* ಪಿಯು ಪ್ರಾಕ್ಟಿಕಲ್‌ ಪರೀಕ್ಷೆಗೂ ಸಿಸಿಟೀವಿ* ಪ್ರಾಯೋಗಿಕ ಪರೀಕ್ಷೆಯಲ್ಲಿ ಗೋಲ್ಮಾಲ್‌ ತಡೆಯಲು ಸರ್ಕಾರದ ಕ್ರಮ* ಗಂಭೀರವಾಗಿ ಪರಿಗಣಿಸಿದ ಇಲಾಖೆ* ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಕ್ರಮ 

 ಬೆಂಗಳೂರು(ಫೆ. 04) ದ್ವಿತೀಯ ಪಿಯುಸಿ (2nd PUC) ಥಿಯರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ (Practical Exam) ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪದವಿ ಪೂರ್ವ(PU BOard) ಶಿಕ್ಷಣ ಇಲಾಖೆ, ಪ್ರಾಯೋಗಿಕ ಪರೀಕ್ಷೆಗಳನ್ನೂ ಸಿಸಿಟಿವಿ (CCTV) ಕಣ್ಗಾವಲು ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ನಡೆಸಲು ಸೂಚನೆ ನೀಡಿದೆ.

70ರಿಂದ 80ರಷ್ಟುಅಂಕಗಳಿಗೆ ನಡೆಯುವ ಥಿಯರಿ ಪರೀಕ್ಷೆಗೆ ಲಿಖಿತವಾಗಿ ಉತ್ತರಿಸುವ ವಿದ್ಯಾರ್ಥಿಗಳು ಅಲ್ಲಿ ಕಡಿಮೆ ಅಂಕ ಪಡೆದರೂ 20ರಿಂದ 30 ಅಂಕಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಮಾತ್ರ ಕಾಲೇಜುಗಳು ಪೂರ್ಣ ಪ್ರಮಾಣದ ಅಂಕಗಳನ್ನು ನೀಡುತ್ತಿವೆ. ಇದರಿಂದ ಮೌಲ್ಯಮಾಪನ ವ್ಯವಸ್ಥೆಯ ಮೇಲೆ ಅನುಮಾನಗಳು ಸೃಷ್ಟಿಯಾಗುತ್ತವೆ. ಹಾಗಾಗಿ ಇನ್ನು ಮುಂದೆ ಪ್ರಾಯೋಗಿಕ ಪರೀಕ್ಷೆಯನ್ನೂ ಇಲಾಖೆಯ ಕಟ್ಟುನಿಟ್ಟಿನ ಸೂಚನೆಗಳಂತೆ ನಡೆಸಲು ಎಲ್ಲಾ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪಿಯು ಇಲಾಖೆ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಇಲಾಖೆ ನೀಡಿರುವ ಸೂಚನೆಗಳ ಪ್ರಕಾರ, ಪ್ರಸಕ್ತ ಸಾಲಿನಿಂದಲೇ ಪ್ರಯೋಗಾಲಯಗಳಿರುವ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಂದಲೇ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷಾ ಅಂಕಗಳನ್ನು ಆನ್‌ಲೈನ್‌ ಮೂಲಕ ಇಲಾಖೆಯ ಸರ್ವರ್‌ಗಳಿಗೆ ಅಪ್‌ಲೋಡ್‌ ಮಾಡಬೇಕು. ಇದಕ್ಕಾಗಿ ಅಗತ್ಯ ಯೂಸರ್‌ ಐಡಿ ಮತ್ತು ಪಾಸ್‌ವರ್ಡ್‌ ಅನ್ನು ಪ್ರಾಂಶುಪಾಲರ ಮೊಬೈಲ್‌ ಸಂಖ್ಯೆ ಅಥವಾ ಇ- ಮೇಲ್‌ಗೆ ಮಾತ್ರ ಕಳುಹಿಸಲಾಗುವುದು. ಈ ಎಲ್ಲ ಪ್ರಕ್ರಿಯೆಗೆ ಪ್ರಯೋಗಾಲಯಗಳಿಗೆ ಅಗತ್ಯ ಕಂಪ್ಯೂಟರ್‌, 20 ಎಂಬಿಪಿಎಸ್‌ ಇಂಟರ್ನೆಟ್‌ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು. ಪ್ರಾಂಶುಪಾಲರು ಒಂದು ಇಂಟರ್ನೆಟ್‌ ಸ್ಯಾಟಿಕ್‌ ಐಪಿ ವಿಳಾಸ ಸೃಷ್ಟಿಸಿಕೊಂಡು ಫೆ.10ರೊಳಗೆ ಇಲಾಖೆಗೆ ಅಪ್‌ಡೇಟ್‌ ಮಾಡಬೇಕು ಎಂದು ಸೂಚಿಸಿದ್ದಾರೆ.

PUC Exam Time Table: 2021-22ನೇ ಸಾಲಿನ ದ್ವೀತಿಯ ಪಿಯುಸಿ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಪ್ರತೀ ವರ್ಷದಂತೆ ಡಿಡಿಪಿಯುಗಳ ನೇತೃತ್ವದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಬೇಕು. ಪರೀಕ್ಷೆಯ ಜಿಲ್ಲಾ ಉಸ್ತುವಾರಿ ಸಮಿತಿ ಮುಖ್ಯಸ್ಥರು ಆಯಾ ಜಿಲ್ಲಾ ಪ್ರಾಚಾರ್ಯರು, ವಿಜ್ಞಾನ ವಿಭಾಗದ ಉಪನ್ಯಾಸಕರಾಗಿರಬೇಕು. ಈ ಸಮಿತಿಯು ಜಿಲ್ಲಾ ಪರೀಕ್ಷೆಗಳ ವೇಳಾಪಟ್ಟಿತಯಾರಿಸಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಕ್ರಮ ವಹಿಸಬೇಕು ಎಂಬುದು ಸೇರಿದಂತೆ ಒಟ್ಟು 23 ನಿಯಮಗಳನ್ನು ಅನುಸರಿಸಲು ಸೂಚಿಸಲಾಗಿದೆ.

ಫೆ.5ರ ಗೇಟ್‌ ಪರೀಕ್ಷೆ ಮುಂದೂಡಲ್ಲ, ಸುಪ್ರೀಂ ಸ್ಪಷ್ಟನೆ: ನವದೆಹಲಿ: ದೇಶದಲ್ಲಿ ಹಲವಡೆ ಕೋವಿಡ್‌ ನಿರ್ಬಂಧಗಳಿದ್ದರೂ ಸುಪ್ರೀಂ ಕೋರ್ಟ್‌ ಫೆ. 5 ರಂದು ನಡೆಯಬೇಕಾದ ಗ್ರಾಜುಯೇಟ್‌ ಆ್ಯಪ್ಟಿಟ್ಯೂಡ್‌ ಟೆಸ್ಟ್‌ ಇನ್‌ ಎಂಜಿನಿಯರಿಂಗ್‌ (ಗೇಟ್‌) ಪರೀಕ್ಷೆಯನ್ನು ಮುಂದೂಡಲು ಗುರುವಾರ ನಿರಾಕರಿಸಿದೆ. ನ್ಯಾಯಾಧೀಶ ಡಿ.ವೈ ಚಂದ್ರಚೂಡ್‌, ಸೂರ್ಯಕಾಂತ್‌ ಹಾಗೂ ವಿಕ್ರಮನಾಥ್‌ರನ್ನು ಒಳಗೊಂಡ ನ್ಯಾಯಪೀಠವು ನಡೆಯಬೇಕಾದ ಗೇಟ್‌ ಪರೀಕ್ಷೆಯನ್ನು ಕೇವಲ 48 ಗಂಟೆಯ ಮೊದಲು ಮುಂದೂಡಿದರೆ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಅನಿಶ್ಚಿತತೆ ಮೂಡುತ್ತದೆ. ಗೇಟ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ 9 ಲಕ್ಷ ವಿದ್ಯಾರ್ಥಿಗಳ ಜೀವನದೊಂದಿಗೆ ಆಟವಾಡಲು ಸಾಧ್ಯವಿಲ್ಲ. ಹೀಗಾಗಿ ಪರೀಕ್ಷೆ ಮುಂದೂಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.