗುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿ ಏರುತ್ತಿದೆ. ಅಕಾಲಿಕ ಮಳೆಯಿಂದ ಈ ಬಾರಿ ರೈತರ ಮೆಣಸಿನಕಾಯಿ ಬೆಳೆ ಭಾಗಶಃ ನಷ್ಟವಾಯಿತು. ಜಿಲ್ಲೆಯ ಐದು ತಾಲೂಕುಗಳ ಪೈಕಿ ಸಂಡೂರು ಹೊರತುಪಡಿಸಿ ಉಳಿದ ತಾಲೂಕುಗಳ ರೈತರು ಮೆಣಸಿನಕಾಯಿ ಬೆಳೆಯನ್ನೇ ಆಶ್ರಯಿಸಿದ್ದರು. ಆದರೆ, ಅಕಾಲಿಕ ಮಳೆಯಿಂದಾಗಿ ಮೆಣಸಿನಕಾಯಿ ಬೆಳೆ ನಾಶವಾಯಿತು. ಇನ್ನು ಬತ್ತ ಬೆಳೆಗಾರರ ಪರಿಸ್ಥಿತಿ ಭಿನ್ನವಾಗಿಲ್ಲ. ಬೆಳೆಯಿದ್ದರೂ ಬೆಲೆಯಿಲ್ಲದ ಒದ್ದಾಡುವಂತಾಗಿದ್ದು, ಕಳೆದ ವರ್ಷಕ್ಕಿಂತಲೂ ಬತ್ತದ ಬೆಲೆ ಇಳಿಮುಖವಾಗಿರುವುದು ರೈತರನ್ನು ಮತ್ತಷ್ಟುಆರ್ಥಿಕ ಸಂಕಷ್ಟಕ್ಕೆ ದೂಡಿದಂತಾಗಿದೆ. ಪರಿಣಾಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಬದಲಾಯಿಸುವ ನಿರ್ಧಾರ ಕೈಗೊಂಡಿದ್ದು ನಿತ್ಯ ಹತ್ತಾರು ವರ್ಗಾವಣೆ ಪತ್ರಗಳು ಖಾಸಗಿ ಶಾಲೆಯಿಂದ ಹೊರ ಬೀಳಲಾರಂಭಿಸಿವೆ!

Ramanagara: ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವುದಕ್ಕೆ ಶಿಕ್ಷಕರೇ ಇಲ್ಲ: ಜಿಲ್ಲೆಯ 40 ಶಾಲೆಗಳಲ್ಲಿ ಶಿಕ್ಷಕರ ಕೊರತೆ

ಉಚಿತ ಊಟ, ಬಟ್ಟೆ, ಪುಸ್ತಕ

ಆರ್ಥಿಕ ಸಮಸ್ಯೆಯಲ್ಲಿ ಒದ್ದಾಡುತ್ತಿರುವ ರೈತರಿಗೆ ಸರ್ಕಾರಿ ಶಾಲೆಗಳಲ್ಲಿ ಸಿಗುವ ಮಧ್ಯಾಹ್ನದ ಬಿಸಿಯೂಟ, ಉಚಿತ ಪುಸ್ತಕ, ಬಟ್ಟೆಗಳು ವರದಾನದಂತಾಗಿದೆ. ಖಾಸಗಿ ಶಾಲೆಗಳಲ್ಲಿ ಪ್ರತಿಯೊಂದಕ್ಕೂ ಹಣ ಸುರಿಯಬೇಕು. ಸಕಾಲಕ್ಕೆ ಶುಲ್ಕ ಕಟ್ಟದಿದ್ದರೆ ಶಾಲೆಯಿಂದ ಮಕ್ಕಳನ್ನು ಹೊರ ಹಾಕುವ ಶಿಕ್ಷೆ. ಇದಕ್ಕಿಂತ ಸರ್ಕಾರಿ ಶಾಲೆಯೇ ಮೇಲು. ಸರ್ಕಾರಿ ಶಾಲೆಯಲ್ಲಿ ಊಟ, ಪುಸ್ತಕ, ಬಟ್ಟೆಯ ಬಗ್ಗೆ ಚಿಂತಿಸಬೇಕಿಲ್ಲ. ಜೊತೆಗೆ ಶುಲ್ಕ ಕಟ್ಟುವ ಪಡಿಪಾಟಲೂ ಇಲ್ಲ. ಇದು ರೈತಾಪಿಗಳು ಕನ್ನಡ ಶಾಲೆಗಳತ್ತ ಹೆಜ್ಜೆ ಹಾಕುವಂತೆ ಮಾಡಿದೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಖಾಸಗಿ ಶಾಲೆಗಳು ತಲೆ ಎತ್ತಿವೆ. ನಗರ ಪ್ರದೇಶಗಳ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಖಾಸಗಿ ಶಾಲೆಗಳಲ್ಲಿ ಡೊನೇಷನ್‌ ಹಾಗೂ ಶುಲ್ಕ ತೀರಾ ಕಡಿಮೆ. ಹೀಗಾಗಿ ರೈತರು ಮಕ್ಕಳಿಗೆ ಇಂಗ್ಲೀಷ್‌ ಶಿಕ್ಷಣ ಕೊಡಿಸುವಾಸೆಯಿಂದ ಖಾಸಗಿ ಶಾಲೆಗಳಿಗೆ ದಾಖಲು ಮಾಡಿದ್ದರು. ಆದರೆ, ಪ್ರಸಕ್ತ ವರ್ಷದಲ್ಲಾದ ಅಕಾಲಿಕ ಮಳೆಯಿಂದ ಜಿಲ್ಲೆಯ ರೈತರ ಕೋಟ್ಯಂತರ ರು. ಮೌಲ್ಯದ ಬೆಳೆ ನಾಶವಾಯಿತು. ಇದರಿಂದ ತತ್ತರಿಸಿ ಹೋಗಿರುವ ರೈತರು ಕೃಷಿ ವೆಚ್ಚದ ಸಾಲ ತೀರಿಸಲೂ ಸಾಧ್ಯವಾಗದೆ ಕೈ ಮೇಲೆ ತಲೆ ಹೊತ್ತು ಕುಳಿತರು.

ಏತನ್ಮಧ್ಯೆ ಬತ್ತದ ಬೆಳೆಯು ಕುಸಿತ ಕಂಡಿರುವುದು ರೈತರನ್ನು ಮತ್ತಷ್ಟುಸಂಕಷ್ಟಕ್ಕೆ ತಳ್ಳಿದೆ. ಇದು ಮಕ್ಕಳ ಶಿಕ್ಷಣದ ಕಡೆಗೂ ಮನಸ್ಸು ಹಾಯಿಸಲಾಗದಷ್ಟುಸಮಸ್ಯೆ ತಲೆದೂರಿತು. ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ನೀಡುವ ಶಕ್ತಿಯಿಲ್ಲ. ಜೊತೆಗೆ ಮಕ್ಕಳಿಗೆ ಬಟ್ಟೆ, ಪುಸ್ತಕ ಖರೀದಿಸುವುದು ಕಷ್ಟದಾಯಿಕ ಎಂದರಿತ ರೈತರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಲು ಮುಂದಾಗಿದ್ದಾರೆ.

ನಿತ್ಯ ಹತ್ತಾರು ಮಕ್ಕಳ ಟಿಸಿ:

‘ಈ ವರ್ಷ ರೈತರ ಬಳಿ ಹಣವಿಲ್ಲ. ಗ್ರಾಮೀಣ ಭಾಗದ ಕಡಿಮೆ ಮೊತ್ತದ ಖಾಸಗಿ ಶಾಲೆಗಳ ಶುಲ್ಕ ಭರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅನೇಕ ಮಕ್ಕಳು ವರ್ಗಾವಣೆ ಪತ್ರ (ಟಿಸಿ) ಪಡೆದು ಸರ್ಕಾರಿ ಶಾಲೆ ಸೇರುತ್ತಿದ್ದಾರೆ’ ಎನ್ನುತ್ತಾರೆ ಬೈಲೂರು ಗ್ರಾಮದ ಶಾರದಾ ವಿದ್ಯಾಶಾಲೆಯ ಮುಖ್ಯಸ್ಥ ಮಂಜುನಾಥಸ್ವಾಮಿ. ಗ್ರಾಮೀಣ ಭಾಗದ ಖಾಸಗಿ ಶಾಲೆಗಳ ಶುಲ್ಕ ತೀರಾ ಕಡಿಮೆ. ಡೊನೇಷನ್‌ ಇರುವುದಿಲ್ಲ. ಇಷ್ಟಾಗಿಯೂ ಶುಲ್ಕ ಭರಿಸಲು ರೈತರಿಗೆ ಆಗುತ್ತಿಲ್ಲ. ಹೀಗಾಗಿ ಪೋಷಕರು ಖಾಸಗಿ ಶಾಲೆಗಳಿಂದ ದೂರ ಸರಿಯುತ್ತಿದ್ದಾರೆ. ಸುಮಾರು 900 ವಿದ್ಯಾರ್ಥಿಗಳಿರುವ ನಮ್ಮ ಶಾಲೆಯಲ್ಲಿ ನಿತ್ಯ 8 ರಿಂದ 10 ವಿದ್ಯಾರ್ಥಿಗಳು ಟಿಸಿ ಪಡೆದು ಸರ್ಕಾರಿ ಶಾಲೆಗೆ ಸೇರುತ್ತಿದ್ದಾರೆ. ನನ್ನದಷ್ಟೇ ಅಲ್ಲ; ಈ ರೀತಿಯ ದೃಶ್ಯಗಳು ಜಿಲ್ಲೆಯ ಎಲ್ಲ ಗ್ರಾಮೀಣ ಭಾಗದಲ್ಲಿವೆ ಕಂಡು ಬರುತ್ತದೆ ಎನ್ನುತ್ತಾರೆ ಮಂಜುನಾಥಸ್ವಾಮಿ.

ಮಳೆ ನೀರು ಬಂದ್ರೆ ತುಂಬಿಕೊಳ್ಳುತ್ತೆ ಜ್ಞಾನ ದೇಗುಲ: ಶಾಲೆಯ ಕೊಠಡಿಗೆ ನೀರು ರಜೆ ಫಿಕ್ಸ್!

‘ಜೂನ್‌ 30ರ ವರೆಗೆ ಶಾಲಾ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ನಾವು ಸಹ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪೋಷಕರಿಗೆ ಮನವರಿಕೆ ಮಾಡಿಕೊಡುತ್ತಿದ್ದು ಈ ಬಾರಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ದಾಖಲಾತಿಯಾಗುವ ಸಾಧ್ಯತೆ ಇದೆ ಎಂದು ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧಲಿಂಗಸ್ವಾಮಿ ಕನ್ನಡಪ್ರಭಕ್ಕೆ ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸರ್ಕಾರಿ ಶಾಲೆಯ ದಾಖಲಾತಿ ಪ್ರಮಾಣ ಅತ್ಯುತ್ತಮವಾಗಿದೆ. ಬಳ್ಳಾರಿ ಜಿಲ್ಲೆಯಲ್ಲಷ್ಟೇ ಈಗಾಗಲೇ 1ರಿಂದ 10ನೇ ತರಗತಿವರೆಗೆ 2.90 ಲಕ್ಷ ವಿದ್ಯಾರ್ಥಿಗಳು ದಾಖಲಾತಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಸೇರಿ ಇಷ್ಟೊಂದು ಪ್ರಮಾಣದಲ್ಲಿ ದಾಖಲಾತಿಯಾಗಿರಲಿಲ್ಲ ಅಂತ ಬಳ್ಳಾರಿ ಡಿಡಿಪಿಐ ಅಂದಾನಪ್ಪ ಒಡಿಗೇರಿ ತಿಳಿಸಿದ್ದಾರೆ. 

ಅಕಾಲಿಕ ಮಳೆಯಿಂದಾದ ಮೆಣಸಿನಕಾಯಿ ಬೆಳೆನಷ್ಟದಿಂದ ರೈತರು ತೀವ್ರ ಸಂಕಷ್ಟಎದುರಿಸುತ್ತಿದ್ದಾರೆ. ಬತ್ತಕ್ಕೂ ಸೂಕ್ತ ಬೆಲೆ ಇಲ್ಲ. ದಿನದಿನಕ್ಕೆ ರೈತಾಪಿಗಳ ಸಂಕಷ್ಟ ಹೆಚ್ಚುತ್ತಲೇ ಇದೆ. ಬೆಳೆ ಬಂದರೆ ಬೆಲೆ ಇಲ್ಲ, ಬೆಲೆ ಇದ್ದಾಗ ಬೆಳೆ ಇಲ್ಲ. ಹೀಗಾದರೆ ಅನ್ನದಾತರು ಬದುಕುವುದು ಹೇಗೆ? ಅಂತ ಬಳ್ಳಾರಿ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ತಿಳಿಸಿದ್ದಾರೆ. 
 

Follow Us:
Download App:
  • android
  • ios